ಅಶೋಕ ಸೊರಟೂರ ಲಕ್ಷ್ಮೇಶ್ವರ
ತಾಲೂಕಿನ ಬೃಹತ್ ಕೆರೆಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದು, ಜಲ ಮೂಲಗಳು ಸಂಪೂರ್ಣವಾಗಿ ಬತ್ತಿ ಹೋಗಿ ಕುಡಿಯುವ ನೀರಿಗೆ ಜನರು ಪರದಾಡುವಂತಾಗಿದೆ.ತಾಲೂಕಿನ ಬಸಾಪುರ ಗ್ರಾಮದ ಕುಡಿಯುವ ನೀರಿನ ಮೂಲವಾಗಿರುವ ಕೆರೆ ಸಂಪೂರ್ಣವಾಗಿ ಬತ್ತಿ ಹೋಗಿದೆ. ಬಟ್ಟೂರ ಗ್ರಾಮದ ಶೆಟ್ಟಿಕೇರಿ ಕೆರೆಯ ನೀರು ಖಾಲಿಯಾಗುವ ಹಂತಕ್ಕೆ ತಲುಪಿದೆ. ಗದಗ ಜಿಲ್ಲೆಯ ಖ್ಯಾತ ಪಕ್ಷಿಧಾಮ ಎಂದು ಕರೆಸಿಕೊಳ್ಳುವ ಮಾಗಡಿ ಕೆರೆಯಲ್ಲಿ ನೀರು ಖಾಲಿಯಾಗಿ ಅಳಿದುಳಿದ ನೀರಿನಲ್ಲಿ ಬಿಡಿ ಮೀನುಗಾರರು ಅಳಿದುಳಿದ ಮೀನು ಹಿಡಿಯುವ ಕಾಯಕದಲ್ಲಿ ನಿರತರಾಗಿರುವ ದೃಶ್ಯ ಕಂಡು ಬರುತ್ತದೆ.
ಬಾಲೆ ಹೊಸೂರು ಗ್ರಾಮದ ಎರಡು ಕೆರೆಗಳಲ್ಲಿ ಹನಿ ನೀರು ಇಲ್ಲವಾಗಿ ಜಾನುವಾರುಗಳಿಗೆ ಕುಡಿಯುವ ನೀರಿನ ಮೂಲ ಬತ್ತಿ ಹೋಗಿ ಕಾಡು ಪ್ರಾಣಿಗಳಿಗೆ ಹಾಗೂ ಕುರಿ ಮೇಕೆಗಳಿಗೂ ನೀರು ಇಲ್ಲವಾಗಿದೆ ಎಂದು ಬಾಲೆ ಹೊಸೂರು ಗ್ರಾಮದ ದೇವಣ್ಣ ಮತ್ತೂರು ಹೇಳಿದರು.ತಾಲೂಕಿನ ಗೊಜನೂರ, ಮಾಗಡಿ ಗ್ರಾಮದಿಂದ ಆರಂಭವಾಗಿರುವ ದೊಡ್ಡ ಹಳ್ಳಕ್ಕೆ ಹೆಬ್ಬಾಳದ ಹತ್ತಿರ ತುಂಗಭದ್ರಾ ನದಿ ಸೇರುವ ಈ ದೊಡ್ಡ ಹಳ್ಳಕ್ಕೆ ಸರಿಸುಮಾರು 25-30 ಕ್ಕೂ ಹೆಚ್ಚು ಬಾಂದಾರಗಳನ್ನು ಸಣ್ಣ ನೀರಾವರಿ ಇಲಾಖೆಯು ನಿರ್ಮಾಣ ಮಾಡಿದೆ.
ಈ ಬಾಂದಾರಗಳಲ್ಲಿ ನೀರು ನಿಂತು ಅಕ್ಕಪಕ್ಕದ ಹೊಲಗಳ ರೈತರು ಬಾಂದಾರದ ನೀರು ಬಳಸಿಕೊಂಡು ಕೃಷಿ ಚಟುವಟಿಕೆ ಮಾಡಿ ತಮ್ಮ ಆದಾಯ ಹೆಚ್ಚಿಸಿಕೊಳ್ಳಬಹುದು ಎಂಬುದು ಸಣ್ಣ ನೀರಾವರಿ ಇಲಾಖೆಯ ಉದ್ದೇಶವಾಗಿತ್ತು, ಆದರೆ ಬಹುತೇಕ ಬಾಂದಾರಗಳಲ್ಲಿ ಹೂಳು ತುಂಬಿಕೊಂಡು ಆಪು ಹಾಗೂ ಸಣ್ಣ ಗಿಡಗಂಟಿಗಳು ಬೆಳೆದು ಪೊದೆಗಳಾಗಿವೆ, ಅಲ್ಲದೆ ಬಾಂದಾರದ ತುಂಬೆಲ್ಲ ಹೂಳು ತುಂಬಿ ನೀರು ನಿಲ್ಲದಂತಾಗಿದೆ.ಕಳೆದ ಹಲವು ವರ್ಷಗಳಿಂದ ದೊಡ್ಡ ಹಳ್ಳದ ಅಕ್ಕಪಕ್ಕದ ಗ್ರಾಮಸ್ಥರು ಹೂಳು ತೆಗೆಯುವಂತೆ ಗ್ರಾಪಂಗಳಿಗೆ ಮನವಿ ನೀಡುತ್ತಿದ್ದಾರೆ. ಆದರೆ ಗ್ರಾಪಂ ಆಡಳಿತ ಮಂಡಳಿಯು ಬಾಂದಾರ ಹಾಗೂ ಕೆರೆಯಲ್ಲಿನ ಹೂಳು ತೆಗೆಯುವ ಕಾರ್ಯಕ್ಕೆ ನರೇಗಾ ಕಾಮಗಾರಿಯಲ್ಲಿ ಅವಕಾಶವಿಲ್ಲ ಎಂದು ಪಿಡಿಓಗಳು ಹೇಳುತ್ತಾರೆ.ಇದರಿಂದ ಜಲ ಮೂಲಗಳಾದ ಕೆರೆ, ಹಳ್ಳಿಕೊಳ್ಳಗಳು ಬತ್ತಿ ಹೋಗಿ ಜನರಿಗೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆಯಾಗಿದೆ ಎಂದು ಸಾರ್ವಜನಿಕರ ಅಭಿಪ್ರಾಯವಾಗಿದೆ.