- ದ್ವಿಚಕ್ರ ವಾಹನ, ಆಟೋಗಳಲ್ಲಿ ಪಟ್ಟಣಕ್ಕೆ ಆಗಮಿಸಿದ ಜಗಳೂರು ಗೊಲ್ಲರಹಟ್ಟಿ ಗ್ರಾಮಸ್ಥರು
ಕನ್ನಡಪ್ರಭ ವಾರ್ತೆ ಜಗಳೂರು
ತಾಲೂಕಿನ ಹನುಮಂತಾಪುರ ಗ್ರಾಪಂ ವ್ಯಾಪ್ತಿಯ ಜಗಳೂರು ಗೊಲ್ಲರಹಟ್ಟಿ ಗ್ರಾಮದಲ್ಲಿ ಸಮರ್ಪಕ ಕುಡಿಯುವ ನೀರು ಪೂರೈಕೆ ಸೇರಿದಂತೆ ಮೂಲಭೂತ ಸೌಕರ್ಯಗಳ ಕಲ್ಪಿಸಲು ಆಗ್ರಹಿಸಿ, 100ಕ್ಕೂ ಹೆಚ್ಚು ಮಹಿಳೆಯರು, ಪುರುಷರು, ಯುವಜನರು ದ್ವಿಚಕ್ರ ವಾಹನ, ಆಟೋಗಳಲ್ಲಿ ಪಟ್ಟಣಕ್ಕೆ ಆಗಮಿಸಿ ತಾಲೂಕು ಪಂಚಾಯಿತಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.ಗ್ರಾಮದ ದುರುಗಮ್ಮ, ಸಾಕಮ್ಮ, ಪಾರ್ವತಮ್ಮ, ಅನಿತಾ, ಶಶಿಕಲಾ, ಹೇಮಲತಾ, ಯಶೋಧಮ್ಮ ಮತ್ತಿತರರು ಮಾತನಾಡಿ, 3 ತಿಂಗಳಿಂದ ಗ್ರಾಮಕ್ಕೆ ಸರಿಯಾಗಿ ನೀರು ಪೂರೈಕೆ ಮಾಡುತ್ತಿಲ್ಲ. ನೀರಿಗಾಗಿ ಜನ ಹೊಡೆದಾಡುವಂತಾಗಿದೆ. 8 ತಿಂಗಳಿನಿಂದ ನೀರಿನ ಸಮಸ್ಯೆ ವ್ಯಾಪಕವಾಗಿದೆ. ವಿದ್ಯುತ್ ಹೋದರೆ ನೀರೇ ಬರೋದಿಲ್ಲ. ಕೊಳವೆಬಾವಿಗಳಿದ್ದರೂ ನೀರಿಗಾಗಿ ಜನತೆ ಪರಿತಪಿಸುವಂತಾಗಿದೆ ಎಂದು ಹನುಮಂತಾಪುರ ಗ್ರಾಪಂ ಆಡಳಿತ ವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಮಸ್ಯೆಗಳ ಪರಿಹಾರಕ್ಕಾಗಿ 3 ತಿಂಗಳ ಹಿಂದೆಯೇ ತಾಪಂ ಇಒ ಕೆಂಚಪ್ಪ ಅವರಿಗೆ ಮನವಿ ಕೊಟ್ಟಿದ್ದರೂ ಸ್ಪಂದಿಸುತ್ತಿಲ್ಲ. ಮಾತಿನ ಭರವಸೆ ಬಿಟ್ಟರೆ ಏನೂ ಆಗಿಲ್ಲ. ಬೋವಿ ಕಾಲೋನಿ ಸೇರಿದಂತೆ ಎಲ್ಲ ಕಾಲೂನಿಗಳಲ್ಲೂ ನೀರಿನ ಸಮಸ್ಯೆ ವ್ಯಾಪಕವಾಗಿದೆ. 5 ವರ್ಷಗಳಲ್ಲಿ ಯಾವುದೇ ಮೂಲ ಸೌಕರ್ಯ ಅಭಿವೃದ್ಧಿಪಡಿಸಿಲ್ಲ. ಪಿಡಿಒ ಕೊಟ್ರೇಶ್, ಕಾರ್ಯದರ್ಶಿ ಮಂಜುನಾಥ್ ನಾಯ್ಕ್ ಆಗಲಿ ಯಾವೊಬ್ಬ ಅಧಿಕಾರಿಯಾಗಲೀ ಗ್ರಾಮಕ್ಕೆ ಬಂದಿಲ್ಲ. ನೀರು ಬಿಡದ ನೀರಗಂಟಿಯನ್ನು ಶೀಘ್ರವೇ ಬದಲಿಸಬೇಕು ಎಂದು ಪಟ್ಟುಹಿಡಿದರು.
ಗ್ರಾಮಸ್ಥರ ಉಗ್ರ ಪ್ರತಿಭಟನೆಗೆ ಎಚ್ಚೆತ್ತ ತಾಪಂ ಇಒ ಅವರು ಪಿಡಿಒಗೆ ಕರೆ ಮಾಡಿದರು. ದುರಸ್ತಿ ಆಗಬೇಕಿರುವ ಬೋರ್‌ವೆಲ್‌ಗಳನ್ನು ತಕ್ಷಣವೇ ಸರಿಪಡಿಸಿ, ಸಂಜೆಯೊಳಗೇ ನೀರು ಪೂರೈಸುವಂತೆ ಸೂಚನೆ ನೀಡಿದರು. ನೀರಗಂಟಿಗಳನ್ನು ಬದಲಿಸುವ ಅಧಿಕಾರ ನಮ್ಮ ಕೈಲಿಲ್ಲ. ಆಡಳಿತಾಧಿಕಾರಿ ಈ ಬಗ್ಗೆ ಕ್ರಮ ಕೈಗೊಳ್ಳಬಲ್ಲರು. ಚರಂಡಿಗಳ ಸ್ವಚ್ಛತಾ ಕ್ರಮವನ್ನು 3 ದಿನಗಳಲ್ಲಿ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಅಧಿಕಾರಿಗಳ ಭರವಸೆ ಮೇರೆಗೆ ಗ್ರಾಮಸ್ಥರು ತಾತ್ಕಾಲಿಕವಾಗಿ ಪ್ರತಿಭಟನೆ ಕೈಬಿಟ್ಟರು.
-12ಜೆಎಲ್.ಆರ್.ಚಿತ್ರ1ಎ: ಜಗಳೂರು ತಾಲೂಕಿನ ಹನುಮಂತಾಪುರ ಗ್ರಾಪಂ ವ್ಯಾಪ್ತಿಯ ಗೊಲ್ಲರಹಟ್ಟಿ ಗ್ರಾಮದಲ್ಲಿ ನೀರಿಗಾಗಿ ತಾಪಂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.