ಇನ್ನೆರಡು ತಿಂಗಳಲ್ಲಿ ಕೂಡ್ಲಿಗಿ ತಾಲೂಕಿನ ಕೆರೆಗಳಿಗೆ ನೀರು?

KannadaprabhaNewsNetwork | Published : Aug 26, 2024 1:35 AM

ಸಾರಾಂಶ

ತುಂಬ ಕಾಳಜಿಯಿಂದ ಕೊನೆಯ ಹಂತದ ಕಾಮಗಾರಿಗೆ ಇದ್ದ ಅಡೆತಡೆಗಳನ್ನು ಕಾನೂನಾತ್ಮಕವಾಗಿ ಬಗೆಹರಿಸಿದ್ದಾರೆ.

ಕೂಡ್ಲಿಗಿ: ತಾಲೂಕಿನ 74 ಕೆರೆಗಳಿಗೆ ತುಂಗಾಭದ್ರಾ ನದಿಯಿಂದ ನೀರು ತುಂಬಿಸುವ ಮಹತ್ವದ ಯೋಜನೆಯ ಕಾಮಗಾರಿ ಚುರುಕು ಪಡೆದಿದ್ದು, ಇನ್ನು 2 ತಿಂಗಳೊಳಗೆ ತಾಲೂಕಿನ ಕೆರೆಗಳಿಗೆ ನೀರು ತುಂಬುವ ಆಶಾಭಾವನೆ ಮತ್ತೆ ಗರಿಗೆದರಿದೆ.

ತಾಲೂಕಿನ 74 ಕೆರೆಗಳಿಗೆ ತುಂಗಾಭದ್ರಾ ನದಿಯಿಂದ ನೀರು ತುಂಬಿಸುವ ಅಂದಾಜು ₹670 ಕೋಟಿ ವೆಚ್ಚದ ಮಹತ್ವದ ಯೋಜನೆಯ ಕಾಮಗಾರಿ ನನೆಗುದಿಗೆ ಬಿದ್ದ ಬಗ್ಗೆ ಕನ್ನಡಪ್ರಭ ಜುಲೈ 20ರಂದು "74 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಹಿಡಿದ ಗ್ರಹಣ " ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು. ಶಾಸಕ ಡಾ.ಎನ್.ಟಿ. ಶ್ರೀನಿವಾಸ್, ನೀರಾವರಿ ಇಲಾಖೆ ಅಧಿಕಾರಿಗಳು ಈ ವರದಿಗೆ ಸ್ಪಂದಿಸಿದ್ದಾರೆ.

ತುಂಬ ಕಾಳಜಿಯಿಂದ ಕೊನೆಯ ಹಂತದ ಕಾಮಗಾರಿಗೆ ಇದ್ದ ಅಡೆತಡೆಗಳನ್ನು ಕಾನೂನಾತ್ಮಕವಾಗಿ ಬಗೆಹರಿಸಿದ್ದಾರೆ. ಇನ್ನು 2 ತಿಂಗಳೊಳಗೆ ಕೂಡ್ಲಿಗಿ ತಾಲೂಕಿನ ಕೆರೆಗಳಿಗೆ ನೀರು ತುಂಬುವ ಆಶಾಭಾವನೆ ಇದೆ.

ತಾಲೂಕಿನ ಪಾಲಯ್ಯನಕೋಟೆ ಕೆರೆಯಲ್ಲಿ ಹೂವಿನಹಡಗಲಿ ತಾಲೂಕು ರಾಜವಾಳದ ಪಕ್ಕದಲ್ಲಿರುವ ತುಂಗಾಭದ್ರಾ ನದಿಯಿಂದ ಬಂದ ನೀರು ಶೇಖರಣೆ ಮಾಡಿ ಅಲ್ಲಿಂದ ಕೂಡ್ಲಿಗಿ ತಾಲೂಕಿನ ವಿವಿಧ ಭಾಗಗಳಿಗ ನೀರು ಲಿಫ್ಟ್‌ ಆಗುತ್ತದೆ. ಸದಾ ಬರದಿಂದ ತತ್ತರಿಸುತ್ತಿದ್ದ ತಾಲೂಕಿನ ಹಳ್ಳಿಗಳಿಗೆ ಬರವನ್ನು ಮೆಟ್ಟಿ ನೆಮ್ಮದಿಯ ಬದುಕನ್ನು ಸಾಗಿಸುವ ಕಾಲ ದೂರವಿಲ್ಲ. ಈಗ್ಗೆ 1 ವರ್ಷದಿಂದ ನನೆಗುದಿಗೆ ಬಿದ್ದ ಕೊನೆಯ ಹಂತದ ಶೇ.5ರಷ್ಟು ಕಾಮಗಾರಿಗೆ ಈಗ ಪುನಃ ಚಾಲನೆ ದೊರಕಿದ್ದು, ಇನ್ನೆರಡು ತಿಂಗಳೊಳಗೆ ಮುಗಿಯಲಿದೆ.

