ಇಗ್ಗಲೂರು ಜಲಾಶಯದಲ್ಲಿ ನೀರಿನ ಮಟ್ಟ ಕುಸಿತ!

KannadaprabhaNewsNetwork |  
Published : May 12, 2024, 01:17 AM IST
ಪೊಟೋ೧೧ಸಿಪಿಟಿ೧: ಡೆಡ್‌ಸ್ಟೋರೇಜ್‌ಗಿಂತ ಕಡಿಮೆ ಮಟ್ಟಕ್ಕೆ ಕುಸಿದಿರುವ ಇಗ್ಗಲೂರು ಜಲಾಶಯದ ನೀರು. | Kannada Prabha

ಸಾರಾಂಶ

ಚನ್ನಪಟ್ಟಣ: ತಾಲೂಕಿನ ಜೀವಸೆಲೆಯಾದ ಇಗ್ಗಲೂರು ಜಲಾಶಯ (ಎಚ್.ಡಿ.ದೇವೇಗೌಡ ಬ್ಯಾರೇಜ್) ಬಹುತೇಕ ಬರಿದಾಗಿದ್ದು, ನೀರಿನ ಮಟ್ಟ ಡೆಡ್‌ಸ್ಟೋರೇಜ್‌ಗಿಂತ ಕಡಿಮೆಯಾಗಿದೆ. ಇದರಿಂದಾಗಿ ತಾಲೂಕಿನ ಬಹುತೇಕ ಕೆರೆ-ಕಟ್ಟೆಗಳು ನೀರಿಲ್ಲದೇ ಬತ್ತಿಹೋಗಿ, ನೀರಾವರಿ ಕ್ರಾಂತಿಗೆ ಹೆಸರಾಗಿದ್ದ ಬೊಂಬೆನಾಡಿನಲ್ಲಿ ಜಲಕ್ಷಾಮದ ಆತಂಕ ಎದುರಾಗಿದೆ.

ಚನ್ನಪಟ್ಟಣ: ತಾಲೂಕಿನ ಜೀವಸೆಲೆಯಾದ ಇಗ್ಗಲೂರು ಜಲಾಶಯ (ಎಚ್.ಡಿ.ದೇವೇಗೌಡ ಬ್ಯಾರೇಜ್) ಬಹುತೇಕ ಬರಿದಾಗಿದ್ದು, ನೀರಿನ ಮಟ್ಟ ಡೆಡ್‌ಸ್ಟೋರೇಜ್‌ಗಿಂತ ಕಡಿಮೆಯಾಗಿದೆ. ಇದರಿಂದಾಗಿ ತಾಲೂಕಿನ ಬಹುತೇಕ ಕೆರೆ-ಕಟ್ಟೆಗಳು ನೀರಿಲ್ಲದೇ ಬತ್ತಿಹೋಗಿ, ನೀರಾವರಿ ಕ್ರಾಂತಿಗೆ ಹೆಸರಾಗಿದ್ದ ಬೊಂಬೆನಾಡಿನಲ್ಲಿ ಜಲಕ್ಷಾಮದ ಆತಂಕ ಎದುರಾಗಿದೆ.

ಮಳೆಯ ಅಭಾವದಿಂದಾಗಿ ತಾಲೂಕಿನ ಜೀವನಾಡಿಗಳಾದ ಕಣ್ವ ಹಾಗೂ ಇಗ್ಗಲೂರು ಜಲಾಶಯಗಳು ನೀರಿಲ್ಲದ ಬರಿದಾಗಿದೆ. ಕಾವೇರಿ ಅಚ್ಟುಕಟ್ಟು ಪ್ರದೇಶದಲ್ಲಿ ಉತ್ತಮ ಮಳೆಯಾಗದಿದ್ದರೆ, ಕೆಲವೇ ದಿನಗಳಲ್ಲಿ ಇಗ್ಗಲೂರು ಜಲಾಶಯ ಸಂಪೂರ್ಣ ಬರಿದಾಗುವ ಭೀತಿ ಎದುರಾಗಿದ್ದರೆ, ಕಣ್ವ ಜಲಾಶಯದಲ್ಲೂ ಸಹ ನೀರಿನ ಮಟ್ಟ ಡೆಡ್ ಸ್ಟೋರೇಜ್ ತಲುಪುವ ಸಾಧ್ಯತೆ ಇದೆ.

ಇಗ್ಗಲೂರು ಜಲಾಶಯದಲ್ಲಿ ನೀರಿಲ್ಲದ ಹಿನ್ನೆಲೆಯಲ್ಲಿ ಏತನೀರಾವರಿ ಮೋಟಾರ್ ಅನ್ನು ಸ್ಥಗಿತಗೊಳಿಸಿರುವ ಕಾರಣ ತಾಲೂಕಿನ ಬಹುತೇಕ ಕೆರೆಗಳು ಖಾಲಿಯಾಗಿವೆ. ಕಳೆದ ಅಕ್ಟೋಬರ್‌ನಲ್ಲಿ ಗರಕಹಳ್ಳಿ ಕೆರೆಯ ಮೂಲಕ ಇತರ ಕೆರೆಗಳಿಗೆ ನೀರು ಹರಿಸಲು ಪ್ರಾರಂಭಿಸಲಾಗಿತ್ತು. ಆದರೆ, ಜಲಾಶಯದಲ್ಲಿ ನೀರಿಲ್ಲದ ಕಾರಣ ಕಳೆದ ಡಿಸಂಬರ್‌ನಿಂದಲೇ ನೀರು ಹರಿಸುವುದನ್ನು ನಿಲ್ಲಿಸಲಾಗಿದ್ದು, ಇದರಿಂದ ಕೆರೆ-ಕಟ್ಟೆಗಳು ನೀರಿಲ್ಲದೇ ಭಣಗುಡುತ್ತಿವೆ. ರೈತರ ಜಮೀನುಗಳು ನೀರಿಲ್ಲದೇ ಒಣಗುತ್ತಿವೆ. ಕೆರೆಗಳೂ ಖಾಲಿಖಾಲಿ:

ತಾಲೂಕಿನ ರೈತರ ನೀರಿನ ಬವಣೆ ನೀಗಿಸುವ ನಿಟ್ಟಿನಲ್ಲಿ ಈ ಹಿಂದೆ ಗರಕಹಳ್ಳಿ ಹಾಗೂ ಕಣ್ವ ಏತ ನೀರಾವರಿ ಯೋಜನೆಗಳನ್ನು ರೂಪಿಸಲಾಗಿತ್ತು. ಏತನೀರಾವರಿ ಯೋಜನೆಗಳಿಂದ ತಾಲೂಕಿನ ಸುಮಾರು ೧೫೦ಕ್ಕೂ ಹೆಚ್ಚು ಕೆರೆಗಳಿಗೆ ನೀರು ಹರಿಸಲಾಗುತ್ತಿತ್ತು. ಇದರಿಂದ ತಾಲೂಕಿನ ಕೆರೆಗಳು ನೀರಿನಿಂದ ಸಮೃದ್ಧವಾಗುವ ಜತೆಗೆ ಅಂತರ್ಜಲ ಮಟ್ಟದ ವೃದ್ಧಿಗೂ ಸಹಕಾರಿಯಾಗಿತ್ತು. ಆದರೆ, ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆಯಾಗದ ಹಿನ್ನೆಲೆಯಲ್ಲಿ ಈ ಎರಡು ಜಲಾಶಯಗಳು ಬರಿದಾಗಿ, ಕೆರೆಗಳಿಗೆ ನೀರು ಹರಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣಗೊಂಡಿದ್ದು, ರೈತರು ಮುಖದಲ್ಲಿ ಆತಂಕ ಎದುರಾಗಿದೆ.

ಇಗ್ಗಲೂರು ಜಲಾಶಯದ ತಳಭಾಗದಲ್ಲಿ ನೀರು ಹರಿಯುವುದು ಸಂಪೂರ್ಣವಾಗಿ ನಿಂತಿರುವುದರಿಂದ ಅಳವಡಿಸಲಾಗಿದ್ದ ಪಂಪ್‌ಸೆಟ್‌ಗಳು ಸ್ಥಗಿತಗೊಂಡಿವೆ. ಇದರಿಂದ ಅಂತರ್ಜಲ ಮಟ್ಟ ಸಹ ಕುಸಿದಿದ್ದು, ಕೊಳವೆ ಬಾವಿಗಳು ಸಹ ವಿಫಲವಾಗುವ ಆತಂಕ ಎದುರಾಗಿದೆ.

ಬಳಕೆಗೆ ಲಭ್ಯವಾಗದ ಕಣ್ವ ಜಲಾಶಯ ನೀರು!:

ತಾಲೂಕಿನ ಮತ್ತೊಂದು ಪ್ರಮುಖ ಜೀವನಾಡಿಯಾದ ಕಣ್ವ ಜಲಾಶಯದಲ್ಲಿ ಸ್ವಲ್ಪ ನೀರು ಉಳಿದಿದ್ದರೂ ಸಹ ಬಳಕೆಗೆ ಲಭ್ಯವಾಗುತ್ತಿಲ್ಲ. ೩೨ಅಡಿ ಎತ್ತರ ಕಣ್ವ ಜಲಾಶಯದಲ್ಲಿ ಸದ್ಯಕ್ಕೆ ೨೨ ಅಡಿ ನೀರು ಸಂಗ್ರಹವಿದೆ. ಆದರೆ, ಈ ನೀರು ಬಳಕೆಗೆ ಲಭ್ಯವಾಗುತ್ತಿಲ್ಲ. ಈ ನೀರಿನ್ನು ಕಣ್ವ ನದಿಗೆ ಹರಿಸಿದರೆ, ಪ್ರಾಣಿ ಪಕ್ಷಿಗಳ ದಾಹ ತಣಿಯುವ ಜತೆಗೆ ಸಂಕಷ್ಟದಲ್ಲಿರುವ ರೈತರಿಗೆ ಸ್ವಲ್ಪವಾದರೂ ಅನುಕೂಲವಾಗಲಿದೆ. ಕಣ್ವ ಜಲಾಶಯದ ಡೆಡ್ ಸ್ಟೋರೇಜ್ ೧೪ ಅಡಿಯಾಗಿದ್ದು, ಡೆಡ್ ಸ್ಟೋರೇಜ್‌ನಷ್ಟು ನೀರುನ್ನು ಉಳಿಸಿಕೊಂಡು ಉಳಿದ ನೀರಿನ್ನು ಹರಿಸಬೇಕು ಎಂಬುದು ರೈತರ ಆಗ್ರಹವಾಗಿದೆ. ಅಧಿಕಾರಿಗಳು ಈ ಕುರಿತು ಗಮನ ಹರಿಸುವ ಅಗತ್ಯವಿದೆ.

ಬಾಕ್ಸ್‌...........

ಡೆಡ್ ಸ್ಟೋರೇಜ್‌ಗಿಂತ ಕಡಿಮೆ ನೀರು!: ತಾಲೂಕಿನ ನೀರಿನ ಬವಣೆ ನೀಗಿಸುವ ಉದ್ದೇಶದೊಂದಿಗೆ ೧೯೯೬ರಲ್ಲಿ ಗಡಿಗ್ರಾಮವಾದ ಇಗ್ಗಲೂರು ಗ್ರಾಮದ ಬಳಿ ಶಿಂಷಾ ಜಲಾಶಯಕ್ಕೆ ಅಡ್ಡಲಾಗಿ ಎಚ್.ಡಿ.ದೇವೇಗೌಡ ಬ್ಯಾರೇಜ್ ಅನ್ನು ನಿರ್ಮಿಸಲಾಯಿತು. ೧೮.೫ ಅಡಿ ಎತ್ತರದ ಈ ಬ್ಯಾರೇಜ್ ೦.೧೮ ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದ್ದು, ತಾಲೂಕಿನ ನೀರಾವರಿ ಯೋಜನೆಗೆ ಆಸರೆಯಾಗಿದೆ. ಆದರೆ ಹಲವು ವರ್ಷಗಳ ನಂತರ ಈ ಜಲಾಶಯದಲ್ಲಿ ನೀರಿನ ಮಟ್ಟ ಡೆಡ್ ಸ್ಟೋರೇಜ್‌ಗಿಂತ ಕಡಿಮೆ ಮಟ್ಟಕ್ಕೆ ಕುಸಿದಿದೆ. ಬ್ಯಾರೇಜ್‌ನಲ್ಲಿ ನೀರಿನ ಮಟ್ಟ ೧೦ಅಡಿಗಿಂತ ಕಡಿಮೆಯಾದರೇ ಅದನ್ನು ಡೆಡ್‌ಸ್ಟೋರೇಜ್ ಅನ್ನುತ್ತಾರೆ. ಪ್ರಸ್ತುತ ಜಲಾಶಯದಲ್ಲಿ ೪.೫ಅಡಿ ನೀರು ಮಾತ್ರ ಉಳಿದಿದ್ದು, ಇದರಿಂದ ಕೆರೆ-ಕಟ್ಟೆಗಳಿಗೆ ನೀರು ಹರಿಸಲು ಸಾಧ್ಯವಾಗದ ಪರಿಣಾಮ ಅವು ಬರಿದಾಗಿವೆ.ಕೋಟ್...............

