ಕನ್ನಡಪ್ರಭ ವಾರ್ತೆ ಬೆಳಗಾವಿ
ಮುರಗೋಡ ಅಜ್ಜನವರ ಕೃಪಾಶೀರ್ವಾದದಿಂದ ರೈತರಿಗಾಗಿಯೇ ಸ್ಥಾಪಿತಗೊಂಡಿರುವ ಬೆಳಗಾವಿ ಡಿಸಿಸಿ ಬ್ಯಾಂಕಿನ ಹಿತರಕ್ಷಣೆಗೆ ನಾವುಗಳು ಬದ್ಧರಿದ್ದು, ಮುಂದಿನ ದಿನಗಳಲ್ಲಿ ರೈತರಿಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ದೊರಕಿಸಿಕೊಡುವುದಾಗಿ ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.ನಗರದಲ್ಲಿ ಬಿಡಿಸಿಸಿ ಬ್ಯಾಂಕ್ ಚುನಾವಣೆ ನಿಮಿತ್ತ ಇತ್ತೀಚೆಗೆ ನಡೆದ ಬೆಳಗಾವಿ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು, ಆಡಳಿತ ಮಂಡಳಿಯ ಸದಸ್ಯರನ್ನುದ್ದೇಶಿಸಿ ಅವರು ಮಾತನಾಡಿದರು. ರೈತರು ನೀಡುತ್ತಿರುವ ಪ್ರೀತಿ, ವಿಶ್ವಾಸಕ್ಕೆ ಯಾವುದೇ ರೀತಿಯ ಚ್ಯುತಿ ಬಾರದಂತೆ ಕೆಲಸ ನಿರ್ವಹಿಸಲಾಗುವುದು ಎಂದರು.
ಬೆಳಗಾವಿ ತಾಲೂಕಿನಲ್ಲಿರುವ ಎಲ್ಲ ಪಿಕೆಪಿಎಸ್‌ಗಳಿಗೆ ಬ್ಯಾಂಕಿನಿಂದ ಹೆಚ್ಚಿನ ಪ್ರಮಾಣದಲ್ಲಿ ಪತ್ತು ದೊರಕಬೇಕು. ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸಿಗಬೇಕು. ರೈತರ ಕಷ್ಟಗಳಿಗೆ ಸ್ಪಂದಿಸುವ ಯೋಗ್ಯ ಅಭ್ಯರ್ಥಿ ಹಾಕಲು ಯೋಜಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮತ್ತು ನಾವೆಲ್ಲರೂ ಸೇರಿಕೊಂಡು ಉತ್ತಮ ಅಭ್ಯರ್ಥಿ ನಿಲ್ಲಿಸುತ್ತೇವೆ. ಈ ತಾಲೂಕಿನ ಎಲ್ಲ ಹಿರಿಯರ ಆಶೀರ್ವಾದದಿಂದ ಬೆಳಗಾವಿ ತಾಲೂಕಿನ ಅಭ್ಯರ್ಥಿಯನ್ನು ಅವಿರೋಧವಾಗಿ ಆಯ್ಕೆ ಮಾಡಲಾಗುತ್ತಿದೆ. ಇದಕ್ಕೆ ಎಲ್ಲರೂ ತಮ್ಮ ಸಹಮತ ಸೂಚಿಸಿದ್ದಾರೆ. ಸೆಪ್ಟೆಂಬರ್ ಕೊನೆಯ ಅಥವಾ ಅಕ್ಟೋಬರ್ ಮೊದಲ ವಾರದಲ್ಲಿ ಬೆಳಗಾವಿ ತಾಲೂಕಿಗೆ ಅಭ್ಯರ್ಥಿ ಘೋಷಿಸಲಾಗುವುದು ಎಂದು ಹೇಳಿದರು.100 ವರ್ಷಗಳ ಇತಿಹಾಸ ಹೊಂದಿರುವ ಬಿಡಿಸಿಸಿ ಬ್ಯಾಂಕ್ ಇಲ್ಲಿಯವರೆಗೆ ಕೇವಲ ₹6500 ಕೋಟಿ ಠೇವಣಿ ಮತ್ತು ₹3400 ಕೋಟಿ ಸಾಲವನ್ನು ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ವಿತರಿಸಲಾಗಿದೆ. ನಮಗಿಂತ ಬೇರೆ ಬೇರೆ ಜಿಲ್ಲೆಗಳ ಡಿಸಿಸಿ ಬ್ಯಾಂಕಗಳು ಆರ್ಥಿಕವಾಗಿ ಬೆಳೆದಿವೆ. ರೈತರ ಆಶೀರ್ವಾದದಿಂದ ಅ.19ರಂದು ನಡೆಯುವ ಬಿಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಾವೇ ಅಧಿಕಾರಕ್ಕೆ ಬರಲಿದ್ದು, ರೈತರಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ನೀಡಲು ಅನೇಕ ಯೋಜನೆಗಳನ್ನು ರೂಪಿಸಿದ್ದೇವೆ. ಬ್ಯಾಂಕಿನಲ್ಲಿ ₹10 ಸಾವಿರ ಕೋಟಿ ತನಕ ಠೇವಣಿ ಮಾಡಿಸುವ ಇರಾದೆ ನಮಗಿದೆ. ಮತ್ತು ಸುಮಾರು ₹5 ಸಾವಿರ ಕೋಟಿ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲವನ್ನು ವಿತರಿಸುವ ಮಹತ್ವಾಕಾಂಕ್ಷೆ ಹೊಂದಿರುವುದಾಗಿ ತಿಳಿಸಿದರು.
