ಮುಂಗಾರು ಬೆಳೆಗಾಗಿ ಭದ್ರಾ ನಾಲೆಗೆ ನೀರು ಹರಿಸಿ

KannadaprabhaNewsNetwork | Updated : Jul 23 2024, 12:39 AM IST

ಸಾರಾಂಶ

ಭದ್ರಾ ಜಲಾಶಯದಿಂದ 2024- 2025ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆಗಳಿಗೆ ಅನುಕೂಲ ಆಗುವಂತೆ ತಕ್ಷಣವೇ ನೀರು ಹರಿಸಬೇಕು ಎಂದು ಭಾರತೀಯ ರೈತ ಒಕ್ಕೂಟ ಧುರೀಣ, ಮಾಜಿ ಸಚಿವ ಎಸ್‌.ಎ. ರವೀಂದ್ರನಾಥ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

- ರಾಜ್ಯ ಸರ್ಕಾರಕ್ಕೆ ಮಾಜಿ ಸಚಿವ ಎಸ್‌.ಎ.ರವೀಂದ್ರನಾಥ ಆಗ್ರಹ । ಭಾರತೀಯ ರೈತ ಒಕ್ಕೂಟದಿಂದ ಅಚ್ಚುಕಟ್ಟು ರೈತರ ಸಭೆ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಭದ್ರಾ ಜಲಾಶಯದಿಂದ 2024- 2025ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆಗಳಿಗೆ ಅನುಕೂಲ ಆಗುವಂತೆ ತಕ್ಷಣವೇ ನೀರು ಹರಿಸಬೇಕು ಎಂದು ಭಾರತೀಯ ರೈತ ಒಕ್ಕೂಟ ಧುರೀಣ, ಮಾಜಿ ಸಚಿವ ಎಸ್‌.ಎ. ರವೀಂದ್ರನಾಥ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.

ನಗರದ ಶ್ರೀ ಅಭಿನವ ರೇಣುಕಾ ಮಂದಿರದಲ್ಲಿ ಸೋಮವಾರ ಭಾರತೀಯ ರೈತ ಒಕ್ಕೂಟ ನೇತೃತ್ವದಲ್ಲಿ ಭದ್ರಾ ಅಣೆಕಟ್ಟೆಯಿಂದ ಅಚ್ಚುಕಟ್ಟು ಪ್ರದೇಶಗಳಿಗೆ ಮಳೆಗಾಲದ ಬೆಳೆಗಳಿಗೆ ನೀರು ಹರಿಸುವ ಕುರಿತಂತೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ಭದ್ರಾ ಅಣೆಕಟ್ಟೆಯಿಂದ ಮುಂಗಾರು ಹಂಗಾಮಿನ ಬೆಳೆಗಳಿಗೆ ಅನುಕೂಲ ಆಗುವಂತೆ ತಕ್ಷಣವೇ ಅಚ್ಚುಕಟ್ಟಿಗೆ ನೀರು ಹರಿಸಬೇಕು ಎಂದರು.

ಮುಂಗಾರು ಹಂಗಾಮಿನಲ್ಲಿ ಈಗಾಗಲೇ ಬತ್ತದ ಸಸಿ ನಾಟಿ ಮಾಡಲು ಸಿದ್ಧವಾಗಿದೆ. ಭದ್ರಾ ಜಲಾಶಯದಲ್ಲಿ ಬಳಕೆಗೆ ಬರಬಹುದಾದ 42,744 ಟಿಎಂಸಿ ನೀರು ಸಂಗ್ರಹವಿದೆ. ಬತ್ತಕ್ಕೆ 120 ದಿನಗಳು ನೀರು ಬೇಕಾಗುವ ಹಿನ್ನೆಲೆ ಎಷ್ಟು ಸಾಧ್ಯವೋ, ಅಷ್ಟು ಬೇಗನೇ ಭದ್ರಾ ಬಲದಂಡೆ ನಾಲೆಯಲ್ಲಿ ನೀರು ಹರಿಸುವ ಮೂಲಕ ದಾವಣಗೆರೆ ಜಿಲ್ಲೆಯ ಭದ್ರಾ ಅಚ್ಚುಕಟ್ಟುದಾರರಿಗೆ ಅನುಕೂಲ ಮಾಡಿಕೊಡಬೇಕು ಎಂದು ತಿಳಿಸಿದರು.

