ಕನ್ನಡ ಪ್ರಭ ವಾರ್ತೆ ಬೆಳಗಾವಿ
ಜಿಲ್ಲೆಯ ಹಿಡಕಲ್ ಜಲಾಶಯದ ನೀರನ್ನು ಹುಬ್ಬಳ್ಳಿ-ಧಾರವಾಡದ ಕೈಗಾರಿಕೆಗಳಿಗೆ ಪೂರೈಸಬಾರದು,15 ದಿನದೊಳಗೆ ಕಾಮಗಾರಿ ಸ್ಥಗಿತಗೊಳಿಸದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ನಮ್ಮ ನೀರು, ನಮ್ಮ ಹಕ್ಕು ಹೋರಾಟ ಸಮಿತಿ ಸದಸ್ಯರು ಪ್ರತಿಭಟನೆಯ ಮೂಲಕ ಎಚ್ಚರಿಕೆ ನೀಡಿದ್ದಾರೆ.ಸೋಮವಾರ ನಗರದ ರಾಣಿ ಚನ್ನಮ್ಮ ವೃತ್ತದಿಂದ ಪ್ರತಿಭಟನಾ ರ್‍ಯಾಲಿ ನಡೆಸಿ ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿ ಹಾಗೂ ಜಲಸಂಪನ್ಮೂಲ ಇಲಾಖೆ
ಹಿರಿಯ ಅಭಿಯಂತರರಿಗೆ ಮನವಿ ಸಲ್ಲಿಸಿದರು.ಬೆಳಗಾವಿ ಮಹಾನಗರದ ಜನಸಂಖ್ಯೆ ವೇಗವಾಗಿ ಬೆಳೆಯುತ್ತಿದೆ. ಹಿಡಕಲ್ ಜಲಾಶಯದ ನೀರಿನ ಅವಶ್ಯಕತೆ ಅತಿಯಾಗಿದೆ. ಸದ್ಯ ನವಿಲುತೀರ್ಥ ಜಲಾಶಯದಿಂದ ಹುಬ್ಬಳ್ಳಿ-ಧಾರವಾಡಕ್ಕೆ ನೀರು ಪೂರೈಸುತ್ತಿರುವಾಗ ಹಿಡಕಲ್ ಜಲಾಶಯದ ನೀರನ್ನೂ ಸಹ ಪೂರೈಸುತ್ತಿರುವುದು ಎಷ್ಟು ಸೂಕ್ತ. ಕಾಮಗಾರಿ ಮೊಟಕುಗೊಳಿಸುವವರೆಗೂ ನಮ್ಮ ಹೋರಾಟ ನಿರಂತರವಾಗಿರಲಿದೆ. ನಮ್ಮದು ಉತ್ತರ ಕರ್ನಾಟಕದ ಅಭಿವೃದ್ಧಿಗೆ ವಿರೋಧ ಇಲ್ಲ. ಆದರೆ, ಅಭಿವೃದ್ಧಿಗೆ ಸರಿಯಾದ ಜಲಸಂಪನ್ಮೂಲ ಬಳಸಬೇಕು. ಇದು ಸಾಮಾನ್ಯರ ಹಕ್ಕಾಗಿದೆ. ಸರ್ಕಾರ ಈ ಕುರಿತು ಗಂಭೀರವಾಗಿ ಚಿಂತಿಸಬೇಕು. ಜನಪ್ರತಿನಿಧಿಗಳ ಸಭೆ ನಡೆಸಿ ಸಲೋಚನೆ ಮಾಡಬೇಕೆಂದು ಆಗ್ರಹಿಸಿದ್ದಾರೆ.
ರೈತರಿಗೆ ತಿಳಿಯದಂತೆ ಭೂಮಿಯಾಳದಲ್ಲಿ ಪೈಪಲೈನ್ ಅಳವಡಿಸುವ ಕಾರ್ಯ ಮಾಡಲಾಗುತ್ತಿದೆ. ಯಾವುದೇ ಟೆಂಡರ್ ಅಥವಾ ಅನುಮತಿ ಪಡೆಯದೇ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಭವಿಷ್ಯದಲ್ಲಿ ಬೆಳಗಾವಿ ಅಷ್ಟೇ ಅಲ್ಲದೆ ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗೂ ಜಲಸಂಕಷ್ಟ ಎದುರಾಗಲಿದೆ. ಹುಬ್ಬಳ್ಳಿ-ಧಾರವಾಡ ಕೈಗಾರಿಕೆಗಳಿಗಾಗಿ ಪರ್ಯಾಯವಾಗಿ ಕಪ್ಪತಗುಡ್ಡದಲ್ಲಿ ಚೆಕ್ ಡ್ಯಾಂ ನಿರ್ಮಿಸಿ ನೀರು ಪೂರೈಸಬಹುದಾಗಿದೆ ಅದು ಬಿಟ್ಟು ಹಿಡಕಲ್ ಡ್ಯಾಂ ನೀರನ್ನು ಬಳಸಲು ಮುಂದಾಗಿರುವುದು ಖಂಡನೀಯ. ಕೈಗಾರಿಕೆ ವಲಯ ಮಾಡುವುದಾದರೆ ಬೆಳಗಾವಿಯಲ್ಲೇ ಮಾಡಬೇಕು. ಇದಕ್ಕಾಗಿ ಎಲ್ಲ ಸಂಘ-ಸಂಸ್ಥೆಗಳು ಭಾಷಾತೀತ, ಪಕ್ಷಾತೀತವಾಗಿ ಹೋರಾಟ ನಡೆಸಲಿವೆ. 15 ದಿನದಲ್ಲಿ ಕಾಮಗಾರಿ ನಿಲ್ಲಿಸದಿದ್ದರೆ ತೀವ್ರ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.ಮಾಜಿ ಸಚಿವ ಶಶಿಕಾಂತ ನಾಯಕ, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ, ರೈತ ಸಂಘದ ಸಿದಗೌಡ ಮೋದಗಿ, ಸುಜೀತ್ ಮುಳಗುಂದ, ಮಹಾದೇವ ತಳವಾರ, ಮಾಜಿ ಮೇಯರ್ ಎನ್.ಬಿ. ನಿರ್ವಾಣಿ ಇತರರು ಪಾಲ್ಗೊಂಡಿದ್ದರು.