ತುಂಗಭದ್ರಾ ಕಾಲುವೆಗೆ ಜುಲೈ 2ರಿಂದ ನವೆಂಬರ್‌ 30ರ ವರೆಗೆ ನೀರು

KannadaprabhaNewsNetwork |  
Published : Jun 28, 2025, 12:20 AM IST
27ಕೆಪಿಎಲ್27 ಬೆಂಗಳೂರಿನಲ್ಲಿ ನಡೆದ ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆ | Kannada Prabha

ಸಾರಾಂಶ

ಜುಲೈ ಎರಡು ಅಥವಾ ಮೂರನೇ ವಾರದಲ್ಲಿ ಸಿಎಂ ಮತ್ತು ಡಿಸಿಎಂ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ವಿಸ್ತೃತವಾದ ಚರ್ಚೆ ನಡೆಯಲಿದೆ. ಅಣೆಕಟ್ಟೆಯ ಸುರಕ್ಷತೆ ಮತ್ತು ಬೆಳೆ ಸಂರಕ್ಷಣೆ ಬಗ್ಗೆ ಸಿಎಂ ಹಾಗೂ ಡಿಸಿಎಂ ನೇತೃತ್ವದಲ್ಲಿ ನಾಲ್ಕು ಜಿಲ್ಲೆಯ ಶಾಸಕರು ಹಾಗೂ ರೈತರನ್ನು ಒಳಗೊಂಡಂತೆ ಸಭೆ ನಡೆಸಬೇಕೆಂದು ರೈತರು ಬೇಡಿಕೆ ಇಟ್ಟಿದ್ದಾರೆ.

ಕೊಪ್ಪಳ/ಮುನಿರಾಬಾದ್:

ತುಂಗಭದ್ರಾ ಜಲಾಶಯದಲ್ಲಿ ಪ್ರಸ್ತುತ 57 ಟಿಎಂಸಿ ನೀರಿನ ಸಂಗ್ರಹವಿದ್ದು ಜು. 2ರಿಂದ ನ. 30ರ ವರೆಗೆ ಕಾಲುವೆಗಳಿಗೆ ನೀರು ಹರಿಸಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಶಿವರಾಜ ತಂಗಡಗಿ ಹೇಳಿದ್ದಾರೆ.

ವಿಧಾನಸೌಧದಲ್ಲಿ ಶುಕ್ರವಾರ ನಡೆದ ತುಂಗಭದ್ರಾ ಯೋಜನೆ ಹಾಗೂ ವಿಜಯನಗರ ಕಾಲುವೆಗಳ 124ನೇ ನೀರಾವರಿ ಸಲಹಾ ಸಮಿತಿ ಸಭೆಯ ಬಳಿಕ ಮಾಹಿತಿ ನೀಡಿದರು.

ಜಲಾಶಯದಲ್ಲಿನ‌ ನೀರಿನ ಸಂಗ್ರಹ ಲಭ್ಯತೆಯ ಮೇರೆಗೆ ನೀರಿನ ಬಳಕೆ ಮಾಡಲಾಗುತ್ತಿದೆ. ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ಜು. 2ರಿಂದ ಜು. 15ರ ವರೆಗೆ 2000 ಕ್ಯುಸೆಕ್‌, ಜು. 16ರಿಂದ ನ. 31ರ ವರೆಗೆ 3000 ಕ್ಯುಸೆಕ್ ಮತ್ತು ಆ. 1ರಿಂದ ನ. 30ರ ವರೆಗೆ 4100 ಕ್ಯುಸೆಕ್‌ನಂತೆ ನೀರು ಹರಿಸಲಾಗುವುದು ಎಂದು ಹೇಳಿದರು.

