ಕನ್ನಡಪ್ರಭ ವಾರ್ತೆ, ತುಮಕೂರು
ಬಿರು ಬೇಸಿಗೆಯ ಝಳ ನೆತ್ತಿ ಸುಡುತ್ತಿದ್ದು, ಕುಡಿಯುವ ನೀರಿಗೆ ಹಾಹಾಕಾರ ಉಂಟಾಗುವ ಮುನ್ಸೂಚನೆಗಳು ಕಂಡು ಬರುತ್ತಿರುವ ಬೆನ್ನಲ್ಲೆ ಮಹಾನಗರ ಪಾಲಿಕೆಯ ವಾಲ್‌ಮನ್‌ಗಳ ಮುಷ್ಕರ ನಡೆಸುತ್ತಿರುವುದು ನಗರದ ನಾಗರಿಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಮಹಾನಗರ ಪಾಲಿಕೆಯಲ್ಲಿ 210 ಜನ ವಾಲ್‌ಮನ್‌ಗಳು ನೀರು ಸರಬರಾಜು ನಿರ್ವಹಣೆ ಮಾಡಿಕೊಂಡು ಬರುತ್ತಿದ್ದು, ಇದರೊಂದಿಗೆ ಬುಗುಡನಹಳ್ಳಿ ಕೆರೆ ಮತ್ತು ಪಿ.ಎನ್.ಆರ್.ಪಾಳ್ಯ ಕೆರೆ ಸ್ವಚ್ಛಗೊಳಿಸುವುದು, ಪಿಐಡಿ ನಂಬರ್‌ಗಳನ್ನು ಪ್ರತಿ ಮನೆ ಮನೆಗೂ ಬರೆಯುವುದು ಕಂದಾಯ ವಸೂಲಾತಿ ಮಾಡುವುದು, ಚುನಾವಣಾ ಕಾರ್ಯಕ್ಕೆ ಬಳಸಿಕೊಳ್ಳುವುದು, ಬಿಎಲ್‌ಒ ಕೆಲಸ ನಿರ್ವಹಿಸುವುದು ಸೇರಿದಂತೆ ಇತರೆ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದೇವೆ. ಆದರೂ ನಮ್ಮ ಸೇವೆಯನ್ನು ಖಾಯಂಗೊಳಿಸುತ್ತಿಲ್ಲ ಎಂದು ಮುಷ್ಕರ ನಿರತ ವಾಲ್‌ಮನ್‌ಗಳು ಆಕ್ರೋಶ ಹೊರ ಹಾಕಿದರು.ಜಿಲ್ಲಾ ನೀರು ಸರಬರಾಜು ನೌಕರರ ಸಂಘದ ಅಧ್ಯಕ್ಷ ಕುಮಾರ್ ಮಾತನಾಡಿ, ಮಹಾನಗರ ಪಾಲಿಕೆಯಲ್ಲಿ ಕಳೆದ 25 ವರ್ಷಗಳಿಂದ ನಿರಂತರವಾಗಿ ನಾಗರಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೀರು ಸರಬರಾಜು ಮಾಡಿಕೊಂಡು ಬರುತ್ತಿದ್ದೇವೆ. 210 ಜನ ನೌಕರರು ಪಂಪ್‌ಹೌಸ್, ವಾಟರ್‌ಮನ್ ಕೆಲಸ ಮಾಡಿಕೊಂಡು ಬರುತ್ತಿದ್ದೇವೆ. ಹಾಗಾಗಿ 210 ಜನರ ಸೇವೆಯನ್ನು ಖಾಯಮಾತಿ ಮಾಡಬೇಕು. ನೇರ ನೇಮಕಾತಿ, ನೇರ ಪಾವತಿ ಮಾಡಬೇಕು. ವಿಶೇಷ ನೇಮಕಾತಿ ಮಾಡಬೇಕು. ಪಾಲಿಕೆಯಲ್ಲಿ ಖಾಲಿ ಇರುವ 110 ನೌಕರರ ಹುದ್ದೆಗೆ ಹಾಲಿ ಕೆಲಸ ಮಾಡುತ್ತಿರುವ ನೌಕರರನ್ನೇ ಭರ್ತಿ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಹೈಕೋರ್ಟ್ ಆದೇಶವಿದ್ದರೂ ನೇಮಕಾತಿ ಮಾಡಿಕೊಂಡಿಲ್ಲ. ಆದ್ದರಿಂದ ಉಚ್ಛ ನ್ಯಾಯಾಲಯದ ಆದೇಶದಂತೆ ತುರ್ತಾಗಿ ನಮ್ಮ ಸೇವೆಯನ್ನು ಖಾಯಂ ಮಾಡುವುದು ಸೇರಿದಂತೆ ಇನ್ನಿತರೆ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಸುತ್ತಿದ್ದೇವೆ ಎಂದ ಅವರು, ನಮ್ಮ ಹೋರಾಟದ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಆಗಮಿಸಿ ನಮ್ಮ ಸಮಸ್ಯೆಯನ್ನು ಆಲಿಸುವುದರ ಜತೆಗೆ ಈ ಬಜೆಟ್‌ನಲ್ಲಿ ನೇರ ನೇಮಕಾತಿ, ನೇರ ಪಾವತಿಯ ಘೋಷಣೆ ಮಾಡುವ ಭರವಸೆ ನೀಡಬೇಕು. ಕೋರ್ಟ್ ಆದೇಶ ಮಾಡಿದ್ದರೂ ನಮ್ಮ ಸೇವೆಯನ್ನು ಖಾಯಂ ಮಾಡಿಲ್ಲ. ಹಾಗಾಗಿ ನಮ್ಮ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟ ಮಾಡುತ್ತಿದ್ದೇವೆ.
ಮುಷ್ಕರದಲ್ಲಿ ಸಂಘದ ಉಪಾಧ್ಯಕ್ಷ ನಟರಾಜು, ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಖಜಾಂಚಿ ಚಂದ್ರಯ್ಯ, ನಂದೀಶ್, ಮಂಜುನಾಥ್, ರಮೇಶ್ ಸೇರಿದಂತೆ ಎಲ್ಲ ವಾಟರ್‌ಮನ್‌ಗಳು ಭಾಗವಹಿಸಿದ್ದಾರೆ.