ವಿಟ್ಲ ಮುಡ್ನೂರು ಗ್ರಾಮದಲ್ಲಿ ಮಹಿಳೆಯರಿಂದ ಜಲಕ್ರಾಂತಿ

KannadaprabhaNewsNetwork |  
Published : Sep 21, 2024, 01:58 AM IST
ವಿಟ್ಲ ಮುಡ್ನೂರು ಗ್ರಾಮದಲ್ಲೊಂದು ಜಲಕ್ರಾಂತಿ | Kannada Prabha

ಸಾರಾಂಶ

ವಿಟ್ಲಮುಡ್ನೂರು ಗ್ರಾಮ ಪಂಚಾಯಿತಿಯಲ್ಲಿ ಚಿಗುರು ಸಂಜೀವಿನಿ ಒಕ್ಕೂಟ ಆರಂಭವಾಗಿ 3 ವರ್ಷಗಳಾಗಿದೆ. ಮನೆಯ ಕೆಲಸದಲ್ಲಷ್ಟೇ ದಿನದೂಡುತ್ತಿದ್ದ ಮಹಿಳೆಯರಿಗೆ ಒಕ್ಕೂಟದಿಂದ ಉದ್ಯೋಗದ ಅವಕಾಶ ಸಿಕ್ಕಂತಾಗಿದ್ದು, ಕೆಲವು ಸದಸ್ಯರು ಬೇಕರಿ ಉತ್ಪನ್ನ ತಯಾರಿ, ಮಲ್ಲಿಗೆ ಕೃಷಿಯಂತಹ ಸ್ವಉದ್ಯೋಗದ ಮೂಲಕ ಬದುಕು ಕಂಡುಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಬಂಟ್ವಾಳ

ಮಳೆಗಾಲದಲ್ಲಿ ಗುಡ್ಡದಲ್ಲಿ ಹರಿದು ನದಿ ಸೇರುವ ನೀರನ್ನು ಹಿಡಿದಿಟ್ಟು ಭೂಮಿಗೆ ಇಳಿಸಿ ಅಂತರ್ಜಲ ಮಟ್ಟ ಹೆಚ್ಚಿಸಲು ಬಂಟ್ವಾಳ ತಾಲೂಕಿನ ವಿಟ್ಲಮುಡ್ನೂರು ಗ್ರಾಮ ಪಂಚಾಯಿತಿಯ ಚಿಗುರು ಸಂಜೀವಿನಿ ಒಕ್ಕೂಟದ 6 ಮಂದಿ ಮಹಿಳೆಯರು ಸುಮಾರು 200ಕ್ಕೂ ಹೆಚ್ಚು ಇಂಗುಗುಂಡಿಗಳನ್ನು ನಿರ್ಮಿಸುವ ಮೂಲಕ ಮಾದರಿಯಾಗಿದ್ದಾರೆ.