ಜಿಲ್ಲೆಯಲ್ಲಿರುವ ಎಲ್ಲ ತಾಲೂಕು ಕ್ಷೇತ್ರಗಳಿಗೆ ಸರಿಸಮಾನವಾದ ಸಾಲ ಸೌಲಭ್ಯಗಳನ್ನು ವಿತರಿಸಲಾಗುವುದು. ಈ ಬ್ಯಾಂಕ್ ರೈತರ ಬ್ಯಾಂಕಾಗಿದ್ದು, ರೈತರ ವಿಷಯದಲ್ಲಿ ಯಾರೂ ರಾಜಕಾರಣ ಮಾಡಬಾರದು. ಪಕ್ಷಾತೀತವಾಗಿ ರೈತರ ಸೇವೆಯನ್ನು ಅತ್ಯಂತ ಪ್ರಾಮಾಣಿಕವಾಗಿ ಮಾಡುತ್ತೇವೆ ಎಂದು ಭರವಸೆ ನೀಡಿದರು.ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿ, ಬಿಡಿಸಿಸಿ ಬ್ಯಾಂಕ್ ಪ್ರತಿಷ್ಠಿತವಾಗಿದ್ದು, ಇದಕ್ಕೆ ನಿರ್ದೇಶಕರಾಗಬೇಕೆಂಬ ಆಶಯ ಎಲ್ಲರದ್ದೂ ಆಗಿದೆ. ಅಂತೆಯೇ ಕೆಲವರು ಇದನ್ನೇ ಪ್ರತಿಷ್ಟೆಯಾಗಿ ತೆಗೆದುಕೊಂಡಿದ್ದಾರೆ. ಆದರೆ, ಯಾವುದೇ ಸ್ವಾರ್ಥವಿಲ್ಲದೇ ನಮ್ಮ ಹೆಮ್ಮೆಯ ಸಹಕಾರ ನಾಯಕನಾಗಿರುವ ಬಾಲಚಂದ್ರ ಜಾರಕಿಹೊಳಿಯವರು ಜಿಲ್ಲಾದ್ಯಂತ ಸಂಚರಿಸಿ, ಪಕ್ಷಬೇಧ ಮರೆತು ಎಲ್ಲ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವಿರೋಧ ಆಯ್ಕೆಗೆ ಶ್ರಮಿಸುತ್ತಿದ್ದಾರೆ. ಬಹುಶಃ ಇದರಲ್ಲಿ ಅವರು ಯಶಸ್ಸು ಕಾಣುತ್ತಾರೆಂಬ ಅಚಲ ವಿಶ್ವಾಸ ನನ್ನಲ್ಲಿದೆ. ರೈತರ ಸೇವೆಯನ್ನು ಪ್ರಾಮಾಣಿಕವಾಗಿ ಮಾಡುತ್ತಿರುವ ಬಾಲಚಂದ್ರ ಜಾರಕಿಹೊಳಿಯವರಿಗೆ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಅದೇ ರೀತಿಯಲ್ಲಿ ಸಹಕಾರ ಕ್ಷೇತ್ರದಲ್ಲಿ ಎಂದಿಗೂ ರಾಜಕೀಯ ಬೆರೆಯಬಾರದು ಎಂದರು.