ಕೆರೆಗಳಿಗೆ ನೀರು ಬರಲು ಈಗ ಸಲೀಸು:

3 ಕಿ.ಮೀ. ಪೈಪ್ ಲೈನ್ ಕಾಮಗಾರಿಗೆ ರೈತರಿಂದ ಪರಿಹಾರದ ವಿಚಾರವಾಗಿ ಗೊಂದಲ ಇದ್ದವು. ಈಗ ಕಾನೂನಾತ್ಮಕವಾಗಿ ಸಿಂಗಟಾಲೂರು ಏತ ನೀರಾವರಿ ಯೋಜನೆ ಅಧಿಕಾರಿಗಳು ವಿಶೇಷ ಭೂಸ್ವಾಧೀನ ಇಲಾಖೆಯಿಂದ ಬಗೆಹರಿಸಿದ್ದರಿಂದ ಈಗ ಕೂಡ್ಲಿಗಿ ತಾಲೂಕಿನ ಕೆರೆಗಳಿಗೆ ನೀರು ಸಲೀಸಾಗಿ ಬರಲಿದೆ.

ವಿದ್ಯುತ್ ಕಾಮಗಾರಿ ಸಂಪೂರ್ಣ ಮುಗಿದಿದೆ. ವಿದ್ಯುತ್ ಕ್ಯಾನಲ್ ಬೋರ್ಡ್ ಕಾಮಗಾರಿಯೂ ಮುಗಿದಿದೆ. ತುಂಗಾಭದ್ರಾ ನದಿಯಿಂದ ನೀರೆತ್ತುವ ಮೋಟರ್, ಪಂಪ್ ಸ್ಥಾಪನೆ ಕಾರ್ಯ ಮುಗಿದಿದೆ. 3 ಕಿ.ಮೀ. ಕಾಮಗಾರಿ ಮುಗಿದರೆ ಇನ್ನೇನಿದ್ದರೂ ಹಸಿರು ಸ್ವಿಚ್ ಆನ್ ಮಾಡುವುದೊಂದೇ ಬಾಕಿ ಇದೆ.

ಜೋಳದಕೂಡ್ಲಿಗಿ ಬಳಿ ಜಮೀನು ಬಿಟ್ಟು ಉಳಿದ ಜಮೀನುಗಳ ರೈತರಿಗೆ ರಾಜ್ಯ ವಿಶೇಷ ಭೂಸ್ವಾಧೀನ ಇಲಾಖೆಯಿಂದ ಈಗಾಗಲೇ ಪರಿಹಾರ ಘೋಷಣೆಯಾಗಿದೆ. ಇನ್ನು 15 ದಿನಗಳೊಳಗೆ ಪರಿಹಾರ ಹಣ ರೈತರಿಗೆ ತಲುಪಲಿದೆ. ಹಣಪಾವತಿ ಆದತಕ್ಷಣ ಕಾಮಗಾರಿ ಆರಂಭಿಸಿದರೆ ವಾರದೊಳಗೆ ಕಾಮಗಾರಿ ಮುಗಿಯಲಿದೆ. ಅಲ್ಲಿಗೆ ಕೂಡ್ಲಿಗಿ ತಾಲೂಕಿನ 80ಕ್ಕೂ ಹೆಚ್ಚು ಕೆರೆಗಳಿಗೆ ನೀರು ಬರಲು ಯಾವುದೇ ತೊಂದರೆ ಇಲ್ಲ ಎನ್ನುತ್ತಾರೆ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಇಇ ಶಿವಮೂರ್ತಿ.

Share this article