ಕನ್ನಡಪ್ರಭ ವಾರ್ತೆ ಆಲಮಟ್ಟಿ
ಕೃಷ್ಣಾ ಮೇಲ್ದಂಡೆ ಯೋಜನೆಯ 2025-26ನೇ ಸಾಲಿನ ಹಿಂಗಾರು ಹಂಗಾಮಿನ ಬೆಳೆಗಳಿಗೆ 14 ದಿನ ಚಾಲು, 10 ದಿನ ಬಂದ್ ಪದ್ಧತಿ ಅನುಸರಿಸಿ 2026 ಏ.3ರವರೆಗೆ ಕಾಲುವೆಗಳ ಮೂಲಕ ರೈತರ ಜಮೀನಿಗೆ ನೀರು ಹರಿಸಲು ತೀರ್ಮಾನಿಸಲಾಯಿತು. ಬೆಂಗಳೂರಿನ ವಿಕಾಸ ಸೌಧದ ಸಭಾಂಗಣದಲ್ಲಿ ಶುಕ್ರವಾರ ನಡೆದ ಕೃಷ್ಣಾ ಮೇಲ್ದಂಡೆ ಯೋಜನೆಯ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ವಿಡಿಯೋ ಸಂವಾದದ ಮೂಲಕ ಅಧ್ಯಕ್ಷತೆ ವಹಿಸಿದ ಸಚಿವ ಆರ್.ಬಿ. ತಿಮ್ಮಾಪೂರ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.ಆಲಮಟ್ಟಿ ಮತ್ತು ನಾರಾಯಣಪೂರ ಜಲಾಶಯಗಳಲ್ಲಿ ಒಟ್ಟು 124.01 ಟಿಎಂಸಿ ನೀರು ಬಳಕೆಗೆ ಲಭ್ಯವಿದೆ. ಕಾಲುವೆ ಜಾಲದಲ್ಲಿ ದ್ವಿ-ಋತು ಬೆಳೆಗಳನ್ನು ಸಂರಕ್ಷಿಸಲು ನ.16ರಿಂದ ನ.21 ರವರೆಗೆ ನೀರು ಹರಿಸಲು ತೀರ್ಮಾನಿಸಲಾಗಿದೆ. ನ.22 ರಿಂದ ಡಿ.1 ರವರೆಗೆ 10 ದಿನಗಳ ವರೆಗೆ ಕಾಲುವೆ ಜಾಲದಲ್ಲಿ ಬಂದ್ ಅನುಸರಿಸಲಾಗುವುದು. ಡಿ.2 ರಿಂದ 2026 ಏ.3 ರವರೆಗೆ ಮುಖ್ಯ ಕಾಲುವೆಯಡಿ 14 ದಿನ ಚಾಲು ಹಾಗೂ 10 ದಿನ ಬಂದ್ ಪದ್ಧತಿ ಅನುಸರಿಸಿ ಪ್ರತಿದಿನ 1 ಟಿಎಂಸಿ ಬಳಕೆಯಂತೆ ನೀರಾವರಿಗೆ ಲಭ್ಯವಿರುವ 73 ಟಿಎಂಸಿ ನೀರು ಹರಿಸಲು ತಿರ್ಮಾನಿಸಲಾಗಿದೆ.
ಡಿ.1ರಿಂದ 2026 ಜೂ.30 ರವರೆಗೆ ಕುಡಿಯುವ ನೀರು, ಕೆರೆಗಳನ್ನು ತುಂಬುವುದು. ಕಾಲುವೆಗಳ ಮುಖಾಂತರ ಕುಡಿಯುವ ನೀರಿನ ಯೋಜನೆಗಳಿಗೆ ನೀರು ಪೂರೈಸುವುದು. ಭಾಷ್ಟ್ರೀಕರಣ. ಉಷ್ಣ ವಿದ್ಯುತ್ ಸ್ಥಾವರಗಳಿಗೆ ಹಾಗೂ ಕೈಗಾರಿಕೆಗಳಿಗೆ, ಬ್ಯಾರೇಜ್‌ಗಳಲ್ಲಿ ನೀರಿನ ಸಂಗ್ರಹಣೆ, ರೈತರ ಹಿನ್ನೀರಿನ ಬಳಕೆ ಇತ್ಯಾದಿ ಸೇರಿದಂತೆ ಸಭೆಯಲ್ಲಿ ಚರ್ಚಿಸಿ ಅಂದಾಜು 45 ಟಿಎಂಸಿ ನೀರನ್ನು ಕಾಯ್ದಿರಿಸಲಾಗಿದೆ.ಈ ವರ್ಷ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಮಳೆ ಆಗುತ್ತಿರುವುದರಿಂದ ನ.14ರವರೆಗೂ ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಮುಂದುವರಿದಿದ್ದು, ಇದರಿಂದ ಮುಂಗಾರು ಹಂಗಾಮಿಗೆ ಕಾಲುವೆಗೆ ನೀರು ಹರಿಸಿದರೂ ಆಲಮಟ್ಟಿಯ ಶಾಸ್ತ್ರಿ ಸಾಗರ ಹಾಗೂ ನಾರಾಯಣಪುರದ ಬಸವಸಾಗರ ಜಲಾಶಯಗಳು ಸಂಪೂರ್ಣ ಭರ್ತಿಯಾಗಿವೆ. ಶಾಸ್ತ್ರಿ ಜಲಾಶಯಕ್ಕೆ ಮೇ 19ರಿಂದ ಒಳಹರಿವು ಆರಂಭಗೊಂಡಿದ್ದು 2025ರ ಅಕ್ಟೋಬರ್ ಅಂತ್ಯದವರೆಗೂ ಒಳಹರಿವು ಇದೆ.
ಇಲ್ಲಿಯವರೆಗೆ ಸುಮಾರು 800 ಟಿಎಂಸಿ ಅಡಿಗಿಂತಲೂ ಅಧಿಕ ನೀರು ಜಲಾಶಯಕ್ಕೆ ಹರಿದುಬಂದಿದ್ದು, ಜಲಾಶಯದಿಂದ ನದಿ ಪಾತ್ರಕ್ಕೆ ಸುಮಾರು 702 ಟಿಎಂಸಿ ಅಡಿ ನೀರನ್ನು ಜಲಾಶಯದಿಂದ ನದಿ ಪಾತ್ರಕ್ಕೆ ಹರಿದು ಬೀಡಲಾಗಿದೆ ಎಂದು ಜಲಾಶಯದ ಮೂಲಗಳು ತಿಳಿಸಿವೆ. ಕೃಷ್ಣಾ ಕಣಿವೆಯು ರಾಜ್ಯದ ಒಟ್ಟು ನೀರಾವರಿ ಕ್ಷೇತ್ರದಲ್ಲಿ ಶೇ.62ರಷ್ಟು ಭೂಮಿಗೆ ನೀರು ಒದಗಿಸಲಿದೆ.