ಸಚಿವರಾದ ಸತೀಶ್ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳಕರ್ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರ ಮನವಿಯ ಮೇರೆಗೆ ಬೆಳಗಾವಿ ತಾಲೂಕಿನ ಪಿಕೆಪಿಎಸ್ ಸಂಘದಿಂದ ಅವಿರೋಧವಾಗಿ ಆಯ್ಕೆಯನ್ನು ಮಾಡಲಾಗುತ್ತಿದೆ. ರೈತರು ಯಾವ ಪಕ್ಷಕ್ಕೂ ಸಂಬಂಧವಲ್ಲ. ಸಹಕಾರ ತತ್ವದ ಆಧಾರದ ಮೇಲೆ ನಾವು- ನೀವೆಲ್ಲರೂ ಒಪ್ಪುವ ಸಮರ್ಥ ವ್ಯಕ್ತಿಯನ್ನು ಅವಿರೋಧವಾಗಿ ಆಯ್ಕೆ ಮಾಡೋಣ. ಇದರಿಂದ ನಾವು ಹಿರಿಯರನ್ನು, ರೈತರನ್ನು ಗೌರವಿಸುವ ಭಾವನೆ ಬಂದಂತಾಗುತ್ತದೆ. ನಮ್ಮ ಬೆಳಗಾವಿ ತಾಲೂಕಿನ ಚುನಾವಣೆಯನ್ನು ಅವಿರೋಧವಾಗಿ ಆಯ್ಕೆ ಮಾಡಿದರೆ ಉಳಿದವರಿಗೆ ನಾವು ಮಾದರಿಯಾಗುತ್ತೇವೆ ಎಂದು ತಿಳಿಸಿದರು.ಬಹಳಷ್ಟು ಜನರು ಬೆಳಗಾವಿ ತಾಲೂಕಿನ ರಾಜಕೀಯವನ್ನು ಕುತೂಹಲದಿಂದ ನೋಡುತ್ತಿರುತ್ತಾರೆ. ಅಷ್ಟೊಂದು ಶಕ್ತಿಯನ್ನು ನಮ್ಮ ಕ್ಷೇತ್ರ ಹೊಂದಿದೆ. ಸಚಿವರು, ಶಾಸಕರು, ಸಹಕಾರಿಗಳ ಪ್ರಯತ್ನದಿಂದ ಈಚೆಗೆ ಬೆಳಗಾವಿ ತಾಲೂಕಿನ ಟಿಎಪಿಸಿಎಂಎಸ್ ಎಲ್ಲ ಸ್ಥಾನಗಳ ಚುನಾವಣೆಯು ಅವಿರೋಧವಾಗಿ ಆಯ್ಕೆ ನಡೆಯಿತು. ಇದು ಒಳ್ಳೆಯ ಬೆಳವಣಿಗೆಗೆ ಸಾಕ್ಷಿಯಾಯಿತು ಎಂದರು. ಸಹಕಾರ ಸಂಘಗಳಲ್ಲಿ ರಾಜಕಾರಣ ಮಾಡಬಾರದು ಎಂದು ಹಟ್ಟಿಹೊಳಿ ಹೇಳಿದರು. ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ರಾಜೇಂದ್ರ ಪಾಟೀಲ ಪ್ರಾಸ್ತಾವಿಕ ಭಾಷಣ ಮಾಡಿದರು. ವೇದಿಕೆಯಲ್ಲಿ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಪ್ಪಾಸಾಹೇಬ ಕುಲಗೋಡೆ, ಯುವ ಮುಖಂಡ ರಾಹುಲ್ ಜಾರಕಿಹೊಳಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕೃಷ್ಣಾ ಅನಗೋಳಕರ, ಶಂಕರಗೌಡ ಪಾಟೀಲ ಉಪಸ್ಥಿತರಿದ್ದರು.
ನಮ್ಮ ಕೈಗೆ ಅಧಿಕಾರ ಬಂದೇ ಬರುತ್ತದೆ. ಜಿಲ್ಲಾ ಹಾಲು ಒಕ್ಕೂಟವನ್ನು ಕಳೆದ ಎರಡು ವರ್ಷಗಳಲ್ಲಿ ಯಾವ ರೀತಿಯಲ್ಲಿ ಲಾಭ ಮಾಡಿದ್ದೇವೋ ಅದೇ ರೀತಿಯಲ್ಲಿ ಬಿಡಿಸಿಸಿ ಬ್ಯಾಂಕಿಗೆ ಲಾಭವನ್ನು ತಂದು ಕೊಡುವ ಕೆಲಸವನ್ನು ನಾವೆಲ್ಲರೂ ದಕ್ಷತೆಯಿಂದ ಮಾಡುತ್ತೇವೆ. ರೈತರ ನಂಬಿಕೆಗಳಿಗೆ ನಾವೆಂದೂ ಅವಿಶ್ವಾಸವನ್ನು ಮಾಡುವುದಿಲ್ಲ. ರೈತರ ಭರವಸೆಗಳನ್ನು ಉಳಿಸಿಕೊಂಡು ಬ್ಯಾಂಕನ್ನು ರಾಜ್ಯದಲ್ಲಿಯೇ ಮಾದರಿ ಬ್ಯಾಂಕ್ ವನ್ನಾಗಿ ಮಾಡುತ್ತೇವೆ. ಬ್ಯಾಂಕಿನ ಚುನಾವಣೆಯಲ್ಲಿ ಆಯ್ಕೆಯಾದವರು ಪಕ್ಷಾತೀತವಾಗಿ ಕೆಲಸ ನಿರ್ವಹಿಸಬೇಕು. ಯಾವ ಕಾರಣಕ್ಕೂ ಬೇರೆಯವರ ಕ್ಷೇತ್ರಗಳಲ್ಲಿ ಕೈ ಹಾಕಬಾರದು. ಅನವಶ್ಯಕ ರಾಜಕೀಯ ಮಾಡುವುದನ್ನು ನಾನು ಸಹಿಸುವದಿಲ್ಲ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.