10 ರಿಂದ ವಿವಿ ಸಾಗರ ಅಚ್ಚುಕಟ್ಟು ಪ್ರದೇಶಕ್ಕೆ ನೀರು

KannadaprabhaNewsNetwork |  
Published : May 09, 2024, 12:45 AM IST
ಚಿತ್ರದುರ್ಗ ಎರಡನೇ ಪುಟದ ಲೀಡ್1 | Kannada Prabha

ಸಾರಾಂಶ

ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧ್ಯಕ್ಷತೆಯಲ್ಲಿ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ವಿವಿ ಸಾಗರದ ಅಚ್ಚು ಕಟ್ಟು ಪ್ರದೇಶದ ತೀರ್ಮಾನ ಮೇ 10 ರಿಂದ ನೀರು ಹಾಯಿಸುವ ತೀರ್ಮಾನ ಕೈಗೊಳ್ಳಲಾಯಿತು.

ಕನ್ನಡಪ್ರಭ ವಾರ್ತೆ, ಚಿತ್ರದುರ್ಗ

ಕಡು ಬೇಸಗೆಯಲ್ಲಿ ಬಾಡಿರುವ ವಿವಿ ಸಾಗರದ ಅಚ್ಚು ಕಟ್ಟು ಪ್ರದೇಶದ ತೋಟಗಾರಿಕೆ ಹಾಗೂ ಇತರೆ ಕೃಷಿ ಬೆಳೆಗಳಿಗೆ ಮೇ 10 ರಿಂದ ನೀರು ಹಾಯಿಸುವ ತೀರ್ಮಾನ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಹಾಗಾಗಿ ಮೇ 10 ರಿಂದ 25 ದಿನಗಳ ಕಾಲ ವಾಣಿ ವಿಲಾಸ ಸಾಗರ ಅಚ್ಚುಕಟ್ಟು ಪ್ರದೇಶಕ್ಕೆ ಬೇಸಿಗೆ ಹಂಗಾಮಿಗೆ ಎರಡನೇ ಹಂತದ ನೀರು ಕಾಲುವೆಯಲ್ಲಿ ಹರಿಯಲಿದೆ.

ವಾಣಿವಿಲಾಸ ಸಾಗರ ಜಲಾಶಯದ ಅಚ್ಚುಕಟ್ಟು ಪ್ರದೇಶಕ್ಕೆ 2023-24ನೇ ಸಾಲಿನಲ್ಲಿ ಅತೀ ಕಡಿಮೆ ಮಳೆಯಾಗಿರುವುದರಿಂದ, ರೈತರ ಜಮೀನುಗಳಿಗೆ ನೀರು ಹರಿಸುವುದು ಅವಶ್ಯವಿರುತ್ತದೆ. ಈ ಹಿನ್ನಲೆಯಲ್ಲಿ ವಾಣಿವಿಲಾಸ ಸಾಗರ ಜಲಾಶಯ ಅಚ್ಚುಕಟ್ಟು ಪ್ರದೇಶಕ್ಕೆ ಬೇಸಿಗೆ ಹಂಗಾಮಿಗೆ ಎರಡನೇ ಹಂತದ ನೀರು ಬಿಡುಗಡೆ ಮಾಡಲು ಸಭೆ ಸಮ್ಮತಿಸಿತು. ಹಾಗೊಂದು ವೇಳೆ ಮಳೆ ಬಂದಲ್ಲಿ ನೀರನ್ನು ಸ್ಥಗಿತಗೊಳಿಸಲು ಸಭೆ ಒಪ್ಪಿಗೆ ಸೂಚಿಸಿತು.

ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾತನಾಡಿ, ಬರಗಾಲ ಹಾಗೂ ಬೇಸಿಗೆಯ ಈ ಸಂದರ್ಭದಲ್ಲಿ ವಿವಿ ಸಾಗರ ಅಚ್ಚುಕಟ್ಟು ಪ್ರದೇಶದ ರೈತರು ಮುತುವರ್ಜಿ ವಹಿಸಿ ನೀರು ಸದ್ಬಳಕೆ ಮಾಡಿಕೊಳ್ಳಬೇಕು. ಅನಾವಶ್ಯಕವಾಗಿ ನೀರು ವ್ಯರ್ಥ ಮಾಡಬಾರದು. ಎಲ್ಲಿ ಅಗತ್ಯ ಹಾಗೂ ಅನಿವಾರ್ಯ ಇರುವ ಕಡೆ ಮಾತ್ರ ನೀರು ಬಳಕೆ ಮಾಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಬೀಳು ಭೂಮಿಗೆ ನೀರು ಹರಿಸಬಾರದು. ಅನಾವಶ್ಯಕವಾಗಿ ನೀರು ವ್ಯರ್ಥ ಮಾಡುವುದು ಕಂಡು ಬಂದರೆ ನೀರು ಸ್ಥಗಿತಗೊಳಿಸಲಾಗುವುದು ಎಂದು ಎಚ್ಚರಿಸಿದರು. ಟ್ಯಾಂಕರ್ ಮೂಲಕ ವಾಣಿಜ್ಯ ಉದ್ದೇಶಕ್ಕಾಗಿ ನೀರು ಮಾರಾಟ ಮಾಡಬಾರದು. ಒಂದು ವೇಳೆ ವಾಣಿಜ್ಯ ಬಳಕೆಗಾಗಿ ನೀರು ಬಳಕೆ ಮಾಡುವುದು ಕಂಡು ಬಂದರೆ ಸಂಬಂಧಪಟ್ಟವರ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗುವುದು ಎಂದು ಎಚ್ಚರಿಸಿದರು.

