ಶಿವಾನಂದ ಅಂಗಡಿ ಹುಬ್ಬಳ್ಳಿ
ತೀವ್ರ ಬಿಸಿಲಿನ ಹಿನ್ನೆಲೆಯಲ್ಲಿ ಇಲ್ಲಿಯ ಹೊರವಲಯದ ಹುಬ್ಬಳ್ಳಿ-ಗದಗ ರಾಷ್ಟ್ರೀಯ ಹೆದ್ದಾರಿ (ಎನ್‌ಎಚ್-67) ಯಲ್ಲಿ ಗಿಡಮರಗಳು ಹಾಗೂ ಹೂವಿನ ಗಿಡಗಳ ರಕ್ಷಿಸಲು ರಾಷ್ಟ್ರೀಯ ಹೆದ್ದಾರಿ ನಿರ್ವಹಣೆ ಕಾರ್ಮಿಕರು ಟ್ಯಾಂಕರ್ ನೀರಿಗೆ ಮೊರೆ ಹೋಗಿದ್ದಾರೆ.ರಾಷ್ಟ್ರೀಯ ಹೆದ್ದಾರಿಗಳೆಂದಾಕ್ಷಣ ವಿಶಾಲ ರಸ್ತೆ, ಟೋಲ್‌ಗೇಟ್ ನೆನಪಾಗುತ್ತದೆ. ಈ ರಸ್ತೆ ಅಕ್ಕಪಕ್ಕದಲ್ಲೇ ಹೆದ್ದಾರಿ ಪ್ರಾಧಿಕಾರದವರು ಗಿಡಗಳನ್ನು ನೆಟ್ಟಿದ್ದು, ಬಿಸಿಲಿನ ಹಿನ್ನೆಲೆಯಲ್ಲಿ ಅವುಗಳ ರಕ್ಷಣೆಗೆ ಸಿಬ್ಬಂದಿ ನಿತ್ಯವೂ ಶ್ರಮಪಡುತ್ತಿದ್ದಾರೆ.
ಹುಬ್ಬಳ್ಳಿ ತಾಲೂಕಿನ ಅಂಚಟಗೇರಿಯಿಂದ ಬಿಂಕದಕಟ್ಟಿಯವರೆಗೆ ಹೈದ್ರಾಬಾದ್ ಮೂಲದ ಕೆ.ಎನ್.ಆರ್. ಕನಸ್ಟ್ರಕ್ಷನ್ ಕಂಪನಿಯವರು ಚತುಷ್ಪಥ ನಿರ್ಮಿಸಿದ್ದು, ನಲವಡಿ ಬಳಿ ಒಂದು ಟೋಲ್‌ಗೇಟ್ ಇದೆ. ಹೆದ್ದಾರಿಯ ಎರಡು ಕಡೆ ಎರಡು ಪಥಗಳಿದ್ದು, ಮಧ್ಯದಲ್ಲಿರುವ ‘ಮಿಡಿಯನ್’ ಪ್ರದೇಶದಲ್ಲಿ ಪುಷ್ಪಗಳ ಗಿಡಗಳನ್ನು ನೆಡಲಾಗಿದೆ. ಬಿಸಿಲಿನ ಹಿನ್ನೆಲೆಯಲ್ಲಿ ಅವುಗಳ ಉಳಿಸಿಕೊಳ್ಳಲು ನಿತ್ಯ ನೀರು ಹಾಕುತ್ತಿದ್ದಾರೆ.ಮಳೆಗಾಲದಲ್ಲಿ ಈ ಗಿಡಗಳು ದಷ್ಟ ಪುಷ್ಟವಾಗಿ ಬೆಳೆದು ಹಳದಿ ಹೂವುಗಳು (ಟೆಕೊಮಾ ಗಾಡಿಚೂಡಿ), ಪಿಂಕ್ ಹೂವುಗಳು (ಬೊಂಗಾನವಿಲ್ಲೆ) ಅರಳುತ್ತವೆ. ಹೆದ್ದಾರಿಯ ಎರಡೂ ಪಕ್ಕದಲ್ಲಿ (ಆವಿನ್ಯೂ ಪ್ಲಾಂಟೇಶನ್) ನೂರಾರು ಸಸಿಗಳನ್ನು ನೆಟ್ಟಿದ್ದು, ನೇರಳೆ, ಹುಣಸೆ, ಚಿಕ್ಕು ಸೇರಿ ನೆರಳು ನೀಡುವ ತರಹೇವಾರಿ ಗಿಡಗಳು ಇವೆ. ವಾಹನಗಳಿಂದ ಹೊರ ಸೂಸುವ ಹೊಗೆ ಹೀರುವ ಗಿಡಗಳನ್ನು ಇಲ್ಲಿ ನೆಟ್ಟಿದ್ದೇವೆ ಎನ್ನುತ್ತಾರೆ ಸಿಬ್ಬಂದಿ. ಜಾನುವಾರುಗಳಿಂದ ಗಿಡಗಳ ರಕ್ಷಿಸಲು ಮುಳ್ಳಿನ ಕವಚ ಹಾಗೂ ಗಾಳಿಗೆ ಬಾಗದಂತೆ, ಮುರಿಯದಂತೆ ಬಿದಿರು ನೆಟ್ಟು ಅದಕ್ಕೆ ಗಿಡಗಳನ್ನು ಕಟ್ಟಿದ್ದಾರೆ ಕಾರ್ಮಿಕರು.
