ನೀರಿನ ಸಮಸ್ಯೆ: ಮುನ್ನೆಚ್ಚರಿಕೆ ವಹಿಸಿ

KannadaprabhaNewsNetwork |  
Published : Mar 03, 2025, 01:47 AM IST
1ಕೆಬಿಪಿಟಿ.4.ಬಂಗಾರಪೇಟೆ ತಾಪಂನಲ್ಲಿ ಪಿಡಿಒಗಳ ಸಭೆ ನಡೆಸಿದ ಕೋಲಾರ ಜಿಪಂ ಸಿಇಒ ಪ್ರವೀಣ್ ಬಾಗೇವಾಡಿ. | Kannada Prabha

ಸಾರಾಂಶ

ಬಂಗಾರಪೇಟೆ ತಾಲೂಕಿನಲ್ಲಿ ಇದುವೆರಗೂ ಎಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಲ್ಲ, ಮುಂದೆ ಬೇಸಿಗೆಯಲ್ಲಿ ಕ್ಷೇತ್ರದಲ್ಲಿ ಸುಮಾರು ೮೮ ಗ್ರಾಮಗಳಲ್ಲಿ ಸಮಸ್ಯೆ ಕಾಣಿಸಿಕೊಳ್ಳಬಹುದೆಂದು ಅಂದಾಜಿಸಲಾಗಿದೆ. ಅಂತಹ ಗ್ರಾಮಗಳಲ್ಲಿ ಸಮಸ್ಯೆ ಕಂಡ ಕೂಡಲೇ ತಕ್ಷಣವೇ ಪರ್ಯಾಯ ವ್ಯವಸ್ಥೆ ಮಾಡಬೇಕು ನಿರ್ಲಕ್ಷ್ಯ ವಹಿಸಬಾರದು. ರಾಸುಗಳಿಗೂ ನೀರಿನ ಸಮಸ್ಯೆ ಆಗಬಾರದು.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಈಗಾಗಲೇ ಬೇಸಿಗೆ ಆರಂಭವಾಗಿದ್ದು, ಮುಂದಿನ 3 ತಿಂಗಳಲ್ಲಿ ಗ್ರಾಮಗಳಲ್ಲಿ ಮನುಷ್ಯರು ಸೇರಿದಂತೆ ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವ ಆಗದಂತೆ ಆಯಾ ಗ್ರಾಪಂ ಪಿಡಿಒಗಳು ಜವಾಬ್ದಾರಿ ವಹಿಸಿಕೊಂಡು ನಿಭಾಯಿಸಬೇಕೆಂದು ಕೋಲಾರ ಜಿಪಂ ಸಿಇಒ ಪ್ರವೀಣ್ ಬಿ.ಬಾಗೇವಾಡಿ ಸೂಚಿಸಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಪಿಡಿಒಗಳ ಸಭೆಯಲ್ಲಿ ಮಾತನಾಡಿ, ತಾಲೂಕಿನಲ್ಲಿ ಇದುವೆರಗೂ ಎಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಲ್ಲ, ಮುಂದೆ ಬೇಸಿಗೆಯಲ್ಲಿ ಕ್ಷೇತ್ರದಲ್ಲಿ ಸುಮಾರು ೮೮ ಗ್ರಾಮಗಳಲ್ಲಿ ಸಮಸ್ಯೆ ಕಾಣಿಸಿಕೊಳ್ಳಬಹುದೆಂದು ಅಂದಾಜಿಸಲಾಗಿದೆ ಎಂದರು.

ಪರ್ಯಾಯ ವ್ಯವಸ್ಥೆ ರೂಪಿಸಿ

ಅಂತಹ ಗ್ರಾಮಗಳಲ್ಲಿ ಸಮಸ್ಯೆ ಕಂಡ ಕೂಡಲೇ ತಕ್ಷಣವೇ ಪರ್ಯಾಯ ವ್ಯವಸ್ಥೆ ಮಾಡಬೇಕು ನಿರ್ಲಕ್ಷ್ಯ ವಹಿಸಬಾರದೆಂದು ಎಚ್ಚರಿಕೆ ನೀಡಿದರು. ಇದರ ಜೊತೆ ಜಾನುವಾರುಗಳಿಗೂ ಸಮಸ್ಯೆ ಬಾರದಂತೆ ಕ್ರಮವಹಿಸಿ ಎಂದರು.

ತಾಲೂಕಿನಲ್ಲಿ ೨೫೬ ಕೆರೆಗಳಿದ್ದು, ಈಗಾಗಲೇ ೫೨ ಕೆರೆಗಳನ್ನು ಸರ್ವೇ ಮಾಡಲಾಗಿದೆ ಉಳಿದ ಕೆರೆಗಳನ್ನು ಸರ್ವೇ ಮಾಡಬೇಕಿದೆ ಎಂದು ತಾಪಂ ಇಒ ರವಿಕುಮಾರ್ ತಿಳಿಸಿದರು. ಉದ್ಯೋಗ ಖಾತರಿ ಯೋಜನೆಯಲ್ಲಿ ಸ್ಥಳೀಯ ಕೂಲಿ ಕಾರ್ಮಿಕರಿಗೆ ಕೂಲಿ ನೀಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಹಾಗೂ ಸರ್ಕಾರದ ಮಾರ್ಗದರ್ಶಿಯಂತೆ ಕೆಲಸ ಮಾಡಿ, ಯಂತ್ರಗಳನ್ನು ಬಳಸದೇ ಮಾನವ ಶಕ್ತಿಯಿಂದ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದರು.

ತೆರಿಗೆ ವಸೂಲಿ ಚುರುಕುಗೊಳಿಸಿ

ಗ್ರಾಪಂ.ಗಳಲ್ಲಿ ತೆರಿಗೆ ವಸೂಲಿ ಮಂದಗತಿಯಲ್ಲಿ ಸಾಗಿದ್ದು, ವೇಗ ನೀಡಬೇಕು. ಗ್ರಾಪಂ ವ್ಯಾಪ್ತಿಯಲ್ಲಿರುವ ಎಲ್ಲ ಕೆರೆಗಳನ್ನು ಉಳಿಸುವ ಸಲುವಾಗಿ ಸರ್ವೆ ಮಾಡಿಸಿ ಬೇಲಿ ನಿರ್ಮಾಣ ಮಾಡಬೇಕು. ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ಎಲ್ಲಾ ಗ್ರಾಮಗಳಲ್ಲಿ ಸ್ವಚ್ಛತೆಯನ್ನು ಕಾಪಾಡುವ ದೃಷ್ಟಿಯಿಂದ ಗ್ರಾಮಸ್ಥರಿಗೆ ಜಾಗೃತಿ ಮೂಡಿಸಬೇಕು. ಕಸ ವಿಲೇವಾರಿ ಘಟಕಗಳನ್ನು ಸ್ಥಾಪಿಸಬೇಕು. ಎಲ್ಲೆಲ್ಲಿ ಘಟಕಗಳು ಸ್ಥಗಿತವಾಗಿದೆಯೋ ಅಲ್ಲಿ ವಿಳಂಬವಾಗದೆ ಪೂರ್ಣಗೊಳಿಸಬೇಕೆಂದು ಕಟ್ಟುನಿಟ್ಟಾಗಿ ಸೂಚಿಸಿದರು.

ಸಭೆಯಲ್ಲಿ ತಾಪಂ. ಇಒ ರವಿಕುಮಾರ್, ಉಪಕಾರ್ಯದರ್ಶಿ ಶಿವಕುಮಾರ್, ಸಹಾಯಕ ಯೋಜನಾಧಿಕಾರಿ ವೆಂಕಟಾಚಲಪತಿ, ಪಂಚಾಯತ್ ರಾಜ್ ಇಲಾಖೆ ಎಇಇ ರವಿಚಂದ್ರನ್, ಕುಡಿಯುವ ನೀರು ನೈರ್ಮಲ್ಯ ಎಂಜಿನಿಯರ್ ಸೂರ್ಯಪ್ರಕಾಶ್ ಇದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...