ರೈತರ ವಿರೋಧದ ನಡುವೆ ನೀರೆತ್ತುವ ಕಾರ್ಯಕ್ಕೆ ಚಾಲನೆ

KannadaprabhaNewsNetwork | Published : Mar 21, 2025 12:31 AM

ಸಾರಾಂಶ

ರೈತರ ವಿರೋಧದ ನಡುವೆ ಪೊಲೀಸ್‌ ಬಿಗಿ ಬಂದೋಬಸ್ತ್‌ನಲ್ಲಿ ತುಬಚಿ-ಬಬಲೇಶ್ವರ ಏತ ನೀರಾವರಿಯಿಂದ ನೀರೆತ್ತುವ ಕಾರ್ಯಕ್ಕೆ ಗುರುವಾರ ಬೆಳಗ್ಗೆ ಚಾಲನೆ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಜಮಖಂಡಿ

ರೈತರ ವಿರೋಧದ ನಡುವೆ ಪೊಲೀಸ್‌ ಬಿಗಿ ಬಂದೋಬಸ್ತ್‌ನಲ್ಲಿ ತುಬಚಿ-ಬಬಲೇಶ್ವರ ಏತ ನೀರಾವರಿಯಿಂದ ನೀರೆತ್ತುವ ಕಾರ್ಯಕ್ಕೆ ಗುರುವಾರ ಬೆಳಗ್ಗೆ ಚಾಲನೆ ನೀಡಲಾಯಿತು. ತಾಲೂಕಿನ ಕವಟಗಿ ಗ್ರಾಮದಲ್ಲಿ ನಿರ್ಮಿಸಲಾದ ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆಯ ಪಂಪ್‌ಹೌಸ್‌ನ 2 ಪಂಪ್‌ಗಳನ್ನು ಚಾಲನೆ ಮಾಡಲಾಗಿದ್ದು, ಬಬಲೇಶ್ವರ ಭಾಗಕ್ಕೆ ನೀರು ಹರಿಸಲಾಗುತ್ತಿದೆ. ಪ್ರತಿ ಸೆಕೆಂಡ್‌ಗೆ 175 ಕ್ಯುಸೆಕ್‌ ನೀರು ಹರಿದು ಹೋಗುತ್ತಿದೆ. ಅಂದರೆ 5 ದಿನಗಳವರೆಗೆ ನೀರು ಹರಿಸುವುದರಿಂದ 0.25 ಟಿಎಂಸಿ ನೀರು ಹರಿಸಿದಂತಾಗುತ್ತದೆ. ಕವಟಗಿ ಗ್ರಾಮದಲ್ಲಿ ರೈತರು ಜಮಾವಣೆಗೊಂಡು ನೀರು ಹರಿಸದಂತೆ ಒತ್ತಾಯಿಸಿದ ಘಟನೆ ನಡೆಯಿತು.

ಕ್ರೈಂ ವಿಭಾಗದ ಹೆಚ್ಚುವರಿ ಪೊಲೀಸ್‌ ಸುಪರಿಂಟೆಂಡೆಂಟ್‌ ಮಹಾಂತೇಶ್ವರ ಜಿದ್ದಿ ನೇತೃತ್ವದಲ್ಲಿ ಡಿವೈಎಸ್‌ಪಿ ಸೈಯದ್‌ ರೋಷನ್‌ ಜಮೀರ್‌ ಎಸ್‌., ಸಿಪಿಐ ಮಲ್ಲಪ್ಪ ಮಡ್ಡಿ, ಗ್ರಾಮೀಣ ಪಿಎಸ್‌ಐ ಪೂಜಾರ, ನಗರ ಪಿಎಸ್‌ಐ ಅನೀಲ ಕುಂಬಾರ ಹಾಗೂ ಸಿಬ್ಬಂದಿ ರೈತರ ಮನವೊಲಿಸುವಲ್ಲಿ ಯಶಸ್ವಿಯಾದರು. 150ಕ್ಕೂ ಅಧಿಕ ಪೊಲೋಸ್‌ ಸಿಬ್ಬಂದಿಯನ್ನು ಬಂದೊಬಸ್ತ್‌ಗೆ ನಿಯೋಜಿಸಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಪ್ರತಿಭಟನೆಗೆ ಮುಂದಾಗಿದ್ದ ಕೆಲ ರೈತರನ್ನು ಬಂಧಿಸಿ ಬಿಡುಗಡೆ ಗೊಳಿಸಲಾಗಿದೆ.

