ವಾರದಲ್ಲಿ ಎರಡ್ಮೂರು ಬಾರಿ ಗ್ರಾಮಕ್ಕೆ ಬರುವ ಪಿಡಿಒ । ಸಮಸ್ಯೆ ಕೇಳದ ಪಿಡಿಒ ಬದಲಾವಣೆಗೆ ಜನರ ಒತ್ತಾಯ
ತಾಲೂಕಿನ ಬದನಗೋಡ ಗ್ರಾಪಂ ವ್ಯಾಪ್ತಿಯ ರಂಗಾಪುರ ಗ್ರಾಮದಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಉಂಟಾಗಿದ್ದು, ಸಾರ್ವಜನಿಕರು ಖಾಲಿ ಕೊಡ ಹಿಡಿದು ಗ್ರಾಪಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ರಂಗಾಪುರ ಸೇರಿದಂತೆ ಪಂಚಾಯಿತಿ ವ್ಯಾಪ್ತಿಯ ಹಲವು ಹಳ್ಳಿಗಳಲ್ಲಿ ಕಳೆದ ಒಂದು ವಾರದಿಂದ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದೆ. ಈ ಬಗ್ಗೆ ಅನೇಕ ಬಾರಿ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಸ್ಪಂದನೆ ಸಿಗದೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.ಅಭಿವೃದ್ಧಿ ಅಧಿಕಾರಿ ಪರಸಪ್ಪ ಲಂಬಾಣಿ ತಿಂಗಳಿಗೆ ಕೇವಲ 2 ಅಥವಾ 3 ದಿನ ಮಾತ್ರ ಕಚೇರಿಗೆ ಹಾಜರಾಗುತ್ತಿದ್ದು, ಮಧ್ಯಾಹ್ನ 12 ಗಂಟೆಗೆ ಬಂದು 2 ಗಂಟೆಗೆ ತೆರಳುತ್ತಾರೆ. ಸಾರ್ವಜನಿಕರ ಸಮಸ್ಯೆಗಳನ್ನು ಕೇಳುವುದಿಲ್ಲ ಎಂಬ ಆರೋಪವೂ ಕೇಳಿಬಂದಿದೆ.
ಅಭಿವೃದ್ಧಿ ಅಧಿಕಾರಿ ಬಳಿ ಸಮಸ್ಯೆ ಹೇಳಲು ಹೋದಾಗ ಸಿಬ್ಬಂದಿ ಮೇಲೆ ದಬ್ಬಾಳಿಕೆ ಮಾಡುತ್ತಿದ್ದೀರಿ, ಹಲ್ಲೆ ಮಾಡುತ್ತಿದ್ದೀರಿ ಎಂದು ದೂರು ನೀಡಲಾಗುವುದು ಎಂದು ಭಯಭೀತರನ್ನಾಗಿಸಲಾಗುತ್ತಿದೆ. ಹಿಂದಿನ ಆಡಳಿತ ಮಂಡಳಿ ಅವಧಿಯಲ್ಲಿ ವಾರ್ಡ್ ಸದಸ್ಯರು ಹಾಗೂ ಅಧ್ಯಕ್ಷರು ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ನೀಡುತ್ತಿದ್ದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.