ಹೂವಿನಹಡಗಲಿಯಲ್ಲಿ ಬತ್ತಿದ ಕೆರೆಗಳಿಗೆ ನೀರು, ವಾರದಲ್ಲೇ ಜೀವ ಕಳೆ

KannadaprabhaNewsNetwork |  
Published : Jun 12, 2024, 12:33 AM IST
ಹೂವಿನಹಡಗಲಿ ತಾಲೂಕಿನ ಮಾಗಳ ಗ್ರಾಮದ ಹತ್ತಿರದ 10 ಕೆರೆಗಳಿಗೆ ನೀರು ತುಂಬಿಸುವ ಪಂಪ್‌ಹೌಸ್‌ ಹಾಗೂ ಕೆರೆ ತುಂಬಿಸುವ ಜಾಕ್‌ವಾಲ್‌ ಬಳಿ ನದಿ ನೀರು ಬಂದಿರುವುದು. | Kannada Prabha

ಸಾರಾಂಶ

ಕಳೆದ ವರ್ಷ ಮಳೆ ಕೊರತೆಯಿಂದ ಹೂವಿನಹಡಗಲಿ ತಾಲೂಕಿನ ಕೆರೆಗಳು ಬತ್ತಿಹೋಗಿವೆ. ಈಗ ಕೆರೆ ತುಂಬಿಸುವ ಯೋಜನೆಯಡಿ 10 ಕೆರೆಗಳಿಗೆ ನೀರು ಹರಿಸಲು ಸಿದ್ಧತೆ ನಡೆಸಲಾಗಿದೆ. ತುಂಗಭದ್ರಾ ನದಿಗೆ ಒಳ ಹರಿವು ಹೆಚ್ಚಳವಾಗುವ ಲಕ್ಷಣ ಕಂಡುಬಂದಿದೆ.

ಚಂದ್ರು ಕೊಂಚಿಗೇರಿ

ಹೂವಿನಹಡಗಲಿ: ಕೆರೆಗೆ ನೀರು ತುಂಬಿಸುವ ಯೋಜನೆಯಡಿ ತಾಲೂಕಿನ 10 ಕೆರೆಗಳಿಗೆ ಒಂದು ವಾರದಲ್ಲೇ ನೀರು ಹರಿದುಬರಲಿದೆ.

ಕಳೆದ ವರ್ಷ ಮಳೆ ಇಲ್ಲದೇ ಕೆರೆಗಳೆಲ್ಲ ನೀರಿಲ್ಲದೇ ಬತ್ತಿ ಹೋಗಿದ್ದವು. ಈಗ ಮಳೆಯಾಗುತ್ತಿದ್ದರೂ ಕೆರೆಗಳಿಗೆ ನಿರೀಕ್ಷಿತ ಮಟ್ಟದಲ್ಲಿ ನೀರು ಹರಿದು ಬರುತ್ತಿಲ್ಲ. ಮಲೆನಾಡು ಪ್ರದೇಶದಲ್ಲಿ ಮಳೆಯಾಗುತ್ತಿದ್ದು, ತುಂಗಭದ್ರಾ ನದಿಗೆ ನೀರು ಬರುತ್ತಿದೆ.

ತಾಲೂಕಿನ ಮಾಗಳ ಗ್ರಾಮದ ಹೊರ ವಲಯದಲ್ಲಿರುವ ಪಂಪ್‌ಹೌಸ್‌ನಿಂದ ತಾಲೂಕಿನ 10 ಕೆರೆಗಳಿಗೆ ನೀರು ತುಂಬಿಸಲಾಗುತ್ತದೆ. ಜತೆಗೆ ಸಾಕಾರ ಬಳಿ ಇರುವ ಪಂಪ್‌ಹೌಸ್‌ನಿಂದ ಹ್ಯಾರಡ ಹೊಸ ಮಲಿಯಮ್ಮನ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಮುಂದಿನ 8-10 ದಿನಗಳ ಒಳಗೆ ನಡೆಯಲಿದೆ. ಈ ಹಿಂದೆ ನದಿಯಲ್ಲಿ ನೀರಿಲ್ಲದ ಕಾರಣ ಈ ಯೋಜನೆ ಸ್ಥಗಿತವಾಗಿತ್ತು. ಈಗ ಅಲ್ಲಲ್ಲಿ ಪೈಪ್‌ಲೈನ್‌ ದುರಸ್ತಿ ಹಾಗೂ ಮೋಟಾರ್‌ಗಳ ದುರಸ್ತಿ ಕಾರ್ಯ ನಡೆಯುತ್ತಿದೆ.

10 ಕೆರೆಗಳು: ತಾಲೂಕಿನ 10 ಕೆರೆಗಳು ಸುಮಾರು 687.52 ಮಿಲಿಯನ್‌ ಕ್ಯೂಬಿಕ್‌ ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿವೆ. ಅರಳಿಹಳ್ಳಿ ಕೆರೆ- 106.36, ಹ್ಯಾರಡ ಮಲಿಯಮ್ಮನ ಕೆರೆ- 62, ದಾಸನಹಳ್ಳಿ ಕೆರೆ-39.61, ಹಿರೇಹಡಗಲಿ ಕೆರೆ-34.99, ಹಗರನೂರು ಕೆರೆ- 120.67, ಹಿರೇಮಲ್ಲನಕೆರೆ ಕೆರೆ-35, ದೇವಗೊಂಡನಹಳ್ಳಿ ಕೆರೆ-64.07, ಮುದೇನೂರು ಕೆರೆ -70, ತಳಕಲ್ಲು ಕೆರೆ- 38.12, ಬನ್ನಿಕಲ್ಲು ಕೆರೆ- 116.07 (ಮಿಲಿಯನ್‌ ಕ್ಯೂಬಿಕ್‌ ಅಡಿಗಳಲ್ಲಿ) ಸೇರಿದಂತೆ ಒಟ್ಟು 687.52 ಮಿಲಯನ್‌ ಕ್ಯುಬಿಕ್‌ ಫೀಟ್‌ನ ನೀರು ಸಂಗ್ರಹ ಸಾಮರ್ಥ್ಯ ಹೊಂದಿವೆ.

