ಮಹಿಷವಾಡಗಿ ಸೇತುವೆ ಕಾಮಗಾರಿಗೆ ಭಗೀರಥ ಯತ್ನ

KannadaprabhaNewsNetwork |  
Published : May 29, 2026, 02:45 AM IST
ರಬಕವಿ-ಬನಹಟ್ಟಿ ತಾಲೂಕಿನ ಮಹಿಷವಾಡಗಿ ಸೇತುವೆ ಕಾಮಗಾರಿ ಬಗ್ಗೆ ತುರ್ತು ಸಭೆಯಲ್ಲಿ ಸಿದ್ದು ಕೊಣ್ಣೂರ ಮಾತನಾಡಿದರು. | Kannada Prabha

ಸಾರಾಂಶ

ರಬಕವಿ-ಮಹಿಷವಾಡಗಿ ಸೇತುವೆ ಕಾಮಗಾರಿಯ ನದಿಯೊಳಗಿನ ಫಿಲ್ಲರ್‌ ನಂ.7 ಮತ್ತು 8ರ ಕಾಮಗಾರಿಗೆ ಭಗೀರಥ ಪ್ರಯತ್ನ ನಡೆಯುತ್ತಿದ್ದು, ಬುಧವಾರ ರಾತ್ರಿ ಬನಹಟ್ಟಿಯ ಭದ್ರನ್ನವರ ಸಮುದಾಯ ಭವನದಲ್ಲಿ ಸಾರ್ವಜನಿಕರ ತುರ್ತು ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ರಬಕವಿ-ಮಹಿಷವಾಡಗಿ ಸೇತುವೆ ಕಾಮಗಾರಿಯ ನದಿಯೊಳಗಿನ ಫಿಲ್ಲರ್‌ ನಂ.7 ಮತ್ತು 8ರ ಕಾಮಗಾರಿಗೆ ಭಗೀರಥ ಪ್ರಯತ್ನ ನಡೆಯುತ್ತಿದ್ದು, ಬುಧವಾರ ರಾತ್ರಿ ಬನಹಟ್ಟಿಯ ಭದ್ರನ್ನವರ ಸಮುದಾಯ ಭವನದಲ್ಲಿ ಸಾರ್ವಜನಿಕರ ತುರ್ತು ಸಭೆ ನಡೆಯಿತು.ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಮಾತನಾಡಿ, ನದಿಯೊಳಗಿನ ಪಿಲ್ಲರ್ ನಂ.೭ ಮತ್ತು ೮ರ ಕಾಮಗಾರಿ ನದಿಯೊಳಗೆ ನಡೆಸಬೇಕಿದೆ. ನೀರಿನ ಪ್ರಮಾಣ ಕಡಿಮೆಯಾಗದ ಕಾರಣ ಕಾಮಗಾರಿ ವಿಳಂಬವಾಗುತ್ತಿದೆಯೆಂದರು. ಇದಕ್ಕೆ ಪ್ರತಿಯಾಗಿ ನೆರೆದಿದ್ದ ರಬಕವಿ-ಬನಹಟ್ಟಿ ಹಿರಿಯರು ನದಿಯೊಳಗಿರುವ ನೀರನ್ನು ತುರ್ತು ಖಾಲಿ ಮಾಡುವ ವ್ಯವಸ್ಥೆಗೆ ನದಿ ದಡದಲ್ಲಿನ ರೈತರ ಪಂಪ್‌ಸೆಟ್‌ಗಳಿಗೆ ಇಡೀ ದಿನ ವಿದ್ಯುತ್ ಕಲ್ಪಿಸುವುದರೊಂದಿಗೆ ನದಿಯೊಳಗಿರುವ ಆರೇಳು ಅಡಿಯಷ್ಟು ನೀರನ್ನು ಖಾಲಿ ಮಾಡಿಸಬೇಕೆಂದರು.

ರಬಕವಿ-ಬನಹಟ್ಟಿ-ಹೊಸೂರ-ರಾಮಪೂರ ಜನತೆಯ ಸಹಮತವಿದ್ದರೆ ಈ ಕಾರ್ಯವಾಗುವುದು. ಆದರೆ ಇದರಿಂದ ಅವಳಿ ನಗರಕ್ಕೆ ನೀರಿನ ಅಭಾವ ಸೃಷ್ಟಿಯಾಗುವ ಸಾಧ್ಯತೆ ಹೆಚ್ಚು. ಸಹಕರಿಸಿದಲ್ಲಿ ಅಧಿಕಾರಿಗಳ ತಂಡ ಸಾರ್ವಜನಿಕರ ಹಿತಾಸಕ್ತಿಗೋಸ್ಕರ ಮುನ್ನಡೆಯುತ್ತದೆಯೆಂದು ಕೊಣ್ಣೂರ ಉತ್ತರಿಸಿದರು.

