ಮಂಗಳೂರು ಮಹಾನಗರಕ್ಕೆ ಎರಡು ದಿನಗಳಲ್ಲಿ ನೀರು ಪೂರೈಕೆ ಯಥಾಸ್ಥಿತಿ ನಿರೀಕ್ಷೆ

KannadaprabhaNewsNetwork |  
Published : Feb 11, 2024, 01:46 AM IST
111 | Kannada Prabha

ಸಾರಾಂಶ

ಮೂರು ದಿನಗಳಿಂದ ನೀರು ಪೂರೈಕೆ ಸಂಪೂರ್ಣವಾಗಿ ಸ್ಥಗಿತವಾದ ಹಿನ್ನೆಲೆಯಲ್ಲಿ ಕೆಲವು ಪ್ರದೇಶ, ವೇರ್‌ಹೌಸ್ ಪ್ರದೇಶಗಳಿಗೆ ನೀರು ಸಮರ್ಪಕವಾಗಿ ಪೂರೈಕೆಯಾಗಲು ಎರಡು ದಿನ ಬೇಕಾಗುತ್ತದೆ ಎಂದು ಪಾಲಿಕೆಯ ನೀರು ಪೂರೈಕೆ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರುಕಳೆದು ಮೂರು ದಿನಗಳಿಂದ ನಗರದ ನಾಗುರಿ ಬಳಿ ಹಾನಿಗೊಂಡ ನೀರಿನ ಪೈಪ್‌ಲೈನ್ ದುರಸ್ತಿ ಕಾರ್ಯ ಗುರುವಾರ ಪೂರ್ಣಗೊಂಡು ಮಂಗಳೂರು ಮಹಾನಗರಕ್ಕೆ ನೀರು ಪೂರೈಕೆ ಆರಂಭವಾಗಿದೆ. ಇನ್ನು ಎರಡು ದಿನಗಳಲ್ಲಿ ನೀರು ಪೂರೈಕೆ ಪರಿಸ್ಥಿತಿ ಸಹಜ ಸ್ಥಿತಿಗೆ ಬರುವ ನಿರೀಕ್ಷೆಯಿದೆ.ನಗರ ವ್ಯಾಪ್ತಿಯ ಹಲವು ಮನೆಗಳಿಗೆ ಇನ್ನೂ ಸಮರ್ಪಕವಾಗಿ ಪೂರೈಕೆಯಾಗದ ಹಿನ್ನೆಲೆಯಲ್ಲಿ ಕೊಡಿಯಾಲಬೈಲ್‌, ಕುದ್ರೋಳಿ, ರಥಬೀದಿ ಭಾಗದ ನಾಗರಿಕರು ಪಾಲಿಕೆ ಸದಸ್ಯರ ನೇತೃತ್ವದಲ್ಲಿ ಶನಿವಾರ ಬೆಂದೂರ್‌ವೆಲ್‌ನ ಪಂಪ್‌ಹೌಸ್‌ಗೆ ಭೇಟಿ ನೀಡಿದರು. ಸೆಂಟ್ರಲ್ ವಾರ್ಡ್ ಸದಸ್ಯೆ ಪೂರ್ಣಿಮಾ ಮತ್ತು ಕಂಬ್ಳ ವಾರ್ಡ್ ಸದಸ್ಯೆ ಲೀಲಾವತಿ ಪ್ರಕಾಶ್‌ ನೇತೃತ್ವದಲ್ಲಿ ಪಂಪ್‌ಹೌಸ್‌ಗೆ ಭೇಟಿ ನೀಡಿ, ಅಲ್ಲಿ ನೀರು ಪೂರೈಕೆಯ ಸಮಸ್ಯೆ ಬಗ್ಗೆ ಸಿಬ್ಬಂದಿ ಜತೆ ಮಾತುಕತೆ ನಡೆಸಿದರು. ಫೆಬ್ರವರಿಯಲ್ಲಿಯೇ ದುರಸ್ತಿಯ ಕಾರಣಕ್ಕೆ ನಾಲ್ಕೈದು ದಿನಗಳಿಂದ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಿದ್ದರೂ ನಗರದಲ್ಲಿ ಈ ರೀತಿಯ ಅಡಚಣೆ, ದುರಸ್ತಿ ಕಾಮಗಾರಿಗಾಗಿ ವಿಳಂಬವಾಗಬಾರದು. ಬೇಸಗೆಯಲ್ಲಿ ಇಂತಹ ಸಮಸ್ಯೆ ಉಂಟಾದರೆ ಪರಿಸ್ಥಿತಿ ಬಿಗಡಾಯಿಸಬಹುದು ಎಂದು ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದರು. ಎರಡು ದಿನದಲ್ಲಿ ಸಹಜತೆಗೆ: ಮೂರು ದಿನಗಳಿಂದ ನೀರು ಪೂರೈಕೆ ಸಂಪೂರ್ಣವಾಗಿ ಸ್ಥಗಿತವಾದ ಹಿನ್ನೆಲೆಯಲ್ಲಿ ನೀರು ಪೂರೈಕೆಯ ಕೊನೆ ಪಾಯಿಂಟ್‌ ಆದ ಸೆಂಟ್ರಲ್, ಬೋಳೂರು, ಬೊಕ್ಕಪಟ್ಣ, ಕುದ್ರೋಳಿ, ಬಂದರು, ಮಣ್ಣಗುಡ್ಡದ ಕೆಲವು ಪ್ರದೇಶ, ವೇರ್‌ಹೌಸ್ ಪ್ರದೇಶಗಳಿಗೆ ನೀರು ಸಮರ್ಪಕವಾಗಿ ಪೂರೈಕೆಯಾಗಲು ಎರಡು ದಿನ ಬೇಕಾಗುತ್ತದೆ ಎಂದು ಪಾಲಿಕೆಯ ನೀರು ಪೂರೈಕೆ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸಾರ್ವಜನಿಕರು ಸಹಕರಿಸಿ: ಮಂಗಳೂರು ನಗರಕ್ಕೆ ಈಗಾಗಲೇ ನೀರು ಪೂರೈಕೆ ಆರಂಭವಾಗಿದೆ. ಪಣಂಬೂರು ವ್ಯಾಪ್ತಿಯಲ್ಲಿ ಕೊಳವೆಯಲ್ಲಿ ಏರ್‌ಲಾಕ್ ಉಂಟಾಗಿ ನೀರು ಪೂರೈಸಲು ಸಮಸ್ಯೆಯಾಗಿದ್ದು, ಈ ನಿಟ್ಟಿನಲ್ಲಿ ಏರ್ ವಾಲ್ವ್ ಮೂಲಕ ಏರ್ ರಿಲೀಸ್ ಮಾಡಿದ ಹಿನ್ನೆಲೆಯಲ್ಲಿ ಪ್ರಸ್ತುತ ಸುರತ್ಕಲ್ ವ್ಯಾಪ್ತಿಗೆ ಸರಾಗವಾಗಿ ನೀರು ಹರಿಯಲು ಪ್ರಾರಂಭವಾಗಿದೆ. ಬೆಂದೂರುವೆಲ್ ವ್ಯಾಪ್ತಿಗೆ ಒಳಪಡುವ ಮಂಗಳೂರು ನಗರದ ಕೆಲವು ತಗ್ಗು ಪ್ರದೇಶಗಳಿಗೆ ಸಮರ್ಪಕವಾಗಿ ನೀರು ಪೂರೈಕೆಯಾಗದಿರುವುದು ಗಮನಕ್ಕೆ ಬಂದಿದೆ. ಈ ಸಮಸ್ಯೆ ಬಗೆಹರಿಸಲು ಪಾಲಿಕೆ ಅಧಿಕಾರಿಗಳು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಸಾರ್ವಜನಿಕರು ಸಹಕರಿಸುವಂತೆ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಮನವಿ ಮಾಡಿದ್ದಾರೆ.

PREV

Recommended Stories

ಬಿಪಿಎಲ್‌ ಕಾರ್ಡ್‌ಗೆ 1.20 ಲಕ್ಷ ಆದಾಯ ಮಿತಿ ಕೇಂದ್ರದ್ದು: ಸಿಎಂ
ಪೇದೆ ನೇಮಕಕ್ಕೆ ವಯೋಮಿತಿ ಸಡಿಲಕ್ಕೆ ಶೀಘ್ರ ಪ್ರಸ್ತಾವ : ಪರಂ