ಬೆಂಗಳೂರಿಗೆ ನೀರಿನ ನೆಪ, ತಮಿಳುನಾಡಿಗೆ ನೀರು!

KannadaprabhaNewsNetwork |  
Published : Mar 10, 2024, 01:30 AM IST
9ಕೆಎಂಎನ್ ಡಿ35,36 | Kannada Prabha

ಸಾರಾಂಶ

ಕಾವೇರಿ ನದಿ ಭಾಗದ ಮುಂಗಾರು ಹಾಗೂ ಹಿಂಗಾರು ಕೈ ಕೊಟ್ಟ ಹಿನ್ನೆಲೆ ರಾಜ್ಯದಲ್ಲಿ ಬೀಕರ ಬರಗಾಲ ತಾಂಡವವಾಡುತ್ತಿರುವಾಗ ರಾಜ್ಯ ಸರ್ಕಾರ ತಮಿಳುನಾಡಿಗೆ ಕೆಆರ್‌ಎಸ್ ಜಲಾಶಯದಿಂದ ಸುಮಾರು 3 ಸಾವಿರ ಕ್ಯೂಸೆಕ್‌ಗೂ ಅಧಿಕ ನೀರನ್ನು ಶನಿವಾರ ಬೆಳಗ್ಗೆಯಿಂದ ಹರಿಸುತ್ತಿದೆ ಹಲವು ರೈತ ಸಂಘಟನೆಗಳು ಕಿಡಿಕಾರಿವೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಬೆಂಗಳೂರಿಗೆ ಕುಡಿಯುವ ನೀರಿನ ನೆಪ ಹೇಳಿ ಕೆಆರ್ ಎಸ್ ಅಣೆಕಟ್ಟೆಯಿಂದ ಕಾವೇರಿ ನದಿ ಮೂಲಕ ತಮಿಳುನಾಡಿಗೆ ನೀರು ಹರಿಸುತ್ತಿದೆ ಎಂದು ವಿವಿಧ ಸಂಘಟನೆಗಳ ಮುಖಂಡರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅವಧಿಗೂ ಮುನ್ನವೇ ಬಿಸಿಲಿನ ತಾಪಮಾನ ಕಂಡು ಕೇಳರಿಯದ ಮಟ್ಟಕೇರಿದೆ. ಇದರಿಂದ ಅಂತರ್ಜಲವಿಲ್ಲದೆ ಕೆರೆ, ಕಟ್ಟೆ, ಕಾಲುವೆ ಸೇರಿ ರೈತರ ಜಮೀನಿಲ್ಲಿರುವ ಬೋರ್‌ವೆಲ್‌ನಲ್ಲಿ ನೀರು ಬತ್ತಿ ಹೋಗುತ್ತಿದೆ. ಇಂತಹ ಸನ್ನಿವೇಶದಲ್ಲಿ ಬೆಂಗಳೂರಿಗೆ ಕುಡಿಯುವ ನೀರಿನ ನೆಪ ಹೇಳಿ ಕಾವೇರಿ ನದಿ ಮೂಲಕ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ.

ಕಾವೇರಿ ನದಿ ಭಾಗದ ಮುಂಗಾರು ಹಾಗೂ ಹಿಂಗಾರು ಕೈ ಕೊಟ್ಟ ಹಿನ್ನೆಲೆ ರಾಜ್ಯದಲ್ಲಿ ಬೀಕರ ಬರಗಾಲ ತಾಂಡವವಾಡುತ್ತಿರುವಾಗ ರಾಜ್ಯ ಸರ್ಕಾರ ತಮಿಳುನಾಡಿಗೆ ಕೆಆರ್‌ಎಸ್ ಜಲಾಶಯದಿಂದ ಸುಮಾರು 3 ಸಾವಿರ ಕ್ಯೂಸೆಕ್‌ಗೂ ಅಧಿಕ ನೀರನ್ನು ಶನಿವಾರ ಬೆಳಗ್ಗೆಯಿಂದ ಹರಿಸುತ್ತಿದೆ ಎಂದು ಕಿಡಿಕಾರಿದ್ದಾರೆ.

