ಬೆಂಗಳೂರಿನಲ್ಲಿ ನೀರಿನ ದರ ಏರಿಕೆ ಖಚಿತ: ಡಿಕೆಶಿ

KannadaprabhaNewsNetwork |  
Published : Jan 29, 2025, 01:31 AM IST
DK 1 | Kannada Prabha

ಸಾರಾಂಶ

ಬೆಂಗಳೂರಿನಲ್ಲಿ ನೀರಿನ ದರ ಏರಿಕೆ ಖಚಿತವಾಗಿದೆ. ಸ್ವತಃ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಈ ವಿಷಯವನ್ನು ಖಚಿತ ಪಡಿಸದಿದ್ದಾರೆ. ಅಧಿಕಾರಿಗಳಿಂದ ವರದಿ ಬಂದ ಬಳಿಕ ದರ ನಿಗದಿ ಆಗಲಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬೆಂಗಳೂರು ಜಲ ಮಂಡಳಿಯು ವಾರ್ಷಿಕ ₹1 ಸಾವಿರ ಕೋಟಿ ನಷ್ಟ ಅನುಭವಿಸುತ್ತಿದ್ದು, ನೀರಿನ ದರ ಏರಿಕೆ ಅನಿವಾರ್ಯವಾಗಿದೆ. ಅಧಿಕಾರಿಗಳಿಂದ ವರದಿ ಪಡೆದು ತಕ್ಷಣ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

ನಗರದ ಕಾವೇರಿ ಭವನದಲ್ಲಿ ಮಂಗಳವಾರ ಬಿಬಿಎಂಪಿ, ಬಿಡಿಎ, ಬೆಂಗಳೂರು ಜಲಮಂಡಳಿ, ನಮ್ಮ ಮೆಟ್ರೋ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿವಿಧ ಕಾರಣದಿಂದ ಕಳೆದ 11 ವರ್ಷದಿಂದ ನೀರಿನ ದರ ಏರಿಕೆ ಮಾಡಿಲ್ಲ. ಇದರಿಂದ ಬೆಂಗಳೂರು ಜಲ ಮಂಡಳಿಯು ವಾರ್ಷಿಕ ₹1 ಸಾವಿರ ಕೋಟಿ ನಷ್ಟ ಅನುಭವಿಸುತ್ತಿದೆ. ವಿದ್ಯುತ್ ಬಿಲ್ ₹35 ಕೋಟಿಯಿಂದ ₹75 ಕೋಟಿಗೆ ಹೆಚ್ಚಾಗಿದೆ. ಇತರೇ ಸೇವೆಗಳು, ಮಾನವ ಸಂಪನ್ಮೂಲ ವೆಚ್ಚ ಸೇರಿದಂತೆ ತಿಂಗಳಿಗೆ ₹85 ಕೋಟಿ ನಷ್ಟವಾಗುತ್ತಿದೆ. ಹಾಗಾಗಿ, ನೀರಿನ ಬಿಲ್ ಹೆಚ್ಚಳ ಮಾಡುವುದು ಅನಿವಾರ್ಯವಾಗಿದೆ ಎಂದರು.

ಜಲಮಂಡಳಿಯು ನಷ್ಟ ಎದುರಿಸುತ್ತಿರುವುದರಿಂದ ಬ್ಯಾಂಕ್‌ ಹಾಗೂ ಹಣಕಾಸು ಸಂಸ್ಥೆಗಳು ನೆರವು ನೀಡುವುದಕ್ಕೆ ಹಿಂಜರಿಯುತ್ತಿವೆ. ನೀರು ಪೂರೈಕೆಯ ಯೋಜನೆಗೆ ಹಣಕಾಸಿನ ನೆರವು ನೀಡುವ ಜೈಕಾ ಸಂಸ್ಥೆ ಸೇರಿದಂತೆ ಹಲವಾರು ಸಂಸ್ಥೆಗಳು ನೆರವು ಬೇಕಾದರೆ ಸರಿಯಾಗಿ ಬಿಲ್‌ ವಸೂಲಿ ಮಾಡಿ ಎಂದು ಸೂಚಿಸಿವೆ ಎಂದು ಹೇಳಿದರು.

ಬೇಸಿಗೆ ತಯಾರಿ:

ಮುಂಬರುವ ಬೇಸಿಗೆ ಅವಧಿಯಲ್ಲಿ ನಗರದಲ್ಲಿ ಕುಡಿಯುವ ನೀರಿಗೆ ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ಕ್ರಮ ಕೈಗೊಳ್ಳುವುದಕ್ಕೆ ಸೂಚಿಸಲಾಗಿದೆ.