ವಾತಾವರಣದ ಉಷ್ಣತೆ ಹೆಚ್ಚುವುದರಿಂದ ನೀರಿಗೆ ಹಾಹಾಕಾರ ಉಂಟಾಗುತ್ತದೆ. ನೀರಿನ ಬರ ಕೇವಲ ಮನುಷ್ಯರಿಗಲ್ಲದೆ, ವನ್ಯಜೀವಿಗಳಿಗೂ ತಟ್ಟುತ್ತದೆ. ಬೇಸಿಗೆಯ ಕಾವು ಹೆಚ್ಚಾಗುತ್ತಿದ್ದಂತೆ, ನೀರಿನ ಮೂಲಗಳು ಬತ್ತಿ ಹೋಗುತ್ತವೆ. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿಗೆ ಒಳಪಟ್ಟ ಕುಂಡಡ್ಕ ಕುಶಾಲನಗರ ಎಂಬಲ್ಲಿ ಮಹಿಳೆಯರ ಗುಂಪು ನಡೆಸಿದ ಇಂಗು ಗುಂಡಿಗಳು ಭವಿಷ್ಯದಲ್ಲಿ ಹೆಚ್ಚು ಉಪಕಾರಿಯಾಗಲಿದೆ. ಇಲ್ಲಿ 1.80 ಎಕರೆ ಸ್ಮಶಾನ ಜಾಗವಿದ್ದು, 50 ಸೆಂಟ್ಸ್‌ ಜಾಗದಲ್ಲಿ ಸ್ಮಶಾನವಿದೆ. ಉಳಿದ ಜಾಗದಲ್ಲಿ ಗೇರು ನೆಡುತೋಪು ಇದೆ. ಈ ಜಾಗದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಇಂಗುಗುಂಡಿ ನಿರ್ಮಾಣ ಮಾಡಲು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ನಿರ್ಧರಿಸಿದೆ. ಅದರಲ್ಲೂ ಮಹಿಳೆಯರಿಗೆ ಗ್ರಾಮದಲ್ಲಿ ಉದ್ಯೋಗ ಕೊಡುವ ಸಲುವಾಗಿ ಸಂಜೀವಿನಿ ಒಕ್ಕೂಟದ ಮಹಿಳೆಯರಲ್ಲಿ ತಿಳಿಸಿದಾಗ ಗ್ರಾಮ ಪಂಚಾಯಿತಿಯ ಚಿಗುರು ಸಂಜೀವಿನಿ ಒಕ್ಕೂಟದ 6 ಮಂದಿ ಮಹಿಳೆಯರು 6 ಅಡಿ ಉದ್ದ, 2 ಅಡಿ ಅಗಲ, 2 ಅಡಿ ಆಳದ ಗುಂಡಿಗಳನ್ನು ತೋಡಿದ್ದಾರೆ.

ನರೇಗಾ ಯೋಜನೆಯಡಿ 1 ಗುಂಡಿಗೆ ಪ್ರಸ್ತುತ ಆರ್ಥಿಕ ವರ್ಷದಲ್ಲಿ 300 ರು. ನಿಗದಿಪಡಿಸಲಾಗಿದೆ. ಕಾಮಗಾರಿ ನಿರ್ವಹಿಸಿದ ಮಹಿಳೆಯರಿಗೆ ನರೇಗಾ ಯೋಜನೆಯಿಂದ ಗ್ರಾಮದಲ್ಲೇ ಉದ್ಯೋಗದ ಅವಕಾಶ ಸಿಕ್ಕಿರುತ್ತದೆ. ಈವರೆಗೆ 52,350 ರು. ಕೂಲಿ ಹಣ ಪಾವತಿಯಾಗಿದೆ. ಮುಂದಿನ ದಿನಗಳಲ್ಲಿ ಉಳಿದ ಹಣ ಪಾವತಿಯಾಗಲಿದೆ. ನರೇಗಾದಿಂದ ಸಿಕ್ಕ ಕೂಲಿ ಹಣದಿಂದ ಅವಶ್ಯಕ ವಸ್ತುಗಳನ್ನು ಖರೀದಿಗೆ ಸಹಾಯವಾಗಿದೆ.