ಎರಡನೇ ಶನಿವಾರ, ಭಾನುವಾರದಂದು ಸದ್ದಿಲ್ಲದೆ ರಜಾ ದಿನಗಳಲ್ಲಿ ಕಾವೇರಿ ನದಿ ಮೂಲಕ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ. ಈ ಬಗ್ಗೆ ನೀರಾವರಿ ಅಧಿಕಾರಿಗಳನ್ನು ಸಂಪರ್ಕಿಸಿದರೆ. ಕಾವೇರಿ ನದಿ ಮೂಲಕ ಬೆಂಗಳೂರು ಸೇರಿ ಇತರೆ ಗ್ರಾಮಗಳಿಗೆ ಕುಡಿಯುವ ನೀರು ಸಂಪರ್ಕ ಕಲ್ಪಿಸಲು ಮೋಟರ್ ಅಳವಡಿಸಲಾಗಿದೆ.

ನದಿ ನೀರು ಕಡಿಮೆ ಇರುವ ಕಾರಣ ಮೋಟಾರ್‌ಗಳಿಗೆ ನೀರು ಸಂಪರ್ಕ ಸಿಗದೆ ನದಿಯಿಂದ ನೀರನ್ನು ಮೇಲೆತ್ತಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ನದಿ ಮೂಲಕ ನೀರು ಹರಿಸಲಾಗುತ್ತಿದೆ ಎಂದು ಹೆಸರೇಳದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಸುಳಿವು ನೀಡದೇ ತಮಿಳುನಾಡಿಗೆ ನೀರು:

ಸದ್ದಿಲ್ಲದೇ ಸರ್ಕಾರ ತಮಿಳುನಾಡಿಗೆ ನೀರು ಹರಿಸಲು ಮುಂದಾಗಿದೆಯಾ ಎಂಬ ಶಂಕೆ ವ್ಯಕ್ತವಾಗಿದೆ. ಯಾವುದೇ ಸುಳಿವು ನೀಡದೆ, ಒತ್ತಡಕ್ಕೆ ಮಣಿದು ಕುಡಿಯುವ ನೀರಿನ ನೆಪ ಹೇಳಿಕೊಂಡು ಅಣೆಕಟ್ಟೆಗಳಲ್ಲಿ ನೀರಿಲ್ಲದಿದ್ದರೂ ತಮಿಳುನಾಡಿಗೆ ನೀರು ಹರಿಸಲು ಮುಂದಾಗಿದೆಯೇ ಎಂಬ ಮಾತುಗಳು ಕೇಳಿ ಬರುತ್ತಿದೆ.

ಈಗಾಗಲೇ ಜಲಾಶಯದಲ್ಲಿರುವ ನೀರನ್ನು ರಾಜ್ಯದ ಜನರಿಗೆ ಕುಡಿಯಲು ಮಾತ್ರ ಬಳಕೆ ಮಾಡಿಕೊಳ್ಳಲು, ರೈತರ ಜಮೀನುಗಳಿಗೆ ಕಟ್ಟು ಪದ್ದತಿಯಲ್ಲೂ ಸಹ ನೀರು ಹರಿಸುವುದಿಲ್ಲ ಎಂದು ನೀರಾವರಿ ಅಧಿಕಾರಿಗಳು ತಿಳಿಸಿದ್ದು, ರೈತರು ಬೆಳೆಗಳನ್ನು ಬೆಳೆಯದಂತೆ ನೋಡಿಕೊಳ್ಳಲಾಗಿದೆ.

ಆದರೆ, ಜಲಾಶಯದಲ್ಲಿ ಪ್ರಸ್ತುತ 89 ಅಡಿ ಅಂದಂತೆ ಕೇವಲ 15 ಟಿಎಂಸಿ ನೀರಿದ್ದು, 5 ಟಿಎಂಸಿ ಡೆಡ್‌ಸ್ಟೋರೆಜ್ ಬಿಟ್ಟು, ಉಳಿಕೆ 10 ಟಿಎಂಸಿ ಮಾತ್ರ ಸ್ಥಳೀಯ ಜನರಿಗೆ ಕುಡಿಯಲು ಬರುವ ಜೂನ್ ವರೆಗೂ ನೀರು ಸಾಲದಾಗಿದೆ. ಇದ್ದಕ್ಕಿದ್ದಂತೆ ಕಾವೇರಿ ನದಿಯಲ್ಲಿ ಹೊರ ಹರಿವು ಹೆಚ್ಚಳವಾಗಲು ಕಾರಣವೇನು ಎಂಬ ಚಿಂತೆ ಕಾಡಿದ್ದು, ತುಂಬಿ ಹರಿಯುತ್ತಿರುವ ಕಾವೇರಿ ನದಿ ಕಂಡು ರೈತರಲ್ಲಿ ಆತಂಕ ಮೂಡಿದೆ.