ಬತ್ತವನ್ನು ಈಗ ನಾಟಿ ಮಾಡಿದರೆ ನವೆಂಬರ್‌ನಲ್ಲಿ ಮೂಡು (ಶೀತ)ಗಾಳಿಗೆ ಬತ್ತ ಸಿಲುಕಿಕೊಳ್ಳುವುದಿಲ್ಲ. ಮೂಡುಗಾಳಿ ಬಂದಾಗ ಬತ್ತ ಜೊಳ್ಳಾಗಿ, ಇಳುವರಿಯೂ ಕಡಿಮೆಯಾಗುತ್ತದೆ. ತಕ್ಷಣವೇ ನೀರು ಹರಿಸಿದಲ್ಲಿ ಸಾಕಷ್ಟು ಅನುಕೂಲವಾಗಲಿದೆ. ಜಿಲ್ಲಾಡಳಿತ ಭದ್ರಾ ಬಲದಂಡೆ ನಾಲೆಯಲ್ಲಿ ನೀರು ಹರಿಸುವ ಬಗ್ಗೆ ಅಗತ್ಯ ಮತ್ತು ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಈ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ ಎಂದು ಹೇಳಿದರು.

ಭಾರತೀಯ ರೈತ ಒಕ್ಕೂಟ ಅಧ್ಯಕ್ಷ ಎಚ್.ಆರ್‌. ಲಿಂಗರಾಜ ಶಾಮನೂರು ಮಾತನಾಡಿ, ಈ ಹಿಂದೆ 3 ದಶಕದ ಹಿಂದೆ ಡ್ಯಾಂ ಖಾಲಿ ಮಾಡಿ, ದುರಸ್ತಿ ಮಾಡಬೇಕೆಂಬು ಬೊಂಬು ತುಂಬಿ, ಫೋಟೋ ತೆಗೆದು, ಕೋಟಿಗಟ್ಟಲೇ ಹಣ ಖರ್ಚು ಮಾಡಲು ಮುಂದಾಗಿದ್ದರು. ಆಗ ಪ್ರೊ. ಸಿ.ನರಸಿಂಹಪ್ಪ, ಎಸ್.ಎ. ರವೀಂದ್ರನಾಥ ಇತರರ ನೇತೃತ್ವದಲ್ಲಿ ಹೋರಾಟ ನಡೆಸಿ, ತಡೆದಿದ್ದೆವು. ಆಗ ತಜ್ಞರ ತಂಡವು ಭದ್ರಾ ಡ್ಯಾಂಗೆ 250 ವರ್ಷಗಳ ಆಯಸ್ಸು ಇದೆ ಎಂದಿತ್ತು. ಆದರೆ, ಅಧಿಕಾರಸ್ಥರು ದುರಸ್ತಿಗೆ ನೂರಾರು ಕೋಟಿ ಹಣದ ಮೇಲೆ ಕಟ್ಟಿಟ್ಟಿದ್ದರು ಎಂದರು.

ಭಾರತೀಯ ರೈತ ಒಕ್ಕೂಟ ಮುಖಂಡರಾದ ಕೊಂಡಜ್ಜಿ ಶಾನುಬೋಗರ ನಾಗರಾಜ ರಾವ್‌, ಮಾಜಿ ಮೇಯರ್ ಎಚ್.ಎನ್‌. ಗುರುನಾಥ, ಬಿ.ಕೆ.ವಿಶ್ವನಾಥ, ಎಚ್.ಎನ್. ಶಿವಕುಮಾರ, ಎಚ್.ಲಿಂಗರಾಜ, ರೇವಣಪ್ಪ, ಚನ್ನಬಸಪ್ಪ, ಕೆ.ಆರ್. ಜಯಪ್ರಕಾಶ, ಕೆ.ಸಿ.ತಿಮ್ಮಪ್ಪ, ಟಿ.ವೀರೇಶ, ಎ.ನಾಗರಾಜ ರಾವ್‌, ಎನ್.ಬಿ. ಭೀಮಪ್ಪ ಇತರರು ಇದ್ದರು.

