ಹೇಮಾವತಿ ಹಾಗೂ ಯಗಚಿ ಜಲಾಶಯದಿಂದ ನೀರು ಬಿಡುಗಡೆ

KannadaprabhaNewsNetwork |  
Published : Jul 26, 2024, 01:42 AM IST
25ಎಚ್ಎಸ್ಎನ್6ಎ : ಹೇಮಾವತಿ ಜಲಾಶಯದಿಂದ ಅಪಾರ ಪ್ರಮಾಣದ ನೀರನ್ನು ಕ್ರಸ್ಟ್‌ ಗೇಟುಗಳ ಮೂಲಕ ಹೊರಬಿಟ್ಟಿದ್ದರಿಂದ ಸೃಷ್ಟಿಯಾದ ಮನಮೋಹಕ ದೃಶ್ಯವನ್ನು ನೋಡಲು ನೂರಾರು ಜನರು ಆಗಮಿಸಿ ಕಣ್ತುಂಬಿಕೊಂಡರು. | Kannada Prabha

ಸಾರಾಂಶ

ಸಕಲೇಶಪುರ, ಆಲೂರು, ಬೇಲೂರು, ಅರಕಲಗೂಡು ಹಾಗೂ ಹಾಸನ ತಾಲೂಕುಗಳಲ್ಲಿ ಮಳೆ ತೀವ್ರಗೊಂಡಿದೆ. ಹೀಗಾಗಿ ಜಿಲ್ಲೆಯ ಹೇಮಾವತಿ ಮತ್ತು ಯಗಚಿ ಜಲಾಶಯಗಳು ತುಂಬಿವೆ. ಹೇಮಾವತಿ ನದಿಗೆ ಗುರುವಾರ 36 ಸಾವಿರ ಕ್ಯುಸೆಕ್‌ಗೂ ಹೆಚ್ಚಿನ ಪ್ರಮಾಣದ ನೀರು ಹರಿದುಬರುತ್ತಿದೆ. ಈ ಹಿನ್ನೆಲೆಯಲ್ಲಿ ಗುರುವಾರ ಕೂಡ ಎರಡೂ ಅಣೆಕಟ್ಟೆಗಳ ಕ್ರಸ್ಟ್‌ ಗೇಟ್‌ ತೆರೆದು ಭಾರೀ ಪ್ರಮಾಣ ನೀರನ್ನು ಹೊರಬಿಡಲಾಯಿತು.

ಕನ್ನಡಪ್ರಭ ವಾರ್ತೆ ಹಾಸನ

ಜಿಲ್ಲೆಯಲ್ಲಿ ಮಳೆ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಅರಸೀಕೆರೆ ಹಾಗೂ ಚನ್ನರಾಯಪಟ್ಟಣ ತಾಲೂಕುಗಳನ್ನು ಹೊರತುಪಡಿಸಿ ಉಳಿದೆಲ್ಲಾ ಭಾಗಗಳಲ್ಲೂ ಎಲ್ಲಿ ನೋಡಿದರೂ ನೀರು ಹರಿಯುತ್ತಿದೆ. ಪರಿಣಾಮವಾಗಿ ಹೇಮಾವತಿ ಜಲಾಶಯ ಹಾಗೂ ಯಗಚಿ ಜಲಾಶಯ ಮತ್ತ ಮತ್ತೆ ಭರ್ತಿಯಾಗುತ್ತಿದ್ದು, ಗುರುವಾರ ಕೂಡ ಎರಡೂ ಅಣೆಕಟ್ಟೆಗಳ ಕ್ರಸ್ಟ್‌ ಗೇಟ್‌ ತೆರೆದು ಭಾರೀ ಪ್ರಮಾಣ ನೀರನ್ನು ಹೊರಬಿಡಲಾಯಿತು. ಮಳೆ ತೀವ್ರತೆ ಹಿನ್ನೆಲೆಯಲ್ಲಿ ಇವೆರಡು ತಾಲೂಕುಗಳನ್ನು ಹೊರತುಪಡಿಸಿ ಜಿಲ್ಲೆಯ ಉಳಿದೆಲ್ಲಾ ತಾಲೂಕುಗಳ ಅಂಗನವಾಡಿ ಮತ್ತು ಶಾಲೆಗಳಿಗೆ ಜು.26 ರ ಶುಕ್ರವಾರ ರಜೆ ಘೋಷಿಸಲಾಗಿದೆ.

ಸಕಲೇಶಪುರ, ಆಲೂರು, ಬೇಲೂರು, ಅರಕಲಗೂಡು ಹಾಗೂ ಹಾಸನ ತಾಲೂಕುಗಳಲ್ಲಿ ಮಳೆ ತೀವ್ರಗೊಂಡಿದೆ. ಮಳೆ ಜತೆಗೆ ಗಾಳಿ ಕೂಡ ಹೆಚ್ಚಾಗಿದೆ. ಪರಿಣಾಮವಾಗಿ ಮಲೆನಾಡಿನ ಹಲವೆಡೆ ಮರಗಳು ಉರುಳಿ ಬಿದ್ದಿವೆ. ಹಲವೆಡೆ ರಸ್ತೆಗಳು ಹಾಳಾಗಿದ್ದು, ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಘಾಟ್‌ನ ದೊಡ್ಡತಪ್ಪಲೆ ಬಳಿ ಮತ್ತೆ ರಸ್ತೆ ಮೇಲೆ ಭೂ ಕುಸಿತವಾಗಿದೆ. ಇದರಿಂದಾಗಿ ನಾಲ್ಕು ಪಥಗಳ ರಸ್ತೆಯಲ್ಲಿ ಎರಡು ಪಥಗಳು ಮಣ್ಣಿನಿಂದ ಮುಚ್ಚಿದ್ದು, ಉಳಿದ ಭಾಗದಲ್ಲಿ ಮಾತ್ರವೇ ವಾಹನಗಳು ಸಂಚರಿಸುತ್ತಿವೆ.