ಜತೆಗೆ, ಅಂತರ್ಜಲ ವೃದ್ಧಿಗೆ ಕೆರೆ ತುಂಬಿಸುವುದಕ್ಕೆ ಶೀಘ್ರ ಕ್ರಮಕ್ಕಾಗಿ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಹೇಳಿದರು,

15 ಸಾವಿರ ನೂತನ ಸಂಪರ್ಕ:

ಕಾವೇರಿ 5ನೇ ಹಂತದ ಕುಡಿಯುವ ನೀರಿನ ಯೋಜನೆಯಡಿ ಈವರೆಗೆ 15 ಸಾವಿರ ಹೊಸ ಸಂಪರ್ಕ ನೀಡಲಾಗಿದೆ. ಇನ್ನೂ 25 ಸಾವಿರದಷ್ಟು ನೀರಿನ ಸಂಪರ್ಕಗಳನ್ನು ನೀಡಬೇಕಾಗಿದೆ. ಸಾಕಷ್ಟು ಅಪಾರ್ಟ್‌ಮೆಂಟ್‌ಗಳು ಸೇವಾ ಶುಲ್ಕ, ಠೇವಣಿ ಶುಲ್ಕ ಸೇರಿದಂತೆ ಇತರೇ ಶುಲ್ಕಗಳನ್ನು ಕಟ್ಟಬೇಕೆಂದು ಅಕ್ರಮವಾಗಿ ನೀರಿ ಸಂಪರ್ಕ ಪಡೆದಿದ್ದಾರೆ. ಇದನ್ನು ತಡೆಯಲು ಸರ್ಕಾರ ಈಗಾಗಲೇ ಕಠಿಣ ಕ್ರಮ ತೆಗೆದುಕೊಂಡಿದೆ. ಪ್ರತಿಯೊಂದು ಮನೆ, ಅಪಾರ್ಟ್‌ಮೆಂಟ್‌ಗೆ ಹೋಗಿ ಜನರಿಗೆ ತಿಳುವಳಿಕೆ ಮೂಡಿಸಿ ಕಡ್ಡಾಯವಾಗಿ ಕಾವೇರಿ ನೀರಿನ ಸಂಪರ್ಕ ಪಡೆದುಕೊಳ್ಳುವಂತೆ ಮನವಿ ಮಾಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.

ಬಸ್‌, ಮೆಟ್ರೋ ದರ ಏರಿಕೆಯ ನಡುವೆ ನೀರಿನ ದರ ಏರಿಕೆ ಮಾಡುವುದರಿಂದ ಹೊರೆಯಾಗಲಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ವಿದ್ಯುತ್ ದರ ಇಳಿಕೆ ಮಾಡಿದೆ. ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಿಂದ ಎಲ್ಲವೂ ಬೆಲೆ ಹೆಚ್ಚಾಗಲಿದೆ. ನೌಕರರಿಗೆ ಶೇ.10ರಷ್ಟು ಸಂಬಳ ಏರಿಕೆ, ಡಿಎ ಏರಿಕೆ ಮಾಡಲಾಗುತ್ತಿದೆಯಲ್ಲವೇ? ಏನೂ ಇಲ್ಲದೇ ಇನ್ನೆಷ್ಟು ದಿನ ಕಡಿಮೆ ಬೆಲೆಗೆ ನೀಡಲು ಆಗುತ್ತದೆ. ಜಲ ಮಂಡಳಿಯಲ್ಲಿ ನೌಕರರು ಸಂಬಳ ನೀಡಿಲ್ಲ ಎಂದು ಜಗಳ ಮಾಡುತ್ತಿದ್ದಾರೆ ಎಂದರು.

ಸಭೆಯಲ್ಲಿ ಬಿಬಿಎಂಪಿ ಆಡಳಿತಾಧಿಕಾರಿ ಉಮಾಶಂಕರ್‌, ಬಿಬಿಎಂಪಿ ಆಯುಕ್ತ ತುಷಾರ್‌ ಗಿರಿನಾಥ್‌, ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ। ರಾಮ್‌ ಪ್ರಸಾತ್‌ ಮನೋಹರ್‌, ಬಿಡಿಎ ಆಯುಕ್ತ ಜಯರಾಮ್‌ ಉಪಸ್ಥಿತರಿದ್ದರು.