ಸುರೇಶ ಹಂಚಿನಾಳ, ಅಜಯ ಕಡಪಟ್ಟಿ, ಪ್ರಸನ್ನ ಜಮಖಂಡಿ, ಬಸವರಾಜ ಬಿರಾದಾರ, ಗಿರಿಮಲ್ಲ ಚಾಮೋಜಿ, ಮಲ್ಲು ದಾನಗೌಡ, ಸಿದ್ದುಗೌಡ ಪಾಟೀಲ, ಮಹೇಶ ದೇಶಪಾಂಡೆ, ಸದು ಮಾನೆ, ಗಣೇಶ ಶಿರಗಣ್ಣವರ, ಹಣಮಂತ ಕೊಣ್ಣೂರ, ಮಹಾದೇವ ನ್ಯಾಮಗೌಡ, ಸದಾಶಿವ ಕಲೂತಿ, ಸದಾಶಿವ ಕವಟಗಿ ಶ್ರೀಶೈಲ ಗಡಾದ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ರಾಜ್ಯದಲ್ಲೇ 2ನೇ ಅತಿದೊಡ್ಡ ಯೋಜನೆ:

ಕವಟಗಿ ಗ್ರಾಮದ ಹತ್ತಿರ ನಿರ್ಮಿಸಿದ ತುಬಚಿ ಬಬಲೇಶ್ವರ ಏತನೀರಾವರಿ ಯೋಜನೆ ರಾಜ್ಯದಲ್ಲೇ ಎರಡನೇ ಅತಿದೊಡ್ಡ ಯೋಜನೆಯಾಗಿದೆ. 16000 ಎಚ್‌ಪಿ ಸಾಮರ್ಥ್ಯದ 5 ಪಂಪ್‌ಗಳು, 15500 ಎಚ್‌ಪಿಯ 2 ಪಂಪ್‌ಗಳನ್ನು ಅಳವಡಿಸಲಾಗಿದೆ. 220 ಕೆ.ವಿ ವಿದ್ಯುತ್‌ ಪೂರೈಸುವ ಕೇಂದ್ರ ಸ್ಥಾಪಿಸಲಾಗಿದೆ. ಆರಕ್ಕೆ ಆರು ಪಂಪ್‌ಗಳನ್ನು ಚಾಲನೆ ಗೊಳಿಸಿದರೆ ಪ್ರತಿದಿನ 1 ಕೋಟಿ ರೂ. ವಿದ್ಯುತ್‌ ಬಿಲ್‌ ಬರುತ್ತದೆ. ಸಧ್ಯಕ್ಕೆ 2 ಪಂಪ್‌ಗಳನ್ನು ಚಾಲನೆ ಮಾಡಲಾಗಿದ್ದು, 11 ಕೆವಿ ವಿದ್ಯುತ್‌ ಬಳಸಿಕೊಳ್ಳಲಾಗುತ್ತಿದೆ. 3.5 ಮೀಟರ್‌ ಹಾಗೂ 2.5 ಮೀಟರ್‌ ವ್ಯಾಸದ ಅಳತೆ ಹೊಂದಿರುವ ಬೃಹದಾಕಾರದ ಪೈಪ್‌ಲೈನ್‌ಗಳ ಮುಖಾಂತರ ನೀರನ್ನು ಗೋಠೆ ಗ್ರಾಮದ ಬಳಿ ನಿರ್ಮಿಸಿದ ಬಾವಿಗೆ ಹರಿಸಲಾಗುತ್ತದೆ. ಅಲ್ಲಿಂದ ಕಾಲುವೆಗಳ ಮುಖಾಂತರ ಬಬಲೇಶ್ವರ ತಾಲೂಕಿನ ತಿಕೋಟಾ ಮುಖಾಂತರ ನೀರು ಹರಿಯುತ್ತದೆ.

ಬಬಲೇಶ್ವರ ಮತಕ್ಷೇತ್ರಕ್ಕೆ ಹಿನ್ನೀರು ಪಂಪ್‌:

