ಕಾಳಿನದಿ ಏತ ನೀರಾವರಿ ಯೋಜನೆಯಿಂದ 46 ಕೆರೆಗಳಿಗೆ ನೀರು: ಶಾಸಕ ಆರ್.ವಿ. ದೇಶಪಾಂಡೆ

KannadaprabhaNewsNetwork |  
Published : Oct 14, 2026, 02:15 AM IST
ಹಳಿಯಾಳ ತಾಲೂಕಿನ ಯಡೋಗಾ ಗ್ರಾಮದ ಪಂಪ್ ಹೌಸ್‌ಗೆ ಹಿರಿಯ ಶಾಸಕ ಆರ್.ವಿ. ದೇಶಪಾಡೆ ಅವರು ಭೇಟಿ ನೀಡಿ ಕಾಳಿ ನದಿ ಏತ ನೀರಾವರಿ ಯೋಜನೆಯ ಕಾಮಗಾರಿ ಪರಿಶೀಲಿಸಿದರು. | Kannada Prabha

ಸಾರಾಂಶ

ತಾಂತ್ರಿಕ ಮತ್ತು ಆಡಳಿತಾತ್ಮಕ ಕಾರಣಗಳಿಂದಾಗಿ ಯೋಜನೆ ಕಾರ್ಯಾರಂಭದಲ್ಲಿ ವಿಳಂಬವಾಗಿದೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಯೋಜನೆಗೆ 0.812 ಟಿಎಂಸಿ ನೀರು ಅಗತ್ಯವಿದ್ದು, ಪ್ರತಿವರ್ಷ ಜನವರಿಯಿಂದ ಜೂನ್‌ವರೆಗೆ 151 ದಿನಗಳ ಕಾಲ ಪಂಪಿಂಗ್ ಮೂಲಕ ಕೆರೆ- ಬಾಂದಾರುಗಳನ್ನು ತುಂಬಿಸಲಾಗುತ್ತದೆ.

ಹಳಿಯಾಳ: ಕಾಳಿ ನದಿ ನೀರಾವರಿ ಯೋಜನೆ ಸಂಪೂರ್ಣವಾಗಿ ಕಾರ್ಯಾರಂಭಗೊಂಡರೆ ತಾಲೂಕಿನ ಕುಡಿಯುವ ನೀರು ಮತ್ತು ಅಂತರ್ಜಲ ವೃದ್ಧಿಗೆ ಬಹುದೊಡ್ಡ ಕೊಡುಗೆಯನ್ನು ನೀಡಲಿದೆ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.

ಮಂಗಳವಾರ ತಾಲೂಕಿನ ಯಡೋಗಾ ಗ್ರಾಮಕ್ಕೆ ಭೇಟಿ ನೀಡಿದ ಅವರು, ಗ್ರಾಮದಲ್ಲಿರುವ ಪಂಪ್ ಹೌಸ್‌ಗೆ ತೆರಳಿ ಕಾಳಿನದಿ ನೀರಾವರಿ ಯೋಜನೆಯ ಅಂತಿಮ ಹಂತದ ಕಾಮಗಾರಿಯನ್ನು ಪರಿಶೀಲಿಸಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ತಾಂತ್ರಿಕ ಮತ್ತು ಆಡಳಿತಾತ್ಮಕ ಕಾರಣಗಳಿಂದಾಗಿ ಯೋಜನೆ ಕಾರ್ಯಾರಂಭದಲ್ಲಿ ವಿಳಂಬವಾಗಿದೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಯೋಜನೆಗೆ 0.812 ಟಿಎಂಸಿ ನೀರು ಅಗತ್ಯವಿದ್ದು, ಪ್ರತಿವರ್ಷ ಜನವರಿಯಿಂದ ಜೂನ್‌ವರೆಗೆ 151 ದಿನಗಳ ಕಾಲ ಪಂಪಿಂಗ್ ಮೂಲಕ ಕೆರೆ- ಬಾಂದಾರುಗಳನ್ನು ತುಂಬಿಸಲಾಗುತ್ತದೆ ಎಂದರು.ತಾಲೂಕಿನ 46 ಕೆರೆಗಳು ಮತ್ತು 19 ಬಾಂದಾರುಗಳಿಗೆ ನೀರು ಪೂರೈಸಿ ಅಂತರ್ಜಲ ಮಟ್ಟ ಹೆಚ್ಚಿಸುವ ಮಹತ್ವಾಕಾಂಕ್ಷಿ ಏತ ನೀರಾವರಿ ಯೋಜನೆ ಇದಾಗಿದೆ. ಈಗಾಗಲೇ ಯೋಜನೆಯ ವ್ಯಾಪ್ತಿಯ ಅರ್ಧದಷ್ಟು ಕೆರೆಗಳಿಗೆ ಪ್ರಾಯೋಗಿಕವಾಗಿ ನೀರು ತುಂಬಿಸುವ ಕಾರ್ಯ ಆರಂಭಗೊಂಡಿದೆ. ಎಲ್ಲಿ ನೀರು ಪೋಲಾಗುತ್ತಿದೆ, ಪೈಪ್‌ಗಳು ಎಲ್ಲಿ ಲೀಕೇಜ್ ಆಗಿವೆ ಎಂಬುದನ್ನು ಪರಿಶೀಲಿಸಿ ಸರಿಪಡಿಸುವ ಕೆಲಸ ನಡೆಯುತ್ತಿದೆ ಎಂದರು.