ಹೊರ ಹರಿವು 4930 ಕ್ಯುಸೆಕ್ ಹೆಚ್ಚಳ:

ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿ ಸೇರಿ ಕಾವೇರಿ ನದಿಯಲ್ಲಿನ ಹೊರ ಹರಿವು ಹೆಚ್ಚಳವಾಗಿದೆ. ಕೆಆರ್‌ಎಸ್ ಜಲಾಶಯದ ಪ್ರಸ್ತುತ ನೀರಿನ ಮಟ್ಟ 89.24 ಅಡಿ, ಒಳಹರಿವು 136 ಕ್ಯುಸೆಕ್, 4930 ಕ್ಯುಸೆಕ್ ಹೊರ ಹೋಗುತ್ತಿದೆ. ಶನಿವಾರ ಬೆಳಗ್ಗೆ 1,542 ಕ್ಯುಸೆಕ್ ನೀರು ಹೊರ ಬಿಡಲಾಗುತ್ತಿತ್ತು. 3 ಸಾವಿರಕ್ಕೂ ಹೆಚ್ಚು ಕ್ಯುಸೆಕ್ ನೀರನ್ನು ಮಧ್ಯಾಹ್ನದ ನಂತರ ಹೊರ ಬಿಡಲಾಗುತ್ತಿದೆ.

ಹೊರ ಹರಿವು ಹೆಚ್ಚಾದ ಹಿನ್ನೆಲೆ ಸಾರ್ವಜನಿಕರ ಆಕ್ರೋಶ ಹೆಚ್ಚಾಗಿದ್ದು, ಕುಡಿಯಲು ನೀರಿಲ್ಲದ ಸಮಯದಲ್ಲಿ ತಮಿಳುನಾಡಿಗೆ ನೀರು ಹರಿಸುತ್ತಿರುವುದು ಎಷ್ಟು ಸರಿ ಎಂದು ಸರ್ಕಾರ ಹಾಗೂ ನೀರಾವರಿ ಇಲಾಖೆಯವರಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.

ನೀರು ನಿಲ್ಲಿಸದಿದ್ದರೆ ನದಿಗಿಳಿದು ಪ್ರತಿಭಟನೆ ಎಚ್ಚರಿಕೆ:

ವಿವಿಧ ಸಂಘಟನೆಗಳ ಮುಖಂಡರಾದ ಪುರಸಭಾ ಸದಸ್ಯ ಎಸ್. ಪ್ರಕಾಶ್, ಮಂಡ್ಯ ರಕ್ಷಣಾ ವೇದಿಕೆ ಅಧ್ಯಕ್ಷ ಶಂಕರ್ ಬಾಬು, ರೈತ ಸಂಘದ ಮರಳಗಾಲ ಕೃಷ್ಣೇಗೌಡ, ಭೂಮಿತಾಯಿ ಹೋರಾಟ ಸಮಿತಿಯ ಬಲ್ಲೇನಹಳ್ಳಿ ಕೃಷ್ಣೇಗೌಡ ಇತರರು ಕೂಡಲೇ ಸರ್ಕಾರ ನೀರು ನಿಲ್ಲಿಸಬೇಕು. ಒಂದು ವೇಳೆ ನೀರು ನಿಲ್ಲಿಸದಿದ್ದರೆ ನದಿಗಿಳಿದು ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ
‘ಜಿ ರಾಮ್‌ ಜಿ’ ವಿರುದ್ಧ ಸಮರಕ್ಕೆ ನಾಳೆ ಕೈ ವಿಶೇಷ ಸಂಪುಟ ಸಭೆ