ಕುಷ್ಟಗಿಯಲ್ಲಿ ದುರಸ್ತಿಗೆ ಕಾದಿರುವ ನೀರಿನ ಘಟಕಗಳು

KannadaprabhaNewsNetwork |  
Published : Apr 01, 2026, 02:30 AM IST
ಪೋಟೊ31ಕೆಎಸಟಿ2: ಕುಷ್ಟಗಿ ಪಟ್ಟಣದ ಸಂದೀಪ ನಗರದಲ್ಲಿರುವ ಶುದ್ದ ಕುಡಿವ ನೀರಿನ ಘಟಕದ ಸುತ್ತಲೂ ಮುಳ್ಳುಕಂಟಿಗಳು ಬೆಳೆದು ನಿಂತಿರುವದು.31ಕೆಎಸಟಿ2ಎ: ಕುಷ್ಟಗಿ ಪಟ್ಟಣದ ತಹಸೀಲ್ದಾರ ಕಾರ್ಯಾಲಯದ ಆವರಣದಲ್ಲಿ ಕೆಟ್ಟು ನಿಂತಿರುವ ಶುದ್ದ ಕುಡಿವ ನೀರಿನ ಘಟಕ | Kannada Prabha

ಸಾರಾಂಶ

ಸಂದೀಪ ನಗರದಲ್ಲಿ ಸ್ಥಾಪಿಸಿರುವ ಶುದ್ಧ ಕುಡಿಯುವ ನೀರಿನ ಘಟಕದ ಸುತ್ತಮುತ್ತಲೂ ಮುಳ್ಳಿನ ಗಿಡ ಬೆಳೆದು ನಿಂತಿದ್ದರೂ ಸ್ವಚ್ಛತೆಗೆ ಕ್ರಮ ಕೈಗೊಂಡಿಲ್ಲ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಪರಶಿವಮೂರ್ತಿ ಮಾಟಲದಿನ್ನಿ ಕುಷ್ಟಗಿ

ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಸ್ಥಾಪಿಸಲಾದ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ನಿಂತಿವೆ. ನಿರ್ವಹಣೆ ಕೊರತೆಯಿಂದ ಜನರಿಗೆ ಶುದ್ಧ ನೀರು ಲಭ್ಯವಾಗದಂತಾಗಿದೆ.

ಪಟ್ಟಣದಲ್ಲಿ 7 ಶುದ್ಧ ಕುಡಿಯುವ ನೀರಿನ ಘಟಕ ಇದ್ದು, ಈ ಪೈಕಿ 5 ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತಗೊಂಡಿವೆ. 1 ಘಟಕ ಸುಸ್ಥಿತಿಯಲ್ಲಿಲ್ಲ, ಇನ್ನೊಂದು ಘಟಕ ನೆಲಸಮಗೊಳಿಸಲಾಗಿದೆ.

ಶಾಸಕ ದೊಡ್ಡನಗೌಡ ಪಾಟೀಲ 2013, 2014-15ನೇ ಸಾಲಿನಲ್ಲಿ ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಯೋಜನೆಯಡಿ ನೀರಿನ ಘಟಕಗಳನ್ನು ನಿರ್ಮಿಸಿದ್ದು, ಪುರಸಭೆ ನಿರ್ವಹಣೆ ಜವಾಬ್ದಾರಿ ನಿರ್ವಹಿಸದ ಪರಿಣಾಮ ಯಂತ್ರಗಳಿಗೆ ತುಕ್ಕು ಹಿಡಿದಿದೆ. ಘಟಕಗಳ ಸುತ್ತಮುತ್ತಲೂ ಮುಳ್ಳಿನ ಕಂಟಿ ಬೆಳೆದು ನಿಂತಿದೆ.

ಮುಳ್ಳಿನ ಪೊದೆಯಲ್ಲಿ ಘಟಕ:

