ಜವಾಬ್ದಾರಿಯಿಂದ ಕೆಲಸ ಮಾಡಿ, ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿ

KannadaprabhaNewsNetwork |  
Published : Aug 25, 2026, 02:30 AM IST
24ಎಚ್‌ವಿಆರ್5 | Kannada Prabha

ಸಾರಾಂಶ

ಸರ್ಕಾರಿ ನೌಕರರು ಸಾರ್ವಜನಿಕರ ಮನಮುಟ್ಟುವಂತೆ ಕೆಲಸ ಮಾಡಬೇಕು. ತಮ್ಮ ಮನೆ ಕೆಲಸಕ್ಕಿಂತ ಸರ್ಕಾರಿ ಕೆಲಸವನ್ನು ಬಹಳ ಶ್ರದ್ಧೆಯಿಂದ ಹಾಗೂ ಜವಾಬ್ದಾರಿಯಿಂದ ಮಾಡಬೇಕು. ಭ್ರಷ್ಟಾಚಾರ ಮುಕ್ತ ಆಡಳಿತ ನೀಡಬೇಕು ಎಂದು ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ ಸೂಚನೆ ನೀಡಿದರು.

ಹಾವೇರಿ: ಸರ್ಕಾರಿ ನೌಕರರು ಸಾರ್ವಜನಿಕರ ಮನಮುಟ್ಟುವಂತೆ ಕೆಲಸ ಮಾಡಬೇಕು. ತಮ್ಮ ಮನೆ ಕೆಲಸಕ್ಕಿಂತ ಸರ್ಕಾರಿ ಕೆಲಸವನ್ನು ಬಹಳ ಶ್ರದ್ಧೆಯಿಂದ ಹಾಗೂ ಜವಾಬ್ದಾರಿಯಿಂದ ಮಾಡಬೇಕು. ಭ್ರಷ್ಟಾಚಾರ ಮುಕ್ತ ಆಡಳಿತ ನೀಡಬೇಕು ಎಂದು ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಅವರು, ಭ್ರಷ್ಟಾಚಾರ ಮುಕ್ತ ಆಡಳಿತ ನೀಡಬೇಕು. ಲೋಕಾಯುಕ್ತದಿಂದ ಮಾತ್ರ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯವಿಲ್ಲ. ಭ್ರಷ್ಟಾಚಾರ ನಿರ್ಮೂಲನೆಗೆ ಎಲ್ಲರೂ ಕೈಜೋಡಿಸಬೇಕು ಎಂದು ಸಲಹೆ ನೀಡಿದರು.

ಸರ್ಕಾರ ಉತ್ತಮ ಜೀವನಕ್ಕೆ ಬೇಕಾದ ಸೌಲಭ್ಯ ನೀಡಿದೆ, ಅದರಲ್ಲಿ ತೃಪ್ತಿಕಾಣಬೇಕು. ತಂದೆ-ತಾಯಿ ಮಾಡುವ ತಪ್ಪಿನಿಂದ ಮಕ್ಕಳ ಮನಸ್ಸಿಗೆ ಬಹಳ ನೋವು ಉಂಟಾಗುತ್ತಿದೆ. ಭ್ರಷ್ಟಾಚಾರ ಪ್ರಕರಣಗಳಲ್ಲಿ ವಿವಿಧ ಅಧಿಕಾರಿಗಳ ಮೇಲೆ ಪ್ರಕರಣ ದಾಖಲಾದಾಗ ಅವರ ಕುಟುಂಬದವರ ಮನಸ್ಸಿನ ಮೇಲೆ ಬಹಳ ಆಘಾತವಾಗುತ್ತದೆ. ಕೆಲವು ಮಕ್ಕಳು ನಮಗೆ ಫೋನ್ ಮಾಡಿ ತಮ್ಮ ನೋವನ್ನು ಹೇಳಿಕೊಳ್ಳುತ್ತವೆ. ಆಗ ಕಣ್ಣಿರು ಬರುತ್ತದೆ. ಹಾಗಾಗಿ ಅಧಿಕಾರದಲ್ಲಿರುವ ತಂದೆ -ತಾಯಿಗಳು ತಮ್ಮ ಕುಟುಂಬದ ಹಾಗೂ ಮಕ್ಕಳ ಹಿತದೃಷ್ಟಿಯಿಂದ ಭ್ರಷ್ಟಾಚಾರದಲ್ಲಿ ತೊಡಗಿಕೊಳ್ಳಬಾರದು ಎಂದರು.

71 ವಸತಿ ನಿಲಯಗಳಿಗೆ ಭೇಟಿ: ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನೊಳಗೊಂಡ 46 ಜನರ ಲೋಕಾಯುಕ್ತ ತಂಡ ಭಾನುವಾರ ಜಿಲ್ಲೆಯ 71 ವಸತಿ ನಿಲಯಗಳಿಗೆ ಭೇಟಿ ನೀಡಿದ್ದು, ಆ ವಸತಿ ನಿಲಯಗಳ ವ್ಯವಸ್ಥೆ ತುಂಬಾ ಹಾಳಾಗಿದೆ. ಶೌಚಾಲಯ, ಸ್ನಾನಗೃಹ, ಕಟ್ಟಡ ಸ್ವಚ್ಛತೆ ಮರೀಚಿಕೆಯಾಗಿದೆ. ಮಕ್ಕಳಿಗೆ ಊಟಕ್ಕೆ ನೀಡಿದ ಅಕ್ಕಿಗಳಲ್ಲಿ ಹುಳುಗಳು ಕಂಡುಬಂದಿವೆ. ಒಂದೇ ಕೊಠಡಿಯಲ್ಲಿ 60-70 ಮಕ್ಕಳು ವಾಸ್ತವ್ಯ ಮಾಡಿರುತ್ತಾರೆ, ಟ್ಯಾಂಕ್ ನೀರು ಗಲೀಜಾಗಿವೆ, ಕೆಲವು ಮಕ್ಕಳಿಗೆ ಮೈಮೇಲೆ ಬೊಕ್ಕೆಗಳು ಬಂದಿವೆ. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಏನು ಮಾಡುತ್ತೀರಿ, ವಸತಿ ನಿಲಯಗಳಿಗೆ ಭೇಟಿ ಕುರಿತು ರಜಿಸ್ಟ್ರರ್ ನಿರ್ವಹಣೆ ಮಾಡಿಲ್ಲ. ಒಟ್ಟಾರೆ ವಸತಿ ನಿಲಯಗಳು ಅವ್ಯವಸ್ಥೆಯ ಆಗರಗಳಾಗಿವೆ. ವಸತಿ ನಿಲಯಗಳಲ್ಲಿ ಸ್ವಚ್ಛತೆ ಹಾಗೂ ಶಿಸ್ತಿಗೆ ಆದ್ಯತೆ ನೀಡಬೇಕು. ವಸತಿ ನಿಲಯ ಪಾಲಕರು ಶಿಕ್ಷಕರು, ತಾವು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ಈ ವಿಷಯಕ್ಕೆ ಸಂಬಂಧಿಸಿದಂತೆ ನೋಟಿಸ್ ನೀಡಲಾಗುವುದು, ಒಂದು ತಿಂಗಳೊಳಗಾಗಿ ವ್ಯವಸ್ಥೆ ಸರಿಪಡಿಸಿ ಲಿಖಿತವಾಗಿ ಮಾಹಿತಿ ನೀಡಬೇಕು. ಇಲ್ಲವಾದಲ್ಲಿ ಸೂಕ್ತ ಕ್ರಮವಹಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮಕ್ಕಳಿಗೆ ಬೆಂಚ್ ವ್ಯವಸ್ಥೆ ಕಲ್ಪಿಸಿ: 1ರಿಂದ 3ನೇ ತರಗತಿ ಮಕ್ಕಳು ನೆಲದ ಮೇಲೆ ಕುಳಿತುಕೊಳ್ಳುತ್ತಿದ್ದು, ಆ ಮಕ್ಕಳಿಗೆ ಬೆಂಚ್ ವ್ಯವಸ್ಥೆ ಕಲ್ಪಿಸಿ, ಮಕ್ಕಳ ಹಿತದೃಷ್ಟಿಯಿಂದ ಶಿಥಿಲಾವಸ್ಥೆ ಕೊಠಡಿಗಳ ದುರಸ್ತಿಗೆ ಕ್ರಮವಹಿಸಬೇಕು. ಹೆಚ್ಚಿನ ಅನುದಾನಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಮಕ್ಕಳ ಶಿಕ್ಷಣ, ಸ್ವಚ್ಛತೆ ಹಾಗೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

