ನಾಗರಹೊಳೆ ಅರಣ್ಯ ಪ್ರದೇಶದಲ್ಲಿ , ಕಾಡಿನ ಪ್ರಾಣಿ-ಪಕ್ಷಿಗಳು ಹೆಚ್ಚಾಗಿ ಅವಲಂಬಿಸಿರುವ ಕೆರೆಗಳಿಗೆ ಟ್ಯಾಂಕರ್ ಮೂಲಕ ನೀರು ತುಂಬಿಸುವ ಕಾರ್ಯಕ್ಕೆ ಅರಣ್ಯ ಇಲಾಖೆ ಮುಂದಾಗಿದೆ.
ಮೈಸೂರು : ಈ ಬಾರಿ ಅವಧಿಗೂ ಮುನ್ನವೇ ಬೇಸಿಗೆ ಬೇಗೆ ಹೆಚ್ಚಾಗಿ, ಅರಣ್ಯ ಪ್ರದೇಶಗಳು ಸಂಪೂರ್ಣ ಒಣಗಿವೆ. ಇದರಿಂದ ಕಾಡಿನ ನಡುವೆ ಇರುವ ಕೆರೆಗಳು ಬರಿದಾಗುತ್ತಿದ್ದು, ಕಾಡಿನ ಪ್ರಾಣಿ-ಪಕ್ಷಿಗಳಿಗೆ ಆಹಾರ ಸೇರಿದಂತೆ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗುತ್ತಿದೆ. ಇದರ ನಡುವೆ ಬೆಂಕಿ ಎಂಬ ಭೂತ ಸಹ ಅರಣ್ಯ ಇಲಾಖೆಯನ್ನು ಕಾಡುತ್ತಿದೆ. ಈ ಎಲ್ಲಾ ಸವಾಲುಗಳನ್ನು ಎದುರಿಸಲು ಅರಣ್ಯ ಇಲಾಖೆ ಸಜ್ಜಾಗಿದ್ದು, ಕಾಡಿನ ಕೆರೆಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜಿಗೆ ಮುಂದಾಗಿದೆ.
ನಾಗರಹೊಳೆ ಅರಣ್ಯ ಪ್ರದೇಶದಲ್ಲಿ ಸುಮಾರು 250ಕ್ಕೂ ಹೆಚ್ಚು ಕೆರೆಗಳಿದ್ದು, ಬಿರು ಬಿಸಿಲಿಗೆ ಕೆಲವು ಕೆರೆಗಳು ಬತ್ತಿ ಹೋಗಿವೆ. ಕೆಲವು ಕೆರೆಗಳಲ್ಲಿ ಮಾತ್ರ ಸ್ವಲ್ಪ ಪ್ರಮಾಣದಲ್ಲಿ ನೀರು ಉಳಿದಿದೆ. ಇವುಗಳಲ್ಲಿ ಬಹುತೇಕ ಕೆರೆಗಳಿಗೆ ಮಳೆ ಹೊರತಾಗಿ ಯಾವುದೇ ಜಲಮೂಲ ಇಲ್ಲ. ಹೀಗಾಗಿ, ಕಾಡಿನ ಪ್ರಾಣಿ-ಪಕ್ಷಿಗಳು ಹೆಚ್ಚಾಗಿ ಅವಲಂಬಿಸಿರುವ ಕೆರೆಗಳಿಗೆ ಟ್ಯಾಂಕರ್ ಮೂಲಕ ನೀರು ತುಂಬಿಸುವ ಕಾರ್ಯಕ್ಕೆ ಅರಣ್ಯ ಇಲಾಖೆ ಮುಂದಾಗಿದೆ.ಎಂದು ರಾಜೀವ್ ಗಾಂಧಿ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಗೆ ಬರುವ ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲೂಕು ದಮ್ಮನಕಟ್ಟೆ ಅರಣ್ಯ ಪ್ರದೇಶದ ಆರ್ ಎಫ್ಒ ಸಿದ್ದರಾಜು ತಿಳಿಸಿದ್ದಾರೆ.
ಕಾಡಂಚಿನ ಭಾಗದಲ್ಲಿರುವ ಕೆರೆಗಳಿಗೆ ಆದ್ಯತೆ ಮೇರೆಗೆ ನೀರು ತುಂಬಿಸುವ ಕೆಲಸ ಆಗುತ್ತಿದೆ. ಇನ್ನು, ಒಂದಷ್ಟು ಕೆರೆಗಳಿಗೆ ಸೋಲಾರ್ ಬೋರ್ ವೆಲ್ ಗಳ ಮೂಲಕ ನೀರು ತುಂಬಿಸಲಾಗುತ್ತಿದೆ.
ಸಾಧಾರಣವಾಗಿ ಕಾಡಿನ ಕೆರೆಗಳಲ್ಲಿ ನೀರು ಸಿಗದಿದ್ದಾಗ ವನ್ಯಜೀವಿಗಳು ನಾಡಿಗೆ ಲಗ್ಗೆ ಇಡುವ ಸಾಧ್ಯತೆ ಇರುತ್ತದೆ. ಇದು ಮಾನವ-ವನ್ಯಜೀವಿ ಸಂಘರ್ಷಕ್ಕೆ ಕಾರಣವಾಗುತ್ತಿದೆ. ಹೀಗಾಗಿ, ಮಾನವ-ವನ್ಯಜೀವಿ ಸಂಘರ್ಷ ತಪ್ಪಿಸುವ ಸಲುವಾಗಿ ಅರಣ್ಯ ಇಲಾಖೆಯಿಂದ ನೀರು ತುಂಬಿಸುವ ಕೆಲಸ ಮಾಡಲಾಗುತ್ತಿದೆ.