ಭದ್ರಾಗೆ ನೀರು: ಮೂರು ಜಿಲ್ಲೆಗೆ ಅನುಕೂಲ: ಕೆ.ಬಿ.ಕಲ್ಲೇರುದ್ರೇಶ

KannadaprabhaNewsNetwork |  
Published : Jun 30, 2025, 12:34 AM IST
29ಕೆಡಿವಿಜಿ5-ದಾವಣಗೆರೆಯಲ್ಲಿ ಭಾನುವಾರ ವಿಶ್ವೇಶ್ವರಯ್ಯ ಜಲ ನಿಗಮ, ಭದ್ರಾ ಮೇಲ್ದಂಡೆ ಯೋಜನೆ ಸದಸ್ಯ, ಜೆಡಿಎಸ್ ಮುಖಂಡ ಕೆ.ಬಿ.ಕಲ್ಲೇರುದ್ರೇಶ ಸುದ್ದಿಗೋಷ್ಟಿಯಲ್ಲಿ ಮಾತನಾ ಡಿದರು. | Kannada Prabha

ಸಾರಾಂಶ

ಶರಾವತಿ ನದಿಗೆ ಕಟ್ಟಿರುವ ಲಿಂಗನಮಕ್ಕಿ ಜಲಾಶಯದಿಂದ ಬೆಂಗಳೂರಿಗೆ ಕುಡಿಯುವ ನೀರು ಪೂರೈಸುವ ಯೋಜನೆ ರೂಪಿಸಿದರೆ ದಾವಣಗೆರೆ, ಚಿತ್ರದುರ್ಗ ಜಿಲ್ಲೆ ಜನರಿಗೂ ಕುಡಿಯುವ ನೀರೊದಗಿಸಲು ಸಾಧ್ಯವಾಗಲಿದೆ ಎಂದು ವಿಶ್ವೇಶ್ವರಯ್ಯ ಜಲ ನಿಗಮ, ಭದ್ರಾ ಮೇಲ್ದಂಡೆ ಯೋಜನೆ ಸದಸ್ಯ, ಜೆಡಿಎಸ್ ಮುಖಂಡ ಕೆ.ಬಿ.ಕಲ್ಲೇರುದ್ರೇಶ ತಿಳಿಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಶರಾವತಿ ನದಿಗೆ ಕಟ್ಟಿರುವ ಲಿಂಗನಮಕ್ಕಿ ಜಲಾಶಯದಿಂದ ಬೆಂಗಳೂರಿಗೆ ಕುಡಿಯುವ ನೀರು ಪೂರೈಸುವ ಯೋಜನೆ ರೂಪಿಸಿದರೆ ದಾವಣಗೆರೆ, ಚಿತ್ರದುರ್ಗ ಜಿಲ್ಲೆ ಜನರಿಗೂ ಕುಡಿಯುವ ನೀರೊದಗಿಸಲು ಸಾಧ್ಯವಾಗಲಿದೆ ಎಂದು ವಿಶ್ವೇಶ್ವರಯ್ಯ ಜಲ ನಿಗಮ, ಭದ್ರಾ ಮೇಲ್ದಂಡೆ ಯೋಜನೆ ಸದಸ್ಯ, ಜೆಡಿಎಸ್ ಮುಖಂಡ ಕೆ.ಬಿ.ಕಲ್ಲೇರುದ್ರೇಶ ತಿಳಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2018-19ರಲ್ಲಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆ ಲಿಂಗನಮಕ್ಕಿ ಜಲಾಶಯದಿಂದ ತುಂಗಾ ಜಲಾಶಯ ಮತ್ತು ಭದ್ರಾ ಡ್ಯಾಂಗೆ 30 ಟಿಎಂಸಿ ಕ್ಯುಸೆಕ್‌ ನೀರು ಹರಿಸುವ ಬಗ್ಗೆ ಅನುಪಾಲನಾ ವರದಿ ಸಲ್ಲಿಸಲು ಸೂಚಿಸಿದ್ದರು. ನಂತರ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಸಿಎಂ ಆದಾಗಲೂ ಯೋಜನೆ ಕಾರ್ಯ ರೂಪಕ್ಕೆ ತರುವಂತೆ ಮನವಿ ಮಾಡಿದ್ದೆವು ಎಂದರು.

ಯಾವುದೇ ಯೋಜನೆ ಅನುಕೂಲ ಪಡೆಯಲು ಕಾಲಾವಕಾಶ ತೆಗೆದುಕೊಳ್ಳುತ್ತದೆ. ಈಗ ಲಿಂಗನಮಕ್ಕಿ ಜಲಾಶಯದಿಂದ 1000 ಕ್ಯುಸೆಕ್ ನೀರನ್ನು ಭದ್ರಾಗೆ ಹರಿಸಿದರೆ ದಾವಣಗೆರೆ-ಚಿತ್ರದುರ್ಗದ ಅವಳಿ ಜಿಲ್ಲೆ ರೈತರು, ಜನರಿಗೆ ಅನುಕೂಲವಾಗುತ್ತದೆ. ಅಲ್ಲದೇ, ಬೆಂಗಳೂರಿನ ಕುಡಿಯುವ ನೀರಿನ ಬವಣೆಯೂ ತಪ್ಪಲಿದೆ. ಇಂತಹ ಯೋಜನೆಗೆ 8 ಸಾವಿರ ಕೋಟಿ ರು. ಅನುದಾನದ ಅಗತ್ಯವಿದೆ ಎಂದು ಹೇಳಿದರು.

