ಚಿತ್ರದುರ್ಗದಲ್ಲಿ ಭದ್ರಾ ಮೇಲ್ದಂಡೆಯಡಿ 51 ಕೆರೆಗಳಿಗೆ ನೀರು : ಶಾಸಕ ರಘುಮೂರ್ತಿ

KannadaprabhaNewsNetwork |  
Published : Apr 01, 2025, 12:47 AM ISTUpdated : Apr 01, 2025, 01:02 PM IST
ಚಿತ್ರದುರ್ಗ ಎರಡನೇ ಪುಟದ ಲೀಡ್   | Kannada Prabha

ಸಾರಾಂಶ

ಮಧ್ಯ ಕರ್ನಾಟಕದ ಬಯಲು ಸೀಮೆ ಪ್ರದೇಶಗಳಿಗೆ ನೀರುಣಿಸುವ ಭದ್ರಾ ಮೇಲ್ದಂಡೆ ಯೋಜನೆಯಡಿ ತುರುವನೂರು ಹೋಬಳಿಯ 9 ಕೆರೆ ಸೇರಿದಂತೆ ಚಳ್ಳಕೆರೆ ವಿಧಾಸಭೆ ಕ್ಷೇತ್ರದ 51 ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಲಾಗುತ್ತದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

 ಚಿತ್ರದುರ್ಗ : ಮಧ್ಯ ಕರ್ನಾಟಕದ ಬಯಲು ಸೀಮೆ ಪ್ರದೇಶಗಳಿಗೆ ನೀರುಣಿಸುವ ಭದ್ರಾ ಮೇಲ್ದಂಡೆ ಯೋಜನೆಯಡಿ ತುರುವನೂರು ಹೋಬಳಿಯ 9 ಕೆರೆ ಸೇರಿದಂತೆ ಚಳ್ಳಕೆರೆ ವಿಧಾಸಭೆ ಕ್ಷೇತ್ರದ 51 ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಲಾಗುತ್ತದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

ಚಿತ್ರದುರ್ಗ ತಾಲೂಕಿನ ಹುಣಿಸೆಕಟ್ಟೆ ಗ್ರಾಮದಲ್ಲಿ ಯುಗಾದಿ ಅಂಗವಾಗಿ ಸೋಮವಾರ ಏರ್ಪಡಿಸಿದ್ದ ತಾಲೂಕು ಮಟ್ಟದ ಎತ್ತಿನಗಾಡಿ ಸ್ಪರ್ಧೆಗಳಿಗೆ ಚಾಲನೆ ನೀಡಿ ಮಾತನಾಡಿ, ಭದ್ರಾ ಮೇಲ್ದಂಡೆ ಕಾಮಗಾರಿ ಚುರುಕುಗೊಳಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ. ಇನ್ನೊಂದು ವರ್ಷದಲ್ಲಿ ಚಿತ್ರದುರ್ಗ ಕಾಲುವೆ ಕಾಮಗಾರಿ ಪೂರ್ಣಗೊಳ್ಳಲಿದ್ದು ಎಲ್ಲ ಕೆರೆಗಳಿಗೂ ನೀರು ಹರಿದು ಬರಲಿದೆ. ರೈತರು ಆತ್ಮವಿಶ್ವಾಸ ಕಳೆದುಕೊಳ್ಳುವುದು ಬೇಡ, ಭದ್ರಾ ನೀರು ನೂರಕ್ಕೆ ನೂರರಷ್ಟು ಕೆರೆಗಳಿಗೆ ಹರಿದು ಬರುತ್ತದೆ ಎಂದರು.

ತೀವ್ರ ಕುಡಿಯುವ ನೀರಿನ ಅಭಾವದಿಂದ ಕಂಗೆಟ್ಟಿದ್ದ ಚಳ್ಳಕೆರೆ, ಕೂಡ್ಲಿಗಿ, ಮೊಳಕಾಲ್ಮೂರು, ಪಾವಗಡ ಕ್ಷೇತ್ರಕ್ಕೆ ತುಂಬಾ ಭದ್ರಾ ಹಿನ್ನೀರು ಮೂಲಕ ಕುಡಿಯುವ ನೀರು ಒದಗಿಸುವ ಯೋಜನೆ ಪೂರ್ಣಗೊಂಡಿದೆ. ನೀರು ಪೂರೈಕೆ ಬಗ್ಗೆ ಟ್ರಯಲ್ ಮಾಡಲಾಗುತ್ತಿದೆ. ಈ ಯೋಜನೆಯಡಿ ತುರುವನೂರು ಹೋಬಳಿ ಪ್ರತಿ ಮನೆಗೆ ಕುಡಿಯುವ ನೀರು ಪೂರೈಕೆಯಾಗಲಿದೆ ಎಂದರು.