ಸಭೆ ನಂತರ ಅಚ್ಚುಕಟ್ಟು ರೈತರು ಮಾಜಿ ಸಚಿವ ಎಸ್.ಎ. ರವೀಂದ್ರನಾಥ, ಶಾಬನೂರು ಎಚ್.ಆರ್. ಲಿಂಗರಾಜ, ಕೊಂಡಜ್ಜಿ ಶಾನುಬೋಗರ ನಾಗರಾಜ ರಾವ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಅರ್ಪಿಸಲಾಯಿತು.

- - -

ಬಾಕ್ಸ್‌ * 14 ವರ್ಷಗಳಿಂದ ಗೇಟ್ ನಿರ್ವಹಣೆ ಮಾಡಿಲ್ಲ ಸಣ್ಣಪುಟ್ಟ ನಿರ್ವಹಣೆ ಕೆಲಸ ಮಾಡಿದರೆ, ಇಂದಿಗೂ ಡ್ಯಾಂ ಭದ್ರವಾಗಿದೆ. ಡ್ರಿಪ್ ಗ್ರೌಟಿಂಗ್ ಅಂತಾ ಜಪಾನ್‌ ತಾಂತ್ರಿಕತೆ ಅಂತಾ ಮಾಡಿದ್ದರು. ಉಳಿದಿದ್ದನ್ನು ಮಾಡಿದರೆ ಸಾಕು. ಗೇಟ್ ನಿರ್ವಹಣೆ ಮಾಡಿದರೆ ಸಾಕು. 14 ವರ್ಷಗಳಿಂದ ಗೇಟ್‌ಗೆ ಆಯಿಲ್ ಸೀಲ್‌, ರಬ್ಬರ್ ಹಾಕುವುದು ಸೇರಿದಂತೆ ನಿರ್ವಹಣೆ ಮಾಡಿಲ್ಲ. 3 ದಶಕದ ಹಿಂದೆ ಮಾಡಿದ್ದಷ್ಟೇ. ಎರಡೂ ಕಡೆ ಗೇಟ್ ಇವೆ. ಸೇಫ್ಟಿ ಗೇಟ್ ಹಾಗೂ ಎಮರ್ಜೆನ್ಸಿ ಗೇಟ್ ಇರುತ್ತದೆ. ಡ್ಯಾಂ ಕಡೆ ಇರುವ ಗೇಟನ್ನು ಕ್ರೇನ್ ಮೂಲಕ ಎತ್ತಬೇಕು. ಅಧಿಕಾರಿಗಳು, ಆಳುವವರ ಬೇಜವಾಬ್ದಾರಿಯಿಂದ ಇಷ್ಟೆಲ್ಲಾ ಸಮಸ್ಯೆಯಾಗಿದೆ ಎಂದು ಎಚ್.ಆರ್‌. ಲಿಂಗರಾಜ ಶಾಮನೂರು ಅಸಮಾಧಾನ ವ್ಯಕ್ತಪಡಿಸಿದರು.

- - - -22ಕೆಡಿವಿಜಿ7, 8:

ದಾವಣಗೆರೆಯಲ್ಲಿ ಭಾರತೀಯ ರೈತ ಒಕ್ಕೂಟದಿಂದ ಮಾಜಿ ಸಚಿವ ಎಸ್.ಎ. ರವೀಂದ್ರನಾಥ ನೇತೃತ್ವದಲ್ಲಿ ನಡೆದ ಅಚ್ಚುಕಟ್ಟು ರೈತರ ಸಭೆಯಲ್ಲಿ ಹಿರಿಯ ರೈತರೊಬ್ಬರು ಮಾತನಾಡಿದರು.

-22ಕೆಡಿವಿಜಿ9:

ದಾವಣಗೆರೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅವರಿಗೆ ಭಾರತೀಯ ರೈತ ಒಕ್ಕೂಟದಿಂದ ಮಾಜಿ ಸಚಿವ ಎಸ್.ಎ. ರವೀಂದ್ರನಾಥ ನೇತೃತ್ವದಲ್ಲಿ ಭದ್ರಾ ನಾಲೆಗೆ ನೀರು ಹರಿಸುವಂತೆ ಮನವಿ ಅರ್ಪಿಸಲಾಯಿತು.

Share this article