ಫ್ರೀ ನೀರು ಬಂದ್‌: ಡಿಕೆಶಿ

ಬಡವರು ಹಾಗೂ ಸ್ಲಂ ನಿವಾಸಿಗಳಿಗೆ ರಾಜ್ಯ ಸರ್ಕಾರದ ನೆರವಿನಿಂದ ಉಚಿತವಾಗಿ ಕಾವೇರಿ ನೀರು ಪೂರೈಕೆ ಮಾಡಲಾಗುತ್ತಿತ್ತು. ಇದು ದುರ್ಬಳಕೆ ಆಗುತ್ತಿದೆ. ಜತೆಗೆ, ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಿಂದ ಬಡವರಿಗೆ ಉಚಿತವಾಗಿ ನೀರು ಪೂರೈಕೆಗೆ ಸರ್ಕಾರದಿಂದ ನೀಡಲಾಗುತ್ತಿದ್ದ ₹20 ಕೋಟಿ ಅನುದಾನ ಸ್ಥಗಿತಗೊಳಿಸಲಾಗಿದೆ. ಬಡವರಿಗೆ ಪೂರೈಕೆ ಆಗುವ ನೀರಿನ ಲೆಕ್ಕ ಇರಬೇಕು ಎಂಬ ಕಾರಣಕ್ಕೆ ಲೀಟರ್‌ಗೆ ಕನಿಷ್ಠ 1 ಪೈಸೆ ದರವನ್ನಾದರೂ ಸಂಗ್ರಹಿಸುವುದಕ್ಕೆ ತೀರ್ಮಾನಿಸಲಾಗಿದೆ ಎಂದು ಡಿ.ಕೆ.ಶಿವಕುಮಾರ್‌ ತಿಳಿಸಿದರು.

ಯಾರು ಎಷ್ಟೇ ವಿರೋಧಿಸಿದರೂ

ಟನಲ್‌ ರಸ್ತೆ ಮಾಡ್ತೀವಿ: ಡಿಸಿಎಂ

ಸುರಂಗ ರಸ್ತೆ ನಿರ್ಮಾಣಕ್ಕಾಗಿ ₹17,780 ಕೋಟಿ ಮೊತ್ತದ ಟೆಂಡರನ್ನು ಫೆಬ್ರವರಿ ಅಂತ್ಯದ ವೇಳೆಗೆ ಕರೆಯಲಾಗುವುದು. ಮೂರೂವರೆ ವರ್ಷಗಳ ಒಳಗಾಗಿ ಹೆಬ್ಬಾಳದಿಂದ ಸಿಲ್ಕ್‌ ಬೋರ್ಡ್‌ ವರೆಗಿನ ಟನಲ್‌ ಕಾಮಗಾರಿ ಪೂರ್ಣಗೊಳಿಸುವುದಕ್ಕೆ ಸೂಚಿಸಲಾಗಿದೆ. ಬಿಬಿಎಂಪಿ ಹಾಗೂ ಸರ್ಕಾರದಿಂದ ಅನುದಾನ ನೀಡಲಾಗುವುದು. ಜತೆಗೆ ಪವರ್ ಫೈನಾನ್ಸ್ ಕಾರ್ಪೋರೇಷನ್, ಹುಡ್ಕೋ ಸೇರಿದಂತೆ ವಿವಿಧ ಬ್ಯಾಂಕ್‌ಗಳಿಂದ ಸಾಲ ಪಡೆಯಲಾಗುವುದು ಎಂದು ಡಿ.ಕೆ.ಶಿವಕುಮಾರ್‌ ತಿಳಿಸಿದರು.

ಟನಲ್‌ ರಸ್ತೆ ನಿರ್ಮಾಣಕ್ಕೆ ಯಾರು ಎಷ್ಟೇ ವಿರೋಧ ಮಾಡಿದರೂ ಯೋಜನೆ ನಿಲ್ಲುವುದಿಲ್ಲ. ಯೋಜನೆಯಿಂದ ಬೆಂಗಳೂರಿಗೆ ಹಾಗೂ ಜನರಿಗೆ ಉಪಯೋಗವಾಗಲಿದೆ. ಹಾಗಾಗಿ, ಅನುಷ್ಠಾನ ಮಾಡಲಾಗುವುದು ಎಂದು ಹೇಳಿದರು.ನೀರಿನ ಬಿಲ್‌ಗೂ

ಒಟಿಎಸ್‌ ಜಾರಿ?

ಹಲವು ವರ್ಷದಿಂದ ನೀರಿನ ಬಿಲ್‌ ಬಾಕಿ ಉಳಿಸಿಕೊಂಡಿದ್ದಾರೆ. ಅವರಿಗೆ ‘ಒನ್‌ ಟೈಮ್‌ ಸೆಟಲ್‌ ಮೆಂಟ್‌’ (ಒಟಿಎಸ್‌) ಯೋಜನೆ ಜಾರಿಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ. ಈ ಬಗ್ಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

-ಡಿ.ಕೆ.ಶಿವಕುಮಾರ್‌, ಉಪಮುಖ್ಯಮಂತ್ರಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!