ದಾವಣಗೆರೆ, ಚಿತ್ರದುರ್ಗ, ಬೆಂಗಳೂರಿಗೂ ಸಮರ್ಪಕ ನೀರೊದಗಿಸುವ ಇಂತಹ ಯೋಜನೆಗೆ 8 ಸಾವಿರ ಕೋಟಿ ರು. ಅನುದಾನವನ್ನು ಮೈನಿಂಗ್, ಜಲಜೀವನ್ ಮಿಷನ್, ಪರಿಶಿಷ್ಟ ಜಾತಿ ಮತ್ತು ಪಂಗಡ ಸೇರಿದಂತೆ ಇತರೆ ಅನುದಾನ ಬಳಸಿಕೊಂಡು ಯೋಜನೆಯನ್ನು ಕಾರ್ಯಗತಗೊಳಿಸುವ ತುರ್ತು ಅವಶ್ಯಕತೆ ಇದೆ. ವಾಣಿವಿಲಾಸ ಸಾಗರದಿಂದ ಬೆಂಗಳೂರು ನಗರಕ್ಕೆ ಗುರುತ್ವಾಕರ್ಷಣೆ ಮೂಲಕ ನೀರುಹರಿಸಬಹುದು. ಲಿಂಗನಮಕ್ಕಿ ಡ್ಯಾಂನಿಂದ 10 ಟಿಎಂಸಿ ನೀರನ್ನು ಕುಡಿಯುವ ನೀರಿಗೆ ಹರಿಸಿದರೆ, 6-7 ಟಿಎಂಸಿ ನೀರು ದಾವಣಗೆರೆಗೂ ಸಿಗಲಿದೆ ಎಂದು ಮಾಹಿತಿ ನೀಡಿದರು. ಉಳಿದ ನೀರನ್ನು ಚಿತ್ರದುರ್ಗ ಸುತ್ತಲಿನ ಪ್ರದೇಶಗಳಿಗೂ ಪೂರೈಸಬಹುದು. ಅಲ್ಲದೇ, ವಿವಿ ಸಾಗರಕ್ಕೆ ನೀರು ಹರಿಸಿ, ಮಾರಿಕಣಿವೆ ಮೂಲಕ ಬೆಂಗಳೂರಿಗೂ ನೀರು ಕೊಡಬಹುದು. ಇಂತಹ ಯೋಜನೆಗೆ ಹಣಕಾಸು, ಪರಿಸರ, ಇಚ್ಛಾಶಕ್ತಿ ಹಾಗೂ ಜವಾಬ್ಧಾರಿಯ ಅಗತ್ಯವಿದೆ. ಯೋಜನೆ ಬಗ್ಗೆ ಪರಿಸರವಾದಿಗಳಿಗೆ ಕೂಲಂಕುಷವಾಗಿ ಅಧ್ಯಯನ ಮಾಡಿ, ಮಾಹಿತಿ ನೀಡುವ ಕೆಲಸವಾಗಬೇಕು. ರಾಜಕಾರಣಿಗಳಿಗೆ ಇಚ್ಛಾಶಕ್ತಿ, ಅಧಿಕಾರಿಗಳಿಗೆ ಜವಾಬ್ಧಾರಿ ಬೇಕಾಗುತ್ತದೆ ಎಂದು ತಿಳಿಸಿದರು.

ಈಗಾಗಲೇ ಈ ಯೋಜನೆ ಬಗ್ಗೆ ಹರಿಹರ ಮಾಜಿ ಶಾಸಕ, ಜೆಡಿಎಸ್ ಮುಖಂಡರಾದ ಎಚ್.ಎಸ್.ಶಿವಶಂಕರ ಜಲ ಸಂಪನ್ಮೂಲ ಸಚಿವರೂ ಆದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರನ್ನು ಭೇಟಿ ಮಾಡಿ, ಯೋಜನೆಯ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಬಹುಶಃ ಇನ್ನೊಂದು ವಾರದೊಳಗಾಗಿ ಡಿಸಿಎಂ ಡಿ.ಕೆ.ಶಿವಕುಮಾರ ಸಭೆ ಕರೆಯುವ ನಿರೀಕ್ಷೆ ಇದೆ ಎಂದರು.

ಮುಖಂಡರಾದ ನವೀನ್‌, ಉಸ್ಮಾನ್ ಅಲಿ, ಗೋಡೆ ಸಿದ್ದೇಶ, ಲಕ್ಷ್ಮಣ ಉದ್ಧಘಟ್ಟ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆಧಾರಸಹಿತ ಇತಿಹಾಸಕಾರರನ್ನು ಪರಿಚಯಿಸಿ
ಬಿಜೆಪಿಯವರಿಗೆ ದ್ವೇಷ ಭಾಷಣ ಬೇಕಾ?: ಪದ್ಮರಾಜ್‌ ಪ್ರಶ್ನೆ