ನ.20ರಂದು ಮದ್ಯ ಮಾರಾಟ ಬಂದ್ ಗೆ ನಮ್ಮ ಬೆಂಬಲ ಇಲ್ಲ: ಎಸ್. ಚಂದ್ರಶೇಖರ್ ಸ್ಪಷ್ಟನೆ

KannadaprabhaNewsNetwork |  
Published : Nov 16, 2024, 12:36 AM ISTUpdated : Nov 16, 2024, 12:53 PM IST
10 | Kannada Prabha

ಸಾರಾಂಶ

ಫೆಡರೇಷನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ 2002- 2003 ರಂದು ನೋಂದಣಿಯಾಗಿದೆ. ಅಲ್ಲಿಂದ 2024 ರವರೆಗೆ ಸಂಘದ ಯಾವುದೇ ಲೆಕ್ಕಪರಿಶೋಧನ ವರದಿಯಾಗಲಿ, ಸಂಘದ ನವೀಕರಣವಾಗಲಿ ಬಂದಿರುವುದಿಲ್ಲ. ಹೀಗಾಗಿ ಈ ಸಂಘವು ಅಸ್ತಿತ್ವದಲ್ಲಿಲ್ಲ ಎಂದು ಸಹಕಾರ ಸಂಘಗಳ ನಿಬಂಧಕರೆ ದೃಢೀಕರಣ ಮಾಡಿದ್ದಾರೆ.

 ಮೈಸೂರು :  ಫೆಡರೇಷನ್ ಆಫ್ ವೈನ್ ಮರ್ಚೆಂಟ್ಸ್ ಅನೋಸಿಯೇಷನ್ ವತಿಯಿಂದ ನ.20 ಕರೆ ನೀಡಿರುವ ಮದ್ಯ ಮಾರಾಟ ಬಂದ್ ಗೆ ನಮ್ಮ ಬೆಂಬಲವಿಲ್ಲ, ಇದೊಂದು ಅಸ್ತಿತ್ವದಲ್ಲಿಲ್ಲದ ಸಂಘ ಆಗಿದೆ ಎಂದು ಕರ್ನಾಟಕ ರಾಜ್ಯ ಲಿಕ್ಕರ್ ಮರ್ಚೆಂಟ್ಸ್ ಡೆವಲಪ್ ಮೆಂಟ್ ಕೋ- ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಸ್. ಚಂದ್ರಶೇಖರ್ ಸ್ಪಷ್ಟಪಡಿಸಿದರು.

ಫೆಡರೇಷನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಸಿ. ಗುರುಸ್ವಾಮಿ ಒಬ್ಬ ಬ್ಲಾಕ್ ಮೇಲರ್. ಈತ ತನ್ನ ಕೆಲಸ ಆಗದಿದ್ದಾಗ ಸರ್ಕಾರದ ಮೇಲೆ ತಿರುಗಿ ಬೀಳುವ ಕೆಲಸ ಮಾಡುತ್ತಿದ್ದಾರೆ. ಅಬಕಾರಿ ಸಚಿವರು 500, 600 ಕೋಟಿ ಲಂಚ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪ ಸತ್ಯಕ್ಕೆ ದೂರವಾಗಿದ್ದು, ಅಂತಹ ಯಾವುದೇ ಹಣ ವಸೂಲಿ ಮಾಡಿಲ್ಲ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಫೆಡರೇಷನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ 2002- 2003 ರಂದು ನೋಂದಣಿಯಾಗಿದೆ. ಅಲ್ಲಿಂದ 2024 ರವರೆಗೆ ಸಂಘದ ಯಾವುದೇ ಲೆಕ್ಕಪರಿಶೋಧನ ವರದಿಯಾಗಲಿ, ಸಂಘದ ನವೀಕರಣವಾಗಲಿ ಬಂದಿರುವುದಿಲ್ಲ. ಹೀಗಾಗಿ ಈ ಸಂಘವು ಅಸ್ತಿತ್ವದಲ್ಲಿಲ್ಲ ಎಂದು ಸಹಕಾರ ಸಂಘಗಳ ನಿಬಂಧಕರೆ ದೃಢೀಕರಣ ಮಾಡಿದ್ದಾರೆ. ಈ ಸಂಘ ಅಧ್ಯಕ್ಷ ಎಸ್. ಗುರುಸ್ವಾಮಿ, ಕಾರ್ಯದರ್ಶಿ ಬಿ. ಗೋವಿಂದರಾಜ್ ಹೆಗಡೆ ಅವರು ಸನ್ನದ್ದುದಾರರಿಂದ ಹಫ್ತ ವಸೂಲಿಗಾಗಿ ಹಾಗೂ ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಬೆದರಿಕೆ ಒಡ್ಡಲು ಸರ್ಕಾರವನ್ನು ಮುಜುಗರಕ್ಕೀಡು ಮಾಡಲು ಸಂಘವನ್ನು ಮಾಡಿಕೊಂಡಿದ್ದಾರೆ ಎಂದು ಅವರು ಆರೋಪಿಸಿದರು.