ವಿವಿಧ ಕಾಮಗಾರಿ ನಿರ್ವಹಣೆ: 2022- 2023ರಲ್ಲಿ ಮಾಧವ ನಾಯಕ್ ಎಂಬವರ ಜಮೀನಿನಲ್ಲಿ 180 ಇಂಗು ಗುಂಡಿ ರಚನೆ, 2022- 2023ರಲ್ಲಿ ಗ್ರಾಮದ ಕಂಬಳಬೆಟ್ಟು ಅಮೈ ಬಾಲಕೃಷ್ಣ ಗೌಡ ಮನೆ ಬಳಿ ಪರಂಬೂಕು ತೋಡಿನ ಹೂಳೆತ್ತುವ ಕಾಮಗಾರಿ, 2023- 2024ರಲ್ಲಿ ಹೊಯಿಗೆ ಶಾಂತಿಮಾರು ಎಂಬಲ್ಲಿ ಪರಂಬೋಕು ತೋಡಿನ ಹೂಳೆತ್ತುವ ಕಾಮಗಾರಿಯನ್ನು ಒಕ್ಕೂಟದ ಸದಸ್ಯರು ನಿರ್ವಹಿಸಿದ್ದಾರೆ. ಇಂಗುಗುಂಡಿ ಕಾಮಗಾರಿ ಕೈಗೊಳ್ಳುವುದರಿಂದ ಮಳೆ ನೀರನ್ನು ಭೂಮಿಗೆ ಇಂಗಿಸಿದಂತಾಗುತ್ತದೆ. ಮಣ್ಣಿನ ಸವಕಳಿ ತಡೆಗಟ್ಟಲು ಸಾಧ್ಯ. ಅಲ್ಲದೆ ಸುತ್ತಮುತ್ತಲಿನ ರೈತರ ಬಾವಿ, ಬೋರ್‌ವೆಲ್‌ನಲ್ಲಿಯೂ ನೀರಿನ ಮಟ್ಟ ಉತ್ತಮವಾಗಿರುತ್ತದಲ್ಲದೇ ಭೂಮಿಯಲ್ಲಿ ತೇವಾಂಶ ಹೆಚ್ಚಾಗುತ್ತದೆ. ವೈಯಕ್ತಿಕ ಆಸ್ತಿ ಸೃಜನೆಗೆ ಸಹಾಯಧನ ಮಾತ್ರವಲ್ಲದೇ ನೆಲ ಜಲ ಸಂರಕ್ಷಣೆಗೆ ಸಂಬಂಧಿಸಿದ ಕಾಮಗಾರಿಗಳನ್ನು ಕೈಗೊಳ್ಳಲು ನರೇಗಾ ಯೋಜನೆ ಸಹಕಾರಿಯಾಗಿದೆ.ಒಕ್ಕೂಟದಿಂದ ಕಾಮಗಾರಿ: ವಿಟ್ಲಮುಡ್ನೂರು ಗ್ರಾಮ ಪಂಚಾಯಿತಿಯಲ್ಲಿ ಚಿಗುರು ಸಂಜೀವಿನಿ ಒಕ್ಕೂಟ ಆರಂಭವಾಗಿ 3 ವರ್ಷಗಳಾಗಿದೆ. ಮನೆಯ ಕೆಲಸದಲ್ಲಷ್ಟೇ ದಿನದೂಡುತ್ತಿದ್ದ ಮಹಿಳೆಯರಿಗೆ ಒಕ್ಕೂಟದಿಂದ ಉದ್ಯೋಗದ ಅವಕಾಶ ಸಿಕ್ಕಂತಾಗಿದ್ದು, ಕೆಲವು ಸದಸ್ಯರು ಬೇಕರಿ ಉತ್ಪನ್ನ ತಯಾರಿ, ಮಲ್ಲಿಗೆ ಕೃಷಿಯಂತಹ ಸ್ವಉದ್ಯೋಗದ ಮೂಲಕ ಬದುಕು ಕಂಡುಕೊಂಡಿದ್ದಾರೆ. ಅಲ್ಲದೆ ನರೇಗಾ ಯೋಜನೆಯಡಿ ಇಂಗುಗುಂಡಿ ನಿರ್ಮಾಣ, ಸಾರ್ವಜನಿಕ ತೋಡಿನ ಹೂಳೆತ್ತುವ ಕಾಮಗಾರಿಯನ್ನೂ ನಿರ್ವಹಿಸುವ ಮೂಲಕ ಮಾದರಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಅಡಕೆ ಗಿಡ ನೆಡಲು ಕಾಮಗಾರಿ ನಿರ್ವಹಿಸಲಿದ್ದಾರೆ.

ಕೋಟ್ಸ್‌ ವಿಟ್ಲಮುಡ್ನೂರು ಗ್ರಾಮ ಪಂಚಾಯಿತಿಯ ಚಿಗುರು ಸಂಜೀವಿನಿ ಒಕ್ಕೂಟದ ಸದಸ್ಯರು ಇಂಗುಗುಂಡಿ ಕಾಮಗಾರಿ ಮಾಡುವ ಮೂಲಕ ಮಾದರಿಯಾಗಿದ್ದಾರೆ

- ಸಚಿನ್‌ ಕುಮಾರ್‌, ಬಂಟ್ವಾಳ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ

ನರೇಗಾ ಯೋಜನೆಯಡಿ ವೈಯಕ್ತಿಕವಾಗಿ ಹಾಗೂ ಸಾರ್ವಜನಿಕವಾಗಿ ಇಂಗುಗುಂಡಿಗಳನ್ನು ಮಾಡಲು ಅವಕಾಶವಿದೆ. ಕಾಮಗಾರಿ ಕೈಗೊಳ್ಳುವವರು ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಬಹುದು.

- ವಿಶ್ವನಾಥ್‌ ಬಿ., ಸಹಾಯಕ ನಿರ್ದೇಶಕರು, ತಾ.ಪಂ. ಬಂಟ್ವಾಳ

ನರೇಗಾ ಯೋಜನೆಯಡಿ ನಮ್ಮ ಗ್ರಾಮ ಪಂಚಾಯಿತಿಯ ಒಕ್ಕೂಟದ ಸದಸ್ಯರು ತೋಡಿನ ಹೂಳೆತ್ತುವುದು, ಇಂಗುಗುಂಡಿ ಕಾಮಗಾರಿಗಳನ್ನು ಮಾಡಿದ್ದಾರೆ. ಮಹಿಳೆಯರ ಸ್ವಾವಲಂಬಿ ಬದುಕಿಗೆ ಸರ್ಕಾರದಿಂದ ಸಿಗುವ ಅವಕಾಶವನ್ನು ತಲುಪಿಸುವ ನಿಟ್ಟಿನಲ್ಲಿ ಇನ್ನಷ್ಟು ಶ್ರಮಿಸಲಾಗುವುದು

- ಪುನೀತ್‌ ಮಾಡತಾರ್, ಅಧ್ಯಕ್ಷ, ವಿಟ್ಲಮುಡ್ನೂರು ಗ್ರಾ.ಪಂ.---

ಗ್ರಾಪಂ ಆಡಳಿತ ಮಂಡಳಿ ಸಹಕಾರದಿಂದ ನರೇಗಾದಡಿ ಒಕ್ಕೂಟದ ಮಹಿಳೆಯರು ಇಂಗುಗುಂಡಿ ಕಾಮಗಾರಿಗಳನ್ನು ನಿರ್ವಹಿಸಿದ್ದಾರೆ. ನರೇಗಾ ಕಾಮಗಾರಿಗಳ ಅನುಷ್ಠಾನದಲ್ಲಿ ಗ್ರಾ.ಪಂ. ಸಿಬ್ಬಂದಿ ಶ್ರಮವೂ ಮುಖ್ಯವಾಗಿದೆ

- ಸುಜಯ, ಪಿಡಿಒ, ವಿಟ್ಲಮುಡ್ನೂರು ಗ್ರಾಪಂ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

''ದ್ವೇಷ ಮಸೂದೆಯಿಂದ ಭಿನ್ನ ದನಿ ದಮನ ಆಗಲ್ಲ ''
3 ವರ್ಷ ಮೊಮ್ಮಗನಿಗೆ ಬಾರಲ್ಲಿ ಹೆಂಡ ಕುಡಿಸಿದ ಅಜ್ಜ: ಆಕ್ರೋಶ