ಕೊಪ್ಪಳ: ನಗರದ ಜಿಲ್ಲಾಡಳಿತ ಭವನದಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿಗೆ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜಿಲ್ಲಾ ಘಟಕದಿಂದ ಅಕ್ಷರ ದಾಸೋಹ ಯೋಜನೆಯಡಿ ವಿದ್ಯಾರ್ಥಿಗಳಿಗೆ ವಿತರಿಸಲಾಗುತ್ತಿರುವ ಮೊಟ್ಟೆ, ಬಾಳೆಹಣ್ಣು ಹಾಗೂ ಸಕ್ಕರೆ ಖರೀದಿಯಲ್ಲಿ ಉಂಟಾಗುತ್ತಿರುವ ದರ ವ್ಯತ್ಯಾಸದಿಂದ ಮುಖ್ಯ ಶಿಕ್ಷಕರ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳುತ್ತಿದ್ದು, ಈ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿ ಮನವಿ ಸಲ್ಲಿಸಲಾಯಿತು.
ಶಿಕ್ಷಕರ ಕರ್ತವ್ಯವು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವುದಾಗಿದ್ದು, ಇಲಾಖೆಯ ಯೋಜನೆ ಅನುಷ್ಠಾನಗೊಳಿಸಲು ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರು ತಮ್ಮ ಸ್ವಂತ ಹಣ ವೆಚ್ಚ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದು ಸೂಕ್ತವಲ್ಲ. ಆದ್ದರಿಂದ ಅಕ್ಷರ ದಾಸೋಹ ಯೋಜನೆಯಡಿ ಮೊಟ್ಟೆ, ಬಾಳೆಹಣ್ಣು ಹಾಗೂ ಇತರೆ ಆಹಾರ ಪದಾರ್ಥಗಳ ದರ ಪ್ರಸ್ತುತ ಮಾರುಕಟ್ಟೆಯ ಪ್ರತಿದಿನದ ಆನ್ಲೈನ್ ದರಕ್ಕೆ ಅನುಗುಣವಾಗಿ ಪರಿಷ್ಕರಿಸಿ ಪಾವತಿಸುವ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಸಂಘ ಆಗ್ರಹಿಸಿದೆ.
ಮನವಿ ಸ್ವೀಕರಿಸಿದ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ ಸಂಘದ ನ್ಯಾಯಸಮ್ಮತ ಬೇಡಿಕೆ ಸರ್ಕಾರ ಹಾಗೂ ಸಂಬಂಧಿಸಿದ ಇಲಾಖೆಯ ಉನ್ನತಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.ಜಿಲ್ಲಾ ಘಟಕದ ಅಧ್ಯಕ್ಷ ಶರಣಬಸನಗೌಡ ಪಾಟೀಲ್ ಮಾತನಾಡಿ, ಶಿಕ್ಷಕರು ತಮ್ಮ ವೈಯಕ್ತಿಕ ಹಣ ವೆಚ್ಚ ಮಾಡಿ ಸರ್ಕಾರದ ಯೋಜನೆ ಅನುಷ್ಠಾನಗೊಳಿಸುವ ಪರಿಸ್ಥಿತಿ ಮುಂದುವರಿಯಬಾರದು. ವಿದ್ಯಾರ್ಥಿಗಳ ಪೌಷ್ಟಿಕ ಆಹಾರ ಯೋಜನೆಗೆ ಯಾವುದೇ ತೊಂದರೆಯಾಗದಂತೆ ಸರ್ಕಾರ ತಕ್ಷಣ ದರ ಪರಿಷ್ಕರಣೆ ಮಾಡಿ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರಿಗೆ ಆಗುತ್ತಿರುವ ಆರ್ಥಿಕ ನಷ್ಟ ತಪ್ಪಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಘಟಕದ ಉಪಾಧ್ಯಕ್ಷ ಹೊಳಿಬಸಯ್ಯ ಕೆ.ಎಂ., ಪಾಂಡುರಂಗ ಅಲ್ಲೂರ, ತಾಲೂಕು ಘಟಕದ ಪದಾಧಿಕಾರಿ ರಮೇಶ ಬುಡ್ಡನಗೌಡರ, ಗುರುಸ್ವಾಮಿ ಆರ್., ಗುರುರಾಜ್ ಕುಲಕರ್ಣಿ, ಕಾಶೀನಾಥ್ ಸಿರಿಗೇರಿ, ಮಲ್ಲಪ್ಪ ಗುಡದನ್ನವರ, ಗವಿಸಿದ್ದಪ್ಪ ಕೇರಿ, ಸೂಗುರೇಶ್ ಶಿಕ್ಷಕರಾದ ಶೇಖರಪ್ಪ, ತೋಟಪ್ಪ, ಗೋಪಾಲ ಹಾಗೂ ಮಲ್ಲಪ್ಪ ಸೇರಿದಂತೆ ಶಿಕ್ಷಕರ ಸಂಘದ ಮುಖಂಡರು ಮತ್ತು ಪದಾಧಿಕಾರಿಗಳಿದ್ದರು.