ಚನ್ನಪಟ್ಟಣ: ಕ್ಷೇತ್ರ ಉಪಚುನಾವಣೆಯ ಎನ್ ಡಿ ಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಬುಧವಾರ ಬೆಳಗ್ಗೆ ಕ್ಷೇತ್ರದ ಪ್ರಸಿದ್ದ ಕೆಂಗಲ್ ಆಂಜನೇಯ ಸ್ವಾಮಿಯ ಸನ್ನಿಧಿಗೆ ಭೇಟಿ ನೀಡಿ ಸ್ವಾಮಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಾರಂಭಿಕ ಹಂತದಲ್ಲಿ ಅಭ್ಯರ್ಥಿ ಆಗುವ ಬಗ್ಗೆ ಭಾವನೆಗಳು ಇರಲಿಲ್ಲ. ಆದರೆ ಕೆಲ ರಾಜಕೀಯ ಬೆಳವಣಿಗೆ ಹಿನ್ನೆಲೆ ಪಕ್ಷದ ಭಾವನೆಗಳು ಬೆಲೆ ಕೊಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಎದುರಿಸೋಕೆ ಎನ್‌ಡಿಎ ನಾಯಕರು ತೀರ್ಮಾನ ಮಾಡಿ ನಾನು ಸ್ಪರ್ಧೆ ಮಾಡಿದೆ ಎಂದರು.
ಕಳೆದ 18 ದಿನಗಳ ಕಾಲ ನಿರಂತರವಾಗಿ ಕ್ಷೇತ್ರ ಪ್ರವಾಸ ಮಾಡಿದ್ದೇನೆ. ಪಕ್ಷದ ಪರವಾಗಿ ಹಳ್ಳಿ ಹಳ್ಳಿಯಲ್ಲಿ ನನ್ನ ಪರ ವಿಶ್ವಾಸ ಮೂಡಿಸುವ ಕೆಲಸ ಮಾಡಿದ್ದಾರೆ. ಕಳೆದ ಆರುವರೆ ವರ್ಷ ಕುಮಾರಣ್ಣ ಅವಧಿಯಲ್ಲಿ ಆದ ಅಭಿವೃದ್ಧಿ ಕಾರ್ಯಗಳನ್ನು ಪ್ರಸ್ತಾಪ ಮಾಡಿದ್ದೇನೆ. ಮತದಾರರು ಅವರ ಹೃದಯದಲ್ಲಿ ಒಂದು ಸ್ಥಾನ ಕೋಡ್ತಾರೆ ಎಂಬ ವಿಶ್ವಾಸ ಇದೆ ಎಂದು ತಿಳಿಸಿದರು.
ಮತದಾರರ ವಿಶ್ವಾಸ ಮೀರಿ ಸೇವೆ ಮಾಡುವ ದೃಢ ನಿರ್ಧಾರ ಮಾಡಿದ್ದೇವೆ. ಚನ್ನಪಟ್ಟಣದಲ್ಲಿ ಯುವ ಸಮುದಾಯ ಬಹಳ ದೊಡ್ಡ ಮಟ್ಟದಲ್ಲಿದೆ. ನಾನು ಹಳ್ಳಿಗಳಿಗೆ ಹೋದ ಸಂದರ್ಭದಲ್ಲಿ ಒಬ್ಬ ಯುವಕ ಬಂದಿದ್ದಾನೆ ಎಂದು ಅಣ್ಣನೂ ತಮ್ಮನೂ ಬಂದಿದ್ದಾನೆ ಅಂತ ಭಾವನೆಯಿಂದ ನನ್ನ ಜತೆ ಪ್ರಚಾರದಲ್ಲಿ ಹೆಜ್ಜೆ ಹಾಕಿದ್ದಾರೆ ಎಂದು ಹೇಳಿದರು.
ಹಿಂದಿನ ಎರಡು ಚುನಾವಣೆಯಲ್ಲಿ ನಾನು ಯಾವ ರೀತಿ ನಡೆದುಕೊಂಡು ಬಂದಿದ್ದೇನೆ ಎಂಬುದು ಎಲ್ಲರಿಗೂ ಗೊತ್ತಿದೆ.ಯಾವ ಹಂತದಲ್ಲೂ ವಿರೋಧ ಪಕ್ಷಕ್ಕೆ ಪ್ರಾಮುಖ್ಯತೆ ಕೊಟ್ಟಿಲ್ಲ, ನ್ನನ ಕಲ್ಪನೆಯಲ್ಲಿ ಚನ್ನಪಟ್ಟಣ ಹೇಗಿರಬೇಕು ಎಂಬುದನ್ನು ನಾನು ಚರ್ಚೆ ಮಾಡಿದ್ದೇನೆ.ನನ್ನ ಬೆನ್ನಿಗಿರೋದು ದೇವೇಗೌಡರು ಮತ್ತು ಕುಮಾರಣ್ಣನ ಕೊಡುಗೆ ಇದು ನನ್ನನ್ನು ಗೆಲುವಿನ ದಡ ಸೇರಿಸುವ ವಿಶ್ವಾಸ ಇದೆ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದರು.