ಸುರಿಯುವ ಮಳೆಯನ್ನು ಲೆಕ್ಕಿಸಿದೆ ಶ್ರಮಿಸಿ ಗರ್ಭಗುಡಿಯಲ್ಲಿ ನೀರು ಖಾಲಿ ಮಾಡುವಲ್ಲಿ ಯಶಸ್ವಿಯಾದರು. ನಂತರ ಗರ್ಭಗುಡಿ ಸ್ವಚ್ಛಗೊಳಿಸಿ ಮಹಾಪೂಜೆಗೆ ತಯಾರಿ ಮಾಡಿಕೊಟ್ಟು, ಪೂಜೆ ನೆರವೇರಿಸಲಾಯಿತು.
ಗೋಕರ್ಣ: ಶುಕ್ರವಾರ ಸುರಿದ ಮಳೆಯ ಆರ್ಭಟಕ್ಕೆ ಸಂಗಮನಾಲಾದ ಮೂಲಕ ಸಮುದ್ರ ಸೇರುವ ಮಳೆ ನೀರು ಪುರಾಣ ಪ್ರಸಿದ್ಧ ಮಹಾಬಲೇಶ್ವರ ಮಂದಿರದ ಸೋಮಸೂತ್ರದಿಂದ ಗರ್ಭಗುಡಿಗೆ ನುಗ್ಗಿ ಮಹಾಪೂಜೆಗೆ ತೊಡಕು ಉಂಟಾಗಿತ್ತು.
ಮಹಾಬಲೇಶ್ವರ ದೇವಾಲಯದ ತೀರ್ಥ ಸೋಮಸೂತ್ರದ ಮೂಲಕ ಸ್ಮಶಾನಕಾಳಿ ಮಂದಿರದ ಹತ್ತಿರ ಸಂಗಮ ನಾಲಾಕ್ಕೆ ಸೇರುವ ಬಳಿ ಸೇತುವೆ ನಿರ್ಮಿಸಿದ್ದು, ಇದರ ಅಡಿಪಾಯದ ಎತ್ತರ ಹೆಚ್ಚಿಸಿರುವುದು ಹಾಗೂ ಸೇತುವೆ ನಿರ್ಮಾಣದ ವೇಳೆ ಹಾಕಿದ ಮಣ್ಣು ತೆಗೆಯದಿರುವುದು ಈ ಆವಾಂತರಕ್ಕೆ ಕಾರಣವಾಗಿದೆ. ಸೇತುವೆ ನಿರ್ಮಾಣದ ವೇಳೆ ಮಂದಿರದ ಆಡಳಿತದವರ ಅಭಿಪ್ರಾಯ ಕೇಳಬೇಕಿತ್ತು ಎಂದು ಸ್ಥಳೀಯರು ಹೇಳುತ್ತಿದ್ದು, ಮಳೆಗಾಲ ಪ್ರಾರಂಭದಲ್ಲಿಯೇ ಹೀಗಾದರೆ ಮುಂದೆ ಏನಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.ಸಿಬ್ಬಂದಿ ಸಾಹಸ: ಸಂಗಮ ನಾಲಾ ಸಮುದ್ರ ಸೇರುವಲ್ಲಿನ ಕೋಡಿಯನ್ನು(ಮರಳು ದಿನ್ನೆ) ಮಂದಿರದ ಸಿಬ್ಬಂದಿ ಸತತ ಎರಡು ತಾಸಿಗೂ ಅಧಿಕಕಾಲ ಕಡಿದು ನೀರು ಸರಾಗವಾಗಿ ಹೋಗುವಂತೆ ಬಿಡಿಸಿಕೊಟ್ಟರು. ಸುರಿಯುವ ಮಳೆಯನ್ನು ಲೆಕ್ಕಿಸಿದೆ ಶ್ರಮಿಸಿ ಗರ್ಭಗುಡಿಯಲ್ಲಿ ನೀರು ಖಾಲಿ ಮಾಡುವಲ್ಲಿ ಯಶಸ್ವಿಯಾದರು. ನಂತರ ಗರ್ಭಗುಡಿ ಸ್ವಚ್ಛಗೊಳಿಸಿ ಮಹಾಪೂಜೆಗೆ ತಯಾರಿ ಮಾಡಿಕೊಟ್ಟು, ಪೂಜೆ ನೆರವೇರಿಸಲಾಯಿತು.ಜೋರಾಗಿತ್ತು ಮಳೆ: ಪ್ರವಾಸಿ ತಾಣದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಇಷ್ಟು ದಿನ ಬಿಸಿಲಿನ ಬೇಗೆಗೆ ಬಳಲಿದ್ದ ಜನರಿಗೆ ಮಳೆ ತಂಪೆರೆದಿದೆ. ಪ್ರವಾಸಿಗರು ಸಹ ಏಕಾಏಕಿ ಬಂದ ಮಳೆಯಿಂದ ಕಂಗಾಲಾಗಿದ್ದು, ಛತ್ರಿ, ರೇನ್‍ಕೋಟ್ ಅಂಗಡಿಗಳನ್ನು ಹುಡುಕುತ್ತಾ ಖರೀದಿಯಲ್ಲಿ ತೊಡಗಿದ್ದು ಕಂಡುಬಂತು. ಇನ್ನು ಹಲವರು ಮಳೆಯಲ್ಲಿ ನೆನೆಯುತ್ತಾ ಅತ್ತಿತ್ತ ಓಡಾಡುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಇಲ್ಲಿನ ಮಹಾಗಣಪತಿ ಮಂದಿರದ ಮುಂಭಾಗ, ರಥಬೀದಿ ಸೇರಿದಂತೆ ವಿವಿಧ ಪ್ರಮುಖ ಮಾರ್ಗಗಳಲ್ಲಿ ಚರಂಡಿ ನೀರು ಉಕ್ಕಿ ಹರಿದಿದ್ದು ನದಿಯಾಗಿ ಮಾರ್ಪಟ್ಟಿತ್ತು. ಇದರಿಂದ ಸಂಚಾರಕ್ಕೆ ತೊಡಕು ಉಂಟಾಗಿತ್ತು.ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದ ಮಳೆ
ಮುಂಡಗೋಡ: ಶುಕ್ರವಾರ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಸುರಿದ ಭಾರಿ ಮಳೆಯಿಂದಾಗಿ ರೈತರು ಹಾಗೂ ಸಾರ್ವಜನಿಕರ ಮೊಗದಲ್ಲಿ ಮಂದಹಾಸ ಮೂಡಿಸಿದೆ.ಬೆಳಗ್ಗೆಯಿಂದಲೇ ಪ್ರಾರಂಭವಾದ ಮಳೆ ಆಗಾಗ ಕೆಲಕಾಲ ಬಿಡುವು ನೀಡಿ ಮತ್ತೆ ಧಾರಾಕಾರವಾಗಿ ಮಳೆ ಸುರಿಯಿತು. ಇಡೀ ದಿನ ಸುರಿದ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿತ್ತಾದರೂ ಉತ್ತಮ ಮಳೆಯಾಗುತ್ತಿದೆಯಲ್ಲ ಎಂಬ ಸಮಾಧಾನ ನೀಡಿತು.ಕಳೆದ ವರ್ಷ ಮಳೆಯಾಗದ ಕಾರಣ ಬೆಳೆಹಾನಿಗೊಳಗಾಗಿ ರೈತರು ಸಾಕಷ್ಟು ಸಂಕಷ್ಟ ಎದುರಿಸಿದ್ದಾರೆ. ಇಲ್ಲಿಯ ಬಹುತೇಕ ಕೆರೆ, ಜಲಾಶಯಗಳು ನೀರು ಖಾಲಿಯಾಗಿ ಬರಡುಗುಂಡಿಯತೆ ಭಾಸವಾಗುತ್ತಿವೆ. ಇದರಿಂದ ಬೇಸಿಗೆ ಬೆಳೆಗಳಿಗೆ ನೀರು ಸಿಗದೆ ತೊಂದರೆ ಅನುಭವಿಸಿದ್ದಾರೆ.
ಆದರೆ ಈ ವರ್ಷ ಅಡ್ಡ ಮಳೆ ಕೂಡ ಉತ್ತಮವಾಗಿದ್ದು, ಕೃಷಿ ಚಟುವಟಿಕೆಗೆ ಪೂರಕ ವಾತಾವರಣ ನಿರ್ಮಾಣ ಮಾಡಿಕೊಟ್ಟಿತ್ತು. ಇದೀಗ ಮುಂಗಾರು ಮಳೆ ಕೂಡ ಜೂನ್ ತಿಂಗಳ ಮೊದಲ ವಾರದಿಂದಲೇ ಪ್ರಾರಂಭವಾಗಿರುವುದು ರೈತರಲ್ಲಿ ಹರ್ಷವನ್ನುಂಟು ಮಾಡಿದೆ. ಮುಂಗಾರು ಪೂರ್ವ ಭತ್ತ ಹಾಗೂ ಗೋವಿನಜೋಳ ಬಿತ್ತನೆ ಮಾಡಿಕೊಂಡಿರುವ ರೈತರ ಭೂಮಿಗೆ ಈ ಮಳೆಯು ಜೀವಾಮೃತ ನೀಡಿದಂತಾಗಿದ್ದು, ಮುಂದಿನ ಕೃಷಿ ಕಾರ್ಯಕ್ಕೆ ಅಣಿ ಮಾಡಿಕೊಟ್ಟಿದೆ.ಕಳೆದ ವರ್ಷ ಮಳೆಯ ಕೊರತೆಯಿಂದಾಗಿ ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಸಾಕಷ್ಟು ತೊಂದರೆ ಎದುರಿಸಿದ ಜನತೆ ಈ ಬಾರಿಯಾದರೂ ಉತ್ತಮ ಮಳೆಯಾಗಲಿ ಎಂಬ ಆಶಯ ಹೊಂದಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.