1 ರಿಂದ 3 ತರಗತಿ ಮಕ್ಕಳಿಗೆ ನಲಿ-ಕಲಿ ಇರುವುದರಿಂದ ವಿವಿಧ ಚಟುವಟಿಕೆಗಳ ಮೂಲಕ ಕಲಿಕೆ ನಡೆಯುತ್ತದೆ. ಹಾಗಾಗಿ ಬೆಂಚ್ ಇರುವುದಿಲ್ಲ. ಕೆಲವು ಶಾಲೆಗಳಲ್ಲಿ ಸ್ವಯಂ ಸೇವಾ ಸಂಸ್ಥೆಗಳು ಎಸ್.ಡಿ.ಎಂ.ಸಿ. ಸಮಿತಿ ಅವರು ಮಕ್ಕಳಿಗೆ ಬೆಂಚ್ ವ್ಯವಸ್ಥೆ ಕಲ್ಪಿಸಿದ್ದಾರೆ. ಕಳೆದ ಸಾಲಿನಲ್ಲಿ 150 ಹೊಸ ಶಾಲಾ ಕೊಠಡಿಗಳನ್ನು ನಿರ್ಮಿಸಲಾಗಿದೆ. ಜಿ.ಪಂ., ತಾ.ಪಂ. ಹಾಗೂ ಗ್ರಾಮ ಪಂಚಾಯಿತಿಗಳಿಂದ ಶಾಲಾ ಕೊಠಡಿಗಳ ದುರಸ್ತಿಗೆ ಕ್ರಮವಹಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಕೆರೆಗಳ ಒತ್ತುವರಿ ತರವಿಗೆ ಸೂಚನೆ: ಹಾವೇರಿ ನಗರದ ಎರಡು ಕೆರೆಗಳು ಒತ್ತುವರಿಯಾಗಿರುವುದಾಗಿ ದೂರು ಬಂದಿದ್ದು, ಈ ಕುರಿತು ನಗರಸಭೆ ಅಧಿಕಾರಿಗಳು ಏನು ಕ್ರಮಕೈಗೊಂಡಿದ್ದೀರಿ, ಎಷ್ಟು ಹೊಸ ಕಟ್ಟಡಗಳಿಗೆ ಅನುಮತಿ ನೀಡಲಾಗಿದೆ, ಅನಧಿಕೃತ ಕಟ್ಟಡಗಳ ವಿರುದ್ಧ ಏನು ಕ್ರಮಕೈಗೊಂಡಿರುವ ಬಗ್ಗೆ ಹಾಗೂ ಸ್ವೀಕೃತಿ ಹಾಗೂ ಇ-ಖಾತಾ ಬದಲಾವಣೆ ಅರ್ಜಿಗಳ ಸ್ವೀಕೃತಿ ಹಾಗೂ ರವಾನೆ ರಜಿಸ್ಟರ್ ನಿರ್ವಹಣೆ ಮಾಡಿಲ್ಲ. ನಮ್ಮ ತಂಡ ನಗರಸಭೆ ಭೇಟಿ ನೀಡಿದ ಸಮಯದಲ್ಲಿ ಯಾವುದೇ ದಾಖಲೆಗಳನ್ನು ನೀಡಿಲ್ಲ, ಈ ಸಮಯದಲ್ಲಿ ಕೆಲವರ ಮೊಬೈಲ್ ಪರಿಶೀಲನೆ ಮಾಡಿದಾಗ ಕೆಲವರಿಂದ ಪೋನ್‌ಪೇ ಮೂಲಕ ಹಣದ ವ್ಯವಹಾರ ನಡೆಸಿದೆ. ಹಾಗಾಗಿ ಕೆಲವರ ಮೊಬೈಲ್ ವಶಕ್ಕೆ ಪಡೆಯಲಾಗಿದೆ. ನೀವು ಏನು ಕೆಲಸ ಮಾಡುತ್ತೀರಿ? ಎಂದು ನಗರಸಭೆ ಆಯುಕ್ತರನ್ನು ಪ್ರಶ್ನಿಸಿದಾಗ, ಉತ್ತರ ನೀಡಲು ತಡಬಡಾಯಿಸಿದ ಅವರನ್ನು ಮೊದಲು ಸತ್ಯ ಹೇಳಲು ಕಲಿಯಿರಿ. ಸರಿಯಾಗಿ ಕೆಲಸ ಮಾಡಿದರೆ ಸುಳ್ಳು ಹೇಳುವ ಅಗತ್ಯ ಇಲ್ಲ. ನಿಮಗೆ ನೋಟಿಸ್ ಕಳುಹಿಸಲಾಗುವುದು. ಎಲ್ಲ ವ್ಯವಸ್ಥೆಯನ್ನು ಸರಿಪಡಿಸಿ ಸೂಕ್ತ ಮಾಹಿತಿ ನೀಡಬೇಕು ಎಂದು ಖಡಕ್ ಸೂಚನೆ ನೀಡಿದರು.

