ಮೇನಲ್ಲೇ ರಾಜ್ಯದ ಜಲಾಶಯಗಳಲ್ಲಿ ಭರ್ಜರಿ ನೀರು

KannadaprabhaNewsNetwork |  
Published : Jun 01, 2025, 03:03 AM IST
ಕಬಿನಿ ಜಲಾಶಯ  | Kannada Prabha

ಸಾರಾಂಶ

ಮುಂಗಾರು ಪೂರ್ವ ಮತ್ತು ಮುಂಗಾರು ಮಳೆ ಅಬ್ಬರದಿಂದಾಗಿ ರಾಜ್ಯದ ಜಲಾಶಯಗಳಲ್ಲಿ ಪ್ರಸ್ತುತ ಕಳೆದೆರಡು ವರ್ಷಗಳಿಗಿಂತ ಹೆಚ್ಚಿನ ನೀರು ಶೇಖರಣೆಯಾಗಿದ್ದು, ಮೇ ತಿಂಗಳ ಅಂತ್ಯಕ್ಕೆ ರಾಜ್ಯದ ಪ್ರಮುಖ 22 ಜಲಾಶಯಗಳಲ್ಲಿ ಒಟ್ಟಾರೆ 246.79 ಟಿಎಂಸಿ ಅಡಿ ನೀರು ಶೇಖರಣೆಯಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮುಂಗಾರು ಪೂರ್ವ ಮತ್ತು ಮುಂಗಾರು ಮಳೆ ಅಬ್ಬರದಿಂದಾಗಿ ರಾಜ್ಯದ ಜಲಾಶಯಗಳಲ್ಲಿ ಪ್ರಸ್ತುತ ಕಳೆದೆರಡು ವರ್ಷಗಳಿಗಿಂತ ಹೆಚ್ಚಿನ ನೀರು ಶೇಖರಣೆಯಾಗಿದ್ದು, ಮೇ ತಿಂಗಳ ಅಂತ್ಯಕ್ಕೆ ರಾಜ್ಯದ ಪ್ರಮುಖ 22 ಜಲಾಶಯಗಳಲ್ಲಿ ಒಟ್ಟಾರೆ 246.79 ಟಿಎಂಸಿ ಅಡಿ ನೀರು ಶೇಖರಣೆಯಾಗಿದೆ.

ಪ್ರತಿ ವರ್ಷ ಮುಂಗಾರು ಆರಂಭ ಸಂದರ್ಭದಲ್ಲಿ ರಾಜ್ಯದ ಜಲಾಶಯಗಳಲ್ಲಿ ಸರಾಸರಿ ಶೇ.25ರಿಂದ 30ರಷ್ಟು ನೀರು ಶೇಖರಣೆಯಾಗುತ್ತಿತ್ತು. ಆದರೆ, ಈ ಬಾರಿ ಮುಂಗಾರು ಪೂರ್ವ ಮಳೆ ಅಬ್ಬರಿಸಿದ್ದರ ಜತೆಗೆ ಮುಂಗಾರು ಮಳೆ ಅವಧಿಗೆ ಮೊದಲೇ ರಾಜ್ಯ ಪ್ರವೇಶಿಸಿದ ಪರಿಣಾಮ ಪ್ರಮುಖ 22 ಜಲಾಶಯಗಳಲ್ಲಿ ನೀರಿನ ಒಳಹರಿವಿನ ಪ್ರಮಾಣವೂ ಹೆಚ್ಚಾಗಿದೆ. ಮೇ 31ಕ್ಕೆ 22 ಜಲಾಶಯಗಳಲ್ಲಿ ಒಟ್ಟು 246.79 ಟಿಎಂಸಿ ಅಡಿಗಳಷ್ಟು ನೀರು ಶೇಖರಣೆಯಾಗಿದ್ದು, ಈ ಪೈಕಿ 142 ಟಿಎಂಸಿ ಅಡಿ ನೀರು ಡೆಡ್‌ ಸ್ಟೋರೇಜ್‌ಗಿಂತ ಮೇಲ್ಭಾಗದಲ್ಲಿದೆ.

ಕಳೆದ ವರ್ಷಕ್ಕಿಂತ 110 ಟಿಎಂಸಿ ಹೆಚ್ಚು:

ಕಳೆದೆರಡು ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಈ ಅವಧಿಯಲ್ಲಿ ಅತಿಹೆಚ್ಚಿನ ನೀರು ಶೇಖರಣೆಯಾಗಿದೆ. 2023ರ ಮೇ 31ಕ್ಕೆ 156.55 ಟಿಎಂಸಿ ಅಡಿ ನೀರು, 2024ರಲ್ಲಿ 135.81 ಟಿಎಂಸಿ ಅಡಿಗಳಷ್ಟು ನೀರು ಸಂಗ್ರಹವಾಗಿತ್ತು. ಈ ವರ್ಷ 246.79 ಟಿಎಂಸಿ ಅಡಿ ನೀರು ಸಂಗ್ರಹವಾಗುವ ಮೂಲಕ ಕಳೆದ ವರ್ಷಕ್ಕಿಂತ 110 ಟಿಎಂಸಿ ಅಡಿ ಹೆಚ್ಚಿನ ನೀರು ಸಂಗ್ರಹವಾಗಿದೆ.

ಕೃಷ್ಣರಾಜ ಸಾಗರ, ಆಲಮಟ್ಟಿ, ಭದ್ರಾ ಸೇರಿ 7 ಜಲಾಶಯಗಳಲ್ಲಿ ನೀರಿನ ಮಟ್ಟ ಶೇ.25ಕ್ಕಿಂತ ಹೆಚ್ಚಿದೆ. ಅದೇ ರೀತಿ ಹೇಮಾವತಿ, ಹಾರಂಗಿ, ನಾರಾಯಣಪುರ ಸೇರಿ 10 ಜಲಾಶಯಗಳು ಶೇ.55ಕ್ಕಿಂತ ಹೆಚ್ಚು ಭರ್ತಿಯಾಗಿದ್ದು, ಗಂದೋರಿನಾಲ, ವಾಣಿವಿಲಾಸ ಸಾಗರ ಮತ್ತು ಕಬಿನಿ ಜಲಾಶಯಗಳು ಶೇ.75ಕ್ಕಿಂತ ಹೆಚ್ಚು ತುಂಬಿವೆ. ಆದರೆ ಹಿಡಕಲ್‌ ಮತ್ತು ತುಂಗಭದ್ರಾ ಜಲಾಶಯಗಳ ನೀರಿನಮಟ್ಟ ಶೇ.20ಕ್ಕಿಂತ ಕಡಿಮೆಯಿದೆ. ಅದರಲ್ಲೂ ತುಂಗಭದ್ರಾ ಜಲಾಶಯ ಶೇ. 14ರಷ್ಟು ಮಾತ್ರ ಭರ್ತಿಯಾಗಿದೆ.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