ನಿತ್ಯ ಟ್ಯಾಂಕರ್ ನೀರು: ಹೆದ್ದಾರಿ ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ಕಂಪನಿಯ 15-20 ಸಿಬ್ಬಂದಿ 5 ಟ್ಯಾಂಕರ್‌ಗಳ ಮೂಲಕ ಗಿಡಗಳಿಗೆ ನೀರು ಹಾಕುತ್ತಾರೆ. ಒಂದೊಂದು ಟ್ಯಾಂಕರ್ ಮೂರು ಬಾರಿಯಂತೆ 15 ಬಾರಿ ನೀರು ಪೂರೈಸುತ್ತವೆ. ಒಂದೊಂದು ಟ್ಯಾಂಕರ್‌ನಲ್ಲಿ ಇಬ್ಬರು ಮಹಿಳಾ ಕಾರ್ಮಿಕರು ಹಾಗೂ ಟ್ಯಾಂಕರ್ ಚಾಲಕ ಬೆಳಗಿನಿಂದ ಸಂಜೆವರೆಗೂ ಕಾರ್ಯ ನಿರ್ವಹಿಸುತ್ತಾರೆ.ಬೇಸಿಗೆ ಸಮಯದಲ್ಲಿ ಈ ಗಿಡಗಳ ರಕ್ಷಣೆ ಸವಾಲಿನ ಕೆಲಸವಾಗುತ್ತದೆ ಎನ್ನುತ್ತಾರೆ ಸಿಬ್ಬಂದಿ.
ವಿಶೇಷವಾಗಿ ಬೇಸಿಗೆ ಸಮಯದಲ್ಲಿ ಅಣ್ಣಿಗೇರಿ ಸಮೀಪದ ಅಂತೂರು ಬೆಂತೂರಿನ ಬಳಿ ಇರುವ ಕೆರೆ ಕೊಳ್ಳಗಳಿಂದ ೫ ಟ್ಯಾಂಕರ್‌ಗಳಲ್ಲಿ ಗಿಡಗಳಿಗೆ ನೀರು ತಂದು ಹಾಕುತ್ತಿದ್ದಾರೆ. ಅಲ್ಲಿ ಬೆಳೆದ ಕಸಕಡ್ಡಿ, ಹುಲ್ಲು, ಗಿಡಗಂಟಿಗಳನ್ನು ಯಂತ್ರಗಳಿಂದ ತೆರವುಗೊಳಿಸುವ ಕಾರ್ಯವೂ ಜೋರಾಗಿ ನಡೆಯುತ್ತಿದೆ.ಸ್ಥಳೀಯ ಹಾಗೂ ಆಂಧ್ರದ ಕೂಲಿ ಕಾರ್ಮಿಕರು ಕೆಲಸ ನಿರ್ವಹಿಸುತ್ತಾರೆ. ಆಂಧ್ರದ ಕಾರ್ಮಿಕರಿಗೆ ಕೋಳಿವಾಡ ಬಳಿ ಕ್ಯಾಂಪ್ ನಿರ್ಮಾಣ ಮಾಡಿದ್ದು, ಅವರ ಊಟದ, ಉಪಾಹಾರ, ವಸತಿ ವೆಚ್ಚವನ್ನು ಕಂಪನಿಯೇ ಹೊತ್ತುಕೊಂಡಿದೆ. ಸ್ಥಳೀಯ ಕೂಲಿ ಕಾರ್ಮಿಕರಿಗೆ ವಾರಕೊಮ್ಮೆ ನಿಗದಿಪಡಿಸಿದ ಕೂಲಿ ಹಣವನ್ನು ಕಂಪನಿ ನೀಡುತ್ತಿದೆ.