ಬೃಹತ್ ಯೋಜನೆ: ₹220 ಕೋಟಿ ವೆಚ್ಚದ ಈ ನೀರಾವರಿ ಯೋಜನೆ ಜಿಲ್ಲೆಯಲ್ಲೇ ಅಥವಾ ಈ ಭಾಗದಲ್ಲಿ ಕೈಗೊಳ್ಳಲಾಗಿರುವ ಅತಿದೊಡ್ಡ ಬೃಹತ್ ಯೋಜನೆ ಇದಾಗಿದೆ. ಯೋಜನೆಯಡಿ ತಾಲೂಕಿನ ಒಟ್ಟು 7150 ಹೆಕ್ಟೇರ್ ನೀರಾವರಿ ಪ್ರದೇಶದ ಪೈಕಿ 6000 ಹೆಕ್ಟೇರ್ ಪ್ರದೇಶವು ಕೆರೆಗಳು ಹಾಗೂ ಬಾಂದಾರುಗಳ ವ್ಯಾಪ್ತಿಯಲ್ಲಿವೆ ಎಂದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪಾಟೀಲ, ಯುವ ಕಾಂಗ್ರೆಸ್ ಮುಖಂಡ ರವಿ ತೋರಣಗಟ್ಟಿ, ವೆಂಕಟೇಶ ಸಾಳುಂಕೆ ಹಾಗೂ ಯಡೋಗಾ ಗ್ರಾಮಸ್ಥರು ಹಾಗೂ ನೀರಾವರಿ ಯೋಜನೆಯ ಗುತ್ತಿಗೆಯನ್ನು ಪಡೆದ ಕಂಪನಿಯ ತಂತ್ರಜ್ಞರು ಇದ್ದರು.

ಪರಿಶೀಲನೆ: ಇದೇ ಸಂದರ್ಭದಲ್ಲಿ ಪಂಪ್ ಹೌಸನ್ನು ಪರಿಶೀಲಿಸಿದ ಶಾಸಕರು, ಯೋಜನೆಯ ಪ್ರಗತಿಯ ಕುರಿತು ಪಂಪ್ ಹೌಸನ ತಾಂತ್ರಿಕ ಸಿಬ್ಬಂದಿಗಳೊಂದಿಗೆ ಮಾಹಿತಿ ಕಲೆಹಾಕಿ, ಗುಣಮಟ್ಟದ ಕಾಮಗಾರಿಯನ್ನು ಕೈಗೊಳ್ಳುವಂತೆ ಹಾಗೂ ನಿಗದಿತ ಅವಧಿಯಲ್ಲಿ ಮುಕ್ತಾಯಗೊಳಿಸುವಂತೆ ತಾಕೀತು ಮಾಡಿದರು.

ನಂತರ ಯಡೋಗಾ ಹಾಗೂ ಸಮೀಪದ ಗ್ರಾಮಗಳ ರೈತರು ಹಾಗೂ ಗ್ರಾಮಸ್ಥರ ಅಹವಾಲು ಆಲಿಸಿದರು. ಬಳಿಕ ಪಟ್ಟಣಕ್ಕೆ ತೆರಳುವಾಗ ಮಾರ್ಗಮಧ್ಯೆ ಯಡೋಗಾ ಸೇತುವೆ ಬಳಿ ವಾಹನದಿಂದ ಇಳಿದು ತಟ್ಟಿಹಳ್ಳಕ್ಕೆ ಪ್ರಾಯೋಗಿಕವಾಗಿ ಬಿಡಲಾಗುತ್ತಿರುವ ಕಾಳಿನದಿ ನೀರಿನ ವೇಗವನ್ನು ವೀಕ್ಷಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶ್ರೀ ಕ್ಷೇತ್ರ ದೊಡ್ಡಣಗುಡ್ಡೆ: ವೈಭವದ ಶರನ್ನವರಾತ್ರಿ
ಕಾಫಿ ಬೆಳೆಗಾರ, ಕೃಷಿ ಸುಧಾರಣೆಗೆ ಒತ್ತು: ಡಾ. ಮಂತರ್ ್ಗೌಡ