ಜಿಲ್ಲಾ ಆಸ್ಪತ್ರೆ ಒಳ ಆವರಣ ಹಾಗೂ ಹೊರ ಆವರಣ ಬಹಳ ಗಲೀಜಾಗಿದ್ದು, ಆಸ್ಪತ್ರೆ ಬರುವ ರೋಗಿಗಳು ರೋಗ ತೆಗೆದುಕೊಂಡು ಹೋಗುವಂತಿರಬಾರದು. ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕರಿಗೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಸ್ಥಗಿತಗೊಂಡಿರುವ ಶುದ್ಧ ನೀರಿನ ಘಟಕಗ ದುಸ್ಥಿಗೆ ಕ್ರಮವಹಿಸಬೇಕು. ಶುದ್ಧ ಕುಡಿಯುವ ನೀರು ಪಡೆಯುವುದು ಸಾರ್ವಜನಿಕರ ಮೂಲಭೂತ ಹಕ್ಕಾಗಿದೆ ಹಾಗೂ ಶುದ್ಧ ಕುಡಿಯುವ ನೀರು ಒದಗಿಸುವುದು ನಿಮ್ಮ ಮೂಲಭೂತ ಕರ್ತವ್ಯವಾಗಿದೆ ಎಂದು ಹೇಳಿದರು.

ಮುಂದಿನ ಪೀಳಿಗೆಗೆ ನಾವು ಏನಾದರೂ ಬಿಟ್ಟು ಹೋಗುವುದಾದರೆ ಅದು ಕೆರೆ-ಕಟ್ಟೆ, ಅರಣ್ಯ. ಹಾಗಾಗಿ ಜಲ ಮೂಲಗಳ ಸಂರಕ್ಷಣೆ ಹಾಗೂ ಅರಣ್ಯ ರಕ್ಷಣೆ ಪ್ರತಯೊಬ್ಬರ ಕರ್ತವ್ಯವಾಗಿದೆ. ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೆರೆಗಳಿದ್ದು, ಅವುಗಳ ಒತ್ತುವರಿ ತೆರವುಗೊಳಿಸಿ, ಜೀರ್ಣೋದ್ಧಾರ ಮಾಡಿ ಮಾದರಿ ಜಿಲ್ಲೆಯಾಗಿ ಮಾಡಿ. ಕೆರೆಗಳ ಒತ್ತುವರಿ ತೆರವು ಹಾಗೂ ಜೀರ್ಣೋದ್ಧಾರ ಮಾಡಿದ ಕೆರೆಗಳ ಸಮಗ್ರ ಮಾಹಿತಿ ಲೋಕಾಯುಕ್ತಕ್ಕೆ ನೀಡಬೇಕು ಎಂದು ತಹಶೀಲ್ದಾರ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಅಪರ ಪೊಲೀಸ್ ಮಹಾ ನಿರ್ದೇಶಕರಾದ ಮನೀಶ್ ಖರ್ಬಿಕರ್, ಲೋಕಾಯುಕ್ತ ಕಾರ್ಯದರ್ಶಿ ಶ್ರೀನಾಥ್, ದಾವಣಗೆರೆ ಲೋಕಾಯುಕ್ತ ಎಸ್‌ಪಿ ಕೌಲಾಪೂರೆ, ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ್ ದಾನಮ್ಮನವರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಲ್ಜಿತ ಕುಮಾರ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಯಶೋದಾ ವಂಟಗೋಡಿ, ಅಪರ ಜಿಲ್ಲಾಧಿಕಾರಿ ಡಾ.ನಾಗರಾಜ ಹಾಗೂ ಜಿ.ಪಂ.ಉಪಕಾರ್ಯದರ್ಶಿ ಡಾ.ಪುನೀತ್ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್‌ ಪ್ರಾರಂಭಿಸಲು ಆಗ್ರಹಿಸಿ ಪ್ರತಿಭಟನೆ
ಹಗಲು ೭ ತಾಸು ತ್ರಿಫೇಸ್ ವಿದ್ಯುತ್‌ಗೆ ಆಗ್ರಹಿಸಿ ಪ್ರತಿಭಟನೆ