ಅಬಕಾರಿ ಸಚಿವರಾಗಲಿ, ಇಲಾಖೆ ಅಧಿಕಾರಿಗಳಾಗಲಿ ನಮ್ಮಿಂದ ಹಣ ವಸೂಲಿ ಮಾಡುತ್ತಿಲ್ಲ.ಅಬಕಾರಿ ಇಲಾಖೆ ಅಧಿಕಾರಿಗಳ ವರ್ಗಾವಣೆಗೂ ನಮಗೂ ಸಂಬಂಧವಿಲ್ಲದ ವಿಷಯ. ನಮ್ಮ 5 ಬೇಡಿಕೆಗಳನ್ನು ಈಡೇರಿಸುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಲ್ಲಿ ಮನವಿ ಸಲ್ಲಿಸಿದ್ದೇವೆ. ಅವರು ಇದರ ಬಗ್ಗೆ ಪರಿಶೀಲಿಸಿ ಪರಿಹರಿಸುವುದಾಗಿ ಹೇಳಿದ್ದಾರೆ. ಅಂತಹದರಲ್ಲಿ ಮದ್ಯ ಮಾರಾಟ ಬಂದ್ ಗೆ ಕರೆ ನೀಡಿ ಗೊಂದಲ ಉಂಟು ಮಾಡಿರುವುದು ಸರಿಯಲ್ಲ ಎಂದು ಅವರು ಖಂಡಿಸಿದರು.

ಈ ಸಂಬಂಧ ನಮ್ಮ ಸಂಘದಿಂದ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಇವರ ವಿರುದ್ಧ ಮಾನನಷ್ಟ ಮೊಕದ್ದಮ್ಮೆ ಹೂಡಲು ಚಿಂತನೆ ನಡೆಸಲಾಗಿದೆ ಎಂದರು.

ಸೊಸೈಟಿ ಪದಾಧಿಕಾರಿಗಳಾದ ಎಂ.ಸಿ. ದೊಡ್ಡನಾಯಕ, ಬಿ. ರಮಾರಾಧ್ಯ, ಪಿ. ದೇವರಾಜ್, ಶ್ರೀನಿವಾಸ್, ಚನ್ನಕೇಶವ, ಸಿ.ಜಿ. ಗಂಗಾಧರ್, ಗುರುರಾಜ್, ಬಾಲಾಜಿ ಶೇಖರ್, ಸಿ.ಜೆ. ಆನಂದ, ನಂಜನಗೂಡು ಶೇಖರ್ ಮೊದಲಾದವರು ಇದ್ದರು.

PREV

Recommended Stories

ದ.ಕ.ದಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆಗೆ ಚಾಲನೆ
ಕದ್ರಿ ದೇವಸ್ಥಾನ ಪ್ರಾಂಗಣದಲ್ಲಿ ‘ಮುದ್ದು ಕೃಷ್ಣ’ ವೇಷ ಸ್ಪರ್ಧೆ