ಗೋಕರ್ಣ ಗರ್ಭಗುಡಿಗೆ ನುಗ್ಗುವ ನೀರು: ಅಗತ್ಯ ಕ್ರಮಕ್ಕೆ ಸಿಎಂ ಸೂಚನೆ

KannadaprabhaNewsNetwork |  
Published : Jul 15, 2026, 02:15 AM IST
 | Kannada Prabha

ಸಾರಾಂಶ

ಪುರಾಣ ಪ್ರಸಿದ್ಧ ಗೋಕರ್ಣ ಶ್ರೀ ಮಹಾಬಲೇಶ್ವರ ದೇವಾಲಯದ ಗರ್ಭಗುಡಿಗೆ ಮಳೆಗಾಲದಲ್ಲಿ ಕೊಳಚೆ ನೀರು ನುಗ್ಗುತ್ತಿರುವ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಣ್ಣ ನೀರಾವರಿ ಇಲಾಖೆಗೆ ತಕ್ಷಣವೇ ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದಾರೆ.

ಪರಿವರ್ತನ ಗೋಕರ್ಣ ಸಂಸ್ಥೆ ಸಲ್ಲಿಸಿದ್ದ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ । ತುರ್ತು ಅಗತ್ಯದ ಕೆಲಸವೆಂದು ಪರಿಗಣಿಸಿ ಕೂಡಲೇ ಕೈಗೆತ್ತಿಕೊಳ್ಳಲು ನಿರ್ದೇಶನಕನ್ನಡಪ್ರಭ ವಾರ್ತೆ ಕಾರವಾರ

ಪುರಾಣ ಪ್ರಸಿದ್ಧ ಗೋಕರ್ಣ ಶ್ರೀ ಮಹಾಬಲೇಶ್ವರ ದೇವಾಲಯದ ಗರ್ಭಗುಡಿಗೆ ಮಳೆಗಾಲದಲ್ಲಿ ಕೊಳಚೆ ನೀರು ನುಗ್ಗುತ್ತಿರುವ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಣ್ಣ ನೀರಾವರಿ ಇಲಾಖೆಗೆ ತಕ್ಷಣವೇ ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದಾರೆ.

ದೇವಾಲಯದ ಅಭಿಷೇಕದ ತೀರ್ಥ ಹೊರಹೋಗುವ ಸೋಮಸೂತ್ರವು ಸಂಗಮ ನಾಲೆಗೆ ಸೇರುವ ಸ್ಥಳದಲ್ಲಿ ಗೇಟ್ ವಾಲ್ವ್ ಅಳವಡಿಸಿ, ಮಳೆಗಾಲದಲ್ಲಿ ಹೊರಗಿನ ಕೊಳಚೆ ನೀರು ದೇವಾಲಯದ ಒಳಭಾಗಕ್ಕೆ ಪ್ರವೇಶಿಸದಂತೆ ಶಾಶ್ವತ ವ್ಯವಸ್ಥೆ ಕಲ್ಪಿಸಲು ಸೂಚಿಸಲಾಗಿದೆ.

ಈ ಸಂಬಂಧ ಪರಿವರ್ತನ ಗೋಕರ್ಣ ಸಂಸ್ಥೆ ಸಲ್ಲಿಸಿದ್ದ ಮನವಿ ಹಾಗೂ ದೇವಾಲಯದೊಳಗೆ ಕೊಳಚೆ ನೀರು ನಿಂತಿರುವ ಚಿತ್ರಗಳನ್ನು ಪರಿಶೀಲಿಸಿದ ಮುಖ್ಯಮಂತ್ರಿ, ಈ ಕಾಮಗಾರಿಯನ್ನು ತುರ್ತು ಅಗತ್ಯದ ಕೆಲಸವೆಂದು ಪರಿಗಣಿಸಿ ಕೂಡಲೇ ಕೈಗೆತ್ತಿಕೊಳ್ಳಿ ಎಂದು ಮನವಿ ಪತ್ರದ ಮೇಲೆಯೇ ಸೂಚನೆ ಬರೆದಿದ್ದಾರೆ.

ಇತ್ತೀಚೆಗೆ ಮಳೆಗಾಲ ಆರಂಭವಾದ ಬಳಿಕ ಎರಡು ಬಾರಿ ಮಹಾಬಲೇಶ್ವರ ದೇವಾಲಯದ ಗರ್ಭಗುಡಿಗೆ ನೀರು ನುಗ್ಗಿ ಭಕ್ತರು ಹಾಗೂ ದೇವಾಲಯ ಆಡಳಿತಕ್ಕೆ ತೊಂದರೆಯಾದ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳನ್ನು ಗಮನಿಸಿದ ಮುಖ್ಯಮಂತ್ರಿ, ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಈ ಕುರಿತು ಚರ್ಚೆ ನಡೆಸಿದರು.

ಸಭೆಯಲ್ಲಿ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ನಿವೇದಿತ್ ಆಳ್ವಾ ಉಪಸ್ಥಿತರಿದ್ದು, ದೇವಾಲಯ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮುಖ್ಯಮಂತ್ರಿಗೆ ವಿವರಿಸಿದರು. ಇದೇ ವೇಳೆ ಮಾಜಿ ಸಚಿವ ಹಾಗೂ ಭಟ್ಕಳ ಶಾಸಕ ಮಂಕಾಳ ವೈದ್ಯ, ಗೋಕರ್ಣದ ರಸ್ತೆ ಅಭಿವೃದ್ಧಿ ಹಾಗೂ ಕೋಟಿತೀರ್ಥ ಅಭಿವೃದ್ಧಿ ಯೋಜನೆಗಳ ವಿಷಯವನ್ನೂ ಮುಖ್ಯಮಂತ್ರಿ ಗಮನಕ್ಕೆ ತಂದರು.

ಹಲವು ಬಾರಿ ಗೋಕರ್ಣಕ್ಕೆ ಭೇಟಿ ನೀಡಿ ಶ್ರೀ ಮಹಾಬಲೇಶ್ವರ ದೇವರ ದರ್ಶನ ಪಡೆದಿರುವ ಮುಖ್ಯಮಂತ್ರಿ, ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗದಂತೆ ಗೇಟ್ ವಾಲ್ವ್ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಮಾಜಿ ಸಚಿವ ಹಾಗೂ ಭಟ್ಕಳ ಶಾಸಕ ಮಂಕಾಳ ವೈದ್ಯ ಮಾತನಾಡಿ, ಮುಖ್ಯಮಂತ್ರಿಗಳ ನಿರ್ದೇಶನದಂತೆ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಲಿದ್ದು, ಮುಂದಿನ ದಿನಗಳಲ್ಲಿ ಗೋಕರ್ಣ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹೊಸ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಲಾಗುವುದು. ಈ ಅಭಿವೃದ್ಧಿ ಕಾರ್ಯಕ್ಕೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಾವರಿ ಯೋಜನೆಗಳ ವಿಷಯದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಸಲ್ಲದು: ಶಾಸಕ ಮಾನೆ
ನಗರದ ರಸ್ತೆ ಅಗೆದಿರುವುದಕ್ಕೆ ನಗರಾಭಿವೃದ್ಧಿ ಕೋಶಕ್ಕೆ ಸಿಎಂ ಸಚಿವಾಲಯದಿಂದ ಪತ್ರ