ಪಟ್ಟಣದ ಸಂದೀಪ ನಗರದಲ್ಲಿ ಸ್ಥಾಪಿಸಿರುವ ಶುದ್ಧ ಕುಡಿಯುವ ನೀರಿನ ಘಟಕದ ಸುತ್ತಮುತ್ತಲೂ ಮುಳ್ಳಿನ ಗಿಡ ಬೆಳೆದು ನಿಂತಿದ್ದರೂ ಸ್ವಚ್ಛತೆಗೆ ಕ್ರಮ ಕೈಗೊಂಡಿಲ್ಲ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಎಲ್ಲೆಲ್ಲಿ ಘಟಕ?: ಕುಷ್ಟಗಿ ಸಾರ್ವಜನಿಕ ತಾಲೂಕಾಸ್ಪತ್ರೆ ಆವರಣ, ಕೃಷ್ಣಗಿರಿ ಕಾಲನಿ, ತಹಸೀಲ್ದಾರ್‌ ಕಾರ್ಯಾಲಯ, ಸಂದೀಪ ನಗರ, ಶಾದಿ ಮಹಲ್ ಹತ್ತಿರ, ಐದನೇ ವಾರ್ಡ್ ಸೇರಿದಂತೆ ವಿವಿಧೆಡೆ ಸ್ಥಾಪಿಸಿದ ನೀರಿನ ಘಟಕ ಹಾಳಾಗುತ್ತಿದ್ದರೂ ಪುರಸಭೆ ಮೌನವಹಿಸಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಹೆಚ್ಚಿದ ನೀರಿನ ಬೇಡಿಕೆ: ಬೇಸಿಗೆ ಪ್ರಾರಂಭದಿಂದ ಕುಡಿಯುವ ನೀರಿಗೆ ಬೇಡಿಕೆ ಹೆಚ್ಚಾಗಿದ್ದು, ಇತ್ತ ಶುದ್ಧೀಕರಣ ಘಟಕ ಸ್ಥಗಿತಗೊಂಡಿವೆ. ಹೀಗಾಗಿ ಜೀವಜಲಕ್ಕಾಗಿ ಜನರು ಪರದಾಡುವಂತಾಗಿದ್ದು, ತಕ್ಷಣ ಸಂಬಂಧಿಸಿದ ಅಧಿಕಾರಿಗಳು ದುರಸ್ತಿಗೆ ಮುಂದಾಗಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಖಾಸಗಿ ಘಟಕಗಳ ಸ್ಥಾಪನೆ: ಕುಷ್ಟಗಿ ಪಟ್ಟಣದ ಸಾರ್ವಜನಿಕ ಶುದ್ಧ ನೀರಿನ ಘಟಕ ಕಾರ್ಯನಿರ್ವಹಿಸದ ಹಿನ್ನೆಲೆಯಲ್ಲಿ ಕೆಲವರು ಖಾಸಗಿ ಘಟಕ ನಿರ್ಮಿಸಿ ಲಾಭ ಮಾಡಿಕೊಳ್ಳುತ್ತಿದ್ದಾರೆ. ಖಾಸಗಿ ಘಟಕಗಳಲ್ಲಿ ನಿತ್ಯ ಸಾವಿರಾರು ಲೀಟರ್ ನೀರು ಮಾರಾಟ ಮಾಡಲಾಗುತ್ತಿದೆ.

ಕುಷ್ಟಗಿ ಪಟ್ಟಣದಲ್ಲಿರುವ ಬಹುತೇಕ ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿ ಕಾರ್ಯದಲ್ಲಿದೆ. ಅದಕ್ಕೆ ಸಂಬಂಧಿಸಿದಂತೆ ಪತ್ರ ವ್ಯವಹಾರ ಕೂಡ ನಡೆದಿದೆ. ಶೀಘ್ರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸಲಾಗುತ್ತದೆ ಎಂದು ಕುಷ್ಟಗಿ ಪುರಸಭೆ ಕೇಸ್ ವರ್ಕರ್ ಮಂಜುನಾಥ ತಿಳಿಸಿದ್ದಾರೆ.

ಕುಷ್ಟಗಿ ಪಟ್ಟಣದಲ್ಲಿ ಕೆಟ್ಟು ನಿಂತಿರುವ ನೀರಿನ ಘಟಕಗಳ ದುರಸ್ತಿಗಾಗಿ ಅನೇಕ ಬಾರಿ ಮನವಿ ನೀಡಿದರೂ ಪ್ರಯೋಜನವಾಗಿಲ್ಲ, ಅಧಿಕಾರಿಗಳು ಸೂಕ್ತ ಕ್ರಮಕ್ಕೆ ಮುಂದಾಗಬೇಕಿದೆ ಎಂದು ಗಾಂಧಿ ನಗರದ ನಿವಾಸಿ ಮುತ್ತುರಾಜ ಕಟ್ಟಿಮನಿ ತಿಳಿಸಿದ್ದಾರೆ.

ಸರ್ಕಾರ ಜನರ ಆರೋಗ್ಯದ ಹಿತದೃಷ್ಟಿಯಿಂದ ಕುಷ್ಟಗಿ ಪಟ್ಟಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಿದೆ, ಆದರೆ ಪುರಸಭೆಯ ನಿರ್ವಹಣೆ ಕೊರತೆಯಿಂದ ಘಟಕಗಳು ಕೆಟ್ಟು ನಿಂತಿವೆ. ಖಾಸಗಿ ಘಟಕಗಳಿಗೆ ದುಬಾರಿ ಹಣ ಕೊಟ್ಟು ಶುದ್ದ ನೀರು ತರಬೇಕಿದೆ.ಅಧಿಕಾರಿಗಳು ತಕ್ಷಣ ದುರಸ್ತಿ ಮಾಡಿ, ಸಾರ್ವಜನಿಕ ಬಳಕೆಗೆ ಒದಗಿಸಬೇಕು ಎಂದು ಸ್ಥಳೀಯ ನಿವಾಸಿ ಬಸವರಾಜ ಗಾಣಿಗೇರ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

(ಮಸ್ಟ್) ಸಮರ್ಪಕ ಅನಿಲ ವಿತರಣೆ: ಸಂಸದ ಕೋಟ ಸೂಚನೆ
ಮನೆಯಿಂದ 15 ಲಕ್ಷ ರು. ಮೌಲ್ಯದ ಚಿನ್ನ ಕಳ್ಳತನ: ಆರೋಪಿ ಸೆರೆ