- ಅನಧಿಕೃತ ಪಂಪ್‌ಸೆಟ್‌ಗಳ ತೆರವು, ವಿದ್ಯುತ್ ಕಡಿತಕ್ಕೆ ಕ್ರಮ: ಡಿಸಿ ಭರವಸೆ - - - ಕನ್ನಡಪ್ರಭ ವಾರ್ತೆ ದಾವಣಗೆರೆ
ಭದ್ರಾ ಜಲಾಶಯದ ಕಾಲುವೆಗಳ ಮೂಲಕ ಹರಿಸುತ್ತಿರುವ ನೀರನ್ನು ಅಚ್ಚುಕಟ್ಟಿನ ಕೊನೆ ಭಾಗಗಳಿಗೂ ಸಮರ್ಪಕವಾಗಿ ತಲುಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಭರವಸೆ ನೀಡಿದರು.ನಗರದ ಜಿಲ್ಲಾಡಳಿತ ಭವನದಲ್ಲಿ ಭದ್ರಾ ಅಟ್ಟುಕಟ್ಟು ಪ್ರದೇಶದ ರೈತರೊಂದಿಗಿನ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈ ಸಂಬಂಧ ಇರುವ ಸಮಸ್ಯೆಗಳನ್ನು ಇನ್ನೊಂದೆರೆಡು ದಿನದಲ್ಲೇ ಪರಿಹರಿಸುತ್ತೇನೆ ಎಂದರು.
ಕಾಲುವೆಗಳಲ್ಲಿ ಅನಧಿಕೃತವಾಗಿ ಪಂಪ್ ಸೆಟ್ ಅಳವಡಿಸಿ, ನೀರು ಲಿಫ್ಟ್ ಮಾಡಲಾಗುತ್ತಿದೆ. ಇದರಿಂದ ಕಡೇ ಭಾಗದ ರೈತರಿಗೆ ನೀರು ಸಕಾಲಕ್ಕೆ ತಲುಪುತ್ತಿಲ್ಲ. ಈ ಹಿನ್ನೆಲೆ ಅನಧಿಕೃತ ಪಂಪ್‌ಸೆಟ್ ತೆರವು ಮಾಡಿ, ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು. ಬೇಸಿಗೆ ಕಾಲವಾಗಿದ್ದು, ಗೇಟ್‌ನಲ್ಲಿ ನೀರಿನ ಸೋರಿಕೆಯಾಗುತ್ತಿದೆ. ಕಾಲುವೆ ದುರಸ್ತಿಗೆ ಅಗತ್ಯ ಅನುದಾನದ ಬಿಡುಗಡೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಕಾಲುವೆಗಳ ನೀರು ನಿರ್ವಹಣೆಗೆ ಸಿಬ್ಬಂದಿ ಕೊರತೆ ಇದೆ. ಈ ಸಮಸ್ಯೆಯನ್ನು ಪರಿಹರಿಸಲು ನೀರಾವರಿ ಇಲಾಖೆ ಅಧೀಕ್ಷಕ ಅಭಿಯಂತರರಿಗೆ ಡಿಸಿ ಸೂಚನೆ ನೀಡಿದರು.ಹರಿಹರ ಕ್ಷೇತ್ರ ಶಾಸಕ ಬಿ.ಪಿ.ಹರೀಶ ಮಾತನಾಡಿ, ಭದ್ರಾ ಜಲಾಶಲಯ, ನಾಲೆಗಳನ್ನು ದುರಸ್ತಿಪಡಿಸಿ, ಭದ್ರಾ ಎಂಜಿನಿಯರ್‌ಗಳು ವೈಜ್ಞಾನಿಕ ತಂತ್ರ ಅಳವಡಿಸಿಕೊಂಡು, ನೀರು ಪೋಲಾಗದಂತೆ ಕ್ರಮ ಕೈಗೊಳ್ಳಬೇಕು. ಭದ್ರಾ ನಾಲೆ ಅಚ್ಚುಕಟ್ಟು ಪ್ರದೇಶದ ಬಹುತೇಕ ಭಾಗದಲ್ಲಿ ನೀರಾವರಿ ಕಟ್ಟಡ, ನಾಲೆ ಗೇಟ್‌ಗಳು ಹಾಳಾಗಿವೆ. ಇದರಿಂದಾಗಿ ನೀರು ಹೆಚ್ಚಿನ ಪ್ರಮಾಣದಲ್ಲಿ ವ್ಯರ್ಥವಾಗಿ ಹರಿದುಹೋಗುತ್ತಿದೆ ಎಂದು ಹೇಳಿದರು.
ನೀರಾವರಿ ಇಲಾಖೆ ಎಇಇ ಧನಂಜಯ ಮಾತನಾಡಿ, ಸಿಬ್ಬಂದಿ ಕೊರತೆಯಿಂದಾಗಿ ಬಸವಾಪಟ್ಟಣ ಕೊನೆ ಭಾಗಕ್ಕೆ ನೀರು ತಲುಪಿಲ್ಲ ಎಂದು ಸಭೆ ಗಮನಕ್ಕೆ ತಂದರು.ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಿ.ಮಂಜುನಾಥ, ಜಿಲ್ಲಾ ಯೋಜನಾ ನಿರ್ದೇಶಕ ಮಹಾಂತೇಶ, ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಎಸ್.ಎಂ. ವೀರೇಶ ಹನಗವಾಡಿ ಇತರರು ಇದ್ದರು.
- - - ಬಾಕ್ಸ್ * ತಿಂಗಳುಗಳೇ ಕಳೆದರೂ ನೀರು ಬರುತ್ತಿಲ್ಲ ಸಭೆಯಲ್ಲಿ ರೈತ ಮುಖಂಡರು ಮಾತನಾಡಿ, ಭದ್ರಾ ಜಲಾಶಯದಿಂದ ನೀರು ಬಿಟ್ಟು 50 ದಿನ ಕಳೆದಿದ್ದು, ಇನ್ನು 70 ದಿನಕ್ಕಾಗುವಷ್ಟು ಮಾತ್ರ ನೀರು ಬಾಕಿ ಉಳಿದಿದೆ. ಕೊನೆಯ ಭಾಗಕ್ಕೆ ಅಚ್ಚುಕಟ್ಟು ಪ್ರದೇಶಗಳಾದ ಮಲೇಬೆನ್ನೂರು, ಬಸವಾಪಟ್ಟಣದ ಅಚ್ಚುಕಟ್ಟು ರೈತರ ಜಮೀನುಗಳಿಗೆ ನೀರು ಇನ್ನೂ ತಲುಪಿಲ್ಲವೆಂದರೆ ಏನರ್ಥ? ಭದ್ರಾ ಡ್ಯಾಂನ ನೀರು ನಮ್ಮ ಜಿಲ್ಲೆಯ ರೈತರ ಜೀವನಾಡಿಯಾಗಿದೆ. ಇದೇ ನೀರನ್ನು ನಂಬಿ ಲಕ್ಷಾಂತರ ಎಕರೆಯಲ್ಲಿ ರೈತರು ಬೆಳೆ ಬೆಳೆಯುತ್ತಿದ್ದಾರೆ ಎಂದು ರೈತ ಮುಖಂಡರು ಹೇಳಿದರು.ತಿಂಗಳುಗಳೇ ಕಳೆದರೂ ಭದ್ರಾ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಬರುತ್ತಿಲ್ಲ. ಭದ್ರಾ ಜಲಾಶಯದ ನೀರನ್ನು ನಂಬಿ, ಬತ್ತ ನಾಟಿ ಮಾಡಿರುವ ಲಕ್ಷಾಂತರ ರೈತರು ನೀರಿಗಾಗಿ ಕಾದುಕುಳಿತಿದ್ದಾರೆ. ಮಲೇಬೆನ್ನೂರಿನ ಕೊನೆಯ ಭಾಗದ ರೈತರು ಸೇರಿದಂತೆ ಹತ್ತಾರು ಹಳ್ಳಿಗಳು ನೀರಿನ ದಾರಿ ಕಾಯುತ್ತಿವೆ. ನೀರು ಬಾರದಿದ್ದರೆ ಅಚ್ಚುಕಟ್ಟು ರೈತರು ಏನು ಮಾಡಬೇಕು ಎಂದು ಮುಖಂಡರು, ರೈತರು ಅಸಮಾಧಾನ ವ್ಯಕ್ತಪಡಿಸಿದರು.
- - - -1ಕೆಡಿವಿಜಿ5.ಜೆಪಿಜಿ:ದಾವಣಗೆರೆ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಅಧ್ಯಕ್ಷತೆಯಲ್ಲಿ ಭದ್ರಾ ಅಚ್ಚುಕಟ್ಟು ಕೊನೆಯ ಭಾಗದ ರೈತರ ಸಭೆ ನಡೆಯಿತು. ಹರಿಹರ ಶಾಸಕ ಬಿ.ಪಿ.ಹರೀಶ, ರೈತ ಮುಖಂಡರು, ಅಧಿಕಾರಿಗಳು ಪಾಲ್ಗೊಂಡಿದ್ದರು.