ಗದಗ ಬೆಟಗೇರಿ ಅವಳಿ ನಗರದ ಕುಡಿಯುವ ನೀರಿಗೆ ಕಲ್ಲು ಹಾಕಿದ ದುರುಳರು

KannadaprabhaNewsNetwork |  
Published : Jul 15, 2026, 02:15 AM IST
ಕುಡಿಯುವ ನೀರಿನ ಬೃಹತ್ ಪೈಪ್‌ಲೈನ್‌ನಲ್ಲಿನ ಕಲ್ಲುಗಳನ್ನು ತೆರವುಗೊಳಿಸುತ್ತಿರುವ ನಗರಸಭೆಯ ಸಿಬ್ಬಂದಿ. | Kannada Prabha

ಸಾರಾಂಶ

ಮುಂಡರಗಿಯ ಹಮ್ಮಗಿ ಬ್ಯಾರೇಜ್‌ನಿಂದ ಗದಗ ನಗರಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ಪೈಪ್ ಲೈನ್ ನ ಗದಗ ತಾಲೂಕಿನ ಅಡವಿಸೋಮಾಪುರ ಗ್ರಾಮದ ಬಳಿ ಈ ಕೃತ್ಯ ನಡೆದಿದೆ.

ಗದಗ: ಗದಗ- ಬೆಟಗೇರಿ ಅವಳಿ ನಗರದ ಜನತೆಯ ಜೀವನಾಡಿಯಾಗಿರುವ ಕುಡಿಯುವ ನೀರು ಸರಬರಾಜು ವ್ಯವಸ್ಥೆಗೆ ದುಷ್ಕರ್ಮಿಗಳು ಕಲ್ಲು ಹಾಕಿರುವ ಅತ್ಯಂತ ವಿಚಿತ್ರ ಹಾಗೂ ಆತಂಕಕಾರಿ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ.

ಮುಂಡರಗಿ ತಾಲೂಕಿನ ಹಮ್ಮಗಿ ಬ್ಯಾರೇಜ್‌ನಿಂದ ಗದಗ ನಗರಕ್ಕೆ ನೀರು ತರುವ ಮುಖ್ಯ ಪೈಪ್‌ಲೈನ್‌ಗೆ ಕಲ್ಲು ತುಂಬಿಸಲಾಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಮುಂಡರಗಿಯ ಹಮ್ಮಗಿ ಬ್ಯಾರೇಜ್‌ನಿಂದ ಗದಗ ನಗರಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ಪೈಪ್ ಲೈನ್ ನ ಗದಗ ತಾಲೂಕಿನ ಅಡವಿಸೋಮಾಪುರ ಗ್ರಾಮದ ಬಳಿ ಈ ಕೃತ್ಯ ನಡೆದಿದೆ. ಪೈಪ್‌ ಲೈನ್‌ನಲ್ಲಿ ಕಲ್ಲುಗಳು ಸಿಲುಕಿಕೊಂಡಿದ್ದರಿಂದ ನೀರು ಸರಾಗವಾಗಿ ಹರಿಯದೇ ಸರಬರಾಜು ವ್ಯವಸ್ಥೆ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಇದರಿಂದಾಗಿ ಅವಳಿ ನಗರದಾದ್ಯಂತ ಕುಡಿಯುವ ನೀರು ಪೂರೈಕೆಯಲ್ಲಿ ತೀವ್ರ ವ್ಯತ್ಯಯ ಉಂಟಾಗಿದೆ.

ಭೂಮಿಯ ಆಳದಲ್ಲಿ ಹಾದುಹೋಗಿರುವ ಬೃಹತ್ ಪೈಪ್‌ಲೈನ್‌ಗೆ ಕಲ್ಲು ಹಾಕಿರುವುದು ಹೇಗೆ ಎಂಬ ಪ್ರಶ್ನೆಗೆ ಈಗ ಆಘಾತಕಾರಿ ಉತ್ತರ ಸಿಗುತ್ತಿದೆ. ನೀರು ಸರಾಗವಾಗಿ ಹರಿದು ಹೋಗಲು ಹಾಗೂ ಪೈಪ್‌ಲೈನ್‌ನಲ್ಲಿನ ಒತ್ತಡ ನಿಯಂತ್ರಿಸಲು ಗದಗನಿಂದ ಪಾಪನಾಶಿ ಗ್ರಾಮದ ವರೆಗೆ ಒಟ್ಟು 15 ಏರ್ ಪೈಪ್ ವ್ಯವಸ್ಥೆಯನ್ನು ಮಾಡಲಾಗಿದೆ.