ಬಲದಂಡೆ ಮೇಲ್ಮಟ್ಟದ ಕಾಲುವೆಗೆ ಜು. 10ರಿಂದ ಜು. 31ರ ವರೆಗೆ ಸರಾಸರಿ 700 ಕ್ಯುಸೆಕ್‌, ಆ. 1ರಿಂದ ನ. 30ರ ವರೆಗೆ 1300 ಕ್ಯುಸೆಕ್‌, ಬಲದಂಡೆಯ ಕೆಳಮಟ್ಟದ ಕಾಲುವೆಗೆ 500 ಕ್ಯುಸೆಕ್‌, ಆ. 1ರಿಂದ ನ. 31ರ ವರೆಗೆ 650 ಕ್ಯುಸೆಕ್‌ ನೀರು ಹರಿಸಲಾಗುವುದು. ರಾಯ ಬಸವಣ್ಣ ಕಾಲುವೆಗೆ 220 ಕ್ಯುಸೆಕ್‌ ಹಾಗೂ ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ಕಾಲುವೆಗೆ 25 ಕ್ಯುಸೆಕ್ ಅಥವಾ ಕಾಲುವೆಯಡಿ ನೀರಿನ ಲಭ್ಯತೆ ಆಧಾರದ ಮೇರೆಗೆ ನೀರು ಹರಿಸಲು ಸಲಹಾ ಸಮಿತಿಯಲ್ಲಿ ನಿರ್ಧರಿಸಲಾಗಿದೆ ಎಂದು ಹೇಳಿದರು.

ಜುಲೈ ಎರಡು ಅಥವಾ ಮೂರನೇ ವಾರದಲ್ಲಿ ಸಿಎಂ ಮತ್ತು ಡಿಸಿಎಂ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ವಿಸ್ತೃತವಾದ ಚರ್ಚೆ ನಡೆಯಲಿದೆ. ಅಣೆಕಟ್ಟೆಯ ಸುರಕ್ಷತೆ ಮತ್ತು ಬೆಳೆ ಸಂರಕ್ಷಣೆ ಬಗ್ಗೆ ಸಿಎಂ ಹಾಗೂ ಡಿಸಿಎಂ ನೇತೃತ್ವದಲ್ಲಿ ನಾಲ್ಕು ಜಿಲ್ಲೆಯ ಶಾಸಕರು ಹಾಗೂ ರೈತರನ್ನು ಒಳಗೊಂಡಂತೆ ಸಭೆ ನಡೆಸಬೇಕೆಂದು ರೈತರು ಬೇಡಿಕೆ ಇಟ್ಟಿದ್ದಾರೆ. ಈ ವಿಚಾರವನ್ನು ಮುಖ್ಯಮಂತ್ರಿ ಗಮನಕ್ಕೆ ತಂದು ಜುಲೈನಲ್ಲಿ ಸಭೆ ನಡೆಸಲು ದಿನಾಂಕ ನಿಗದಿಪಡಿಸಲಾಗುವುದು ಎಂದರು.

ತುಂಗಭದ್ರಾ ಬೋರ್ಡ್‌ನ ಕೆಲ ಅಧಿಕಾರಿಗಳು ಈ ಬಾರಿ ಒಂದು ಬೆಳೆಗೆ ಮಾತ್ರ ನೀರು ನೀಡಲಾಗುವುದು ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ ಎಂದು ರೈತರು ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಇದೀಗ ಒಂದು ಬೆಳೆಗೆ ನೀರು ನೀಡಲು ತೀರ್ಮಾನಿಸಲಾಗಿದೆ. ಮುಂದಿನ ಸಭೆಯಲ್ಲಿ 2ನೇ ಬೆಳೆಗೆ ನೀರು ನೀಡುವ ಕುರಿತು ತೀರ್ಮಾನಿಸಲಾಗುವುದು. ರೈತರ ಹಿತ ಕಾಪಾಡುವುದು ನಮ್ಮ ಉದ್ದೇಶವಾಗಿದ್ದು ಇದರಲ್ಲಿ ಯಾರೂ ಕೂಡ ರಾಜಕಾರಣ ಮಾಡಬಾರದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಜಲಾಶಯದ 32 ಗೇಟ್ ಬದಲಾವಣೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಲ ಸಂಪನ್ಮೂಲ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಚರ್ಚಿಸಲಾಗುವುದು. ಈ ಸಭೆಯಲ್ಲಿ ಅಣೆಕಟ್ಟಿನ ಪರಿಣಿತ ತಜ್ಞರು ಪಾಲ್ಗೊಳ್ಳಲಿದ್ದಾರೆ ಎಂದು ಸಚಿವರು ವಿವರಿಸಿದರು.

