ಅಧಿಕಾರಿಗಳು ಆಹ್ವಾನಿಸಿಲ್ಲವೆಂದು ಪೂರ್ವಭಾವಿ ಸಭೆಗೆ ಮುಖಂಡರ ಬಹಿಷ್ಕಾರ

KannadaprabhaNewsNetwork |  
Published : Apr 01, 2026, 02:15 AM IST
ಗಜೇಂದ್ರಗಡ ಪುರಸಭೆಯಲ್ಲಿ ನಡೆದ ಡಾ.ಬಾಬು ಜಗಜೀವನರಾಮ್ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳು. | Kannada Prabha

ಸಾರಾಂಶ

ರೋಣ ತಹಸೀಲ್ದಾರ್ ನಾಗರಾಜ ಮಾತನಾಡಿ, ಪಟ್ಟಣದಲ್ಲಿ ತಾಲೂಕು ಮಟ್ಟದಲ್ಲಿ ಡಾ. ಬಾಬು ಜಗಜೀವನರಾಂ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಆಚರಣೆಯ ಪೂರ್ವಭಾವಿ ಸಭೆಗೆ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸದ್ದು ಕಂಡುಬಂದಿದೆ ಎಂದರು.

ಗಜೇಂದ್ರಗಡ: ಡಾ. ಬಾಬು ಜಗಜೀವನರಾಂ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಹಿನ್ನೆಲೆ ಪಟ್ಟಣದ ಪುರಸಭೆ ಸಭಾಭವನದಲ್ಲಿ ಮಂಗಳವಾರ ನಡೆದ ಪೂರ್ವಭಾವಿ ಸಭೆಗೆ ತಾಲೂಕಿನ ಸಮಾಜದ ಮುಖಂಡರು ಮತ್ತು ಸಂಘಟನೆಗಳ ಮುಖಂಡರನ್ನು ಅಧಿಕಾರಿಗಳು ಆಹ್ವಾನಿಸಿಲ್ಲ ಎಂದು ಸಭೆಯನ್ನು ಬಹಿಷ್ಕರಿಸಲಾಗಿದೆ.

ಪಟ್ಟಣದ ಪುರಸಭೆ ಸಭಾಭವನದಲ್ಲಿ ರೋಣ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ದೇಶವನ್ನು ಸುಭದ್ರವಾಗಿ ನಿರ್ಮಿಸುವಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ ಡಾ. ಬಾಬು ಜಗಜೀವನರಾಮ್ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಬೇಕು ಎಂಬುದು ಪ್ರತಿಯೊಬ್ಬರ ಆಶಯ. ಆದರೆ ಮಂಗಳವಾರ ನಡೆದ ಪೂರ್ವಭಾವಿ ಸಭೆಗೆ ತಾಲೂಕಿನ ೧೧ ಗ್ರಾಪಂ ವ್ಯಾಪ್ತಿಗಳ ಸಮಾಜದ ಮುಖಂಡರು ಹಾಗೂ ವಿವಿಧ ದಲಿತಪರ ಮತ್ತು ಕನ್ನಡಪರ ಸಂಘಟನಗಳ ಮುಖಂಡರಿಗೆ ಮಾಹಿತಿ ನೀಡಿಲ್ಲ.

ಪರಿಣಾಮ ಸಭೆಯಲ್ಲಿ ಮುಖಂಡರಿಗಿಂತ ಅಧಿಕಾರಿಗಳ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಜಯಂತಿ ಆಚರಣೆ ಕುರಿತು ಅಧಿಕಾರಿಗಳೇ ನಿರ್ಧಾರ ಮಾಡಿ, ನಿಮಗೆ ತಿಳಿದಂತೆ ಆಚರಣೆಯನ್ನು ಮಾಡಿಕೊಳ್ಳಿ ಅಥವಾ ಮಹನೀಯರ ಜಯಂತಿ ಆಚರಣೆಗೆ ಮತ್ತೊಮ್ಮೆ ಪೂರ್ವಭಾವಿ ಸಭೆಯನ್ನು ಕರೆಯಲು ಸಂಬಂಧಿಸಿದ ಅಧಿಕಾರಿಗಳಿಗೆ ತಾಕೀತು ಮಾಡಿ ಎಂದು ಮುಖಂಡರು ಆಗ್ರಹಿಸಿ ಪೂರ್ವಭಾವಿ ಸಭೆಗೆ ಬಹಿಷ್ಕಾರವಿದೆ ಎಂದರು.

ರೋಣ ತಹಸೀಲ್ದಾರ್ ನಾಗರಾಜ ಮಾತನಾಡಿ, ಪಟ್ಟಣದಲ್ಲಿ ತಾಲೂಕು ಮಟ್ಟದಲ್ಲಿ ಡಾ. ಬಾಬು ಜಗಜೀವನರಾಂ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಆಚರಣೆಯ ಪೂರ್ವಭಾವಿ ಸಭೆಗೆ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸದ್ದು ಕಂಡುಬಂದಿದೆ.