ಇತ್ತೀಚೆಗೆ ಗ್ರಾಮೀಣ ಕ್ರೀಡೆಗಳು ಕಣ್ಮರೆಯಾಗುತ್ತಿವೆ. ಅದರಲ್ಲೂ ಹಳ್ಳಿಗಳು ನಿಧಾನವಾಗಿ ಆಧುನೀಕರಣದತ್ತ ಮುಖ ಮಾಡುತ್ತಿದ್ದಂತೆ ರೈತರು ಪಾಲ್ಗೊಳ್ಳುತ್ತಿದ್ದ ಅದೆಷ್ಟೋ ಹಳ್ಳಿ ಸೊಗಡಿನ ಕ್ರೀಡೆಗಳು ಮಾಯವಾಗಿವೆ. ಗ್ರಾಮೀಣ ಕ್ರೀಡೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಯುಗಾದಿ ಹಬ್ಬಕ್ಕೆ ಎತ್ತಿನಗಾಡಿ ಸ್ವರ್ಧೆ ಸಂತಸವನ್ನು ಇಮ್ಮಡಿಗೊಳಿಸಿದೆ ಎಂದು ಹೇಳಿದರು.

ಚಳ್ಳಕೆರೆ ವಿಧಾನಸಭೆ ಕ್ಷೇತ್ರವೇ ಒಂದು ರೀತಿಯ ಬುಡಕಟ್ಟು ಸಂಸ್ಕೃತಿ ತವರೂರು. ಬುಡಕಟ್ಟು ಸಂಸ್ಕೃತಿಯ ಆಚರಣೆಗಳು ಅಚ್ಚುಕಟ್ಟಾಗಿ ನಡೆಯುತ್ತ ಬಂದಿವೆ. ರೈತರಿಗೆ ಎತ್ತುಗಾಡಿ ದೇವರಿದ್ದಂತೆ. ಅವುಗಳು ಮನೆಯಲ್ಲಿ ಇದ್ದರೆ ಲಕ್ಷ್ಮಿ ಎಂಬ ನಂಬಿಕೆ ಸಹ ಇದೆ.

ಹುಣಸೇಕಟ್ಟೆ ಗ್ರಾಮದಲ್ಲಿ ಯಾವುದೇ ಕಾರ್ಯಕ್ರಮ ನಡೆದರೂ ಒಗ್ಗಟ್ಟಿನಿಂದ ಅಚ್ಚುಕಟ್ಟಾಗಿ ಮಾಡುತ್ತಾರೆ. ಅದೇ ರೀತಿಯಲ್ಲಿ ಇಂದು ತಮ್ಮೊಂದಿಗೆ ಕೃಷಿ ಚಟುವಟಿಕೆಯಲ್ಲಿ ಹೆಗಲಿಗೆ ಹೆಗಲುಕೊಟ್ಟು ದುಡಿದ ಎತ್ತುಗಳು ಜೊತೆ ಯುಗಾದಿ ಸಂಭ್ರಮದ ದಿನ ಎತ್ತಿನಗಾಡಿ ಓಟದ ಸ್ವರ್ಧೆ ಏರ್ಪಡಿಸಿರುವುದು ಖುಷಿ ತಂದಿದೆ ಎಂದರು.

ಎತ್ತಿನಗಾಡಿ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ ಗೆಲುವು ಪಡೆಯುವುದು ಸುಲಭವಲ್ಲ. ಎತ್ತಿನಗಾಡಿಯನ್ನು ಓಡಿಸುವುದು ಒಂದು ರೀತಿಯ ಸಾಹಸವೇ. ಇದಕ್ಕೆ ಪರಿಣತಿ ಬೇಕಾಗುತ್ತದೆ ಎಂದರು.

ಸರ್ಕಾರದಿಂದ ಹುಣಸೇಕಟ್ಟೆ ಗ್ರಾಮಕ್ಕೆ 25ಕ್ಕೂ ಹೆಚ್ಚು ಹಸುಗಳು ಕೊಡಿಸಿದ್ದೇವೆ. ಎಲ್ಲಾ ಹಸುಗಳು ಕರು ಹಾಕಿದ್ದು ಉತ್ತಮ ಹಾಲು ನೀಡುತ್ತಿವೆ ಎಂದು ರೈತರು ತಿಳಿಸಿದ್ದು ಸಂತಸವಾಯಿತು. ಮುಂದಿನ ದಿನಗಳಲ್ಲಿ ಹೈನುಗಾರಿಕೆಗೂ ಹಂತ ಹಂತವಾಗಿ ಪ್ರೋತ್ಸಾಹ ನೀಡಲಾಗುವುದೆಂದು ಹೇಳಿದರು.

ಕೂನಬೇವು ಗ್ರಾಮ ಪಂಚಾಯತಿ ಅಧ್ಯಕ್ಷೆ ಪದ್ಮಾವತಿ, ಜಿಲ್ಲಾ ಗ್ಯಾರೆಂಟಿ ಸಮಿತಿ ಉಪಾಧ್ಯಕ್ಷ ಬಾಬುರೆಡ್ಡಿ, ಗ್ರಾಮ ಪಂಚಾಯತಿ ಸದಸ್ಯರಾದ ಕೆ.ನಿಂಗಮ್ಮ, ಎಸ್.ಪಾಲಯ್ಯ, ಕೆ.ಟಿ.ಯಶೋಧ, ಆರ್ಚನಾ, ಅಹೋಬಲ ಟಿವಿಎಸ್ ಮಾಲೀಕ ಪಿ.ವಿ.ಅರುಣ್ ಕುಮಾರ್, ಮುಖಂಡರಾದ ಗುರುಮೂರ್ತಿ, ಹೆಚ್.ಕಾಂತರಾಜ್ ,ಮಾರುತಿ,ಮಹಂತೇಶ್, ಏಕಾಂತ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