ಸಭೆಯಲ್ಲಿ ಸಚಿವರಾದ ಶರಣಪ್ರಕಾಶ ಪಾಟೀಲ್, ಜಮೀರ್ ಅಹ್ಮದ್, ಮಾಜಿ ಸಚಿವ ಬಿ. ನಾಗೇಂದ್ರ, ಕಾಡಾ ಅಧ್ಯಕ್ಷ ಹಸನಸಾಬ್ ದೋಟಿಹಾಳ್, ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳ್, ಎಚ್.ಆರ್. ಗವಿಯಪ್ಪ, ಹಂಪನಗೌಡ ಬಾದರ್ಲಿ, ಬಸವನಗೌಡ ತುರುವಿಹಾಳ, ಶಿವರಾಜ ಪಾಟೀಲ್, ಬಿ.ಎಂ. ನಾಗರಾಜ, ರೈತ ಮುಖಂಡರು ಕೊಪ್ಪಳ, ಬಳ್ಳಾರಿ, ರಾಯಚೂರು ಜಿಲ್ಲಾಧಿಕಾರಿ ಸೇರಿದಂತೆ ಇನ್ನಿತರ ಅಧಿಕಾರಿಗಳು ಹಾಜರಿದ್ದರು.2ನೇ ಬೆಳೆಗೆ ನೀರು ಹರಿಸಲು ಚರ್ಚೆ

ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ಗದ್ದೆಗಳಿಗೆ ಹಿಂಗಾರು ಬೆಳೆಗೆ ನೀರು ಹರಿಸುವ ಕುರಿತು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯೊಂದಿಗೆ ಜುಲೈನಲ್ಲಿ ಜಿಲ್ಲೆಯ ಸಚಿವರು, ಸಂಸದ ಹಾಗೂ ಶಾಸಕರು ಚರ್ಚಿಸಲಿದ್ದಾರೆ ಎಂದು ಕಾಡಾ ಅಧ್ಯಕ್ಷ ಹಸನಸಾಬ್ ದೋಟಿಹಾಳ ತಿಳಿಸಿದ್ದಾರೆ. ಈ ಕುರಿತು ಕನ್ನಡಪ್ರಭದೊಂದಿಗೆ ಮಾತನಾಡಿದ ಅವರು, ತುಂಗಭದ್ರಾ ಜಲಾಶಯದ ಎಲ್ಲ 33 ಗೇಟ್‌ ಬದಲಿಸುವ ನಿಟ್ಟಿನಲ್ಲೂ ಟೆಂಡರ್ ಕರೆಯಲಾಗಿದ್ದು. ಈ ಕುರಿತು ಸಹ ಸಿಎಂ, ಡಿಸಿಎಂ ಅವರೊಂದಿಗೆ ಚರ್ಚಿಸಲಾಗುವುದು ಎಂದರು. ಶುಕ್ರವಾರ ನಡೆದ ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಜಲಾಶಯದ ಗೇಟ್‌ ಬದಲಾವಣೆಯೊಂದಿಗೆ ಕಾಲುವೆ ದುರಸ್ತಿ ಕಾರ್ಯಗಳು ಆದರೆ ಒಳ್ಳೆಯದು ಎಂದು ಕೆಲವು ಶಾಸಕರು ಸಲಹೆ ನೀಡಿದ್ದಾರೆ ಎಂದು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