ಗದಗ: ನಾಗರಿಕ ಸಮಾಜ ತಲೆ ತಗ್ಗಿಸುವಂಥ ಜಿಲ್ಲೆಯ ರೋಣ ತಾಲೂಕಿನ ಅರಹುಣಸಿ ಗ್ರಾಮದಲ್ಲಿ ಬುದ್ಧಿಮಾಂದ್ಯೆ ಮೇಲಿನ ಅತ್ಯಾಚಾರ ಪ್ರಕರಣದ ತನಿಖೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಚುರುಕುಗೊಳಿಸಿದ್ದಾರೆ.
ಪ್ರಸಕ್ತ ಏಪ್ರಿಲ್ ತಿಂಗಳಲ್ಲಿಯೇ ಅರಹುಣಸಿ ಗ್ರಾಮದ ಅಮಾಯಕ ಬುದ್ಧಿಮಾಂದ್ಯೆ ಯುವತಿಯನ್ನು ಪುಸಲಾಯಿಸಿ ಅತ್ಯಾಚಾರವನ್ನು ನಿರಂತರವಾಗಿ ನಡೆಸಿದ್ದಾರೆ ಎನ್ನುವುದು ಪ್ರಾಥಮಿಕ ತನಿಖೆಯಲ್ಲಿ ಬಹಿರಂಗವಾಗಿದೆ. ಇದಾದ ನಂತರ ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಯುವತಿ ಮತ್ತು ಅವರ ತಾಯಿಯನ್ನು ಹಾಗೂ ಕುಟುಂಬಸ್ಥರನ್ನು ಭೇಟಿ ಮಾಡಿ ಅಗತ್ಯ ಮಾಹಿತಿಯನ್ನು ಸಂಗ್ರಹಿಸಿದ್ದಾರೆ.
ಪ್ರಸ್ತುತ ಗದಗ ನಗರದಲ್ಲಿರುವ ಸಖಿ ಕೇಂದ್ರದಲ್ಲಿ ಯುವತಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಬುದ್ಧಿಮಾಂದ್ಯೆ 20 ವಾರಕ್ಕೂ ಅಧಿಕ ಕಾಲದ ಗರ್ಭವತಿ ಎನ್ನುವುದು ಜಿಮ್ಸ್ ಆಸ್ಪತ್ರೆಯಲ್ಲಿ ನಡೆಸಿರುವ ಆರೋಗ್ಯ ತಪಾಸಣೆಯಲ್ಲಿ ಖಚಿತವಾಗಿದೆ ಎನ್ನುವುದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಧಿಕಾರಿಗಳಿಗೆ ಗೊತ್ತಾದ ನಂತರವೂ ಹಾಗೂ ಯುವತಿಯನ್ನು ದೈಹಿಕವಾಗಿ ಪರಿಶೀಲನೆ ನಡೆಸಿದಾಗ ಯುವತಿಗೆ ಹೆಚ್ಚಿನ ಚಿಕಿತ್ಸೆ ನೆರವಿನ ಅವಶ್ಯಕತೆ ಕಂಡುಬರುತ್ತಿದ್ದು, ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಎನ್ನುವ ಆರೋಪಗಳು ಕೂಡಾ ಕೇಳಿ ಬರುತ್ತಿವೆ.ಅನಗತ್ಯ ವಿಳಂಬ: ಪ್ರಸ್ತುತ ಗರ್ಭವತಿಯಾಗಿರುವ ಯುವತಿಗೆ ಕೂಡಲೇ (22 ವಾರ ಪೂರ್ವದಲ್ಲಿ) ಚಿಕಿತ್ಸೆಯ ಅವಶ್ಯಕತೆ ಇದೆ. ಆದರೆ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮಾತ್ರ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಪೊಲೀಸ್ ಇಲಾಖೆಯಿಂದ ನಮಗೆ ಮಾಹಿತಿ ಬರಬೇಕು ಎನ್ನುತ್ತಲೇ ನಾಲ್ಕೈದು ದಿನ ಕಳೆದಿದ್ದಾರೆ. ಆದರೆ ವಾಸ್ತವದಲ್ಲಿ ಪೊಲೀಸರು ತನಿಖೆ ಮಾಡಿ ಎಫ್ಐಆರ್ ಕೂಡಾ ದಾಖಲಿಸಿದ್ದು, ಅದೇ ಎಫ್ಐಆರ್ ಆಧಾರವಾಗಿಟ್ಟುಕೊಂಡು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ನೆರವು ಪಡೆದುಕೊಂಡು ಯುವತಿಗೆ ಚಿಕಿತ್ಸೆ ನೀಡುವತ್ತ ವಿಶೇಷ ಗಮನ ಹರಿಸಬೇಕಿದೆ.ಅಗತ್ಯ ಚಿಕಿತ್ಸೆ: ನಾನು ಖುದ್ದಾಗಿ ನೊಂದ ಯುವತಿಯನ್ನು ಭೇಟಿ ಮಾಡಿ ಚರ್ಚಿಸಿದ್ದೇನೆ. ಆಕೆ ಈ ಹಿಂದೆ ಹೇಳಿದಂಥ ಹೆಸರುಗಳನ್ನು ಮಾತ್ರ ಹೇಳುತ್ತಿದ್ದಾಳೆ. ಈ ವಿಷಯವಾಗಿ ಕೂಡಲೇ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವನ್ನು ಸಂಪರ್ಕಿಸಿ ಮುಂದಿನ ಚಿಕಿತ್ಸೆಗೆ ಬೇಕಾಗುವ ನ್ಯಾಯಾಲಯದ ಅನುಮತಿಯನ್ನು ಪಡೆದು ಅಗತ್ಯ ಚಿಕಿತ್ಸೆಯನ್ನು ಕೊಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ರಾಧಾ ಮಣ್ಣೂರ ತಿಳಿಸಿದರು.