ಭಾರತದ ರಾಷ್ಟ್ರೀಯ ಹೆದ್ದಾಾರಿ ಪ್ರಾಧಿಕಾರ ಈ ಹೆದ್ದಾರಿಗಳನ್ನು ಟೋಲ್ ನಾಕಾ ಹಾಗೂ ಖಾಸಗಿ ಗುತ್ತಿಗೆ ಕಂಪನಿಗಳಿಂದ ನಿರ್ವಹಣೆ ಮಾಡುತ್ತಿದೆ.ರಾಷ್ಟ್ರೀಯ ಹೆದ್ದಾರಿಗಳು ದೊಡ್ಡ ಮಹಾನಗರಗಳಿಗೆ ಸಂಪರ್ಕ ಕಲ್ಪಿಸುವಂತೆ ಇಲ್ಲಿಯ ಹುಬ್ಬಳ್ಳಿ-ಧಾರವಾಡ ಮಹಾನಗರಕ್ಕೂ ಎರಡ್ಮೂರು ರಾಷ್ಟ್ರೀಯ ಹೆದ್ದಾರಿಗಳು ಸಂಪರ್ಕ ಕಲ್ಪಿಸಿದ್ದು, ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿವೆ. ಪುಣೆ-ಬೆಂಗಳೂರು, ಹುಬ್ಬಳ್ಳಿ- ಸೊಲ್ಲಾಪುರ ಹಾಗೂ ಅಂಕೋಲಾ-ಬಳ್ಳಾರಿವರೆಗೆ ರಾಷ್ಟ್ರೀಯ ಹೆದ್ದಾರಿಗಳು ಹುಬ್ಬಳ್ಳಿ ಮಹಾನಗರ ಸಂಪರ್ಕಿಸುತ್ತಿದ್ದು, ವಾಹನ ಸಂಚಾರವನ್ನು ಸುಗಮಗೊಳಿಸಿವೆ.
ನಿತ್ಯ ಈ ಹೆದ್ದಾರಿಯಲ್ಲಿ ನಾವು ಸಂಚರಿಸುತ್ತಿದ್ದು, ತೀವ್ರ ಬಿಸಿಲಿಗೆ ಗಿಡಗಳು ಒಣಗುತ್ತಿದ್ದು, ಹೆದ್ದಾರಿ ನಿರ್ವಹಣೆ ಸಿಬ್ಬಂದಿ ಟ್ಯಾಂಕರ್ ನೀರು ಹಾಕಿ ಅವುಗಳನ್ನು ಪೋಷಿಸುತ್ತಿದ್ದಾರೆ. ಮಳೆಗಾಲದಲ್ಲೂ ಗಿಡಗಳ ನೆಡುವ ಅಭಿಯಾನ ನಿರಂತರ ನಡೆದಿರುತ್ತದೆ ಎಂದು ಖಾಸಗಿ ವಾಹನದಲ್ಲಿ ತೆರಳುತ್ತಿದ್ದ ವ್ಯಕ್ತಿ ರಮೇಶ ತಿಳಿಸಿದರು.ಬಿಸಿಲಿನ ಹಿನ್ನೆಲೆಯಲ್ಲಿ ಹೆದ್ದಾರಿ ಪಕ್ಕದ ಗಿಡಗಳ ಪೋಷಣೆ ಸವಾಲಿನದಾಗಿದ್ದು, ನಿತ್ಯ 5 ಟ್ಯಾಂಕರ್‌ಗಳಲ್ಲಿ ನೀರು ಹಾಕುತ್ತೇವೆ. ಅಣ್ಣಿಗೇರಿ ಹಾಗೂ ಕ್ಯಾಂಪನ್ ಕೆರೆಯಿಂದ ಒಂದೊಂದು ಟ್ಯಾಂಕರ್‌ನಲ್ಲಿ ಮೂರು ಜನ ಸಿಬ್ಬಂದಿ, ಹೀಗೆ 5 ಟ್ಯಾಂಕರ್‌ನವರು ಮೂರು ಸಲ ನೀರು ತರುತ್ತೇವೆ ಎಂದು ಹೆದ್ದಾರಿ ನಿರ್ವಹಣೆ ಕಂಪನಿ ಟ್ಯಾಂಕರ್ ಚಾಲಕ ಮಹಾದೇವ ಹೇಳಿದರು.