ಒಪ್ಪಿಗೆ ಪತ್ರ ಮುಖ್ಯ : ಉಪವಿಭಾಗಾಧಿಕಾರಿ ಶ್ವೇತಾ ಬೀಡೀಕರ ಮಾತನಾಡಿ, ಸೇತುವೆ ಕಾಮಗಾರಿ ಮಹತ್ವದ್ದು, ಎಂದಾಗಿರುವ ತಾಲೂಕಿನ ಜನತೆಗೆ ಅಷ್ಟೇ ಮಹತ್ವದ್ದು ಕುಡಿಯುವ ನೀರಿನ ಪೂರೈಕೆಯಾಗಿದೆ. ಎಲ್ಲರ ಸಹಮತದೊಂದಿಗೆ ನದಿಯೊಳಗಿನ ನೀರು ಕಡಿಮೆಯಾಗಲು ಸಹಕಾರ ತೋರುವಲ್ಲಿ ರಬಕವಿ-ಬನಹಟ್ಟಿ ನಗರಸಭೆ ವ್ಯಾಪ್ತಿಯ ಎಲ್ಲರ ಒಪ್ಪಿಗೆಯನ್ನು ಲಿಖಿತ ರೂಪದಲ್ಲಿ ಒದಗಿಸಿದ್ದಲ್ಲಿ ಮೇಲಧಿಕಾರಿಗಳೊಂದಿಗೆ ತುರ್ತು ಚರ್ಚಿಸಿ ಸಹಕರಿಸಲಾಗುವದೆಂದು ತಿಳಿಸಿದರು.

ವೇದಿಕೆ ಮೇಲೆ ತಹಶೀಲ್ದಾರ್‌ ಗಿರೀಶ ಸ್ವಾದಿ, ಸಿಪಿಐ ರಾಜು ಪಾಟೀಲ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ದಾನಪ್ಪ ಹುಲಜತ್ತಿ, ಪೌರಾಯುಕ್ತ ಮಹಾಂತೇಶ ಬೀಳಗಿ, ಮಾಸ್ತಿ, ರಾಮಣ್ಣ ಹುಲಕುಂದ, ಡಾ. ರವಿ ಜಮಖಂಡಿ, ಭೀಮಶಿ ಮಗದುಮ್, ಬಸವರಾಜ ತೆಗ್ಗಿ, ಕೃಷ್ಣಾ ಲೆಂಡಿ, ಸಂಜೀವ ಜೋತಾವರ, ಶಂಕರ ಸೊರಗಾಂವಿ, ಶಂಕರ ಜುಂಜಪ್ಪನವರ, ರಾಜೇಂದ್ರ ಭದ್ರನ್ನವರ, ಸಿದ್ರಾಮ ಸವದತ್ತಿ ಸೇರಿದಂತೆ ಅನೇಕರಿದ್ದರು.

ತಾಲೂಕಾಡಳಿತ, ಪೊಲೀಸ್, ನಗರಸಭೆ, ಹೆಸ್ಕಾಂ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳ ತಂಡ ಹಾಜರಿತ್ತು.

ಕೃಷ್ಣಾ ನದಿ ಹಳೆ ಸೇತುವೆಗೂ ಮುನ್ನದ ಜಾಗೆಯಲ್ಲಿ ಯಂತ್ರೋಪಕರಣಗಳು, ವಾಹನಗಳು ಸಾಗಲು ಗುತ್ತಿಗೆದಾರ ನಿರ್ಮಿಸಿರುವ ಹೊಸ ತಡೆಗೋಡೆಯಿಂದಾಗಿ ನದಿಯ ಹಿನ್ನೀರು ನಿಂತಿದ್ದು, ಅದನ್ನೇ ತೆರವುಗೊಳಿಸಲು ಕೆಲವೇ ಜನ ಹಿರಿಯರ ರೂಪದಲ್ಲಿ ಲಿಖಿತವಾಗಿ ನೀಡುವ ಒಪ್ಪಿಗೆ ಪತ್ರ ಆಧರಿಸಿ ನದಿಪಾತ್ರದಲ್ಲಿನ ನೀರು ಖಾಲಿಯಾದಲ್ಲಿ ಮೇ ಅಂತ್ಯಕ್ಕೆ ರಬಕವಿ-ಬನಹಟ್ಟಿ, ರಾಮಪುರ, ಹೊಸೂರ, ಹಳಿಂಗಳಿ, ತೇರದಾಳ, ತಮದಡ್ಡಿ ಪ್ರದೇಶಗಳ ಜನ-ಜಾನುವಾರು ಕುಡಿಯುವ ನೀರಿನ ತತ್ವಾರ ಎದುರಿಸುವಂತಾಗುವ ಭೀತಿ ನಾಗರಿಕರಲ್ಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

೧೨ ಪೆಟ್ರೋಲ್‌ ಬಂಕ್‌ ಇದ್ರೂ ಡೇಸೆಲ್‌ಗೆ ಪರದಾಟ
ಹೆಚ್ಚಿನ ದಾಖಲಾತಿ ಮಾಡಿಸಲು ಬಿಇಒ ಕೇಶವ ಪೆಟ್ಲೂರ ಮನವಿ