ವಿಶ್ವದಲ್ಲಿಯೇ ಮಹಿಳೆಯರಿಗೆ ಉನ್ನತ ಸ್ಥಾನ ನೀಡಿದ ದೇಶ ನಮ್ಮದು-ಸಚಿವ ಜೋಶಿ

KannadaprabhaNewsNetwork |  
Published : Feb 09, 2025, 01:17 AM IST
ಫೋಟೊ ಶೀರ್ಷಿಕೆ: 8ಆರ್‌ಎನ್‌ಆರ್10ರಾಣಿಬೆನ್ನೂರು ನಗರದ ಕೆಎಲ್‌ಇ ಸಂಸ್ಥೆಯ ರಾಜ ರಾಜೇಶ್ವರಿ ಮಹಾವಿದ್ಯಾಲಯದ ಆವರಣದಲ್ಲಿ ಏರ್ಪಡಿಸಿದ್ದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿದರು.  | Kannada Prabha

ಸಾರಾಂಶ

ವಿಶ್ವದಲ್ಲಿಯೇ ಮಹಿಳೆಯರಿಗೆ ಉನ್ನತ ಸ್ಥಾನ ನೀಡಿದ ದೇಶ ನಮ್ಮದು ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಹೇಳಿದರು.

ರಾಣಿಬೆನ್ನೂರು: ವಿಶ್ವದಲ್ಲಿಯೇ ಮಹಿಳೆಯರಿಗೆ ಉನ್ನತ ಸ್ಥಾನ ನೀಡಿದ ದೇಶ ನಮ್ಮದು ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಹೇಳಿದರು. ನಗರದ ಕೆಎಲ್‌ಇ ಸಂಸ್ಥೆಯ ರಾಜ ರಾಜೇಶ್ವರಿ ಮಹಾವಿದ್ಯಾಲಯದ ಆವರಣದಲ್ಲಿ ಶನಿವಾರ ಸ್ಥಳೀಯ ಪರಿವರ್ತನ ಸಂಸ್ಥೆ ವತಿಯಿಂದ ಕರ್ನಾಟಕ ವೈಭವ ಸಮಾರಂಭದ ಅಂಗವಾಗಿ ಏರ್ಪಡಿಸಿದ್ದ ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕದ ವೀರವನಿತೆಯರು ವಿಷಯ ಕುರಿತ ಸಾರ್ವಜನಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹಿಂದೂ ಸಂಸ್ಕೃತಿಯಲ್ಲಿ ಮಹಿಳೆಯರನ್ನು ಪೂಜಿಸುವ ಕೆಲಸ ಮಾಡಲಾಗುತ್ತದೆ. ಜ್ಞಾನವನ್ನು ಹೊಂದಿದ ಮಹಿಳೆಯರು ನಮ್ಮ ಸಂಸ್ಕೃತಿಯಲ್ಲಿದ್ದಾರೆ. ಪುರುಷ ಪ್ರಧಾನವಾದ ವ್ಯವಸ್ಥೆಯಲ್ಲಿ ಮಹಿಳೆಯರ ಕೆಲಸವನ್ನು ಮರೆತಿದ್ದೇವೆ. ರಾಣಿ ಅಬ್ಬಕ್ಕನ ಹೋರಾಟ ಅವಿಸ್ಮರಣೀಯವಾಗಿದ್ದು ಅವರನ್ನು ಮೋಸದಿಂದ ಕೊಂದರು. ಭಾಗೀರಥಿ ಬಾಯಿ ವಿಧವೆಯರಿಗೆ ಶಾಲೆ ಆರಂಭಿಸಿದರು. ಇಂದಿನ ಮಕ್ಕಳಿಗೆ ಇವರ ಬಗ್ಗೆ ಅರಿವು ಇಲ್ಲದೆ ಹಾಗೆ ಮಾಡಲಾಗುತ್ತದೆ. ಹೀಗಾಗಿ ತಾಯಂದಿರು ಮಕ್ಕಳಿಗೆ ಇತಿಹಾಸ ಪರಂಪರೆ ಬಗ್ಗೆ ತಿಳಿಸಬೇಕು. ಭವಿಷ್ಯದಲ್ಲಿ ಜಗತ್ತಿನ ಆಶಾಕಿರಣ ಭಾರತವಾಗಿದೆ. ವಿದೇಶಗಳಲ್ಲಿ ಮಾನವ ಸಂಪನ್ಮೂಲ ನಾಶವಾಗಿ ಕೆಲಸ ಮಾಡುವ ಕೈಗಳಿಲ್ಲ. ಅಪರಾಧ ಸಂಖ್ಯೆಗಳು ಜಾಸ್ತಿಯಾಗುತ್ತಿದೆ. ಧರ್ಮದ ಆಧಾರದ ಮೇಲೆ ಜೀವನ ಮಾಡುವ ಪದ್ಧತಿ ನಮ್ಮದು. ಮಕ್ಕಳ ಮೇಲೆ ಗಮನ ಹರಿಸಬೇಕು. ನಮ್ಮದು ಎನ್ನುವ ಭಾವ ಕಡಿಮೆಯಾದರೆ ಹತಾಶೆ ಮನೋಭಾವನೆ ಮೂಡುತ್ತದೆ. ಯುವಶಕ್ತಿಗೆ ಸೂಕ್ತವಾದ ದಾರಿ ತೋರುವ ಕೆಲಸ ತಾಯಂದಿರು ಮಾಡಬೇಕು. ಮೊಬೈಲ್, ಟಿವಿಯ ಜೊತೆಗೆ ಸಂಸ್ಕಾರದ ಸಂಗತಿ ನೀಡಬೇಕು ಎಂದರು.ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ಈ ಪವಿತ್ರವಾದ ಭರತ ಭೂಮಿಯಲ್ಲಿ ಜನಿಸಿದ ನಾವೆಲ್ಲರೂ ದೇಶಭಕ್ತರು ಎಂಬ ಮನೋಭಾವನೆ ಸರ್ವರಲ್ಲೂ ಮೂಡಬೇಕು. ನಾವು ನಮ್ಮ ದೇಶ, ರಾಜ್ಯವನ್ನು ಪ್ರೀತಿಸಬೇಕು. ಏಕೆಂದರೆ ನಾವೆಲ್ಲ ಭಾರತ ಮಾತೆಯ ದೇಶಭಕ್ತರು. ನಮ್ಮ ಮಕ್ಕಳಿಗೆ ದೇಶಭಕ್ತಿ, ರಾಷ್ಟ್ರಪ್ರೇಮ ಬೆಳೆಸಬೇಕು. ಕನ್ನಡಿಗರು ಭಾರತ ಮಾತೆಯನ್ನು ಎದೆಯಲ್ಲಿಟ್ಟುಕೊಂಡು ಪೂಜಿಸಿದಾಗ ಭಾರತ ಅತ್ಯುನ್ನತ ಸ್ಥಾನದಲ್ಲಿ ಕಾಣಲಿದೆ. ತಾಯಂದಿರು ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಬೇಕು, ದೇಶಕ್ಕೆ ಹೋರಾಡಿದ ವೀರ ವನಿತೆಯರ, ದೇಶಭಕ್ತರ ಆದರ್ಶಗಳನ್ನು ರೂಢಿಸಿಕೊಳ್ಳಬೇಕು. ಇದು ತಾಯಂದಿರ ಕೈಯಲ್ಲಿ ಮಾತ್ರ ಸಾಧ್ಯವೆಂದರು. ಇತ್ತೀಚಿನ ದಿನಗಳಲ್ಲಿ ತಾಯಂದಿರು ಮಗು ಹುಟ್ಟುವಾಗಲೇ ಮೊಬೈಲ್ ಗೀಳು ಅಂಟಿಸುತ್ತಿದ್ದಾರೆ. ಮಗುವಿನ ಬೆಳವಣಿಗೆ, ಊಟ ಮಾಡಲು ಮೊಬೈಲ್ ಬೇಕು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗೆ ಮೊಬೈಲ್‌ನಿಂದ ಮಗುವನ್ನು ವಿನಾಶದತ್ತ ನಾವೇ ಕೊಂಡೊಯ್ಯುತ್ತಿರುವುದು ವಿಪರ್ಯಾಸವೇ ಸರಿ. ಶಿವಾಜಿ ಮಹಾರಾಜರು, ಝಾನ್ಸಿರಾಣಿ, ಕಿತ್ತೂರ ಚೆನ್ನಮ್ಮ, ಹೀಗೆ ಹಲವಾರು ದೇಶಭಕ್ತರ ಪ್ರೇರಣೆ ಆದರ್ಶಗಳನ್ನು ಮಕ್ಕಳಿಗೆ ಪರಿಚಯಿಸಬೇಕು ಎಂದರು. ಈ ಪವಿತ್ರವಾದ ಭರತ ಭೂಮಿಯಲ್ಲಿ ಜನಿಸಿದ ನಾವೆಲ್ಲರೂ ದೇಶಭಕ್ತರು ಎಂಬ ಮನೋಭಾವನೆ ಸರ್ವರಲ್ಲೂ ಮೂಡಬೇಕು ಎಂದರು. ಮಾಜಿ ಶಾಸಕ ಅರುಣಕುಮಾರ ಪೂಜಾರ, ಕಾಕಿ ಜನಸೇವಾ ಸಂಸ್ಥೆ ಅಧ್ಯಕ್ಷ ಶ್ರೀನಿವಾಸ ಕಾಕಿ ಇದ್ದರು.

PREV

Recommended Stories

ಹಾಡಹಗಲೇ ಮನೆಗೆ ನುಗ್ಗಿ ಚಹಾ ವ್ಯಾಪಾರಿಯ ಕತ್ತು ಕೊಯ್ದು ಹತ್ಯೆ
ದುಡ್ಡಿನ ಮಳೆ ಸುರಿಸುವುದಾಗಿ ನಂಬಿಸಿ ಮಹಾಧೋಖಾ!