ಹೊಸಕೋಟೆ: ತಾಲೂಕಿನ ಸೂಲಿಬೆಲೆ ಹಾಗೂ ನಂದಗುಡಿ ಹೋಬಳಿಯ ಜನರಿಗೆ ನೀರಾವರಿ ಯೋಜನೆ ಕನಸಾಗಿದ್ದ ಎಚ್‌ಎನ್ ವ್ಯಾಲಿ ನೀರು ತುಂಬಿಸುವ ಯೋಜನೆಗೆ 140 ಕೋಟಿ ರು. ಅನುದಾನಕ್ಕೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸಿಕ್ಕಿದೆ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.
ಈ ವಿಚಾರವಾಗಿ ಕನ್ನಡಪ್ರಭಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕ ಶರತ್ ಬಚ್ಚೇಗೌಡ, ತಾಲೂಕಿನ ಸೂಲಿಬೆಲೆ ಹಾಗೂ ನಂದಗುಡಿ ಹೋಬಳಿಯ 59 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಸಂಪುಟ ಒಪ್ಪಿಗೆ ಸೂಚಿಸಿದೆ. ಇದರಿಂದ ಈ ಎರಡು ಹೋಬಳಿಯ ರೈತರ ಕೃಷಿ ಚಟುವಟಿಕೆಗಳಿಗೆ 45 ಎಂಎಲ್‌ಡಿ ನೀರು ಲಭ್ಯವಾಗಿ ಹೆಚ್ಚು ಅನುಕೂಲವಾಗಲಿದೆ. ತಾಲೂಕಿನ ಅನುಗೊಂಡನಹಳ್ಳಿ ಹಾಗೂ ಜಡಿಗೇನಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿರುವ ರೈತರಿಗೆ ಅನುಕೂಲವಾಗಲೆಂದು ಈಗಾಗಲೇ ವೆಂಗಯ್ಯನ ಕೆರೆ ಏತನೀರಾವರಿ ಯೋಜನೆಯನ್ನು ಅನುಷ್ಠಾನ ಮಾಡಲಾಗಿತ್ತು. ಸೂಲಿಬೆಲೆ ಮತ್ತು ನಂದಗುಡಿ ಭಾಗಗಳಲ್ಲಿ ನೀರಾವರಿ ಸಮಸ್ಯೆ ಹೆಚ್ಚಾಗಿತ್ತು. ಅಂತರ್ಜಲ ಪಾತಾಳಕ್ಕಿಳಿದಿದೆ. 1500 ಅಡಿ ಕೊಳವೆ ಬಾವಿ ಕೊರೆದರೂ ನೀರು ಸಿಗದೆ ಪರಿತಪಿಸುವಂತಾಗಿತ್ತು. ಅಂತರ್ಜಲ ಹೆಚ್ಚಳಕ್ಕೆ ಕೆರೆ ಕುಂಟೆಗಳಲ್ಲಿ ನೀರು ಸಂಗ್ರಹಿಸುವುದು ಮುಖ್ಯ. ಈ ನಿಟ್ಟಿನಲ್ಲಿ ರೈತರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಅಗತ್ಯ ಹಣಕಾಸಿನ ನೆರವು ಕೋರಲಾಗಿತ್ತು. ಇತ್ತೀಚಿನ ಸಚಿವ ಸಂಪುಟ ಸಭೆಯಲ್ಲಿ ಯೋಜನೆಗೆ ಸರ್ಕಾರದ ಹಣ ಬಿಡುಗಡೆ ಮಾಡಿ ಒಪ್ಪಿಗೆ ನೀಡಿರುವುದು ಈ ಭಾಗದ ರೈತರಿಗೆ ಹೆಚ್ಚು ಅನುಕೂಲವಾಗಿದೆ ಎಂದು ತಿಳಿಸಿದರು.ಯೋಜನೆಗೆ ಒಪ್ಪಿಗೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ನೀರಾವರಿ ಸಚಿವ ಬೋಸರಾಜು ಹಾಗೂ ಸಚಿವ ಸಂಪುಟದ ಎಲ್ಲ ಸಚಿವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಹೊಸಕೋಟೆ ತಾಲೂಕಿನ ಜನರ ನೀರಿನ ಬವಣೆ ನೀಗಿಸಿದೆ. ತಾಲೂಕಿನ ಬಹುದಿನಗಳ ಬೇಡಿಕೆ ಈಡೇರಿಸಿದಂತಾಗಿದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ಕೋಟ್.............ಎಚ್‌ಎನ್ ವ್ಯಾಲಿ ಯೋಜನೆಯಡಿ ಹೊರಮಾವು ನೀರು ಸಂಸ್ಕರಣ ಘಟಕದಿಂದ ೪೫ ಎಂಎಲ್‌ಡಿ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಏತ ನೀರಾವರಿ ಮೂಲಕ ಸೂಲಿಬೆಲೆ ಮತ್ತು ನಂದಗುಡಿ ಹೋಬಳಿ 59 ಕೆರೆಗಳಿಗೆ ನೀರು ತುಂಬಿಸಲು ಸರ್ಕಾರ ಆಡಳಿತಾತ್ಮಕ ಒಪ್ಪಿಗೆ ಸೂಚಿಸಿದೆ. ಇದರಿಂದ ಈ ಭಾಗದಲ್ಲಿ ನೀರಿನ ಸೆಲೆಗಳ ಅಭಿವೃದ್ಧಿ ಜೊತೆಗೆ ಕೃಷಿ ಚಟುವಟಿಕೆಗೆ ಅನುಕೂಲವಾಗಲಿದೆ.
-ಶರತ್ ಬಚ್ಚೇಗೌಡ ಶಾಸಕಫೋಟೋ: 23 ಹೆಚ್‌ಎಸ್‌ಕೆ 1
ಹೊಸಕೋಟೆ ತಾಲೂಕಿನ ಸೂಲಿಬೆಲೆ ಹಾಗೂ ನಂದಗುಡಿ ಹೋಬಳಿಗಳ 59 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಸಚಿವ ಸಂಪುಟ ಸಭೆಯಲ್ಲಿ 140 ಕೋಟಿ ರು. ಅನುದಾನದೊಂದಿಗೆ ಆಡಳಿತಾತ್ಮಕ ಒಪ್ಪಿಗೆ ನೀಡಿರುವುದಕ್ಕೆ ಶಾಸಕ ಶರತ್ ಬಚ್ಚೇಗೌಡರು ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಭೋಸರಾಜು ಅವರನ್ನುಅಭಿನಂದಿಸಿದರು.