ಈಗಾಗಲೇ ಭದ್ರ ಜಲಾಶಯ ಭರ್ತಿಯಾಗಲು 2 ಅಡಿ ಬಾಕಿ ಇದೆ. ಜಲಾಶಯ ಭರ್ತಿಯಾದ ಕೂಡಲೇ ತುಂಗಭದ್ರಾ ನದಿಗೆ ನೀರಿನ ಒಳ ಹರಿವು ಹೆಚ್ಚಳವಾಗುತ್ತದೆ. ಸದ್ಯ ಪರಿಸ್ಥಿತಿಯಲ್ಲಿ ಸಿಂಗಟಾಲೂರು ಬ್ಯಾರೇಜ್‌ಗೆ ಅಷ್ಟೇನೂ ಒಳ ಹರಿವು ಹೆಚ್ಚಳವಾಗಿಲ್ಲ. ವಾರದ ಹಿಂದೆ ನದಿ ತೀರ ಪ್ರದೇಶದಲ್ಲಿ ಮಳೆಯಾಗಿರುವ ಹಿನ್ನೆಲೆಯಲ್ಲಿ ಸಿಂಗಟಾಲೂರು ಬ್ಯಾರೇಜ್‌ಗೆ ನೀರು ಹರಿದು ಬಂದಿತ್ತು. ಆದರೆ ಹೊಸಪೇಟೆಯ ತುಂಗಭದ್ರಾ ಜಲಾಶಯಕ್ಕೆ 1 ಟಿಎಂಸಿ ಪ್ರಮಾಣದಲ್ಲಿ ನೀರು ಹರಿಸಲಾಗಿದೆ. ಇದರಿಂದ ಬ್ಯಾರೇಜ್‌ನಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ವಾರದೊಳಗೆ ತುಂಗಭದ್ರಾ ನದಿಗೆ ಒಳ ಹರಿವು ಹೆಚ್ಚಳವಾಗುವ ಲಕ್ಷಣ ಇರುವ ಕಾರಣ, ತಾಲೂಕಿನ 10 ಕೆರೆಗಳಿಗೆ ನೀರು ತುಂಬಿಸುವ ಯೋಚನೆ ಇದೆ.

ಕೆರೆಗಳಿಗೆ ನೀರು ತುಂಬಿಸಿದರೆ ಕೆರೆಯ ಅಕ್ಕಪಕ್ಕದ ಗ್ರಾಮಗಳ ಜನ-ಜಾನುವಾರುಗಳ ನೀರಿನ ದಾಹ ಇಂಗಿಸಲಿದೆ. ಜತೆಗೆ ನದಿಯಿಂದ ದೂರ ಇರುವ ಕೆಲವು ಗ್ರಾಮಗಳಿಗೆ ಕೆರೆಗಳಿಂದ ಪೈಪ್‌ಲೈನ್‌ ಮಾಡಿ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ರೈತರ ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟವೂ ಹೆಚ್ಚಳವಾಗಲಿದೆ.ತಾಲೂಕಿನ 10 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಪೈಪ್‌ಲೈನ್‌ ಕೆಲವೆಡೆಗಳಲ್ಲಿ ದುರಸ್ತಿ ಕಾರ್ಯ ಪ್ರಗತಿಯಲ್ಲಿದೆ. ಸಿಂಗಟಾಲೂರು ಬ್ಯಾರೇಜ್‌ನಲ್ಲಿ ಸದ್ಯ 1.305 ಟಿಎಂಸಿ ನೀರು ಸಂಗ್ರಹವಾಗಿದ್ದು, 670 ಕ್ಯುಸೆಕ್‌ ನೀರು ಒಳಹರಿವು ಇದೆ. 1600 ಕ್ಯುಸೆಕ್‌ ನೀರು ಹೊರ ಹರಿವು ಇದೆ. 8ರಿಂದ 10 ದಿನದೊಳಗೆ ನೀರು ತುಂಬಿಸುವ ಕಾರ್ಯ ನಡೆಯಲಿದೆ ಎಂದು ಹೂವಿನಹಡಗಲಿ ಸಿಂಗಟಾಲೂರು ಏತ ನೀರಾವರಿ ಯೋಜನೆ ಉಪ ವಿಭಾಗದ ಎಇಇ ಎಚ್‌.ಸಿ. ರಾಘವೇಂದ್ರ ಹೇಳುತ್ತಾರೆ.

PREV

Recommended Stories

KAPPEC ಮೌನ ಕ್ರಾಂತಿ : ಸಾಲ ಪಡೆದವರಲ್ಲಿ ಶೇ.85 ಉದ್ದಿಮೆಗಳು ಯಶಸ್ಸು
ಆಹಾರೋದ್ಯಮಿಯಾಗಲು ಹಣಕಾಸು ನೆರವು ಸಿಗೋದೆಲ್ಲಿ? ಪಡೆಯೋದು ಹೇಗೆ?