ಜಲಕ್ಷಾಮ ಎದುರಿಸಬೇಕಿದೆ, ಅಧಿಕಾರಿಗಳು ಕರ್ತವ್ಯ ಮರೆಯಬೇಡಿ

KannadaprabhaNewsNetwork |  
Published : Nov 19, 2026, 01:30 AM IST
18 ಜೆ.ಜಿ.ಎಲ್.1)‌  ಜಗಳೂರು ಪಟ್ಟಣದ ತಾಪಂ ಸಭಾಂಗಣದಲ್ಲಿ ಬುಧವಾರ ಶಾಸಕ ಬಿ. ದೇವೇಂದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಕೆಡಿಪಿ ಸಭೆ ನಡೆಯಿತು. | Kannada Prabha

ಸಾರಾಂಶ

ಬೇಸಿಗೆ ಆರಂಭಕ್ಕೂ ಮುನ್ನವೇ ತಾಲೂಕಿನಾದ್ಯಂತ ಕುಡಿಯುವ ನೀರಿನ ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಂಡಿದೆ. ಜಲಕ್ಷಾಮ ಎದುರಿಸಲು ಅಧಿಕಾರಿಗಳು ಸನ್ನದ್ಧರಾಗಬೇಕು. ತಹಸೀಲ್ದಾರ್, ತಾಲೂಕು ಪಂಚಾಯಿತಿ ಇಒ ಸೇರಿದಂತೆ ಯಾವುದೇ ಪಿಡಿಒಗಳು ತಮ್ಮ ಕರ್ತವ್ಯ ಮರೆಯುವಂತಿಲ್ಲ. ಅಲ್ಲದೆ, ಕೇಂದ್ರ ಸ್ಥಾನ ಮತ್ತು ಕಾರ್ಯಸ್ಥಾನ ಬಿಟ್ಟು ಕದಲುವಂತಿಲ್ಲ ಎಂದು ಶಾಸಕ ಬಿ.ದೇವೇಂದ್ರಪ್ಪ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

- ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬ್ರೇಕ್ ಹಾಕಲು ಸದನದಲ್ಲಿ ಧ್ವನಿ: ಕೆಡಿಪಿ ಸಭೆಯಲ್ಲಿ ಶಾಸಕ ದೇವೇಂದ್ರಪ್ಪ ಭರವಸೆ

- - -

ಕನ್ನಡಪ್ರಭ ವಾರ್ತೆ ಜಗಳೂರು

ಬೇಸಿಗೆ ಆರಂಭಕ್ಕೂ ಮುನ್ನವೇ ತಾಲೂಕಿನಾದ್ಯಂತ ಕುಡಿಯುವ ನೀರಿನ ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಂಡಿದೆ. ಜಲಕ್ಷಾಮ ಎದುರಿಸಲು ಅಧಿಕಾರಿಗಳು ಸನ್ನದ್ಧರಾಗಬೇಕು. ತಹಸೀಲ್ದಾರ್, ತಾಲೂಕು ಪಂಚಾಯಿತಿ ಇಒ ಸೇರಿದಂತೆ ಯಾವುದೇ ಪಿಡಿಒಗಳು ತಮ್ಮ ಕರ್ತವ್ಯ ಮರೆಯುವಂತಿಲ್ಲ. ಅಲ್ಲದೆ, ಕೇಂದ್ರ ಸ್ಥಾನ ಮತ್ತು ಕಾರ್ಯಸ್ಥಾನ ಬಿಟ್ಟು ಕದಲುವಂತಿಲ್ಲ ಎಂದು ಶಾಸಕ ಬಿ.ದೇವೇಂದ್ರಪ್ಪ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಬುಧವಾರ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಸಭೆಯುದ್ದಕ್ಕೂ ತಾಲೂಕಿನ ಅರಿಶಿಣಗುಂಡಿ, ಮರೇನಹಳ್ಳಿ, ಉಚ್ಚಂಗಿಪುರ ಸೇರಿದಂತೆ 22 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಉಲ್ಬಣಿಸಿರುವ ಕುಡಿಯುವ ನೀರಿನ ಸಮಸ್ಯೆಯ ಕುರಿತು ಸುದೀರ್ಘ ಚರ್ಚೆ ನಡೆಯಿತು.

ಖಾಸಗಿ ಬೋರ್‌ವೆಲ್‌ಗಳ ನೆರವು ಪಡೆಯಿರಿ:

ಜಗಳೂರು ತಾಲೂಕಿನ ಪ್ರತಿ ಗ್ರಾಪಂ ವ್ಯಾಪ್ತಿಯ ನೀರಿನ ಸ್ಥಿತಿಗತಿಯ ಕುರಿತು ಪಿಡಿಒಗಳಿಂದ ಮಾಹಿತಿ ಪಡೆದ ಶಾಸಕರು, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ. ನೀರಿನ ಸಮಸ್ಯೆ ಕಂಡುಬಂದ ತಕ್ಷಣವೇ ಸ್ಥಳೀಯ ಖಾಸಗಿ ಬೋರ್‌ವೆಲ್ ಮಾಲೀಕರೊಂದಿಗೆ ಮಾತುಕತೆ ನಡೆಸಿ, ನೀರು ಪೂರೈಸಲು ಕ್ರಮ ಕೈಗೊಳ್ಳಿ. ನಿಮ್ಮ ಹಂತದಲ್ಲಿ ಸಮಸ್ಯೆ ಬಗೆಹರಿಯದಿದ್ದರೆ ನೇರವಾಗಿ ನನ್ನ ಗಮನಕ್ಕೆ ತನ್ನಿ. ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ ತುರ್ತು ಪರಿಹಾರ ಕಲ್ಪಿಸುತ್ತೇನೆ ಎಂದು ಭರವಸೆ ನೀಡಿದರು.

ಮೈಕ್ರೋ ಫೈನಾನ್ಸ್ ದೌರ್ಜನ್ಯಕ್ಕೆ ಕಡಿವಾಣ:

ಮರೇನಹಳ್ಳಿ ಗ್ರಾಮದಲ್ಲಿ ಗೌರಮ್ಮ ಎಂಬ ಮಹಿಳೆ ಸಾಲ ತೀರಿಸಲಾಗದ ಕಾರಣಕ್ಕೆ ಮೈಕ್ರೋ ಫೈನಾನ್ಸ್ ಕಂಪನಿಯವರು ಮನೆ ಜಪ್ತಿ ಮಾಡಿದ್ದಾರೆ. ಯಾವ ಮಾನದಂಡದ ಮೇಲೆ ಸಾಲ ನೀಡಲಾಗಿದೆ? ಬಡವರಿಗೆ ಕಿರುಕುಳ ನೀಡುತ್ತಿರುವ ಕಂಪನಿಗಳ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಿ ಎಂದು ತಹಸೀಲ್ದಾರ್‌ಗೆ ತರಾಟೆ ತೆಗೆದುಕೊಂಡರು. ತಾಲೂಕಿನ ಎಲ್ಲ ಮೈಕ್ರೋ ಫೈನಾನ್ಸ್ ಕಂಪನಿಗಳ ಪ್ರತ್ಯೇಕ ಸಭೆ ಕರೆಯಿರಿ, ನಾನೂ ಭಾಗವಹಿಸುತ್ತೇನೆ. ಬಡವರಿಗೆ ಕಿರುಕುಳ ನಿಲ್ಲಿಸದಿದ್ದರೆ ಮುಂಬರುವ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಸ್ಪೀಕರ್ ಗಮನ ಸೆಳೆದು, ಕಠಿಣ ಕಾಯ್ದೆ ರೂಪಿಸಲು ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದು ಎಚ್ಚರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ತಹಸೀಲ್ದಾರ್ ಕೆ. ಗುರುಬಸವರಾಜ್, ಪ್ರಕರಣವನ್ನು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಗಮನಕ್ಕೆ ತರಲಾಗಿದೆ. ಡಿಸಿ ಅವರು ಫೈನಾನ್ಸ್ ಮುಖ್ಯಸ್ಥರು ಮತ್ತು ಸಂತ್ರಸ್ತ ಮಹಿಳೆಯೊಂದಿಗೆ ಸಭೆ ನಡೆಸಿ ಕಾನೂನು ಚೌಕಟ್ಟಿನಲ್ಲಿ ನ್ಯಾಯ ಒದಗಿಸಲಿದ್ದಾರೆ ಎಂದರು.

ಪಾತಾಳ ಸೇರಿದ ಜಲ:

ತಾಲೂಕಿನಲ್ಲಿ ಹೊಸದಾಗಿ ಕೊಳವೆಬಾವಿ ಕೊರೆಸಲು ಬೋರ್‌ವೆಲ್ ಲಾರಿಗಳೇ ಸಿಗುತ್ತಿಲ್ಲ. 1,000 ಅಡಿ ಆಳ ಕೊರೆದರೂ ನೀರು ಸಿಗುತ್ತಿಲ್ಲ. ಹಳೆಯ ಬೋರ್‌ವೆಲ್‌ಗಳನ್ನು ರೀಬೋರ್ ಮಾಡಿಸಲು ಬೋರ್‌ ಲಾರಿಗಳವರು ಬರುತ್ತಿಲ್ಲ ಎಂದು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಸಾದಿಕ್ ಉಲ್ಲಾ ಸಭೆಯಲ್ಲಿ ಅಸಹಾಯಕತೆ ವ್ಯಕ್ತಪಡಿಸಿದರು.

ಕ್ಷೇತ್ರದ ಹಳ್ಳಿಗಳ ಸಂಪರ್ಕ ರಸ್ತೆ ಅಭಿವೃದ್ಧಿಗೆ ₹50 ಕೋಟಿ ಅನುದಾನ ಹಾಗೂ ಪ್ರತಿ ಗ್ರಾಪಂ ಅಭಿವೃದ್ಧಿಗೆ ₹1 ಕೋಟಿ ಬಿಡುಗಡೆ, ಅಡಕೆ ಬೆಳೆ ವಿಮಾ ಕಂಪನಿಗಳು ರೈತರಿಗೆ ಮಾಡುತ್ತಿರುವ ತಾರತಮ್ಯದ ವಿರುದ್ಧ ಕ್ರಮಕ್ಕೆ ಚರ್ಚೆ, ಕೊಂಡುಕುರಿ ಅಭಯಾರಣ್ಯ ವ್ಯಾಪ್ತಿಯಲ್ಲಿ ಬೇಟೆಗೆ ಕಡಿವಾಣ, ಪಟ್ಟಣದ ರಸ್ತೆ ವಿಸ್ತರಣೆ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಮತ್ತು ಮದಕರಿ ವೃತ್ತ ನಿರ್ಮಾಣಕ್ಕೆ ಸರ್ಕಾರದ ಆದೇಶದ ಕುರಿತು ಚರ್ಚೆ, ಜಾನುವಾರುಗಳಿಗೆ ಮೇವಿನ ಕೊರತೆ ಆಗದಂತೆ ಎಚ್ಚರಿಕೆ, ನೀರಿನ ಸಂಪರ್ಕಕ್ಕೆ ವಿದ್ಯುತ್ ನಿಯಮ ಸಡಿಲಿಕೆ, ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆ, ಬಾಲ ವಿವಾಹ ತಡೆ ಹಾಗೂ ಹಾಸ್ಟೆಲ್ ಶುಚಿತ್ವ ಕುರಿತು ಚರ್ಚೆ ನಡೆಯಿತು.

ಸಭೆಯಲ್ಲಿ ಡಿಡಿಪಿಐ ಕೃಷ್ಣ ಪ್ರಸಾದ್, ತಹಸೀಲ್ದಾರ್ ಕೆ. ಗುರುಬಸವರಾಜ್, ತಾಪಂ ಇಒ ಕೆಂಚಪ್ಪ, ಷಂಷೀರ್ ಅಹಮದ್, ಜಿಪಂ ಎಇಇ ಶಿವಮೂರ್ತಿ, ಪಿಡಬ್ಲ್ಯೂಡಿ ಎಇಇ ಶಶಿಕಾಂತ್, ಬಿಇಒ ಈ. ಹಾಲಮೂರ್ತಿ, ಕೃಷಿ ಇಲಾಖೆ ಎಡಿಎ ಎಚ್. ಶ್ವೇತಾ, ಎಸ್‌ಎಡಿಎಚ್ ವೆಂಕಟೇಶ್ ಸೇರಿದಂತೆ ವಿವಿಧ ಇಲಾಖೆಗಳ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.

- - -

-18ಜೆ.ಜಿ.ಎಲ್.1: ಜಗಳೂರು ಪಟ್ಟಣದ ತಾಪಂ ಸಭಾಂಗಣದಲ್ಲಿ ಬುಧವಾರ ಶಾಸಕ ಬಿ.ದೇವೇಂದ್ರಪ್ಪ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಕೆಡಿಪಿ ಸಭೆ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರಜಾಪ್ರಭುತ್ವದಿಂದಲೇ ದೇಶದಲ್ಲಿ ಅಭಿವೃದ್ಧಿ ಸಾಧ್ಯ: ಕ್ಯಾ. ಬ್ರಿಜೇಶ್ ಚೌಟಾ
ಹುಬ್ಬಳ್ಳಿ ನಾಗರಿಕ ಧ್ವನಿ ಶೀಘ್ರ ಅಸ್ತಿತ್ವಕ್ಕೆ