ಜೆಡಿಎಸ್ ವರಿಷ್ಠರ ಸೂಚನೆವರೆಗೂ ನಾವು ತಟಸ್ಥ: ಮಾಜಿ ಶಾಸಕ ಎಚ್.ಎಸ್.ಶಿವಶಂಕರ

KannadaprabhaNewsNetwork |  
Published : Mar 20, 2024, 01:22 AM IST
19ಕೆಡಿವಿಜಿ63-ದಾವಣಗೆರೆಯಲ್ಲಿ ಜೆಡಿಎಸ್ ಮುಖಂಡ, ಮಾಜಿ ಶಾಸಕ ಎಚ್.ಎಸ್.ಶಿವಶಂಕರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ರಾಜ್ಯದಲ್ಲಿ ಬಿಜೆಪಿ ಮತ್ತೆ ಸುಸ್ಥಿತಿಗೆ ಬರಬೇಕಿದೆ. ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳಿಂದಾಗಿ ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ. ಗ್ಯಾರಂಟಿ ರಾಜ್ಯದಲ್ಲಿ ಸಮರ್ಪಕವಾಗಿ ತಲುಪುತ್ತಿಲ್ಲ. ಕಾಂಗ್ರೆಸ್‌ನಿಂದಾಗಿ ಜನ ಭ್ರಮನಿರಸನರಾಗಿದ್ದಾರೆ. ಇಂತಹ ಸರ್ಕಾರ ಮುಂದುವರಿಯಲು ಜನರ ಅಪೇಕ್ಷೆಯೂ ಇಲ್ಲವಾಗಿದೆ. 130 ಕ್ಷೇತ್ರ ಗೆದ್ದಿದ್ದೇ ಕಾಂಗ್ರೆಸ್ಸಿಗರು ತಮಗೆ ಸಂಪೂರ್ಣ ಬೆಂಬಲವಿದೆಯೆಂಬ ಭ್ರಮೆಯಲ್ಲಿ ತೇಲುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಎನ್‌ಡಿಎ ಮೈತ್ರಿಕೂಟದಲ್ಲಿರುವ ಜೆಡಿಎಸ್ ವರಿಷ್ಠರ ಆದೇಶದವರೆಗೂ, ದಾವಣಗೆರೆ ಜಿಲ್ಲೆಯಲ್ಲಿ ಸಭೆ ಮಾಡಿ, ತೀರ್ಮಾನಿಸುವವರೆಗೂ ಜೆಡಿಎಸ್‌ ಮುಖಂಡರು, ಪದಾಧಿಕಾರಿ, ಕಾರ್ಯಕರ್ತರು ಮೈತ್ರಿ ಧರ್ಮ ಪಾಲನೆಗೆ ಮುಂದಾಗದೇ, ತಟಸ್ಥವಾಗಿರಬೇಕು ಎಂದು ಹರಿಹರ ಮಾಜಿ ಶಾಸಕ, ಪಕ್ಷದ ಹಿರಿಯ ಮುಖಂಡ ಎಚ್.ಎಸ್.ಶಿವಶಂಕರ ಸೂಚಿಸಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎನ್‌ಡಿಎಯಲ್ಲಿ ಜೆಡಿಎಸ್ ವರಿಷ್ಠರನ್ನು ಬಿಜೆಪಿಯವರು ಪರಿಗಣಿಸದಿರುವುದು ಬೇಸರ ತಂದಿದೆ. ಅಲ್ಲದೇ, ಕಲಬುರಗಿ, ಶಿವಮೊಗ್ಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಮಾವೇಶಕ್ಕೂ ನಮ್ಮ ಪಕ್ಷದ ನಾಯಕರ, ಸ್ಥಳೀಯ ಪದಾಧಿಕಾರಿಗಳು, ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದು ಸರಿಯಲ್ಲ ಎಂದರು.

ರಾಜ್ಯದಲ್ಲಿ ಬಿಜೆಪಿ ಮತ್ತೆ ಸುಸ್ಥಿತಿಗೆ ಬರಬೇಕಿದೆ. ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳಿಂದಾಗಿ ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ. ಗ್ಯಾರಂಟಿ ರಾಜ್ಯದಲ್ಲಿ ಸಮರ್ಪಕವಾಗಿ ತಲುಪುತ್ತಿಲ್ಲ. ಕಾಂಗ್ರೆಸ್‌ನಿಂದಾಗಿ ಜನ ಭ್ರಮನಿರಸನರಾಗಿದ್ದಾರೆ. ಇಂತಹ ಸರ್ಕಾರ ಮುಂದುವರಿಯಲು ಜನರ ಅಪೇಕ್ಷೆಯೂ ಇಲ್ಲವಾಗಿದೆ. 130 ಕ್ಷೇತ್ರ ಗೆದ್ದಿದ್ದೇ ಕಾಂಗ್ರೆಸ್ಸಿಗರು ತಮಗೆ ಸಂಪೂರ್ಣ ಬೆಂಬಲವಿದೆಯೆಂಬ ಭ್ರಮೆಯಲ್ಲಿ ತೇಲುತ್ತಿದ್ದಾರೆ ಎಂದು ಟೀಕಿಸಿದರು.

ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ದೇಶಕ್ಕೆ ಒಳಿತು, ದೇಶದ ಅಭಿವೃದ್ಧಿಗಾಗಿ ತಮ್ಮ ರಾಜಕೀಯ ಜೀವನದಲ್ಲೇ ಅತ್ಯಂತ ದೊಡ್ಡ ತೀರ್ಮಾನ ಕೈಗೊಂಡಿದ್ದಾರೆ. ಜಾತ್ಯತೀತ ನಿಲುವುಗಳಿಗೆ ಧಕ್ಕೆಯಾಗಬಾರದು, ಜೆಡಿಎಸ್ ತತ್ವ ಸಿದ್ಧಾಂತ, ಬದ್ಧತೆ ಬಿಟ್ಟು ಕೊಡದಂತೆ ಕೆಲವು ಷರತ್ತುಗಳ ಮೇಲೆಯೇ ಬಿಜೆಪಿ ಜೊತೆ ಮೈತ್ರಿ ಮಾಡಲಾಗಿದೆ. ಆದರೆ, ಎಚ್‌.ಡಿ.ಕುಮಾರಸ್ವಾಮಿಯವರಿಗೆ ಹತ್ತಾರು ಸಲ ದೆಹಲಿಗೆ ಕರೆಸಿ ಮಾತನಾಡಿದರೂ, ಕೇವಲ 3 ಕ್ಷೇತ್ರವೆಂದು ಈಗ 2 ಕ್ಷೇತ್ರವೆನ್ನುತ್ತಿದ್ದಾರೆ. ಅದೂ ಯಾವ ಕ್ಷೇತ್ರವೆಂಬುದನ್ನೇ ಘೋಷಿಸಿಲ್ಲ ಎಂದು ಬಿಜೆಪಿ ಧೋರಣೆಗೆ ಬೇಸರ ಹೊರ ಹಾಕಿದರು.

ಮೈತ್ರಿ ಧರ್ಮ ರಾಜ್ಯದಲ್ಲಿ ಪಾಲನೆಯಾಗುತ್ತಿಲ್ಲ. ನಮ್ಮ ಪಕ್ಷಕ್ಕೆ ನೀಡಿದ ಹಾಸನ, ಮಂಡ್ಯ ಹಾಗೂ ಮತ್ತೊಂದರಲ್ಲಿ ಬಿಜೆಪಿ ಮುಖಂಡರು ತಗಾದೆ ತೆಗೆದಿದ್ದಾರೆ. 20 ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಿಸಿದ ಮಿತ್ರ ಪಕ್ಷ ಬಿಜೆಪಿಯಲ್ಲಿ ಗೊಂದಲ ಹೆಚ್ಚುತ್ತಿದೆ. ಹೆಚ್ಚಿನ ಸ್ಥಾನ ಬೇಕೆಂದರೆ ಮೊದಲು ಜೆಡಿಎಸ್ ಮುಖಂಡರ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಹಾಸನದಲ್ಲಿ ಜೆಡಿಎಸ್ ಅಭ್ಯರ್ಥಿ ಬದಲಿಸುವಂತೆ ಬಿಜೆಪಿ ಮಾಜಿ ಶಾಸಕ ಪ್ರೀತಂ ಗೌಡ ತಗಾದೆ ತೆಗೆದಿದ್ದಾರೆ. ಇದು ಸರಿಯಲ್ಲ. ನಿಮಗಷ್ಟೇ ಅಲ್ಲ, ನಮಗೂ ತಗಾದೆ ತೆಗೆಯಲು ಬರುತ್ತದೆ ಎಂದು ಎಚ್ಚರಿಸಿದರು.

ಬಿಜೆಪಿ ರಾಜ್ಯದಲ್ಲಿ ಮೈತ್ರಿ ಧರ್ಮ ಪಾಲಿಸದಿದ್ದರೆ ನಾಯಕರಾದ ದೇವೇಗೌಡ, ಕುಮಾರಸ್ವಾಮಿಯವರ ಅಪ್ಪಣೆ ಸಿಕ್ಕರೆ ನಾವೂ ಅರ್ಜಿ ಹಾಕುತ್ತೇವೆ. ಚುನಾವಣೆಗೆ ಇನ್ನೂ 2 ತಿಂಗಳು ಬಾಕಿ ಇದೆ, ಮೈತ್ರಿ ಧರ್ಮ ಪಾಲನೆಗೆ ಬಿಜೆಪಿ ನಾಯಕರು ಮುಂದಾಗಲಿ ಎಂದು ಎಚ್.ಎಸ್.ಶಿವಶಂಕರ್‌ ಮಿತ್ರ ಪಕ್ಷದ ನಾಯಕರಿಗೆ ಕಿವಿಮಾತು ಹೇಳಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಚಿದಾನಂದಪ್ಪ, ಜೆ.ಅಮಾನುಲ್ಲಾ ಖಾನ್‌, ರಾಮಚಂದ್ರಮೂರ್ತಿ, ಟಿ.ಅಸ್ಗರ್‌, ಬಾತಿ ಶಂಕರ್, ಗಾದ್ರಿ ರಾಜು, ಎನ್.ಗಂಗಾಧರಪ್ಪ, ಎಚ್.ಕೆ.ಬಸವರಾಜ, ಕುಬೇರಪ್ಪ, ಇಸ್ಮಾನ್ ಷರೀಫ್, ಶಹನವಾಜ್ ಇತರರಿದ್ದರು. ದಾವಣಗೆರೆಯಲ್ಲಿ ಬಿಜೆಪಿ ವಿಶ್ವಾಸ ಕಳೆದುಕೊಂಡಿದೆ

ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗಿದೆಯೆಂದ ಮಾತ್ರಕ್ಕೆ ನಾವೇನೂ ಶಕ್ತಿ ಕಳೆದುಕೊಂಡಿಲ್ಲ. ಬಿಜೆಪಿ ತನ್ನ ದುರಾಡಳಿತದಿಂದ ಕಳೆದ ಚುನಾವಣೆಯಲ್ಲಿ ಸೋತಿದೆ. ಇನ್ನು ಲೋಕಸಭೆಯಲ್ಲಿ ಶಿವಮೊಗ್ಗ, ಬೆಳಗಾವಿ, ಹಾವೇರಿಯಲ್ಲಿ ಗೊಂದಲ ಇದೆ. ದಾವಣಗೆರೆಯಲ್ಲೂ ಅದೇ ಪರಿಸ್ಥಿತಿ ಇದೆ. ಸದ್ಯಕ್ಕೆ ದಾವಣಗೆರೆಯಲ್ಲಿ ಬಿಜೆಪಿಗೆ ಗೆಲ್ಲುವ ವಾತಾವರಣ ಇಲ್ಲ. ಗುಂಪುಗಾರಿಕೆಯೂ ಇದೆ. ಅಭ್ಯರ್ಥಿ ಬದಲಿಸುವಂತೆ ಮಾಜಿ ಸಚಿವರು, ಮಾಜಿ ಶಾಸಕರು ಪಟ್ಟು ಹಿಡಿದಿದ್ದಾರೆ. ಜೆಡಿಎಸ್‌ಗೂ ಗೆಲ್ಲುವ ಶಕ್ತಿ ಇದ್ದು, ಬಿಜೆಪಿ ಕ್ಷೇತ್ರದಲ್ಲಿ ವಿಶ್ವಾಸ ಕಳೆದುಕೊಂಡಿದೆ. ಅದಕ್ಕಾಗಿ ಆಂದೋಲನದ ರೀತಿ ಗುಂಪುಗಾರಿಕೆ ಮಾಡುತ್ತಿದ್ದಾರೆ ಎಂದು ಎಚ್.ಎಸ್.ಶಿವಶಂಕರ ದೂರಿದರು.

ಸದ್ಯ ನಾವೆಲ್ಲ ತಟಸ್ಥ:

ಸಂಸದ ಜಿ.ಎಂ.ಸಿದ್ದೇಶ್ವರ ನನಗೆ ಫೋನ್ ಮಾಡಿದ್ದರು. ಬಿಜೆಪಿಯಲ್ಲಿನ ಗುಂಪುಗಾರಿಕೆ, ಗೊಂದಲಗಳ ಮೊದಲು ಪರಿಹರಿಸಿಕೊಳ್ಳುವಂತೆ ಸಲಹೆ ನೀಡಿದ್ದೇನೆ. ನಮಗೆ ರಾಜ್ಯ ವರಿಷ್ಠರ ಆದೇಶ, ಸೂಚನೆ ಬಾರದ ಹಿನ್ನೆಲೆಯಲ್ಲಿ ಮೈತ್ರಿ ಧರ್ಮದ ವಿಚಾರದಲ್ಲಿ ಸದ್ಯ ನಾವೆಲ್ಲರೂ ತಟಸ್ಥರಾಗಿದ್ದೇವೆ. ನಾಯಕರಿಂದ ಆದೇಶ ಬಂದ ನಂತರ ಮುಖಂಡರು, ಕಾರ್ಯಕರ್ತರ ಸಭೆ ಮಾಡಿ, ಮುಂದುವರಿಯುತ್ತೇವೆ ಎಂದು ಎಚ್.ಎಸ್.ಶಿವಶಂಕರ ಹೇಳಿದರು.

ಕಾಂಗ್ರೆಸ್ ಜೊತೆ ಒಳ ಒಪ್ಪಂದ

ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಒಳ ಒಪ್ಪಂದ ಮಾಡಿಕೊಂಡಂತಿದೆ. ಅಳಿಯ, ಮಾವ ಎನ್ನುತ್ತಲೇ ಒಳಗೊಳಗೆ ಸಹಕಾರ ನೀಡುತ್ತಾ ಬಂದಿದ್ದಾರೆ. ಒಂದು ಕಡೆ ಶಾಮನೂರು ಶಿವಶಂಕರಪ್ಪನವರು ಶಿವಮೊಗ್ಗದಲ್ಲಿ ಬಿಜೆಪಿಗೆ ಮತ ಹಾಕಲು ಹೇಳುತ್ತಾರೆ. ಅಷ್ಟೇ ಅಲ್ಲ, ಒಳ ಒಪ್ಪಂದ, ಗುಂಪುಗಾರಿಕೆಗಳನ್ನೆಲ್ಲಾ ಗಮನಿಸಿದರೆ, ಬಿಜೆಪಿ ಅಭ್ಯರ್ಥಿಯನ್ನೇ ಸೋಲಿಸಿ, ಕಾಂಗ್ರೆಸ್ ಜೊತೆ ಒಳ ಒಪ್ಪಂದವನ್ನು ಮತ್ತೊಂದು ಬಿಜೆಪಿ ಗುಂಪಿನವರು ಮಾಡಿಕೊಂಡಿದ್ದಾರೇನೋ ಎನಿಸುತ್ತಿದೆ.

ಎಚ್.ಎಸ್.ಶಿವಶಂಕರ, ಜೆಡಿಎಸ್‌ ಮಾಜಿ ಶಾಸಕ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಂಬಾಕು ದರ ಕುಸಿತ ಪ್ರತಿಭಟನೆ
ಕಾಡಾನೆ ದಾಳಿಗೆ ಬಹಿರ್ದೆಸೆಗೆ ತೆರಳಿದ್ದ ರೈತ ಸಾವು