ಈ ತಾಂತ್ರಿಕ ವ್ಯವಸ್ಥೆಯ ಸಂಪೂರ್ಣ ಮಾಹಿತಿ ಇರುವ ಯಾರೋ ದುಷ್ಕರ್ಮಿಗಳೇ ಯೋಜಿತವಾಗಿ, ಇದೇ ಏರ್ ಪೈಪ್‌ಗಳ ಮೂಲಕ ಕಲ್ಲುಗಳನ್ನು ಪೈಪ್‌ ಲೈನ್ ಒಳಗಡೆ ತಳ್ಳಿದ್ದಾರೆ. ಒಳಗಡೆ ಹೋಗಿರುವ ಕಲ್ಲುಗಳು ನೀರಿನ ಒತ್ತಡಕ್ಕೆ ಮುಂದೆ ಹೋಗಿ ಅಲ್ಲಲ್ಲಿ ಸಿಲುಕಿವೆ.

ತೆರವು ಕಾರ್ಯಾಚರಣೆ: ಗದಗ- ಬೆಟಗೇರಿ ನಗರಸಭೆಯ ಅಭಿಯಂತರರು ಹಾಗೂ ಸಿಬ್ಬಂದಿ ಇದನ್ನು ಹರಸಾಹಸ ಪಟ್ಟು ಪತ್ತೆ ಮಾಡಿದ್ದು, ಮಂಗಳವಾರ ಬೆಳಗ್ಗೆಯೇ ನಗರಸಭೆ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳ ತಂಡ ಸ್ಥಳಕ್ಕೆ ಧಾವಿಸಿ, ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದು, ನಗರಸಭೆ ತಾಂತ್ರಿಕ ಸಿಬ್ಬಂದಿ, ಪೈಪ್‌ಲೈನ್ ಅಗೆದು ಒಳಗಡೆ ಸಿಲುಕಿದ್ದ ಕಲ್ಲುಗಳನ್ನು ಯಶಸ್ವಿಯಾಗಿ ತೆರವುಗೊಳಿಸಿದ್ದಾರೆ. ಸದ್ಯ ನೀರು ಸರಬರಾಜು ವ್ಯವಸ್ಥೆಯನ್ನು ಸರಿಪಡಿಸುವ ಕಾರ್ಯ ಜೋರಾಗಿ ನಡೆಯುತ್ತಿದೆ.

ಕಠಿಣ ಕ್ರಮಕ್ಕೆ ಆಗ್ರಹ: ಕುಡಿಯುವ ನೀರು ಜನರ ಮೂಲಭೂತ ಹಕ್ಕಾಗಿದ್ದು, ಅದಕ್ಕೇ ಕಲ್ಲು ಹಾಕಿ ವಿಕೃತ ಆನಂದ ಪಡುವ ಇಂತಹ ದುರುಳರ ವಿರುದ್ಧ ಪೊಲೀಸರು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಅವಳಿ ನಗರದ ಜನರಿಗೆ ಕುಡಿಯುವ ನೀರು ಸಿಗಬಾರದು ಎನ್ನುವ ಕೆಟ್ಟ ಉದ್ದೇಶದಿಂದಲೇ ಹೀಗೆ ಮಾಡಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಹೆಚ್ಚಿನ ಜಾಗೃತಿ ವಹಿಸಬೇಕು ಎನ್ನುತ್ತಾರೆ ಅವಳಿ ನಗರದ ಸಾರ್ವಜನಿಕರು.

ತೆರವು ಕಾರ್ಯಾಚರಣೆ: ಕುಡಿಯುವ ನೀರಿನ ಪೈಪ್‌ಲೈನ್‌ನಲ್ಲಿ ಕಲ್ಲುಗಳು ಪತ್ತೆಯಾಗಿದ್ದು ಆತಂಕದ ವಿಷಯವಾಗಿದೆ. ಅವುಗಳನ್ನು ಪತ್ತೆ ಮಾಡಲಾಗಿದ್ದು, ಸಿಬ್ಬಂದಿ ತೆರವು ಕಾರ್ಯಾಚರಣೆ ನಡೆಸುತ್ತಿದ್ದು, ತೆರವು ಪೂರ್ಣಗೊಂಡ ನಂತರ ನೀರು ಪೂರೈಕೆ ಮತ್ತೆ ಯಥಾವತ್ತಾಗಿ ನಡೆಯಲಿದೆ ಎಂದು ನಗರಸಭೆ ಎಇಇ ಲಕ್ಷ್ಮಣ ಜೋಗದಂಡಗೇರ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಾವರಿ ಯೋಜನೆಗಳ ವಿಷಯದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಸಲ್ಲದು: ಶಾಸಕ ಮಾನೆ
ನಗರದ ರಸ್ತೆ ಅಗೆದಿರುವುದಕ್ಕೆ ನಗರಾಭಿವೃದ್ಧಿ ಕೋಶಕ್ಕೆ ಸಿಎಂ ಸಚಿವಾಲಯದಿಂದ ಪತ್ರ