ಹೀಗಾಗಿ ಸಂಬಂಧಿಸಿದ ಅಧಿಕಾರಿಗಳಿಗೆ ನೋಟಿಸ್ ನೀಡುವುದರ ಜತೆಗೆ ಮುಂದಿನ ದಿನಗಳಲ್ಲಿ ಇಂತಹ ಘಟನೆ ಪುನರಾವರ್ತನೆ ಆಗದಂತೆ ಎಚ್ಚರಿಕೆ ವಹಿಸುವಂತೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಆದೇಶಿಸುವುದಾಗಿ ತಿಳಿಸಿದ ಅವರು, ಗಣ್ಯರ ಜಯಂತಿಗೆ ಸಂಬಂಧಿಸಿದಂತೆ ಏ. ೪ರಂದು ಮತ್ತೆ ಪೂರ್ವಭಾವಿ ಸಭೆಯನ್ನು ಕರೆದು ಚರ್ಚಿಸಿ ಜಯಂತಿ ಆಚರಣೆ ಕುರಿತು ಒಮ್ಮತದ ನಿರ್ಧಾರ ಕೈಗೊಳ್ಳಲಾಗುವುದು.

ಏ. ೫ರಂದು ಡಾ. ಬಾಬು ಜಗಜೀವನರಾಂ ಜಯಂತಿಯನ್ನು ಸಾಂಕೇತಿವಾಗಿ ಆಚರಿಸಲಾಗುವುದು. ಪೂರ್ವಭಾವಿ ಸಭೆಯಲ್ಲಿ ಕೈಗೊಳ್ಳುವ ನಿರ್ಧಾರದಂತೆ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಡಾ. ಬಾಬು ಜಗಜೀವನರಾಂ ಇಬ್ಬರು ಮಹನೀಯರ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲು ಆಡಳಿತ ಸಿದ್ಧವಾಗಿದೆ ಎಂದರು.

ಪಟ್ಟಣದಲ್ಲಿ ನಡೆಯುವ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಡಾ. ಬಾಬು ಜಗಜೀವನರಾಮ್ ಅವರ ತಾಲೂಕು ಮಟ್ಟದ ಜಯಂತಿ ಆಚರಣೆಯನ್ನು ಪೂರ್ವಭಾವಿ ಸಭೆಯಲ್ಲಿ ಕೈಗೊಳ್ಳುವ ನಿರ್ಧಾರದಂತೆ ಆಚರಿಸಬೇಕು. ಕಳೆದ ವರ್ಷ ಹೇಳಿದ್ದು ಒಂದು, ಮಾಡಿದ್ದು ಇನ್ನೊಂದು. ಹೀಗಾಗಿ ಈ ವರ್ಷದ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ತಾಲೂಕಾಡಳಿತ ಮುಂದಾಗಬೇಕು ಎಂದು ಮುಖಂಡರು ಆಗ್ರಹಿಸಿದರು.ತಹಸೀಲ್ದಾರ್ ನಾಗರಾಜ ಕೆ, ಸಿಪಿಐ ವಿಜಯಕುಮಾರ, ಸಮಾಜ ಕಲ್ಯಾಣ ಇಲಾಖೆಯ ಜಿ.ಟಿ. ಆಲೂರ, ತಾಪಂ ಇಒ ಸುಭಾಸ ಕಂದಕೂರ, ಮುಖ್ಯಾಧಿಕಾರಿ ಬಸವರಾಜ ಬಳಗಾನೂರ, ಪಿಎಸ್‌ಐ ಪ್ರಕಾಶ ಡಿ, ಉಪನೋಂದಣಾಧಿಕಾರಿ ವಿರೂಪಾಕ್ಷಯ್ಯ ಚೌಕಿಮಠ, ಮುಖಂಡರಾದ ಬಸವರಾಜ ಬಂಕದ, ಡಿ.ಜಿ. ಕಟ್ಟಿಮನಿ, ಅಂದಪ್ಪ ರಾಠೋಡ, ಚಂದ್ರು ರಾಠೋಡ, ಹನುಮಂತ ಪೂಜಾರ, ದುರಗೇಶ ಹಿರೇಮನಿ, ಮಾರುತಿ ಹಾದಿಮನಿ, ಅಶೋಕ ಮಾದರ, ಶರಣು ದೊಡ್ಡಮನಿ ಸೇರಿ ಹೆಸ್ಕಾಂ, ಆರೋಗ್ಯ, ಕೃಷಿ, ತೋಟಗಾರಿಕೆ ಇಲಾಖೆ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಿಕ್ಕವಡ್ಡಟ್ಟಿಯ ಗಲಾಟೆ ಮರುಕಳಿಸದಿರಲಿ: ಡಾ. ನಂದಾ ಹಣಬರಟ್ಟಿ
ಹಡಪದ ಸಮಾಜ ಶಿಕ್ಷಣಕ್ಕೆ ಆದ್ಯತೆ ನೀಡಲಿ: ಮಾಜಿ ಸಚಿವ ಕಳಕಪ್ಪ ಬಂಡಿ