ಆಲಮಟ್ಟಿ ಜಲಾಶಯದಲ್ಲಿ 37.7 ಟಿಎಂಸಿ ನೀರು ಸಂಗ್ರಹವಿದೆ. ಆಲಮಟ್ಟಿ ಹಿನ್ನೀರನ್ನು ಸಧ್ಯ ಪಂಪ್‌ ಮಾಡಲಾಗುತ್ತಿದ್ದು, ಹಿಪ್ಪರಗಿ ಜಲಾಶಯದಿಂದ ಗಲಗಲಿ ಸೇರಿ ಸುಮಾರು 34 ಹಳ್ಳಿಗಳು ಈ ಹಿನ್ನೀರನ್ನು ಅವಲಂಬಿಸಿವೆ. ಬೇಸಿಗೆ ದಿನಗಳಲ್ಲಿ ನದಿಯಲ್ಲಿಯ ನೀರು ಖಾಲಿಯಾದರೆ ಜನ-ಜಾನುವಾರುಗಳಿಗೆ ತೊಂದರೆ ಆಗಲಿದೆ ಎಂದು ನೀರೆತ್ತುವುದಕ್ಕೆ ರೈತರು ವಿರೋಧಿಸುತ್ತಿದ್ದಾರೆ. ಆದರೆ ವಿಜಯಪುರ ಜಿಲ್ಲಾಧಿಕಾರಿಗಳ ಮನವಿ ಪುರಸ್ಕರಿಸಿ ಪ್ರಾದೇಶಿಕ ಆಯುಕ್ತರು ನೀರೆತ್ತಲು ಅನುಮತಿ ನೀಡಿದ್ದು, ರೈತರ ಆಕ್ರೋಶಕ್ಕೆ ಕಾರಣವಾಗಿದೆ.ಪ್ರವಾಹದ ಸಮಯದಲ್ಲಿ ನಮ್ಮ ಭಾಗದ ರೈತರು ತೊಂದರೆ ಅನುಭವಿಸುತ್ತಾರೆ. ಬೇಸಿಗೆಯಲ್ಲಿ ನೀರನ್ನು ಪಕ್ಕದ ತಾಲೂಕಿಗೆ ಹರಿಸಲಾಗುತ್ತದೆ. ಬೇಸಿಗೆಯ ಸಮಯದಲ್ಲಿ ನದಿಯಲ್ಲಿರುವ ಅಲ್ಪ ಪ್ರಮಾಣದ ನೀರುನ್ನು ಎತ್ತುವುದು ತಪ್ಪು ನಿರ್ಧಾರ. ಅಧಿಕಾರಿಗಳು ಕೃಷ್ಣಾ ನದಿಯಲ್ಲಿ ನೀರಿಲ್ಲ, ಸಧ್ಯ ಇರುವ ನೀರು ಬೇಸಿಗೆ ಕಾಲಕ್ಕೆ ಸಂಗ್ರಹಿಸಿಟ್ಟುಕೊಳ್ಳಲಾಗಿದೆ ಎಂದು ಸ್ಪಷ್ಟ ಮಾಹಿತಿ ನೀಡಬೇಕಿತ್ತು. ಜನಪ್ರತಿನಿಧಿಗಳು ಅಧಿಕಾರದ ದುರುಪ ಯೋಗಪಡಿಸಿಕೊಳ್ಳಬಾರದು, ಎಲ್ಲ ಕ್ಷೇತ್ರದ ರೈತರು ಒಂದೇ ಎಂಬ ಭಾವನೆ ಇರಬೇಕು. ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಿ 524 ಮೀ ನೀರು ಸಂಗ್ರಹಿಸಿ ಜಮಖಂಡಿ ಭಾಗದ ರೈತರಿಗೆ ಪರಿಹಾರ ನೀಡುವ ಕೆಲಸ ಆಗಿಲ್ಲ.

- ಬಸವರಾಜ ಸಿಂಧೂರ ರೈತ ಮುಖಂಡರು ಹಾಗೂ ಕಾಂಗ್ರೆಸ್‌ ನಾಯಕರುಬೇಸಿಗೆ ಇರುವುದರಿಂದ ನದಿಯಲ್ಲಿ ನೀರಿನ ಪ್ರಮಾಣ ಬಹಳಷ್ಟು ಕಡಿಮೆ ಆಗಿದೆ. ಸಚಿವ ಎಂ.ಬಿ.ಪಾಟೀಲರು ಅಧಿಕಾರ ದುರುಪಯೋಗ ಪಡಿಸಿಕೊಂಡು ನದಿಯಲ್ಲಿದ್ದ ಅಲ್ಪಪ್ರಮಾಣದ ನೀರನ್ನು ಎತ್ತಿ ತಮ್ಮ ಕ್ಷೇತ್ರಕ್ಕೆ ಹರಿಸಿಕೊಳ್ಳುತ್ತಿರುವುದು ಅನ್ಯಾಯ. ಸಚಿವರು ನದಿಪಾತ್ರಕ್ಕೆ ನೀರು ಬಿಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ನದಿ ತೀರದ ರೈತರು ಮಳೆಗಾಲದಲ್ಲಿ ಪ್ರವಾಹ ಆತಂಕ ಎದುರಿಸುತ್ತಿದ್ದೇವೆ. ಸರ್ಕಾರ ಈ ಬಗ್ಗೆ ಗಮನ ಹರಿಸಿ ಶಾಶ್ವತ ಪರಿಹಾರ ಹುಡುಕಬೇಕು. ನದಿಯಿಂದ ಎತ್ತಿದ ಪ್ರಮಾಣದಷ್ಟು ನೀರನ್ನು ಬಿಡಿಸಬೇಕು

- ಮಲ್ಲು ದಾನಗೌಡ ಬಿಜೆಪಿ ಗ್ರಾಮೀಣ ಮಂಡಲದ ಅಧ್ಯಕ್ಷರು ಜಮಖಂಡಿ

Share this article