ಕನ್ನಡಪ್ರಭ ವಾರ್ತೆ ಕುರುಗೋಡುಬರಗಾಲದ ಹಿನ್ನೆಲೆ ಸೂಕ್ತ ಪರಿಹಾರ ನೀಡಬೇಕು. ಅಲ್ಲದೇ ಎಚ್‌ಎಲ್ ಕಾಲುವೆಗೆ ನವೆಂಬರ್ ಅಂತ್ಯದವರೆಗೆ ನೀರು ಬಿಡುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಪದಾಧಿಕಾರಿಗಳು ಮನವಿ ಮಾಡಿದರು.ಬರಗಾಲ ಅಧ್ಯಯನ ಕುರಿತು ಬೆಳೆಗಳ ವೀಕ್ಷಣೆ ಮಾಡಲು ಇತ್ತೀಚೆಗೆ ಉಸ್ತುವಾರಿ ಸಚಿವ ಬಿ. ನಾಗೇಂದ್ರ ಅವರು ಪಟ್ಟಣಕ್ಕೆ ಆಗಮಿಸಿದಾಗ ಮನವಿ ಸಲ್ಲಿಸಿ ಸಂಘದ ಜಿಲ್ಲಾ ಅಧ್ಯಕ್ಷ ವಿ.ಎಸ್. ಶಿವಶಂಕರ್ ಮಾತನಾಡಿ, ರಾಜ್ಯದ ಎಲ್ಲ ಕಡೆ ಬರ ಆವರಿಸಿದೆ. ಜೂನ್‌ನಲ್ಲಿ ಬಹಳ ವಿಳಂಬವಾಗಿ ಪ್ರಾರಂಭವಾದ ಮುಂಗಾರು ಜುಲೈ ಮಧ್ಯಭಾಗದಿಂದ ಇಲ್ಲಿಯವರೆಗೆ ಸತತ ಮೂರು ತಿಂಗಳಗಳ ಕಾಲ ಮಳೆ ಬೀಳದೇ ರೈತರು ಕಂಗಾಲಾಗಿದ್ದಾರೆ. ರಾಜ್ಯದ ಅಣೆಕಟ್ಟುಗಳಲ್ಲಿ ನೀರಿನ ಸಂಗ್ರಹ ಬಹಳ ಕಡಿಮೆ ಇದ್ದು, ನದಿ ನೀರಿನ ಬಳಕೆಗೆ ಆತಂಕ ಉಂಟಾಗಿದೆ ಎಂದರು.ಪರಿಸ್ಥಿತಿ ಹೀಗಿದ್ದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇಡೀ ರಾಜ್ಯವನ್ನು ಬರಪಿಡೀತ ಪ್ರದೇಶ ಎಂದು ಘೋಷಿಸಿ ಸಮರೋಪಾದಿಯಲ್ಲಿ ಪರಿಹಾರ ನೀಡಲು ಮೀನಮೇಷ ಎಣಿಸುತ್ತಿದೆ ಎಂದು ಆರೋಪಿಸಿದರು.
ಜಿಲ್ಲೆಯ ಜೀವನಾಡಿ ತುಂಗಭದ್ರಾ ಜಲಾಶಯದಿಂದ ಎಚ್ಎಲ್ ಕಾಲುವೆಗೆ ನವೆಂಬರ್ ತಿಂಗಳು ಪೂರ್ತಿ ನೀರು ಹರಿಸಲು ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರವು ಕೂಡಲೇ ಕ್ರಮ ಕೈಗೊಳ್ಳಬೇಕು ಒತ್ತಾಯಿಸಿದರು. ಪಟ್ಟಣದಲ್ಲಿ ಈಗಾಗಲೇ ನಿವೇಶನರಹಿತರಿಗಾಗಿ ನಿವೇಶನ ನೀಡಲು ಗುರುತಿಸಿರುವ ಭೂಮಿಯನ್ನುಅಭಿವೃದ್ಧಿಪಡಿಸಿ ಕೂಡಲೇ ನಿವೇಶನ ಹಂಚಿಕೆ ಮಾಡಬೇಕು ಆಗ್ರಹಿಸಿದರು.ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಟಿ. ಅಮೀನ್ ಸಾಬ್, ಪ್ರಧಾನ ಕಾರ್ಯದರ್ಶಿ ಗಾಳಿ ಬಸವರಾಜ, ಸಮಿತಿ ಸದಸ್ಯರಾದ ಮೆಟ್ರಿ ನಿಂಗಪ್ಪ, ಪಾರ್ವತಮ್ಮ, ಮೇಟಿ ಕಲ್ಗುಡಿ, ಅಮೃತಾಪುರ ಹನುಮಂತ, ವಿಘ್ನೇಶಗೌಡ, ಆಂಧ್ರದ ಮುದ್ದಣ್ಣ, ಎಚ್. ಕೆಂಚಪ್ಪ, ಎನ್. ಹುಲೆಪ್ಪ, ಯು. ಶಂಕ್ರಪ್ಪ, ಎಸ್. ಕನಕ, ಬಿ. ಚಂದ್ರಪ್ಪ, ಕೆ. ಪಕ್ಕೀರ ಎಂ. ನಾಗರಾಜ, ಕೆ. ವೀರೇಶ, ದುರ್ಗಾ ಕರೆಪ್ಪ, ಭಟ್ರಳ್ಳಿ ಮಲ್ಲಪ್ಪ, ಮೇಟಿಚಂದ್ರ, ಎಚ್. ಗಾದಿಲಿಂಗಪ್ಪ, ಮೇಟಿ ಕರೇಗೌಡ ಇತರರು ಇದ್ದರು.