ಕನ್ನಡಪ್ರಭ ವಾರ್ತೆ ಕಲಬುರಗಿ
ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಕೆಸ್ವಾನ್ ಮೂಲಕ ತಹಸೀಲ್ದಾರ್, ತಾಪಂ ಇಓ, ನಗರ ಸ್ಥಳೀಯ ಸಂಸ್ಥೆ ಮಖ್ಯಸ್ಥರು ಹಾಗೂ ಇತರೆ ಸಂಬಂಧಿತ ಇಲಾಖೆ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ಮೂಲಕ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆ ನಡೆಸಿ ಮಾತನಾಡಿದ ಅವರು, ನಾರಾಯಣಪುರದಿಂದ ಬಿಡುಗಡೆಯಾದ ನೀರು ಸೊನ್ನ ಬ್ಯಾರೇಜ್ ತಲುಪಲು ಅಂದಾಜು 10-12 ದಿನಗಳು ಬೇಕಾಗುತ್ತದೆ. ಸೊನ್ನ ಬ್ಯಾರೇಜಿಗೆ ನೀರು ತಲುಪುವವರೆಗೆ ಸಂಬಂಧಪಟ್ಟ ತಹಸೀಲ್ದಾರರು ಇದರ ಮೇಲೆ 24x7 ನಿಗಾ ಇಡಲು ಅಧಿಕಾರಿ-ಸಿಬ್ಬಂದಿ ನಿಯೋಜಿಸಬೇಕು ಎಂದರು.
ಎಲ್ಲಿಯೂ ನೀರು ಪೋಲಾಗದಂತೆ ಮತ್ತು ಅಕ್ರಮವಾಗಿ ಪಂಪ್‌ಸೆಟ್, ಇತರೆ ಮಾರ್ಗದ ಮೂಲಕ ನೀರು ಪಡೆಯದಂತೆ ಎಚ್ಚರ ವಹಿಸಬೇಕು. ಕಟ್ಟುನಿಟ್ಟಿನ ವಿಜಿಲೆನ್ಸ್ ಇಲ್ಲಿ ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿಗಳು ಒತ್ತಿ ಹೇಳಿದರು.ಬರಗಾಲ ಹಿನ್ನೆಲೆ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಅಡಿಯಲ್ಲಿ ಕುಡಿವ ನೀರು ಕಾಮಗಾರಿಗೆ ಚುನಾವಣೆ ನೀತಿ ಸಂಹಿತೆ ಅಡ್ಡಿ ಬರುವುದಿಲ್ಲ. ಜಿಲ್ಲಾ ಚುನಾವಣಾಧಿಕಾರಿ ಅನುಮತಿ ಪಡೆದು ಮುಂದುವರೆಯಬಹುದು. ಅಧಿಕಾರಿಗಳು ಇದನ್ನರಿತು ಕೆಲಸ ಮಾಡಬೇಕು. ಇದಲ್ಲದೆ ಜೆಜೆಎಂ ಸೇರಿ ಇತರೆ ಕುಡಿವ ನೀರಿನ ಯೋಜನೆ ಸಂಬಂಧಪಟ್ಟಂತೆ ಮಾಹಿತಿ ನೀಡಿದಲ್ಲಿ ಅದನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದ ಸ್ಕ್ರೀನಿಂಗ್ ಕಮಿಟಿಗೆ ಕಳುಹಿಸಲಾಗುವುದು. ಜನ-ಜಾನುವಾರುಗಳಿಗೆ ಕುಡಿವ ನೀರು ಪೂರೈಕೆ ನಮ್ಮ ಮೊದಲ ಆದ್ಯತೆಯಾಗಬೇಕು ಎಂದರು.
ಮುಂದಿನ ದಿನದಲ್ಲಿ ಸಮಸ್ಯಾತ್ಮಕ ಹಳ್ಳಿ, ಬಡವಟಣೆಗಳ ಪಟ್ಟಿ ಈಗಿನಿಂದಲೆ ಸಿದ್ಧತೆ ಮಾಡಿಕೊಂಡು ಟ್ಯಾಂಕರ್, ಬೋರವೆಲ್ ಬಾಡಿಗೆ ಮೇಲೆ ಪಡೆದು ಕುಡಿವ ನೀರು ಪೂರೈಸಬೇಕು ಎಂದರು.
ಶುದ್ಧ ಕುಡಿಯುವ ನೀರು ಪೂರೈಸಿ: ಕಲಬುರಗಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದ ಅವರು, ನಗರಕ್ಕೆ ನೀರು ಪೂರೈಕೆ ಮಾಡುವ ಜಲಮೂಲಗಳಲ್ಲಿ ಲಭ್ಯ ನೀರಿನ ಪ್ರಮಾಣ ಕುರಿತು ಮಾಹಿತಿ ಪಡೆದುಕೊಂಡರು. ಕಲಬುರಗಿ ನಗರಕ್ಕೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುತ್ತಿಲ್ಲ ಎಂಬ ದೂರು ಸರ್ವೆ ಸಾಮನ್ಯವಾಗಿದ್ದು, ಶುದ್ಧ ಕುಡಿವ ನೀರು ಪೂರೈಸಬೇಕು ಎಂದು ಪಾಲಿಕೆ, ಜಲ ಮಂಡಳಿ ಅಧಿಕಾರಿಗಳಿಗೆ ಸೂಚಿಸಿದರು. ಇದಲ್ಲದೆ ಆಗಾಗ ಕುಡಿವ ನೀರು ಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿ ತಪಾಸಣೆ ಮಾಡಬೇಕು ಎಂದರು.
ಮುಂದಿನ 3 ದಿನಗಳಲ್ಲಿ ಅಂದರೆ ಮಾ.30ರ ವರೆಗೆ ರಾಜ್ಯದ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಉಷ್ಣ ಅಲೆ ಮತ್ತು ಗರಿಷ್ಠ ತಾಪಮಾನ ಹೆಚ್ಚಾಗುವ ಬಗ್ಗೆ ಹವಾಮಾನ ಇಲಾಖೆಯಿಂದ ಮುನ್ಸೂಚನೆ ಬಂದಿದ್ದು, ಇಂತಹ ಬಿಸಲಿನ ಪ್ರಖರತೆ ಸಂದರ್ಭದಲ್ಲಿ ಸಾರ್ವಜನಿಕರು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಜಿಲ್ಲಾ ಮತ್ತು ತಾಲೂಕಾ ಆರೋಗ್ಯಾಧಿಕಾರಿಗಳು ಆರೋಗ್ಯ ಸಲಹೆ ಮಾರ್ಗಸೂಚಿ ಹೊರಡಿಸಬೇಕು ಮತ್ತು ಇದನ್ನು ವ್ಯಾಪಕವಾಗಿ ಪ್ರಚಾರಗೊಳಿಸಬೇಕು ಎಂದು ಡಿ.ಸಿ. ಬಿ.ಫೌಜಿಯಾ ತರನ್ನುಮ್ ಡಿ.ಎಚ್.ಓ ಗಳಿಗೆ ನಿರ್ದೇಶನ ನೀಡಿದರು.