ಹಾವೇರಿ: ಗುರುವಿನ ಋಣವನ್ನು ತೀರಿಸಲು ಎಂದಿಗೂ ಸಾಧ್ಯವಿಲ್ಲ. ಆದರೆ ಗುರುಗಳ ಪಾದಗಳಿಗೆ ನಮಿಸಿ, ಅವರ ಸೇವೆ ಹಾಗೂ ಮಾರ್ಗದರ್ಶನವನ್ನು ಸ್ಮರಿಸುವ ಮೂಲಕ ಕೃತಜ್ಞತೆ ಸಲ್ಲಿಸಬಹುದು ಎಂದು ನಿವೃತ್ತ ಪ್ರಾಧ್ಯಾಪಕ ಪ್ರೇಮಾನಂದ ತಿ. ಲಕ್ಕಣ್ಣನವರ ಹೇಳಿದರು.ನಗರದ ಸರ್ಕಾರಿ ನೌಕರರ ಭವನದಲ್ಲಿ ಸರ್ಕಾರಿ ಮಾದರಿ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆ ನಂ. 1ರ 1994-95ನೇ ಸಾಲಿನ ವಿದ್ಯಾರ್ಥಿಗಳ ವತಿಯಿಂದ ಆಯೋಜಿಸಿದ್ದ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ಶಿಕ್ಷಕರಿಗೆ ಮಕ್ಕಳೇ ನಿಜವಾದ ಆಸ್ತಿ: ಶಿಕ್ಷಕ ಎಸ್.ಜಿ. ಬಿಸಿರೊಟ್ಟಿ ಮಾತನಾಡಿ, ಸರ್ಕಾರ ಶಿಕ್ಷಕರಿಗೆ ವೇತನ ನೀಡಿ ಅವರ ಉದರ ತುಂಬಿಸಿದರೆ, ಶಿಕ್ಷಕರು ಮಕ್ಕಳ ಮಸ್ತಕ ತುಂಬಿ ಅವರ ಭವಿಷ್ಯಕ್ಕೆ ಬೆಳಕು ನೀಡುತ್ತಾರೆ. ಪ್ರಾಥಮಿಕ ಶಾಲಾ ಶಿಕ್ಷಕರ ಪ್ರೀತಿ ತಾಯಿಯಂತೆಯೂ, ಪ್ರೌಢಶಾಲಾ ಶಿಕ್ಷಕರ ಪ್ರೀತಿ ತಂದೆಯಂತೆಯೂ ಇರುತ್ತದೆ. ಶಿಷ್ಯರು ತಮ್ಮ ಎದುರಿನ ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ಭಾವಿಸಿ ಬೆಳೆಸಿದರೆ, ಸಮಾಜದ ಭವಿಷ್ಯ ಉಜ್ವಲವಾಗುತ್ತದೆ. ನಮ್ಮ ಶಿಷ್ಯ ಬಳಗವೇ ನಮ್ಮ ಆಸ್ತಿ ಎಂದರು.ಶಿಕ್ಷಕ ಅಶೋಕ ಹೊಸಮನಿ ಮಾತನಾಡಿ, ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ. ತಾವು ಮಾಡುವ ವೃತ್ತಿಯ ಬಗ್ಗೆ ಗೌರವ ಹಾಗೂ ಬದ್ಧತೆ ಹೊಂದಿರಬೇಕು ಎಂದು ಸಲಹೆ ನೀಡಿದರು.ಶಿಕ್ಷಕ ಮಾಲತೇಶ ನಿಂಗಪ್ಪ ಕರ್ಜಗಿ ಭಾವುಕರಾಗಿ ಮಾತನಾಡಿ, ಗುರುಗಳನ್ನು ಮೀರಿಸುವ ಶಿಷ್ಯರನ್ನು ಕಾಣುವುದು ಶಿಕ್ಷಕರಿಗೆ ಹೆಮ್ಮೆಯ ಸಂಗತಿ. ಶಿಷ್ಯರು ನೀಡಿದ ಗೌರವ ಅವಿಸ್ಮರಣೀಯವಾಗಿದ್ದು, ಶಿಕ್ಷಕರಿಗೆ ದೊರೆಯುವ ಇಂತಹ ಗೌರವವನ್ನು ಯಾವುದೇ ಅಧಿಕಾರಿಗಳಿಂದಲೂ ಪಡೆಯಲು ಸಾಧ್ಯವಿಲ್ಲ ಎಂದರು. ಇದೇ ಸಂದರ್ಭದಲ್ಲಿ ‘ಶಿಷ್ಯರು ಇವರು ನನ್ನ ಶಿಷ್ಯರು’ ಕವನ ವಾಚಿಸಿದರು.
ಗುರುಗಳ ಸ್ಮರಣೆ: ಕಾರ್ಯಕ್ರಮವನ್ನು ಗಿಡಕ್ಕೆ ನೀರು ಎರೆಯುವ ಮೂಲಕ ಉದ್ಘಾಟಿಸಲಾಯಿತು. ಬಳಿಕ ವಿದ್ಯಾರ್ಥಿಗಳಿಂದ ಶಾಲಾ ಪ್ರಾರ್ಥನೆ ನೆರವೇರಿತು. ಅಗಲಿದ ಗುರುಗಳ ಸ್ಮರಣಾರ್ಥ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು.ಪ್ರಕಾಶ ನಂದಿ ಸ್ವಾಗತಿಸಿದರು. ಪ್ರವೀಣ ಕರ್ಜಗಿ ಪ್ರಾಸ್ತಾವಿಕವಾಗಿ ಮಾತನಾಡಿ, ಶಾಲೆಯ ಇತಿಹಾಸ ಹಾಗೂ ವಿದ್ಯಾರ್ಥಿಗಳೊಂದಿಗೆ ಗುರುಗಳ ಬಾಂಧವ್ಯದ ಕುರಿತು ವಿವರಿಸಿದರು. ಮಂಜುನಾಥ ಬಂಗಾಳಿ, ದಾದಾಪೀರ್ ಬೇಫಾರಿ, ಮುತ್ತು ಕೊರವರ ಹಾಗೂ ಸೋಮೇಶ್ವರ ಕುರ್ಡೇಕರ್ ತಮ್ಮ ವಿದ್ಯಾರ್ಥಿ ಜೀವನದ ನೆನಪುಗಳನ್ನು ಹಂಚಿಕೊಂಡರು.ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಲ್ಲ ಗುರುಗಳನ್ನು 1994-95ನೇ ಸಾಲಿನ ವಿದ್ಯಾರ್ಥಿಗಳ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.
ಸತೀಶ ಬಂಡಿ, ಪ್ರದೀಪ ದೇವರಗುಡ್ಡ, ನಾಗರಾಜ ಇಟಗಿ, ಈರಪ್ಪ ಕೊರವರ, ಚಂದ್ರು ಗೌರಮ್ಮನವರ, ಮಂಜು ಗೌಳಿ, ಗುರುರಾಜ, ಸಿದ್ದು ಗುಂಜಾಳ, ಮಹೇಶ ಕಳಕೋಟಿ, ಸಿಕಂದರ್ ಮರೋಳ ಹಾಗೂ ಮಹ್ಮದ್ ಶಫಿ ಕಬ್ಬೂರ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು.