ಎಸ್‌ಐಆರ್ ಪ್ರಕ್ರಿಯೆ ಸಂವಿಧಾನಬದ್ಧವಾಗಿ ನಡೆಯುತ್ತಿದ್ದು, ಅದನ್ನು ವಿರೋಧಿಸುವುದು ಸರಿಯಲ್ಲ.

ಹಾವೇರಿ: ಪ್ರಜಾಪ್ರಭುತ್ವ ವ್ಯವಸ್ಥೆ ಇಲ್ಲದಿದ್ದರೆ ಸಾಮಾನ್ಯ ಚಹಾ ಮಾರುವ ವ್ಯಕ್ತಿಯಾಗಿದ್ದ ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾಗಲು ಸಾಧ್ಯವಾಗುತ್ತಿರಲಿಲ್ಲ. ಪ್ರಜಾಪ್ರಭುತ್ವದಿಂದಲೇ ದೇಶದಲ್ಲಿ ಅಭಿವೃದ್ಧಿ ಸಾಧ್ಯವಾಗಿದೆ. ಈ ವ್ಯವಸ್ಥೆಯ ಮಹತ್ವ ಹಾಗೂ ವಾಸ್ತವತೆಯನ್ನು ಜನರಿಗೆ ತಿಳಿಸುವ ಅಗತ್ಯವಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟಾ ಹೇಳಿದರು.

ನಗರದ ಜಿಲ್ಲಾ ಗುರುಭವನದಲ್ಲಿ ಬುಧವಾರ ಆಯೋಜಿಸಿದ್ದ `ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ಅಳಿಸಿ'''''''' ಯುವ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕಾಂಗ್ರೆಸ್‌ನವರು `ವೋಟ್ ಚೋರಿ, ಗದ್ದಿ ಚೋಡ್'''''''' ಎಂದು ಆರೋಪ ಮಾಡುತ್ತಿದ್ದಾರೆ. ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತಮ್ಮ ಜವಾಬ್ದಾರಿಗೆ ತಕ್ಕಂತೆ ಮಾತನಾಡುತ್ತಿಲ್ಲ. ಎಸ್‌ಐಆರ್ ಪ್ರಕ್ರಿಯೆ ಸಂವಿಧಾನಬದ್ಧವಾಗಿ ನಡೆಯುತ್ತಿದ್ದು, ಅದನ್ನು ವಿರೋಧಿಸುವುದು ಸರಿಯಲ್ಲ. ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಪ್ರಯತ್ನ ನಡೆಯುತ್ತಿದೆ. ಸುಳ್ಳನ್ನೇ ಸತ್ಯವೆಂದು ಬಿಂಬಿಸುವ ಕೆಲಸ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಚುನಾವಣೆಯಲ್ಲಿ ಬಿಜೆಪಿ ಗೆದ್ದಾಗ ಮಾತ್ರ ಇವಿಎಂ ಹ್ಯಾಕ್ ಆಗಿದೆ ಎಂದು ಆರೋಪಿಸುವ ಕಾಂಗ್ರೆಸ್, ತಾವೇ ಗೆದ್ದಾಗ ಇವಿಎಂ ಬಗ್ಗೆ ಮಾತನಾಡುವುದಿಲ್ಲ. ಎಸ್‌ಐಆರ್, ಇವಿಎಂ ಹಾಗೂ ಫಾರ್ಮ್ ನಂ. 7 ಪರಿಶೀಲನೆ ಚುನಾವಣಾ ಆಯೋಗದ ಜವಾಬ್ದಾರಿಯ ಭಾಗವಾಗಿವೆ. ಇವು ಸಂವಿಧಾನಬದ್ಧ ಪ್ರಕ್ರಿಯೆಗಳಾಗಿವೆ. ಇನ್‌ವ್ಯಾಲಿಡ್ ಮತಗಳ ಬಗ್ಗೆಯೂ ಜನರು ಜಾಗೃತಿ ವಹಿಸಬೇಕು ಎಂದರು.

ಜಗತ್ತಿನಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದ್ದು, ಇಡೀ ವಿಶ್ವವೇ ಭಾರತದತ್ತ ಎದುರು ನೋಡುತ್ತಿದೆ. ದೇಶದ ಜನಸಂಖ್ಯೆಯಲ್ಲಿ ಶೇ.60ರಷ್ಟು ಯುವಜನರಿದ್ದು, ಅವರು ಜಾಗೃತರಾಗಬೇಕು. ಸತ್ಯಾಸತ್ಯತೆ ತಿಳಿದುಕೊಂಡು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಾಡುವ ಹೊಣೆಗಾರಿಕೆ ನಿರ್ವಹಿಸಬೇಕು. ಪ್ರಜಾಪ್ರಭುತ್ವ ಉಳಿಸುವ ಅಭಿಯಾನ ದೇಶ ಉಳಿಸುವ ಅಭಿಯಾನವಾಗಬೇಕು ಎಂದು ಹೇಳಿದರು.

