ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ತಾಲೂಕಿನ ಯಲಗೋಡ ಗ್ರಾಮ ಪಂಚಾಯತಿಯಲ್ಲಿ ವಾಟರ್‌ಮನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಗ್ರಾಮದ ತಿಪ್ಪಣ್ಣ ದುರ್ಗಪ್ಪ ಮಾದರ(50) ಮೃತ ಪಟ್ಟಿದ್ದಾರೆ. ಪತ್ನಿ ನೀಡಿರುವ ದೂರಿನ ಮೇರೆಗೆ ಕಲಕೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮೃತರಿಗೆ ತಾಯಿ, ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು-ಬಳಗವಿದೆ.ಯಲಗೋಡ ಗ್ರಾಮದಿಂದ ವಂದಾಲ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿರುವ ಪಂಪ ಹೌಸ್‌ನಲ್ಲಿ ಕುಡಿಯುವ ನೀರಿನ ಬೋರ್‌ವೆಲ್ ಚಾಲು ಮಾಡಲು ಹೋಗಿದ್ದ ವಾಟರ್‌ಮನ್ ತಿಪ್ಪಣ್ಣ ಮಾದರ ಅವರಿಗೆ ವಿದ್ಯುತ್ ತಗುಲಿ ಸ್ಥಳದಲ್ಲಿ ಮೃತಪಟ್ಟಿದ್ದಾರೆ. ವಾಟರ್‌ಮನ್‌ತಿಪ್ಪಣ್ಣ ಮಾದರ ಸಾವಿಗೆ ಸರ್ಕಾರದಿಂದ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಬೇಕೆಂದು ಗ್ರಾಮದ ಮುಖಂಡ ಹುಯೋಗಿ ತಳ್ಳೊಳ್ಳಿ ನೇತೃತ್ವದಲ್ಲಿ ಗ್ರಾಮಸ್ಥರು ಸ್ಥಳದಲ್ಲಿ ಶವವಿಟ್ಟು ಪ್ರತಿಭಟನೆ ನಡೆಸಿದರು.
ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು, ತಾಲೂಕು ಪಂಚಾಯತಿ ಇಒ ಸ್ಥಳಕ್ಕೆ ಆಗಮಿಸುವವರೆಗೆ ಸ್ಥಳದಿಂದ ಕದಲುವುದಿಲ್ಲವೆಂದು ಪಟ್ಟು ಹಿಡಿದರು. ಸ್ಥಳಕ್ಕೆ ತಾಲೂಕು ಪಂಚಾಯತಿ ಇಒ ಭಾರತಿ ಚೆಲುವಯ್ಯ ಹಾಗೂ ಪಿಡಿಒ ಭೇಟಿ ನೀಡಿ ಸರ್ಕಾರದಿಂದ ಪರಿಹಾರವನ್ನು ಕುಟುಂಬಕ್ಕೆ ಒದಗಿಸುವ ಭರವಸೆ ನೀಡಿದ್ದರಿಂದ ಸಂಜೆ ವೇಳೆಗೆ ಶವವನ್ನು ಕಲಕೇರಿ ಆಸ್ಪತ್ರೆಗೆ ತೆಗೆದುಕೊಂಡು ಹೋದರು. ಕಲಕೇರಿ ಪೊಲೀಸ್ ಠಾಣೆ ಪಿಎಸೈ ಪ್ರಕಾಶ ಸೇರಿದಂತೆ ಪೊಲೀಸ್ ಸಿಬ್ಬಂದಿ ಇದ್ದರು.