ಕಣ್ವ ಜಲಾಶಯದಲ್ಲಿ ಪ್ರಸ್ತತ ೨೨ಅಡಿ ನೀರಿನ ಸಂಗ್ರಹವಿದೆ. ನೀರಿನ ಬಳಕೆ ಕುರಿತು ಇಲಾಖೆಯ ಹಿರಿಯ ಅಧಿಕಾರಿಗಳ ಸೂಚನೆಯ ಅಗತ್ಯವಿದೆ. ಜಲಾಶಯದ ನೀರನ್ನು ಹರಿಸುವ ಕುರಿತು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು.

-ಸುರೇಶ್, ಎಇಇ, ಕಾವೇರಿ ನೀರಾವರಿ ನಿಗಮಕೋಟ್..............

ಬರದ ತೀವ್ರತೆಗೆ ಗಿಡಮರಗಳು ಒಣಗುತ್ತಿವೆ. ಪ್ರಾಣಿಪಕ್ಷಿಗಳು ನೀರಿಲ್ಲದ ಪರಿತಪಿಸುತ್ತಿವೆ. ಕಣ್ವ ನದಿಯಿಂದ ನೀರು ಹರಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಜಲಾಶದಲ್ಲಿ ಡೆಡ್ ಸ್ಟೋರೇಜ್‌ನಷ್ಟು ನೀರನ್ನು ಉಳಿಸಿಕೊಂಡು ಉಳಿದ ನೀರನ್ನು ಕಣ್ಣನದಿಗೆ ಅಥವಾ ನಾಲೆಗಳಿಗೆ ಹರಿಸಲು ಕ್ರಮಕೈಗೊಳ್ಳಬೇಕು.

-ಸಿ.ಪುಟ್ಟಸ್ವಾಮಿ, ಹಿರಿಯ ರೈತ ಮುಖಂಡಪೊಟೋ೧೧ಸಿಪಿಟಿ೧:

ಡೆಡ್‌ಸ್ಟೋರೇಜ್‌ಗಿಂತ ಕಡಿಮೆ ಮಟ್ಟಕ್ಕೆ ಕುಸಿದಿರುವ ಇಗ್ಗಲೂರು ಜಲಾಶಯದ ನೀರು.

ಪೊಟೋ೧೧ಸಿಪಿಟಿ೨:

ನೀರಲ್ಲದೇ ಬಣಗುಟ್ಟುತ್ತಿರುವ ಮಳೂರು ಕೆರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹರಿಹರ ಪ್ರಮುಖ ರಸ್ತೆಗಳಲ್ಲಿ ಬೀದಿದೀಪ, ಸಿಸಿ ಕ್ಯಾಮೆರಾ ಅಳವಡಿಸಿ
ಪ್ರೀತಿಸುವಂತೆ ಪೊಲೀಸ್‌ ಇನ್‌ಸ್ಪೆಕ್ಟರ್‌ಬೆನ್ನತ್ತಿದ್ದ ಮಹಿಳೆ ಈಗ ಜೈಲು ಪಾಲು