ಕನ್ನಡಪ್ರಭ ವಾರ್ತೆ ಸುರಪುರ
ರೈತರ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ವಿವಿಧ ರೈತ ಸಂಘಟನೆ, ಕನ್ನಡಪರ ಸಂಘಟನೆ ಹಾಗೂ ಸಾಮೂಹಿಕ ಸಂಘಟನೆಗಳ ಸಹಯೋಗದಲ್ಲಿ ಶನಿವಾರ ತಾಲೂಕಿನ ದೇವಾಪುರ ಕ್ರಾಸ್ ಬಳಿ ಬೀದರ್- ಶ್ರೀರಂಗಪಟ್ಟಣ ರಾಷ್ಟೀಯ ಹೆದ್ದಾರಿ 158 (ಎ) ಬಂದ್ ಮಾಡಿ, ರಾಜೂಗೌಡ ಅವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಸಾವಿರಾರು ರೈತರು ಒಂದೆಡೆ ಸೇರಿರುವುದು ಸಂಭ್ರಮದ ವಿಚಾರವಲ್ಲ. ರೈತರ ಮನೆಗಳಿಗೆ ಬೆಂಕಿ ಬಿದಿದ್ದು, ಅದನ್ನು ನಂದಿಸಲು ನೀರಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಭತ್ತ ಬೆಳೆಯಲು ರೈತರು ಎಕರೆಗೆ ₹50 ಸಾವಿರದಿಂದ ₹80 ಸಾವಿರದವರೆಗೆ ಹಾಗೂ ಮೆಣಸಿನಕಾಯಿ ಬೆಳೆಯಲು ₹1 ಲಕ್ಷದಿಂದ ₹1.50 ಲಕ್ಷದವರೆಗೆ ಖರ್ಚು ಮಾಡಿದ್ದಾರೆ. ಜಮೀನು ಹದಗೊಳಿಸುವುದು, ಬಿತ್ತನೆ, ಗೊಬ್ಬರ ಹಾಕುವುದು ಸೇರಿದಂತೆ ಎಲ್ಲಾ ಕೃಷಿ ಚಟುವಟಿಕೆಗಳನ್ನು ಪೂರ್ಣಗೊಳಿಸಿ, ಬೆಳೆ ಕಟಾವಿಗೆ ಸಿದ್ಧವಾಗಿರುವ ಸಂದರ್ಭದಲ್ಲಿ ನೀರು ನಿಲ್ಲಿಸಿರುವುದು ರೈತರಿಗೆ ದೊಡ್ಡ ಆಘಾತವಾಗಿದೆ ಎಂದರು.* ತೆಲಂಗಾಣಕ್ಕೆ ನೀರು ಹರಿಸುತ್ತಿರುವ ಆರೋಪ: ನಾರಾಯಣಪುರ ಜಲಾಶಯದಿಂದ ರಾಜ್ಯದ ರೈತರಿಗೆ ಜಮೀನುಗಳಿಗೆ ಸಮರ್ಪಕವಾಗಿ ನೀರು ಹರಿಸದೆ ತೆಲಂಗಾಣಕ್ಕೆ ನೀರು ಹರಿಸಲಾಗುತ್ತಿದೆ ಎಂದು ಆರೋಪಿಸಿ, ಸರ್ಕಾರದ ವಿರುದ್ಧ ಕಿಡಿಕಾರಿದರು. ಆರಂಭದಲ್ಲೇ ನೀರು ನೀಡುವುದಿಲ್ಲ ಎಂದು ತಿಳಿಸಿದ್ದರೆ ರೈತರು ಬೇರೆ ನಿರ್ಧಾರ ಕೈಗೊಳ್ಳಬಹುದಿತ್ತು. ಆದರೆ, ನೀರು ಹರಿಸಿದ ಬಳಿಕ ರೈತರು ಸಾಲ ಸೋಲ ಮಾಡಿ ಬೆಳೆ ಬೆಳೆದಿದ್ದಾರೆ. ಇದೀಗ ಬೆಳೆ ಕೈಗೆ ಬರುವ ಹಂತದಲ್ಲಿ ನೀರು ನಿಲ್ಲಿಸುವುದರಿಂದ ಬೆಳೆಗಳು ಒಣಗುತ್ತಿದ್ದು, ರೈತರು ಅಪಾರ ನಷ್ಟ ಅನುಭವಿಸುವಂತಾಗಿದೆ ಎಂದರು.