ಪುನರ್ವಸು ಮಳೆಯಲ್ಲಿಯೇ ಹೇಮಾವತಿ ಜಲಾಶಯ ಭರ್ತಿಯಾಗಿತ್ತು. ಇದೀಗ ಅಸ್ಲೆ ಮಳೆ ಕೂಡ ಪುನರ್ವಸು ಮಳೆಗಿಂತ ಹೆಚ್ಚಿನ ಮಟ್ಟದಲ್ಲಿ ಸುರಿಯುತ್ತಿರುವುದರಿಂದ ಹೇಮಾವತಿ ಮತ್ತೆ ಮತ್ತೆ ಭರ್ತಿಯಾಗುತ್ತಿದೆ. ಹೇಮಾವತಿ ನದಿಗೆ ಗುರುವಾರ 36 ಸಾವಿರ ಕ್ಯುಸೆಕ್‌ಗೂ ಹೆಚ್ಚಿನ ಪ್ರಮಾಣದ ನೀರು ಹರಿದುಬರುತ್ತಿದೆ. ಬೇಲೂರು ತಾಲೂಕಿನಲ್ಲಿರುವ ಯಗಚಿಯಿಂದಲೂ 1500 ಕ್ಯುಸೆಕ್‌ಗಿಂತಲೂ ಹೆಚ್ಚು ನೀರನ್ನು ಬಿಟ್ಟಿರುವುದರಿಂದ ಆ ನೀರು ಕೂಡ ಹೇಮಾವತಿ ಬರುವುದರಿಂದಾಗಿ ಗುರುವಾರ ಮಧ್ಯಾಹ್ನದ ನಂತರ ಹೇಮಾವತಿ ಜಲಾಶಯದಿಂದ 65 ಸಾವಿರ ಕ್ಯುಸೆಕ್‌ಗೂ ಹೆಚ್ಚು ನೀರನ್ನು ಅಣೆಕಟ್ಟೆಯ 6 ಕ್ರಸ್ಟ್‌ ಗೇಟುಗಳನ್ನು ಎತ್ತುವ ಮೂಲಕ ಬಿಡಲಾಗಿದೆ. ಹೇಮಾವತಿ ನದಿಯ ತಗ್ಗು ಪ್ರದೇಶದ ಮತ್ತು ನದಿಯ ಎರಡು ದಂಡೆಯಲ್ಲಿರುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಅಲ್ಲದೇ ಆಸ್ತಿ ಪಾಸ್ತಿ ಹಾಗೂ ಜಾನುವಾರುಗಳ ರಕ್ಷಣೆಗೆ ಮುಂಜಾಗ್ರತಾ ಕ್ರಮ ಕೈಗೊಳ್ಳವಂತೆ ಹೇಮಾವತಿ ಅಣೆಕಟ್ಟು ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಸೂಚನೆ ನೀಡಿದ್ದಾರೆ.

ಬಾಕ್ಸ್‌: ಯಗಚಿಯಿಂದಲೂ ನೀರು ಹೊರಕ್ಕೆ

ಯಗಚಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆ ಆಗುತ್ತಿದ್ದು ಯಗಚಿ ಜಲಾಶಯವೂ ಭರ್ತಿಯಾಗಿದೆ. ಜಲಾಶಯದಿಂದ ೧೫೦೦ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಇಷ್ಟೇ ಪ್ರಮಾಣದ ನೀರು ಜಲಾಶಯಕ್ಕೆ ಹರಿದು ಬರುತ್ತಿರುವುದರಿಂದ ನೀರನ್ನು ಹೊರಗೆ ಬಿಡಲಾಗುತ್ತಿದೆ. ಇದೇ ರೀತಿ ಮತ್ತೆ ಮಳೆ ಮುಂದುವರಿದರೆ ಹೆಚ್ಚಿನ ಪ್ರಮಾಣದ ನೀರನ್ನು ಹೊರ ಬಿಡುವುದರಿಂದ ಯಗಚಿ ಜಲಾಶಯದ ಕೆಳಭಾಗದಲ್ಲಿ ಇರುವಂತಹವರು ಮುಂಜಾಗೃತರಾಗಿರಬೇಕೆಂದು ಯಗಚಿ ಜಲಾಶಯ ಸಹಾಯಕ ಎಂಜಿನಿಯರ್ ತಿಳಿಸಿದರು..ಬಾಕ್ಸ್‌: ಶಾಲೆಗಳಿಗೆ ಇಂದು ರಜೆ

ಅರಸೀಕೆರೆ ಹಾಗೂ ಚನ್ನರಾಯಪಟ್ಟಣ ತಾಲೂಕನ್ನು ಹೊರತುಪಡಿಸಿದಂತೆ ಇನ್ನುಳಿದ ಆಲೂರು, ಬೇಲೂರು, ಹಾಸನ, ಸಕಲೇಶಪುರ, ಅರಕಲಗೂಡು ಹಾಗೂ ಹೊಳೆನರಸೀಪುರ ತಾಲೂಕಿನ ಎಲ್ಲಾ ಅಂಗನವಾಡಿ ಹಾಗೂ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳಿಗೆ ಶುರ್ರವಾರ ರಜೆ ನೀಡಲಾಗಿದೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಎಚ್‌.ಕೆ. ಪಾಂಡು ರಜೆ ಘೋಷಿಸಿದ್ದಾರೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