ಯುವ ಮುಖಂಡ ಭರತ್ ಬೊಮ್ಮಾಯಿ ಮಾತನಾಡಿ, ಸ್ವಾತಂತ್ರö್ಯ ನಂತರ ಭಾರತದಲ್ಲಿ 12ಬಾರಿ ಎಸ್‌ಐಆರ್ ಪ್ರಕ್ರಿಯೆ ನಡೆದಿದ್ದು, ಈ ಪೈಕಿ 10 ಬಾರಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ನಡೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಎಸ್‌ಐಆರ್ ಕುರಿತು ಅಪಪ್ರಚಾರ ಮಾಡಲಾಗುತ್ತಿದೆ. ಯುವಜನರು ಇದರ ವಾಸ್ತವತೆಯನ್ನು ಅರ್ಥಮಾಡಿಕೊಳ್ಳಬೇಕು. ಮೃತಪಟ್ಟವರ ಹೆಸರು ಮತದಾರರ ಪಟ್ಟಿಯಿಂದ ತೆಗೆದುಹಾಕುವುದು ಪ್ರಕ್ರಿಯೆಯ ಒಂದು ಭಾಗವಾಗಿದೆ. ಮೃತಪಟ್ಟವರು ಮತದಾನ ಮಾಡಲು ಬರುವುದಿಲ್ಲ. ಹೀಗಿರುವಾಗ ವೋಟ್ ಚೋರಿ ಮತ್ತು ಎಸ್‌ಐಆರ್ ಕುರಿತು ಮಾತನಾಡಲು ಕಾಂಗ್ರೆಸ್‌ಗೆ ನೈತಿಕತೆ ಇಲ್ಲ ಎಂದು ಟೀಕಿಸಿದರು.

2047ರ ವೇಳೆಗೆ ಭಾರತವನ್ನು ವಿಶ್ವದ ನಂಬರ್ ಒನ್ ದೇಶವನ್ನಾಗಿ ಮಾಡುವ ಕನಸನ್ನು ಪ್ರಧಾನಿ ನರೇಂದ್ರ ಮೋದಿ ಹೊಂದಿದ್ದಾರೆ. ಯುವಜನರು ದೇಶ ಕಟ್ಟುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಹಾವೇರಿಯನ್ನು ಬೆಳೆಸುವ ಜತೆಗೆ ಭವ್ಯ ಭಾರತದಲ್ಲಿ ನವ ಕರ್ನಾಟಕ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು.

ವೈದ್ಯ ಡಾ. ರವಿಕುಮಾರ ಮಲ್ಲಾಡದ ಅಧ್ಯಕ್ಷತೆ ವಹಿಸಿದ್ದರು. ಅಭಿಯಾನದ ಸಂಯೋಜಕ ಮಲ್ಲಿಕಾರ್ಜುನ ಬಾಳಿಕಾಯಿ ಪ್ರಾಸ್ತಾವಿಕವಾಗಿ ಮಾತನಾಡಿ, ದೇಶದ ಕೆಲವು ಶಕ್ತಿಗಳು ತಮ್ಮ ತಪ್ಪುಗಳನ್ನು ಪ್ರಶ್ನಿಸುವ ನೆಪದಲ್ಲಿ ಕಾನೂನಿನ ಚೌಕಟ್ಟು ಮೀರಿ ಅರಾಜಕತೆ ಸೃಷ್ಟಿಸುತ್ತಿವೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತರುವ ಪ್ರಯತ್ನಗಳನ್ನು ತಡೆಯಲು ಯುವಜನರು ಒಗ್ಗಟ್ಟಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ನಿವೃತ್ತ ಸೈನಿಕ ಚಂದ್ರಶೇಖರ ಶಿಸನಹಳ್ಳಿ, ಪ್ರಶಾಂತಕುಮಾರ ಬೆನ್ನೂರ, ಅಭಿಷೇಕ ದೊಡ್ಡಮನಿ, ಭರತ ಹೊಸಮನಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಕಿರಣಕುಮಾರ ಕೋಣನವರ ಸ್ವಾಗತಿಸಿದರು. ಹನುಮಂತಗೌಡ ಪಾಟೀಲ ನಿರೂಪಿಸಿದರು.