* ರೈತರ ಪರವಾಗಿ ಧ್ವನಿ ಎತ್ತಲು ಒತ್ತಾಯ: ರೈತರ ಸಮಸ್ಯೆಗಳ ಕುರಿತು ಜನಪ್ರತಿನಿಧಿಗಳು ಧ್ವನಿ ಎತ್ತಬೇಕು ಎಂದು ರಾಜೂಗೌಡ ಶಾಸಕ ರಾಜಾ ವೇಣುಗೋಪಾಲನಾಯಕ ವಿರುದ್ಧ ವಾಗ್ದಾಳಿ ನಡೆಸಿ, ಶಾಸಕರು ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಬದಲು ಮರಳು (ಉಸುಕು) ಸಂಗ್ರಹ ಮತ್ತು ಮಾರಾಟದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು. ಶಾಸಕರ ತಂದೆ ರಾಜಾ ವೆಂಕಟಪ್ಪನಾಯಕ ಅವರ ರಾಜಕೀಯ ನಡವಳಿಕೆ ಪ್ರಸ್ತಾಪಿಸಿದ ಅವರು, ನಿಮ್ಮ ತಂದೆ ಸ್ವರ್ಗದಲ್ಲಿದ್ದಾರೆ. ರಾಜಾ ವೆಂಕಟಪ್ಪನಾಯಕ ಅವರ ಬಗ್ಗೆ ಮಾತಾಡೋಕೆ ಹೋಗುವುದಿಲ್ಲ. ಅವರು ನಮ್ಮ ವಿರುದ್ಧ ರಾಜಕೀಯ ಮಾಡಿದ್ದಾರೆ. ನಾವು ಅವರ ವಿರುದ್ಧ ರಾಜಕೀಯ ಮಾಡಿದ್ದೇವೆ. ಅದರೆ, ಅವರು ಎಂದಿಗೂ ಕೀಳುಮಟ್ಟದ ಮರಳು ಮಾರಾಟದ ರಾಜಕೀಯ ಮಾಡಿರಲಿಲ್ಲ ಎಂದು ಹೇಳಿದರು.
ಲಕ್ಷ್ಮೀಪುರದ ಮಲ್ಲಿಕಾರ್ಜುನ ಹಿರೇಮಠದ ಸ್ವಾಮಿ, ಬಿಜೆಪಿ ತಾಲೂಕು ಮಂಡಲದ ಅಧ್ಯಕ್ಷ ವೇಣುಮಾಧವ ನಾಯಕ, ವೇಣುಗೋಪಾಲ ನಾಯಕ ಜೇವರ್ಗಿ, ದೇವದುರ್ಗ ಮಸ್ತಾದ ನಾಯಕ, ಗುರುನಾಥ ರೆಡ್ಡಿ, ಹೆಬ್ಬಾಳ, ಸಿದ್ದಣ್ಣ ಗೌಡ್ರು, ಕನ್ನಡಪರ ಹೋರಾಟಗಾರ ಜಿಲ್ಲಾ ಅಧ್ಯಕ್ಷ ಭೀಮುನಾಯಕ, ದೇವತ್ಕಲ್ ಯಲ್ಲಪ್ಪ, ವೆಂಕಟೇಶನಾಯಕ ಬೈರಿಮಡ್ಡಿ, ಶರಣುನಾಯಕ ಬೈರಿಮಡ್ಡಿ, ಹಣಮಂತ ಚಂದಾಲಾಪುರ, ಅಯ್ಯಣ್ಣ ಹಾಲಭಾವಿ, ಎಸ್. ಸಿ. ಪಾಟೀಲ್, ಗಂಗಾಧರ ನಾಯಕ, ಶ್ರವಣಕುಮಾರ ನಾಯಕ ಡೊಣ್ಣೆಗೇರಾ, ಶರಣು ನಾಯಕ ಡೊಣ್ಣೆಗೇರಾ, ಪಿಐ ಉಮೇಶ ಎಂ. ನಾಯಕ, ಪಿಎಸ್ಐ ಕೃಷ್ಣ ಸುಬೇದಾರ ಪೊಲೀಸ್ ಇಲಾಖೆಯ ಸಿಬ್ಬಂದಿ ಸೇರಿದಂತೆ ಹುಣಸಗಿ ಹಾಗೂ ಸುರಪುರ ತಾಲೂಕಿನ ರೈತರು, ವಿವಿಧ ಸಂಘಟನೆಯ ಅಧ್ಯಕ್ಷರು, ಸದಸ್ಯರು, ಪದಾಧಿಕಾರಿಗಳು, ಸಾರ್ವಜನಿಕರು ಭಾಗವಹಿಸಿದ್ದರು.
ಬಳಿಕ, ಜಿಲ್ಲಾಧಿಕಾರಿ ರಾಹುಲ್ ತುಕಾರಾ ಪಾಂಡ್ವೆ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ, ಪಂಪ್ಸೆಟ್ಗಳಿಗೆ ನಿರಂತರ 7 ತಾಸು ವಿದ್ಯುತ್ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ನಾರಾಯಣಪುರ ಜಲಾಶಯಕ್ಕೆ ಮುತ್ತಿಗೆ ಹಾಕಿ ಹೋರಾಟ ತ್ರೀವ್ರಗೊಳಿಸಲಾಗುವುದು ಎಂದರು.