ಕಾಲುವೆಗಳಿಗೆ ನೀರು ಹರಿಸುವ ಮುನ್ನ ಅಚ್ಚುಕಟ್ಟು ಪ್ರದೇಶದಲ್ಲಿನ ಬೋರ್‌ವೆಲ್‌ಗಳಲ್ಲಿ ನೀರಿನ ಮಟ್ಟ ಹಾಗೂ ನೀರು ಹರಿಸಿದ ನಂತರದ ನೀರಿನ ಮಟ್ಟದ ಕುರಿತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಸಮೀಕ್ಷೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.

ಮೇ 8ರಂದು ವಿವಿ ಸಾಗರ ಜಲಾಶಯದಲ್ಲಿ 112 ಅಡಿಗಳಷ್ಟು ನೀರಿನ ಸಂಗ್ರಹವಿದ್ದು, ಈ ಮಟ್ಟಕ್ಕೆ ನೀರಿನ ಸಂಗ್ರಹಣೆಯು 16.96 ಟಿಎಂಸಿಗಳಾಗಿದ್ದು, ಇದರಲ್ಲಿ 1.87 ಟಿಎಂಸಿ ಬಳಕೆಗೆ ಬಾರದ ಪ್ರಮಾಣವಾಗಿರುತ್ತದೆ ಹಾಗೂ ಬಳಕೆಗೆ ಬರುವ ನೀರಿನ ಪ್ರಮಾಣ 15.09 ಟಿಎಂಸಿ ಇರುತ್ತದೆ. ಹಿರಿಯೂರು , ಚಿತ್ರದುರ್ಗ, ಚಳ್ಳಕೆರೆ ಪಟ್ಟಣ, ಡಿಆರ್ ಡಿಓ ಸಂಶೋಧನಾ ಕೇಂದ್ರಗಳು ಹಾಗೂ 18 ಹಳ್ಳಿಗಳ ಕುಡಿಯುವ ನೀರಿಗಾಗಿ ಒಟ್ಟು 0.2115 ಟಿಎಂಸಿ ಅವಶ್ಯಕವಾಗಿರುತ್ತದೆ ಎಂದು ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

ಹಾಲಿ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಜಲಾಶಯದಿಂದ ನೀರನ್ನು 30 ದಿನ ಹರಿಸಿದರೆ ಸರಾಸರಿ ನೀರಿನ ಪ್ರಮಾಣ ಸುಮಾರು 1.40 ಟಿಎಂಸಿ ಬೇಕಾಗಲಿದೆ. ಮೇಲ್ಮಟ್ಟದ ಕಾಲುವೆ ಅಚ್ಚುಕಟ್ಟು ಪ್ರದೇಶದ 3 ಗ್ರಾಮಗಳು, ಬಲನಾಲ ಅಚ್ಚುಕಟ್ಟು ಪ್ರದೇಶದ 21 ಗ್ರಾಮಗಳು ಹಾಗೂ ಎಡನಾಲ ಅಚ್ಚುಕಟ್ಟು ಪ್ರದೇಶದ 18 ಗ್ರಾಮಗಳು ಹಾಗೂ ನಾಲೆಗಳಲ್ಲಿ ನೀರನ್ನು ಬಿಟ್ಟಾಗ ಹಿರಿಯೂರು ತಾಲ್ಲೂಕಿನ 38 ಗ್ರಾಮಗಳ ಅಂತರ್ಜಲ ಅಭಿವೃದ್ಧಿಯಾಗಿ ಸಾರ್ವಜನಿಕರಿಗೆ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಯನ್ನೂ ಸಹ ಸುಧಾರಿಸಬಹುದಾಗಿದೆ ಎಂದು ವಿಶ್ವೇಶ್ವರಯ್ಯ ಜಲನಿಗಮದ ವಿವಿ ಸಾಗರ ಉಪವಿಭಾಗ ಹಿರಿಯೂರು ಕಾರ್ಯಪಾಲಕ ಇಂಜಿನಿಯರ್ ಬಾರಿಕರ್ ಚಂದ್ರಪ್ಪ ಮಾಹಿತಿ ನೀಡಿದರು.ಚಳ್ಳಕೆರೆ, ಪರಶುರಾಂಪುರಕ್ಕೆ ಪೈಪ್‌ ಮೂಲಕ ನೀರು ಕೊಡಿ

ಚಳ್ಳಕೆರೆ, ಪರಶುರಾಂಪುರ ಪ್ರದೇಶಕ್ಕೆ ವಿವಿ ಸಾಗರದಿಂದ ತೊರೆಗೆ ನೀರು ಹಾಯಿಸದೆ ನೇರವಾಗಿ ಪೈಪ್ ಲೈನ್ ಮೂಲಕ ಕೊಡುವ ವ್ಯವಸ್ಥೆ ಮಾಡಬೇಕೆಂದು ನೀರಾವರಿ ಸಲಹಾ ಸಮಿತಿ ಸದಸ್ಯ ಸುಂದರೇಶ್ ಮನವಿ ಮಾಡಿದರು. ಸಹಾಯ ಕಾರ್ಯಪಾಲಕ ಇಂಜಿನಿಯರ್ ವಿಜಯಕುಮಾರ್, ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕ ಎಂ.ವಿ.ಮಂಜುನಾಥ್, ಶಿರಸ್ತೆದಾರ ಸಣ್ಣಪ್ಪ, ವಿವಿ ಸಾಗರ ಜಲಾಶಯದ ನೀರಾವರಿ ಸಲಹಾ ಸಮಿತಿ ಸದಸ್ಯರಾದ ಅಸಿಲ್ ಆಲಿ, ಅನಿಲ್ ಕುಮಾರ್, ನಾಗರಾಜ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು