)
(ಎಸ್.ಎಲ್. ಭೋಜೇಗೌಡ ಫೋಟೋ ಬಳಸುವುದು---)
ವಿಧಾನಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ದಂಪತಿ ದುಬೈನಲ್ಲಿ ಇದ್ದ ಹೋಟೆಲ್ ಮುಂಭಾಗದಲ್ಲೇ ಕ್ಷಿಪಣಿ ದಾಳಿ, ತಡರಾತ್ರಿ ಮೂರು ತಾಸು ಹೋಟೆಲ್ ಸೆಲ್ಲರ್‌ನಲ್ಲಿ ಕಾಲ ಕಳೆಯ ಬೇಕಾದ ಪರಿಸ್ಥಿತಿ ಎದುರಾಗಿತ್ತು. ಹೋಟೆಲ್ ಸುರಕ್ಷಿತವಲ್ಲ ಎಂಬ ಕಾರಣಕ್ಕೆ ಇದೀಗ ಸ್ನೇಹಿತರ ಮನೆಗೆ ಭೋಜೇಗೌಡ ದಂಪತಿ ತೆರಳಿದ್ದು, ಸುರಕ್ಷಿತವಾಗಿದ್ದಾರೆಂದು ಸ್ವತಃ ಭೋಜೇಗೌಡ ಅವರೇ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
ಪತ್ನಿಯೊಂದಿಗೆ ದಕ್ಷಿಣ ಆಫ್ರಿಕಾ ಪ್ರವಾಸ ಹೋಗಿದ್ದ ಭೋಜೇಗೌಡ, ಹಿರಿಯ ಸಹೋದರನ ಹಠಾತ್ ನಿಧನದ ಸುದ್ದಿ ತಿಳಿಯು ತ್ತಿದ್ದಂತೆ ಪ್ರವಾಸ ಮೊಟಕುಗೊಳಿಸಿ ವಾಪಾಸ್ ಬರಲು ಮುಂದಾಗಿ ದುಬೈ ಮಾರ್ಗವಾಗಿ ತೆರಳುವುದು ಸುರಕ್ಷಿತ ಎಂಬ ಕಾರಣಕ್ಕೆ ಶನಿವಾರ ದುಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ಇನ್ನೇನು ಭಾರತಕ್ಕೆ ವಿಮಾನ ಹತ್ತಬೇಕು ಎನ್ನುವಷ್ಟರಲ್ಲಿ ನೂರಾರು ವಿಮಾನಗಳು ರದ್ದಾದವು.ಇದರಿಂದ ಪ್ರಯಾಣಿಕರಿಗೆ ಭಾರೀ ತೊಂದರೆ ಉಂಟಾಯಿತು. ದುಬೈನಲ್ಲಿ ನೆಲೆಸಿರುವವರು ವಾಪಾಸ್ ಮನೆಗಳಿಗೆ ತೆರಳಿದರು. ಆದರೆ, ಬೇರೆ ದೇಶದಿಂದ ಬಂದವರು ಪರದಾಡುವ ಪರಿಸ್ಥಿತಿ ನಿರ್ಮಾಣವಾಯಿತು. ಅಲ್ಲಿಂದ ಹೋಟೆಲ್ ನಲ್ಲಿ ಬಂದು ಶನಿವಾರ ರಾತ್ರಿ ವಾಸ್ತವ್ಯ ಮಾಡಲಾಯಿತು.
ಭಾನುವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಸ್ನೇಹಿತರು ನಿವಾಸಕ್ಕೆ ಬರಲು ಹೇಳಿದ್ದರಿಂದ ಅವರ ಮನೆಗೆ ಬಂದು ಒಳ್ಳೆಯ ಊಟ ಮಾಡಿ ಸುರಕ್ಷಿತವಾಗಿದ್ದೇವೆ. ಆದರೆ, ಹೊರ ಭಾಗದಲ್ಲಿ ಕ್ಷಿಪಣಿ, ಬಾಂಬ್ ಸ್ಫೋಟದ ಶಬ್ದ ಕೇಳುತ್ತಿದೆ. ಸಾಮಾನ್ಯ ಗುಂಡಿನ ಶಬ್ದ ಕೇಳಿದರೆ ಭಯವಾಗಲಿದೆ. ಅಂತಹದರಲ್ಲಿ ಕ್ಷಿಪಣಿ, ಬಾಂಬ್ ದಾಳಿ ಆಗುತ್ತಿರುವ ಪರಿಸ್ಥಿತಿಯಲ್ಲಿ ಇದ್ದೇವೆ ಎಂದು ‘ಕನ್ನಡಪ್ರಭ’ದೊಂದಿಗೆ ಮಾಹಿತಿ ಹಂಚಿಕೊಂಡರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಫೋನ್:ದುಬೈನಲ್ಲಿ ಸಿಲುಕಿರುವ ವಿಷಯ ತಿಳಿಯುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ.ಜಿ.ಪರಮೇಶ್ವರ್, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಸಂಸದ ಜಗದೀಶ್ ಶೆಟ್ಟರ್ ಫೋನ್ ಮಾಡಿ ಧೈರ್ಯ ತುಂಬಿದ್ದಾರೆ. ಕುಮಾರಣ್ಣ ಹೋಟೆಲ್ ವ್ಯವಸ್ಥೆ ಮಾಡಿಕೊಟ್ಟರು, ಸಂಸದ ಜಗದೀಶ್ ಶೆಟ್ಟರ್ ರಾಯಬಾರಿ ಕಚೇರಿಯೊಂದಿಗೆ ಮಾತನಾಡಿ ವೀಸಾ ಕೊಡಿಸಿ ದ್ದಾರೆ ಎಂದು ಭೋಜೇಗೌಡ ವಿವರಿಸಿದ್ದಾರೆ.
--ಕೋಟ್--ಸಿಲುಕಿರುವವರಿಗೆ ಧೈರ್ಯತುಂಬಬೇಕು
ಸಾಕಷ್ಟು ಮಂದಿ ಕನ್ನಡಿಗರು ದುಬೈಗೆ ಕುಟುಂಬ ಸಮೇತ ಬಂದು ಸಿಲುಕಿದ್ದಾರೆ. ಭಯದ ವಾತಾವರಣ ಇದೆ. ಹೀಗಾಗಿ, ಕೇಂದ್ರ ಮತ್ತು ರಾಜ್ಯ ಸರ್ಕಾರಿ ಅಧಿಕಾರಿಗಳು ತಕ್ಷಣ ಸಂಪರ್ಕ ಸಾಧಿಸಿ ಧೈರ್ಯ ತುಂಬುವ ಕೆಲಸ ಮಾಡಬೇಕಿದೆ.- ಎಸ್.ಎಲ್.ಭೋಜೇಗೌಡ, ವಿಧಾನಪರಿಷತ್ ಸದಸ್ಯರು, ಚಿಕ್ಕಮಗಳೂರು