ಮುನಿರಾಬಾದ್:
ಜು. 1ರಿಂದ ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ಕಾಲುವೆಯಲ್ಲಿ ನೀರು ಹರಿಸಬೇಕೆಂದು ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಆದರೆ, ಜು. 4ಆದರೂ ಅಧಿಕಾರಿಗಳು ಕಾಲುವೆಗೆ ನೀರು ಹರಿಸಿರಲಿಲ್ಲ. ಇದರಿಂದ ಆಕ್ರೋಶಗೊಂಡ ರೈತರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಬಳಿಕ ಜು. 4ರ ಸಂಜೆ ನೀರು ಹರಿಸಿದ್ದರು. ಆದರೆ, ಜು. 5ರಂದು ಸಂಜೆ ಕಾಲುವೆಯಲ್ಲಿ ನೀರು ಹರಿಸುವುದನ್ನು ಸ್ಥಗಿತಗೊಳಿಸಿದ್ದಾರೆ. ಅಧಿಕಾರಿಗಳ ಈ ಕ್ರಮದಿಂದ ಸಾವಿರಾರು ಎಕರೆ ಪ್ರದೇಶದಲ್ಲಿ ಭತ್ತ ನಾಟಿ ಮಾಡಿದ ರೈತರು ಆತಂಕಕ್ಕೆ ಒಳಗಾಗಿದ್ದಾರೆ.
ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಜು. 1ರಿಂದ ನೀರು ಹರಿಸಬೇಕೆಂದು ತೀರ್ಮಾನ ಕೈಗೊಂಡರು ಈ ವರೆಗೂ ಈ ಕಾಲುವೆಯಲ್ಲಿ ನೀರು ಹರಿಸದಿರುವುದು ಅಧಿಕಾರಿಗಳ ಬೇಜವಾಬ್ದಾರಿತನ ತೋರಿಸುತ್ತದೆ ಎಂದು ರೈತ ಮುಖಂಡ ನಾಗಪ್ಪ ಇಲಿಗೇರ ಹಾಗೂ ಖಾಜಾ ಹುಸೇನ್ ದೊಡ್ಮನಿ ಆರೋಪಿಸಿದ್ದಾರೆ. ಅಧಿಕಾರಿಗಳು ನೀರು ಹಂಚಿಕೆ ವಿಷಯದಲ್ಲಿ ರೈತರೊಂದಿಗೆ ಕಣ್ಣು ಮುಚ್ಚಾಲೆ ಆಟ ಆಡುತ್ತಿದ್ದಾರೆ ಎಂದು ದೂರಿದರು.ಜಲಾಶಯದಿಂದ ಕಾಲುವೆಗೆ ನೀರು ಬಿಡುವ ಸಮಯದಲ್ಲಿ ಅಧಿಕಾರಿಗಳು ಕಾಲುವೆಯಿಂದ ಹೂಳೆತ್ತುವ ಕಾರ್ಯದಲ್ಲಿ ತೊಡಗಿದ್ದಾರೆ. ಬೇಸಿಗೆ ರಜೆಯಲ್ಲಿ ಅವರು ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿದ್ದಾರೆ.